ಚಳಿಗಾಲದಲ್ಲಿ ತಿನ್ನಲು ಸಖತ್ ಆಗಿರುತ್ತೆ ವೆಜಿಟೇಬಲ್ ಪಕೋಡ, ವಿವಿಧ ತರಕಾರಿ ಬಳಸಿ ಗರಿಗರಿ ಪಕೋಡ ಮಾಡೋದು ಹೇಗೆ ನೋಡಿ
ಚಳಿಗಾಲದಲ್ಲಿ ಕರಿದ ತಿಂಡಿಗಳನ್ನು ತಿನ್ನಬೇಕು ಅಂತ ಅನ್ನಿಸೋದು ಸಹಜ. ಅದರಲ್ಲೂ ಬೊಂಡಾ, ಬಜ್ಜಿ, ಪಕೋಡದ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತೆ. ಸಂಜೆಯಾದರೆ ಸಾಕು ಎಣ್ಣೆಯಲ್ಲಿ ಕರಿದ ಪದಾರ್ಥ ತಿನ್ನಲು ನಾಲಿಗೆ ಬಯಸುತ್ತದೆ. ಈ ಚಳಿಗಾಲಕ್ಕೆ ನೀವು ರುಚಿ ರುಚಿಯಾದ, ಬಿಸಿ ಬಿಸಿಯಾದ ತಿಂಡಿ ಮಾಡ್ಬೇಕು ಅಂದುಕೊಂಡರೆ ವೆಜಿಟೇಬಲ್ ಪಕೋಡ ಮಾಡಬಹುದು.
ಸಂಜೆ ಹೊತ್ತಿಗೆ ಪಕೋಡ ತಿನ್ನೋದು ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಚಳಿಗಾಲದ ಸಮಯದಲ್ಲಿ ಪಕೋಡ, ಬೋಂಡ, ಬಜ್ಜಿ ಇದ್ರೆ ಆಹಾ ಎನ್ನಿಸುತ್ತೆ. ಈ ಸಮಯದಲ್ಲಿ ಬೋಂಡಾ, ಬಜ್ಜಿ ಮಾರುವ ಅಂಗಡಿಯ ಮುಂದೆ ಜನ ಸಾಲು ಸಾಲು ನಿಂತಿರುತ್ತಾರೆ. ಸಂಜೆ ವೇಳೆ ಟೀ ಕುಡಿಯುತ್ತಾ ಪಕೋಡಾ ತಿನ್ನಲು ಮಜವಾಗಿರುತ್ತೆ. ಹೊರಗಡೆ ಹೋದಾಗ ಪಕೋಡದ ರುಚಿ ನಮ್ಮನ್ನು ಸೆಳೆದಾಗ ತಿನ್ನದೇ ಇರಲು ಮನಸ್ಸಾಗುವುದಿಲ್ಲ. ಕರಿದ ತಿಂಡಿಗಳನ್ನ ಹೊರಗಡೆ ತಿನ್ನುವುದಕ್ಕಿಂತ ಮನೆಯಲ್ಲೇ ಮಾಡಿ ತಿನ್ನುವುದು ಉತ್ತಮ. ಇದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ.
ಈರುಳ್ಳಿ, ಆಲೂಗೆಡ್ಡೆ ಪಕೋಡ ನೀವು ಯಾವಾಗ್ಲೂ ಮಾಡ್ತಾ ಇದ್ರೆ ಈ ಬಾರಿ ಮಿಶ್ರ ತರಕಾರಿಯ ಪಕೋಡ ಅಥವಾ ವೆಜಿಟೇಬಲ್ ಪಕೋಡ ಮಾಡಿ. ಸಾಮಾನ್ಯ ಪಕೋಡಕ್ಕೆ ಹೋಲಿಸಿದರೆ ತರಕಾರಿ ಪಕೋಡ ಆರೋಗ್ಯಕ್ಕೆ ಪ್ರಯೋಜನಕಾರಿ. ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಯಾವುದು, ಇದನ್ನ ಮಾಡೋದು ಹೇಗೆ ನೋಡಿ.
ವೆಜಿಟೇಬಲ್ ಪಕೋಡಕ್ಕೆ ಬೇಕಾಗುವ ಪದಾರ್ಥಗಳು
ಕಡಲೆ ಹಿಟ್ಟು - ಅರ್ಧ ಕಪ್, ಉಪ್ಪು - ರುಚಿಗೆ, ಅಕ್ಕಿ ಹಿಟ್ಟು - ಕಾಲು ಕಪ್, ಮೆಣಸಿನಕಾಯಿ - ಮೂರು, ಖಾರದಪುಡಿ - ಒಂದು ಚಮಚ, ಪುದಿನ ಸಾರ - ಎರಡು ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ, ಎಣ್ಣೆ - ಡೀಪ್ ಫ್ರೈ ಮಾಡಲು ಬೇಕಾಗುವಷ್ಟು, ಗರಂ ಮಸಾಲಾ - ಅರ್ಧ ಚಮಚ, ಕ್ಯಾರೆಟ್ - ಒಂದು, ಕ್ಯಾಪ್ಸಿಕಂ - ಒಂದು, ಎಲೆಕೋಸು - ಕಾಲು ಕಪ್, ಈರುಳ್ಳಿ - ಒಂದು, ಪಾಲಕ್ ಸೊಪ್ಪ - ಹೆಚ್ಚಿದ್ದು ನಾಲ್ಕು ಚಮಚಗಳು
ವೆಜಿಟೇಬಲ್ ಪಕೋಡ ಮಾಡುವ ವಿಧಾನ
ಮೊದಲಿಗೆ ಕ್ಯಾರೆಟ್, ಈರುಳ್ಳಿ, ಕ್ಯಾಪ್ಸಿಕಂ, ಬೀನ್ಸ್ ಅನ್ನು ಉದ್ದಕ್ಕೆ ಕತ್ತರಿಸಿ ಇಟ್ಟುಕೊಳ್ಳಬೇಕು. ಪಾಲಕ್ ಸೊಪ್ಪನ್ನ ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲಾ, ಪುದಿನಾ ಸೊಪ್ಪು ಅಥವಾ ಪುದಿನಾ ರಸ ಸೇರಿಸಿ. ಉದ್ದಕ್ಕೆ ಕತ್ತರಿಸಿದ ಹಸಿರು ಮೆಣಸಿನಕಾಯಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಅಕ್ಕಿಹಿಟ್ಟು ಮತ್ತು ಜೀರಿಗೆಯನ್ನು ಹಾಕಿ ಮಿಕ್ಸ್ ಮಾಡಿ. ಅದರ ನಂತರ ಕಡಲೆಹಿಟ್ಟು ಮತ್ತು ಖಾರದಪುಡಿಯನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲೆಸಿ. ಈ ಮಿಶ್ರಣವನ್ನು ಸುಮಾರು ಐದು ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ಈಗ ಪ್ಯಾನ್ ಅನ್ನು ಒಲೆಯ ಮೇಲೆ ಇರಿಸಿ, ಡೀಪ್ ಫ್ರೈ ಮಾಡಲು ಬೇಕಾಗುವಷ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಈ ಮಿಶ್ರಣವನ್ನು ಪಕೋಡ ರೀತಿ ಮಾಡಿ ಎಣ್ಣೆಗೆ ಬಿಡಿ. ಇದು ಎಣ್ಣೆಯಲ್ಲಿ ಕರಿದ ಮೇಲೆ ಗರಿಗರಿಯಾಗುತ್ತದೆ. ಚೆನ್ನಾಗಿ ಎರಡೂ ಕಡೆ ಕಾದ ಮೇಲೆ ಪಕೋಡಗಳನ್ನು ಟಿಶ್ಯೂ ಪೇಪರ್ ಮೇಲೆ ಹರಡಿ. ಈ ಪಕೋಡವನ್ನು ಪುದಿನ ಚಟ್ನಿಯೊಂದಿಗೆ ತಿಂದರೆ ರುಚಿಯಾಗಿರುತ್ತದೆ.
ಈ ತರಕಾರಿ ಪಕೋಡ ಸಾಮಾನ್ಯ ಪಕೋಡಕ್ಕಿಂತ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿದೆ. ಏಕೆಂದರೆ ಇದರಲ್ಲಿ ನಾವು ಎಲೆಕೋಸು, ಕ್ಯಾರೆಟ್, ಲೆಟಿಸ್, ಕ್ಯಾಪ್ಸಿಕಂ ಇತ್ಯಾದಿಗಳನ್ನು ಬಳಸಿದ್ದೇವೆ. ಅದರಲ್ಲಿರುವ ಎಲ್ಲಾ ಪೋಷಕಾಂಶಗಳು ದೇಹವನ್ನು ತಲುಪುತ್ತವೆ. ಇವುಗಳಲ್ಲಿ ಪೌಷ್ಟಿಕಾಂಶದ ಮೌಲ್ಯವೂ ಇದೆ. ಆದರೆ ಹೆಚ್ಚು ಕರಿದ ಆಹಾರವನ್ನು ಸೇವಿಸದಿರುವುದು ಉತ್ತಮ. ಆಗೊಮ್ಮೆ ಈಗೊಮ್ಮೆ ಪಕೋಡ ತಿನ್ನಬೇಕು ಅನ್ನಿಸಿದಾಗ ಈ ತರಕಾರಿ ಪಕೋಡಿ ಮಾಡಿ ತಿನ್ನಿ.
ವಿಭಾಗ