logo
ಕನ್ನಡ ಸುದ್ದಿ  /  ಜೀವನಶೈಲಿ  /  ಒಂದೇ ರೀತಿಯ ಬಜ್ಜಿ ತಿನ್ನುವ ಬದಲು ಎಲೆಕೋಸು ಪಕೋಡ ಟ್ರೈ ಮಾಡಿ: ಬಿಸಿ ಬಿಸಿ ತಿನ್ನಲು ಬಲೇ ಮಜಾ, ಇಲ್ಲಿದೆ ಪಾಕವಿಧಾನ

ಒಂದೇ ರೀತಿಯ ಬಜ್ಜಿ ತಿನ್ನುವ ಬದಲು ಎಲೆಕೋಸು ಪಕೋಡ ಟ್ರೈ ಮಾಡಿ: ಬಿಸಿ ಬಿಸಿ ತಿನ್ನಲು ಬಲೇ ಮಜಾ, ಇಲ್ಲಿದೆ ಪಾಕವಿಧಾನ

Priyanka Gowda HT Kannada

Nov 26, 2024 12:13 PM IST

google News

ಒಂದೇ ರೀತಿಯ ಬಜ್ಜಿ ತಿನ್ನುವ ಬದಲು ಎಲೆಕೋಸು ಪಕೋಡ ಟ್ರೈ ಮಾಡಿ: ಬಿಸಿ ಬಿಸಿ ತಿನ್ನಲು ಬಲೇ ಮಜಾ, ಇಲ್ಲಿದೆ ಪಾಕವಿಧಾನ

  • ಚಳಿ ಗಾಳಿ ಬೀಸುತ್ತಿದೆ. ಸಂಜೆ ವೇಳೆಗಂತೂ ತುಸು ಹೆಚ್ಚೇ ಚಳಿ ಗಾಳಿ ಬೀಸುತ್ತಿರುವಾಗ ಜನ ಬಜ್ಜಿ, ಬೋಂಡಾಗಳ ಅಂಗಡಿ ಮುಂದೆ ಕ್ಯೂ ನಿಲ್ಲುತ್ತಾರೆ. ಅಂಗಡಿ, ಹೋಟೆಲ್‌ಗಳಲ್ಲಿ ತಿನ್ನುವ ಬದಲು ಮನೆಯಲ್ಲೇ ರುಚಿಕರವಾದ ಬಜ್ಜಿ ತಯಾರಿಸಬಹುದು. ಒಂದೇ ರೀತಿ ತಿನ್ನುವ ಬದಲು ವಿಭಿನ್ನವಾಗಿ ಎಲೆಕೋಸು ಪಕೋಡವನ್ನು ಪ್ರಯತ್ನಿಸಬಹುದು. ಈ ರೆಸಿಪಿ ಮಾಡುವ ವಿಧಾನ ಇಲ್ಲಿದೆ.

ಒಂದೇ ರೀತಿಯ ಬಜ್ಜಿ ತಿನ್ನುವ ಬದಲು ಎಲೆಕೋಸು ಪಕೋಡ ಟ್ರೈ ಮಾಡಿ: ಬಿಸಿ ಬಿಸಿ ತಿನ್ನಲು ಬಲೇ ಮಜಾ, ಇಲ್ಲಿದೆ ಪಾಕವಿಧಾನ
ಒಂದೇ ರೀತಿಯ ಬಜ್ಜಿ ತಿನ್ನುವ ಬದಲು ಎಲೆಕೋಸು ಪಕೋಡ ಟ್ರೈ ಮಾಡಿ: ಬಿಸಿ ಬಿಸಿ ತಿನ್ನಲು ಬಲೇ ಮಜಾ, ಇಲ್ಲಿದೆ ಪಾಕವಿಧಾನ

ಚಳಿಗಾಲದಲ್ಲಿ ಸಂಜೆ ವೇಳೆಗೆ ಏನಾದರೂ ಬಿಸಿ ಬಿಸಿ ತಿಂಡಿ ತಿನ್ನಬೇಕು ಎಂಬ ಆಸೆಯುಂಟಾಗುವುದು ಸಹಜ. ಬಹುತೇಕರು ಬಜ್ಜಿ-ಬೋಂಡಾಗಳ ಅಂಗಡಿಗಳ ಮುಂದೆ ಸಾಲಾಗಿ ನಿಂತು ಬಿಸಿಬಿಸಿ ಪಕೋಡೃಗಳನ್ನು ಸವಿಯುತ್ತಾರೆ. ಇನ್ನೂ ಕೆಲವರು ಮನೆಯಲ್ಲೇ ಏನಾದರೂ ಸಿಂಪಲ್ ಆಗಿ ಪಕೋಡಗಳನ್ನು ತಯಾರಿಸುತ್ತಾರೆ. ಬಹುತೇಕ ಮಂದಿ ಮೆಣಸಿನಕಾಯಿ ಬಜ್ಜಿ, ಈರುಳ್ಳಿ ಬಜ್ಜಿ, ಆಲೂ ಬೋಂಡಾ ಇಂತಹ ಬಜ್ಜಿಗಳನ್ನೇ ತಯಾರಿಸುವುದು ಹೆಚ್ಚು. ಒಂದೇ ರೀತಿಯ ಪಕೋಡ ತಿನ್ನುವ ಬದಲು ಎಲೆಕೋಸು ಪಕೋಡಗಳನ್ನು ಸೇವಿಸಬಹುದು. ತರಕಾರಿ ಪಕೋಡ ಆಗಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಎಣ್ಣೆ ಉಪಯೋಗಿಸುವುದು ಉತ್ತಮವಲ್ಲ ಎಂದಾದರೆ ಆಲಿವ್ ಎಣ್ಣೆ ಬಳಕೆ ಮಾಡಬಹುದು. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಈ ರೆಸಿಪಿಯನ್ನು ಮಾಡುವುದು ತುಂಬಾನೇ ಸರಳ, ಇಲ್ಲಿದೆ ಪಾಕವಿಧಾನ.

ಎಲೆಕೋಸು ಪಕೋಡ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಉದ್ದಿನ ಬೇಳೆ- ಅರ್ಧ ಕಪ್, ಕಡಲೆ ಬೇಳೆ- ಅರ್ಧ ಕಪ್, ಎಲೆಕೋಸು- ಒಂದು ಕಪ್, ಉಪ್ಪು- ರುಚಿಗೆ ತಕ್ಕಷ್ಟು, ಕೊತ್ತಂಬರಿ ಪುಡಿ- ಎರಡು ಟೀ ಚಮಚ, ಶುಂಠಿ- ಸಣ್ಣ ತುಂಡು, ಮೆಣಸಿನಕಾಯಿ- ನಾಲ್ಕು, ಕರಿಬೇವು- 10 ರಿಂದ 15, ಜೀರಿಗೆ- ಒಂದು ಟೀ ಚಮಚ, ಕಾಳುಮೆಣಸಿನ ಪುಡಿ- ಅರ್ಧ ಟೀ ಚಮಚ, ಇಂಗು- ಒಂದು ಚಿಟಿಕೆ, ಆಲಿವ್ ಎಣ್ಣೆ- ಕರಿಯಲು.

ಮಾಡುವ ವಿಧಾನ: ಎಲೆಕೋಸು ಪಕೋಡವನ್ನು ತಯಾರಿಸುವ ಮೊದಲು ಉದ್ದಿನ ಬೇಳೆ, ಕಡಲೆ ಬೇಳೆಯನ್ನು ನೆನೆಸಿಡಬೇಕು. ಕನಿಷ್ಠ ಐದು ಗಂಟೆಗಳ ಕಾಲ ನೆನೆಸಿಡಬೇಕು. ನಂತರ ನೀರನ್ನು ಸೋಸಿ, ಎರಡೂ ಕಾಳುಗಳನ್ನು ಒಟ್ಟಿಗೆ ಮಿಕ್ಸಿಂಗ್ ಜಾರ್‌ನಲ್ಲಿ ಹಾಕಬೇಕು. ಇದಕ್ಕೆ ಜೀರಿಗೆ, ಶುಂಠಿ, ಉಪ್ಪು, ಇಂಗು ಮತ್ತು ಮೆಣಸು ಸೇರಿಸಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.

ಈ ಸಂಪೂರ್ಣ ಮಿಶ್ರಣವನ್ನು ಒಂದು ಬಟ್ಟಲಿನಲ್ಲಿ ಹಾಕಿ. ಆ ಬಟ್ಟಲಿನಲ್ಲಿ ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಮತ್ತು ಎಲೆಕೋಸು ಎಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಒಂದು ಚಿಟಿಕೆ ಅಡುಗೆ ಸೋಡಾ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಒಲೆಯ ಮೇಲೆ ಪ್ಯಾನ್ ಇಟ್ಟು ಡೀಪ್ ಫ್ರೈಗೆ ಬೇಕಾದಷ್ಟು ಎಣ್ಣೆ ಹಾಕಿ. ಎಣ್ಣೆಯನ್ನು ಚೆನ್ನಾಗಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಹಿಟ್ಟಿನಿಂದ ಒಂದೊಂದೇ ಪಕೋಡಗಳನ್ನು ಕಾದ ಎಣ್ಣೆಯಲ್ಲಿ ಬಿಡಿ.

ಎರಡೂ ಬದಿ ಬಣ್ಣ ಬದಲಾಗುವವರೆಗೆ ಫ್ರೈ ಮಾಡಬೇಕು. ಅಂದರೆ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ ನಂತರ ಹೊರತೆಗೆದು ಟಿಶ್ಯೂ ಪೇಪರ್‌ನಲ್ಲಿಡಿ. ಯಾಕೆಂದರೆ ಹೆಚ್ಚುವರಿ ಎಣ್ಣೆಯನ್ನು ಟಿಶ್ಯೂ ಪೇಪರ್ ಹೀರಿಕೊಳ್ಳುತ್ತದೆ. ಇಷ್ಟು ಮಾಡಿದರೆ ಎಲೆಕೋಸು ಪಕೋಡ ರೆಸಿಪಿ ಸಿದ್ಧವಾಗಿದೆ. ಚಹಾ ಹೀರುತ್ತಾ ಇದನ್ನು ತಿನ್ನಲು ಚೆನ್ನಾಗಿರುತ್ತದೆ. ಈ ಎಲೆಕೋಸು ಪಕೋಡಗಳನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ತಿಂದರೆ ರುಚಿಯಾಗಿರುತ್ತದೆ. ಸಾಂಬಾರಿನೊಂದಿಗೆ ತಿನ್ನಲೂ ಸಹ ಚೆನ್ನಾಗಿರುತ್ತದೆ.

ಎಲೆಕೋಸು ಪಕೋಡವನ್ನು ಸಾಕಷ್ಟು ಕ್ಯಾಬೇಜ್ ಬಳಸಿ ತಯಾರಿಸಲಾಗುತ್ತದೆ. ಇವು ತಿನ್ನಲು ರುಚಿಕರವಾಗಿರುವುದು ಮಾತ್ರವಲ್ಲದೆ, ಗರಿಗರಿಯಾಗಿರುತ್ತದೆ. ನೀವು ಕೂಡ ಒಮ್ಮೆ ಈ ಪಕೋಡಗಳನ್ನು ತಯಾರಿಸಿ ನೋಡಿ. ಮಕ್ಕಳು ಈ ಪಕೋಡವನ್ನು ತುಂಬಾ ಇಷ್ಟಪಡುತ್ತಾರೆ. ಇದು ಮಸಾಲೆಯುಕ್ತವಾಗಿರಲು ಬಯಸಿದರೆ ಇದಕ್ಕೆ ಹೆಚ್ಚಿನ ಹಸಿರು ಮೆಣಸಿನಕಾಯಿ ಅಥವಾ ಮೆಣಸಿನ ಪುಡಿಯನ್ನು ಸೇರಿಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ