ಮೈಸೂರು ಪಾಕ್ ಅಂದ್ರೆ ಹೀಗಿರಬೇಕು: ರಾಮನಗರದ ಹೊಟೆಲ್ ಶ್ರೀ ಜನಾರ್ಧನ್ ಹೊಕ್ಕವರು ಹೇಳೋ ಮಾತಿದು, ಏನು ಸ್ಪೆಷಲ್ ಅಂದ್ರಾ?
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ಪಾಕ್ ಅಂದ್ರೆ ಹೀಗಿರಬೇಕು: ರಾಮನಗರದ ಹೊಟೆಲ್ ಶ್ರೀ ಜನಾರ್ಧನ್ ಹೊಕ್ಕವರು ಹೇಳೋ ಮಾತಿದು, ಏನು ಸ್ಪೆಷಲ್ ಅಂದ್ರಾ?

ಮೈಸೂರು ಪಾಕ್ ಅಂದ್ರೆ ಹೀಗಿರಬೇಕು: ರಾಮನಗರದ ಹೊಟೆಲ್ ಶ್ರೀ ಜನಾರ್ಧನ್ ಹೊಕ್ಕವರು ಹೇಳೋ ಮಾತಿದು, ಏನು ಸ್ಪೆಷಲ್ ಅಂದ್ರಾ?

Hotel Sri Janardhan: ರಾಮನಗರದ ಹೊಟೆಲ್ ಶ್ರೀ ಜನಾರ್ಧನ್ ಹೊಕ್ಕವರು 'ವಾವ್, ಏನು ಟೇಸ್ಟ್‌' ಎನ್ನದೆ ಹೊರಗೆ ಬರುವುದಿಲ್ಲ. ಬೆಂಗಳೂರು-ಮೈಸೂರು ಮಾರ್ಗದಲ್ಲಿ ಓಡಾಡುವವರು ಸಾಮಾನ್ಯವಾಗಿ ರುಚಿ ನೋಡದೆ ಇರುವುದಿಲ್ಲ. ‘ಮೈಸೂರು ಪಾಕ್ ಅಂದ್ರೆ ಹೀಗಿರಬೇಕು’ ಅಂತ ಈ ಹೋಟೆಲ್‌ಗೆ ಬಂದವರು ಹೇಳುವುದೇಕೆ? ಎಚ್.ಮಾರುತಿ ಅವರ ಈ ಬರಹ ಸವಿದರೆ ನಿಮಗೇ ಅರ್ಥವಾಗುತ್ತೆ.

ರಾಮನಗರದ ಹೋಟೆಲ್ ಶ್ರೀ ಜನಾರ್ಧನ್
ರಾಮನಗರದ ಹೋಟೆಲ್ ಶ್ರೀ ಜನಾರ್ಧನ್

ವಿಶ್ವಪ್ರಸಿದ್ಧಿ ಪಡೆದಿರುವ ಮೈಸೂರು ಪಾಕ್‌ಗೆ ಐವತ್ತು ಸ್ಟ್ರೀಟ್‌ ಫುಡ್ ಖಾದ್ಯಗಳ ಪಟ್ಟಿಯಲ್ಲಿ 14ನೇ ಸ್ಥಾನ ಲಭಿಸಿರುವುದನ್ನು ಯಾರೂ ಮರೆಯುವಂತಿಲ್ಲ. ಈ ಕಿರೀಟ ಸಿಕ್ಕ ನಂತರ ಮಾಧ್ಯಮ ಮತ್ತು ಜಾಲತಾಣಗಳಲ್ಲಿ ರುಚಿರುಚಿಯಾದ ಮೈಸೂರು ಪಾಕ್ ಎಲ್ಲೆಲ್ಲಿ ಸಿಗುತ್ತದೆ ಎಂದು ಸಾಕಷ್ಟು ಚರ್ಚೆಗಳಾಗಿವೆ. ಮೈಸೂರು ಪಾಕ್‌ ಅಂದ್ರೆ ಹೀಗಿರಬೇಕು ಎನ್ನುವಷ್ಟರ ಮಟ್ಟಿಗೆ ರುಚಿ ಕಟ್ಟಿಕೊಡುವ ಹೋಟೆಲ್‌ನ ಪರಿಚಯ ಇಲ್ಲಿದೆ.

ರಾಮನಗರ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ? ಶೋಲೆ ಸಿನಿಮಾದಿಂದ ಇಂದಿನವರೆಗೂ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಜೊತೆಗೆ ಮೂವರು ಮುಖ್ಯಮಂತ್ರಿಗಳು ಮತ್ತು ಏಕೈಕ ಕನ್ನಡಿಗ ಪ್ರಧಾನಿಯನ್ನು ಕೊಟ್ಟ ಪಟ್ಟಣ ಎಂಬ ಹೆಗ್ಗಳಿಕೆಯೂ ಇದೆ. ಇಂತಹ ರಾಮನಗರದಲ್ಲಿ ಶ್ರೀ ಜನಾರ್ಧನ ಹೋಟೆಲ್ ಎಂಬ ಪ್ರಸಿದ್ಧ ಹೋಟೆಲ್ ಇದೆ. ಈ ಹೋಟೆಲ್‌ಗೆ 'ಮೈಸೂರು ಪಾಕ್' ಎಂಬ ಹೆಸರೂ ಇದೆ.

ಈ ಹೋಟೆಲ್ ಹುಡುಕುವುದು ಕಷ್ಟವೇನಲ್ಲ, ಬೆಂಗಳೂರಿನಿಂದ 50 ಕಿಮೀ ದೂರಲ್ಲಿರುವ ರಾಮನಗರದಲ್ಲಿ ಈ ಹೋಟೆಲ್ ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಕೂಗಳತೆಯ ದೂರದಲ್ಲಿದೆ. ಮೈಸೂರು ಪಾಕ್‌ನ ವಾಸನೆಯೇ ನಿಮಗೆ ಹೋಟೆಲ್ ದಾರಿ ತೋರಿದರೆ ಅಚ್ಚರಿಯೇನಲ್ಲ. ಒಂದು ಮೈಸೂರು ಪಾಕ್ ಮಾತ್ರ ತಿಂದೇ ಬಿಡೋಣ ಎಂದು ಒಳಹೊಕ್ಕು ಒಂದನ್ನು ತಿಂದ ನಂತರ ಎರಡನೇ ಮೈಸೂರು ಪಾಕ್‌ಗೆ ಆರ್ಡರ್ ಮಾಡದವರೇ ಇಲ್ಲ. ಎರಡನೆಯ ಮೈಸೂರು ಪಾಕ್ ತಿನ್ನುವುದು ಇಲ್ಲ ಎಂದು ಅದೆಷ್ಟೋ ಮಂದಿ ಬಾಜಿ ಕಟ್ಟಿ ಸೋತವರೂ ಇದ್ದಾರೆ ಎಂದರೆ ಇಲ್ಲಿನ ಆ ಸಿಹಿಯ ರುಚಿ ಎಷ್ಟು ಎಂದು ಅರಿವಾಗುತ್ತದೆ.

ಮೈಸೂರು ಪಾಕ್ ಎಲ್ಲ ಕಡೆ ಸಿಗುತ್ತದೆಯಲ್ಲ ಎಂದು ಪ್ರಶ್ನೆ ಹಾಕಬಹುದು. ಮೈಸೂರು ಪಾಕ್ ಹೀಗೆಯೇ ಇರಬೇಕು ಎಂಬ ನಿಯಮವಿದೆ. ಅಂತಹ ಮೈಸೂರು ಪಾಕ್ ಸಿಗುವ ನಿರ್ದಿಷ್ಟ ಜಾಗ ಇದು. ಇಲ್ಲಿ ಮೈಸೂರು ಪಾಕ್‌ ತಯಾರಿಗೆ ಶುದ್ಧ ತುಪ್ಪ ಬಳಸಲಾಗುತ್ತದೆ. ರೆಸಿಪಿಯ ಗುಟ್ಟನ್ನು ಯಾರೂ ಸಂಪೂರ್ಣವಾಗಿ ಬಿಟ್ಟುಕೊಡುವುದಿಲ್ಲ. ಸಕ್ಕರೆ, ಕಡಲೆ ಹಿಟ್ಟು ಮತ್ತು ತುಪ್ಪವನ್ನು ಎಲ್ಲರೂ ಬಳಸುತ್ತಾರೆ. ಆದರೆ ಯಾವುದನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಮತ್ತು ಹೇಗೆ ತಯಾರಿಸಬೇಕು ಎನ್ನವ ವಿಧಾನ ತಿಳಿದಿದ್ದರೆ ಮಾತ್ರ ಬಾಯಲ್ಲಿಟ್ಟರೆ ತಾನಾಗಿಯೇ ಕರಗಿ ಹೋಗುವ ಮೈಸೂರು ಪಾಕ್ ತಯಾರಿಸಲು ಸಾಧ್ಯ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಈ ಹೋಟೆಲ್ ಅಪರಿಚಿತವೇನಲ್ಲ. ಇಲ್ಲಿ ಒಂದು ಸ್ಟಾಪ್ ನೀಡಿ ಮೈಸೂರು ಪಾಕ್ ಕಟ್ಟಿಸಿಕೊಂಡು ಹೋಗುವವರೇ ಹೆಚ್ಚು. ಬೇಡಿಕೆ ಹೆಚ್ಚಿದ್ದಲ್ಲಿ ಮುಂಗಡವಾಗಿ ಕಾಯ್ದಿರಿಸಿದರೆ ತಯಾರಿಸಿಕೊಡುತ್ತಾರೆ. ಗ್ರಾಹಕರಿಗೆ ಬೇಸರ ಆಗಬಾರದು ಎಂದು ಯಾವಾಗಲೂ ಕನಿಷ್ಠ 5 ಕೆಜಿ ಮೈಸೂರು ಪಾಕ್ ಇರುವಂತೆ ಎಚ್ಚರವಹಿಸುತ್ತಾರೆ. ಮೈಸೂರು, ಮಂಡ್ಯ ಚನ್ನಪಟ್ಟಣ ಮಾತ್ರವಲ್ಲದೆ ಬೆಂಗಳೂರಿನಿAದಲೂ ಗ್ರಾಹಕರು ಆಗಮಿಸುತ್ತಾರೆ.

ಸ್ವಾತಂತ್ರ್ಯಪೂರ್ವದ 1926ರಲ್ಲಿ ಸ್ಥಾಪನೆಯಾದ ಹೋಟೆಲ್ ಇದು. ಮೂರು ತಲೆಮಾರುಗಳನ್ನು ಕಂಡಿದೆ. ದಕ್ಷಿಣ ಕನ್ನಡದಿಂದ ಇಲ್ಲಿಗೆ ಬಂದ ಜನಾರ್ದನಯ್ಯ ಎಂಬುವರು ಶ್ರೀಜನಾರ್ಧನ ಹೋಟೆಲ್ ಆರಂಭಿಸಿದ್ದರು. ಅಂದಿನಿಂದಲೂ ಇದು ಮೈಸೂರು ಪಾಕ್‌ಗೆ ಪ್ರಸಿದ್ಧಿ. 1962ರ ನಂತರ ಅವರ ಮಗ ಪರಮೇಶ್ವರಯ್ಯ ನಡೆಸಿಕೊಂಡು ಬಂದಿದ್ದರು. 2000ದಿಂದೀಚೆಗೆ ಅವರ ಮಗ ಜಿ.ಪಿ.ಪ್ರಶಾಂತ್ ಅವರು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈ ಹೋಟೆಲ್ ಮೂರು ತಲೆಮಾರುಗಳನ್ನು ಕಂಡಿದ್ದರೂ ರುಚಿ ಮತ್ತು ಸ್ವಾದ ಮಾತ್ರ ಬದಲಾಗಿಲ್ಲ. ಅಂದಿನಿಂದ ಇಂದಿನವರೆಗೂ ಅದೇ ರುಚಿ ಉಳಿಸಿಕೊಳ್ಳಲಾಗಿದೆ. ಮೈಸೂರು ಪಾಕ್‌ಗೆ ಪಾಕ ತೆಗೆಯುವವರೆಗೂ ಪ್ರಶಾಂತ್ ಮತ್ತು ಅವರ ಪತ್ನಿ ಗಾಯತ್ರಿ ಅವರು ಅಡುಗೆ ಮನೆ ಬಿಟ್ಟು ಕದಲುವುದಿಲ್ಲ. ಅಷ್ಟರಮಟ್ಟಿಗೆ ಎಚ್ಚರವಹಿಸುತ್ತಾರೆ.

ನಮ್ಮ ತಾತ ಮತ್ತು ಅಪ್ಪನ ಕಾಲದಲ್ಲಿ ಕೈಯಿಂದ ಮೈಸೂರು ಪಾಕ್ ತಯಾರಿಸಲಾಗುತ್ತಿತ್ತು. ಈಗ ಪ್ರಶಾಂತ್ ಅವರು ಯಂತ್ರಗಳನ್ನು ಬಳಸಿ ತಯಾರಿಸುತ್ತಿದ್ದಾರೆ. ಆದರೆ ರುಚಿಯನ್ನು ಹಾಗೆಯೇ ಕಾಪಿಟ್ಟುಕೊಂಡು ಬರಲಾಗಿದೆ. 'ನಮ್ಮ ತಾತ ಬಳಸುತ್ತಿದ್ದ ಪ್ರಮಾಣದಲ್ಲಿಯೇ ಎಲ್ಲ ಪದಾರ್ಥಗಳನ್ನು ಅಳತೆ ಮಾಡಿಯೇ ಬಳಸುತ್ತೇವೆ. ಹದವಾಗಿ ಪಾಕ ಬರುವವರೆಗೆ ಕಡ್ಲೆ ಹಿಟ್ಟು ರೋಸ್ಟ್ ಮಾಡಲಾಗುತ್ತದೆ. ನಂತರ ತುಪ್ಪ ಬೆರಸಲಾಗುತ್ತದೆ. ಒಂದು ಹಂತಕ್ಕೆ ಬಂದ ನಂತರ ಟ್ರೇಗೆ ಹಾಕಿ ಕತ್ತರಿಸುತ್ತೇವೆ' ಎನ್ನುತ್ತಾರೆ ಪ್ರಶಾಂತ್.

ಹೀಗೆ ರುಚಿಯಾದ ಮೈಸೂರು ಪಾಕ್ ಸಿದ್ಧವಾಗುತ್ತದೆ. ಎಷ್ಟೇ ವರ್ಣಿಸಿದರೂ ತಿಂದ ಅನುಭವ ಆಗುವುದಿಲ್ಲ. ನೀವೂ ಒಮ್ಮೆ ಭೇಟಿ ಕೊಟ್ಟು ಟೇಸ್ಟ್ ಮಾಡಿ. ಎರಡನೇ ಮೈಸೂರು ಪಾಕ್ ತಿಂದು ಪಾರ್ಸೆಲ್ ತರದೆ ಬರುವುದಿಲ್ಲ. ಆ ನಂಬಿಕೆ ನಮಗಿದೆ. ಇಲ್ಲಿ ಬಾದಾಮ್ ಹಲ್ವಾ, ಮಸಾಲೆ ದೋಸೆ ಎಲ್ಲವೂ ಸಿಗುತ್ತದೆ ಮತ್ತು ರುಚಿಕರವಾಗಿರುತ್ತದೆ.

ಬರಹ: ಎಚ್.ಮಾರುತಿ

Whats_app_banner