ನಾಲಿಗೆ ಆಗಾಗ ಸಿಹಿ ರುಚಿ ಹುಡುಕುತ್ತಾ: ಹಾಗಿದ್ದರೆ ಮನೆಯಲ್ಲಿಯೇ ಮಾಡಿ ಮೈಸೂರು ಪಾಕ್, ಇಲ್ಲಿದೆ ಪಾಕವಿಧಾನ
Nov 14, 2024 05:10 PM IST
ನಾಲಿಗೆ ಆಗಾಗ ಸಿಹಿ ರುಚಿ ಹುಡುಕುತ್ತಾ: ಹಾಗಿದ್ದರೆ ಮನೆಯಲ್ಲಿಯೇ ಮಾಡಿ ಮೈಸೂರು ಪಾಕ್, ಇಲ್ಲಿದೆ ಪಾಕವಿಧಾನ
ಮೈಸೂರು ಪಾಕ್ ಹೆಸರು ಕೇಳಿದರೆ ಹಲವರ ಬಾಯಲ್ಲಿ ನೀರು ಬರುತ್ತದೆ. ಹೆಚ್ಚಿನವರು ಇದನ್ನು ಖರೀದಿಸಿ ತಿನ್ನುತ್ತಾರೆ. ಆದರೆ, ಮೈಸೂರು ಪಾಕ್ ಅನ್ನು ಮನೆಯಲ್ಲಿ ಮಾಡುವುದು ತುಂಬಾ ಸುಲಭ. ತುಪ್ಪ, ಸಕ್ಕರೆ, ಕಡಲೆಹಿಟ್ಟು ಇದ್ದರೆ ಸಾಕು ರುಚಿಕರವಾದ ಮೈಸೂರು ಪಾಕ್ ಸಿದ್ಧವಾಗುತ್ತದೆ. ಇಲ್ಲಿದೆ ಪಾಕವಿಧಾನ.
ಮೈಸೂರ್ ಪಾಕ್ ಹೆಸರು ಕೇಳಿದರೆ ಹಲವರ ಬಾಯಲ್ಲಿ ನೀರೂರುತ್ತವೆ. ಸಿಹಿ ತಿಂಡಿ ಇಷ್ಟಪಡುವವರು ಮೈಸೂರು ಪಾಕ್ ಅನ್ನು ಮೆಲ್ಲದೆ ಇರುವುದಿಲ್ಲ. ಮೈಸೂರು ಪಾಕ್ ನೆನಪಾದಗಲೆಲ್ಲಾ ಬೇಕರಿಗಳತ್ತ ಮೊರೆ ಹೋಗುತ್ತಾರೆ. ನಿಮಗೂ ಮೈಸೂರು ಪಾಕ್ ತಿನ್ನಬೇಕು ಎಂದು ಆಸೆಯಾದರೆ ಅಂಗಡಿಗಳತ್ತ ಹೋಗಬೇಕೆಂದಿಲ್ಲ. ಮನೆಯಲ್ಲೇ ಮಾಡಿ ಸವಿಯಬಹುದು. ಇದನ್ನು ತಯಾರಿಸುವುದು ತುಂಬಾನೇ ಸರಳ. ತುಪ್ಪ, ಸಕ್ಕರೆ, ಕಡಲೆಹಿಟ್ಟು ಇದ್ದರೆ ಸಾಕು ರುಚಿಕರವಾದ ಮೈಸೂರು ಪಾಕ್ ಸಿದ್ಧವಾಗುತ್ತದೆ. ಹಬ್ಬ, ಹರಿದಿನ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಬೇಕಾದರೂ ನೀವು ಮೈಸೂರು ಪಾಕ್ ಅನ್ನು ಮನೆಯಲ್ಲಿಯೇ ತಯಾರಿಸಿ ಸವಿಯಬಹುದು. ಮನೆಯಲ್ಲಿಯೇ ಮೈಸೂರು ಪಾಕ್ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.
ಮೈಸೂರು ಪಾಕ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಕಡಲೆ ಹಿಟ್ಟು- ಒಂದು ಕಪ್, ತುಪ್ಪ- 3/4 ಕಪ್, ನೀರು- ಬೇಕಾಗುವಷ್ಟು, ಸಕ್ಕರೆ - ಒಂದು ಕಪ್.
ಮಾಡುವ ವಿಧಾನ: ಸ್ಟೌವ್ ಮೇಲೆ ಪಾತ್ರೆಯನ್ನು ಇಟ್ಟು ಸಣ್ಣ ಉರಿಯಲ್ಲಿ ಇಡಿ. ಇದಕ್ಕೆ ಕಡಲೆಹಿಟ್ಟು ಸೇರಿಸಿ ಎರಡು ನಿಮಿಷ ಫ್ರೈ ಮಾಡಿ ಪಕ್ಕಕ್ಕೆ ಇರಿಸಿ. ನಂತರ ತುಪ್ಪವನ್ನು ಕಗಿಸಿ ಅದಕ್ಕೆ ಕಡಲೆಬೇಳೆ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಅರ್ಧ ಕಪ್ ತುಪ್ಪವನ್ನು ಸೇರಿಸಿ, ಕಡಲೆಹಿಟ್ಟಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಇನ್ನೊಂದೆಡೆ ಸ್ಟೌವ್ ಮೇಲೆ ಬಾಣಲೆ ಇಟ್ಟು ಸಕ್ಕರೆ ಹಾಕಿ ಕಾಲು ಕಪ್ ನೀರು ಹಾಕಿ. ಸಕ್ಕರೆ ನೀರಿನಲ್ಲಿ ಚೆನ್ನಾಗಿ ಕರಗಿದ ನಂತರ, ಬೇಳೆ ಮತ್ತು ತುಪ್ಪ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕಡಿಮೆ ಉರಿಯಲ್ಲಿ ಇದನ್ನು ಬೇಯಿಸಿ. ಈ ಮಿಶ್ರಣ ಗಟ್ಟಿಯಾದಾಗ ಸ್ಟೌ ಆಫ್ ಮಾಡಿ.
ಈಗ ಒಂದು ತಟ್ಟೆಯ ತಳಭಾಗದಲ್ಲಿ ತುಪ್ಪವನ್ನು ಹರಡಿ, ಈ ಸಂಪೂರ್ಣ ಮಿಶ್ರಣವನ್ನು ಸಮವಾಗಿ ಹರಡಿ. ಗಟ್ಟಿಯಾಗುವವರೆಗೆ ಹಾಗೆಯೇ ಬಿಡಿ. ಗಟ್ಟಿಯಾದ ನಂತರ ಅದನ್ನು ತುಂಡುಗಳಾಗಿ ಕತ್ತರಿಸಿದರೆ ಮೈಸೂರು ಪಾಕ್ ಸವಿಯಲು ರೆಡಿ.
ಮೈಸೂರು ಪಾಕ್‌ಗೆ ತುಪ್ಪವನ್ನು ಹೆಚ್ಚಾಗಿ ಬಳಸುತ್ತಾರೆ. ಹೀಗಾಗಿ ಇದು ಮೃದುವಾಗಿರುತ್ತದೆ, ಬಾಯಲ್ಲಿ ಇಟ್ಟ ತಕ್ಷಣ ಕರಗುತ್ತದೆ. ಕಡಲೆ ಹಿಟ್ಟಿನಿಂದ ಮಾಡಿದ ಮೈಸೂರ್ ಪಾಕ್ ಆರೋಗ್ಯಕ್ಕೂ ಒಳ್ಳೆಯದು. ಇದಕ್ಕೆ ತುಪ್ಪವನ್ನು ಸೇರಿಸುವುದರಿಂದ ತುಪ್ಪದಲ್ಲಿರುವ ಪೋಷಕಾಂಶಗಳು ದೇಹವನ್ನು ತಲುಪುತ್ತವೆ. ಒಮ್ಮೆ ಈ ಸ್ವೀಟ್ ರೆಸಿಪಿ ಟ್ರೈ ಮಾಡಿ ನೋಡಿ. ಖಂಡಿತಾ ನಿಮಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಬೇಕರಿಗಳಿಂದ ಖರೀದಿಸುವ ಬದಲು ನೀವೇ ಮನೆಯಲ್ಲೇ ಆಗಾಗ ಮಾಡುವಿರಿ. ತುಂಬಾ ಸರಳವಾಗಿ ತಯಾರಾಗುವ ಮೈಸೂರು ಪಾಕ್ ಸಿಹಿ ಖಾದ್ಯವನ್ನು ಒಮ್ಮೆ ಮಾಡಿ ನೋಡಿ.