ಮಕ್ಕಳಿಗೆ ಸಂಜೆ ಸ್ನಾಕ್ಸ್‌ಗೆ ಮಾಡಿಕೊಡಿ ಗರಿಗರಿ ರಾಗಿ ಚಕ್ಕುಲಿ: ತಿನ್ನಲೂ ರುಚಿ, ಆರೋಗ್ಯಕ್ಕೂ ಪ್ರಯೋಜನಕಾರಿ- ಇಲ್ಲಿದೆ ರೆಸಿಪಿ
Dec 02, 2024 11:05 AM IST
ಮಕ್ಕಳಿಗೆ ಸಂಜೆ ಸ್ನಾಕ್ಸ್‌ಗೆ ಮಾಡಿಕೊಡಿ ಗರಿಗರಿ ರಾಗಿ ಚಕ್ಕುಲಿ: ತಿನ್ನಲೂ ರುಚಿ, ಆರೋಗ್ಯಕ್ಕೂ ಪ್ರಯೋಜನಕಾರಿ- ಇಲ್ಲಿದೆ ರೆಸಿಪಿ
ರಾಗಿ ಹಿಟ್ಟಿನಿಂದ ಅನೇಕ ಬಗೆಯ ಖಾದ್ಯಗಳನ್ನು ಮಾಡಬಹುದು. ಇದರಿಂದ ಚಕ್ಕುಲಿಯನ್ನು ಕೂಡ ತಯಾರಿಸಬಹುದು. ಸಂಜೆ ಚಹಾ ಹೀರುತ್ತಾ ಬಿಸಿ ಬಿಸಿ ಹಾಗೂ ಗರಿಗರಿಯಾದ ಚಕ್ಕುಲಿಗಳನ್ನು ಮೆಲ್ಲಬಹುದು. ಮಕ್ಕಳಿಗೆ ಸಂಜೆ ಸ್ನಾಕ್ಸ್‌ಗೆ ಮಾಡಿಕೊಡಬಹುದು. ಖಂಡಿತ ಇಷ್ಟವಾಗಬಹುದು. ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ಇಲ್ಲಿದೆ ರೆಸಿಪಿ ಮಾಡುವ ವಿಧಾನ.
ರಾಗಿಯಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ರಾಗಿ ಹಿಟ್ಟಿನಿಂದ ಕೇವಲ ಮುದ್ದೆ ಅಷ್ಟೇ ಅಲ್ಲ, ಗರಿಗರಿಯಾದ ಚಕ್ಕುಲಿಯನ್ನು ತಯಾರಿಸಬಹುದು. ಇದು ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಮಕ್ಕಳು ಬೇಕರಿ ತಿಂಡಿಗಾಗಿ ಹಠ ಮಾಡಿದರೆ ರಾಗಿ ಚಕ್ಕುಲಿ ತಯಾರಿಸಿ ತಿನ್ನಲು ಕೊಡಬಹುದು. ಗರಿಗರಿಯಾದ ಚಕ್ಕುಲಿಯು, ಮಸಾಲೆಯುಕ್ತ ಪರಿಮಳವನ್ನು ಹೊಂದಿರುತ್ತದೆ. ಎಲ್ಲರಿಗೂ ರಾಗಿ ಚಕ್ಕುಲಿ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಮಕ್ಕಳಿಗೆ ಸಂಜೆ ಸ್ನಾಕ್ಸ್‌ಗೆ ಮಾಡಿಕೊಡಬಹುದು. ಇದನ್ನು ತಯಾರಿಸುವ ವಿಧಾನ ಕೂಡ ತುಂಬಾನೇ ಸುಲಭ. ಇಲ್ಲಿದೆ ರಾಗಿ ಚಕ್ಕುಲಿ ತಯಾರಿಸುವ ವಿಧಾನ.
ರಾಗಿ ಚಕ್ಕುಲಿ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು: ರಾಗಿ ಹಿಟ್ಟು- ಎರಡು ಕಪ್, ಅಕ್ಕಿ ಹಿಟ್ಟು- ಒಂದು ಕಪ್, ಹುರಿಗಡಲೆ- ಅರ್ಧ ಕಪ್ (ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ), ಮೆಣಸಿನಪುಡಿ- ಒಂದು ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ನೀರು- ಬೇಕಾಗುವಷ್ಟು, ಬಿಳಿ ಎಳ್ಳು- ಕಾಲು ಕಪ್, ಜೀರಿಗೆ- ಒಂದು ಚಿಟಿಕೆ, ತುಪ್ಪ- ಎರಡು ಚಮಚ, ಕರಿಯಲು ಅಡುಗೆ ಎಣ್ಣೆ.
ತಯಾರಿಸುವ ವಿಧಾನ: ಮೊದಲು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ರಾಗಿ ಹಿಟ್ಟನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ರಾಗಿ ಹಿಟ್ಟನ್ನು ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ನಂತರ ಹಿಟ್ಟನ್ನು ಪಕ್ಕಕ್ಕೆ ಇರಿಸಿ. ಅದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
- ಹುರಿಗಲೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ. ನಂತರ ರಾಗಿ ಹಿಟ್ಟನ್ನು ದೊಡ್ಡ ಬಟ್ಟಲಿನಲ್ಲಿ ಹಾಕಿ. ಅದಕ್ಕೆ ಹುರಿಗಡಲೆ ಪುಡಿಯನ್ನು ಹಾಕಿ.
- ರಾಗಿ ಹಿಟ್ಟು ಮತ್ತು ಹುರಿಗಡಲೆ ಪುಡಿಯನ್ನು ಮಿಶ್ರಣ ಮಾಡಿ. ನಂತರ ಅಕ್ಕಿ ಹಿಟ್ಟು, ಮೆಣಸಿನಕಾಯಿ, ಉಪ್ಪು, ಬಿಳಿ ಎಳ್ಳು ಮತ್ತು ಇಂಗು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಈ ಹಿಟ್ಟಿಗೆ ಸೇರಿಸಲು ತುಪ್ಪವನ್ನು ಬಾಣಲೆಯಲ್ಲಿ ಬಿಸಿ ಮಾಡಿ.
- ಬಿಸಿಯಾದ ನಂತರ ಹಿಟ್ಟಿಗೆ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದರ ನಂತರ ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಮೃದುವಾಗುವವರೆಗೆ ಹಿಟ್ಟನ್ನು ಬೆರೆಸಿಕೊಳ್ಳಿ.
- ಹಿಟ್ಟನ್ನು ಚೆನ್ನಾಗಿ ಕಲಸಿದ ನಂತರ, ಸ್ಟೌವ್ ಮೇಲೆ ಬಾಣಲೆಯಿಟ್ಟು ಅಡುಗೆ ಎಣ್ಣೆ ಹಾಕಿ. ಎಣ್ಣೆಯನ್ನು ಕಾಯಲು ಬಿಡಿ.
- ಈ ವೇಳೆ ಚಕ್ಕುಲಿ ಮಾಡುವ ಮೆಷಿನ್‍ಗೆ ತಯಾರಿಸಿಟ್ಟಂತಹ ಹಿಟ್ಟನ್ನು ಹಾಕಿ. ಎಣ್ಣೆ ಚೆನ್ನಾಗಿ ಕಾದ ನಂತರ, ಇದನ್ನು ಎಣ್ಣೆಯಲ್ಲಿ ಬಿಡಿ.
- ಚಕ್ಕುಲಿ ಹಿಟ್ಟನ್ನು ಸುರಿದ ಬಳಿಕ ಉರಿಯನ್ನು ಮಧ್ಯಮಕ್ಕೆ ತಗ್ಗಿಸಿ. ಚಕ್ಕುಲಿಯನ್ನು ಚೆನ್ನಾಗಿ ಫ್ರೈ ಮಾಡಿ. ಎರಡೂ ಕಡೆಗೂ ತಿರುಗಿಸಿ ಫ್ರೈ ಮಾಡಿ.
- ಚಕ್ಕುಲಿಯನ್ನು ಚೆನ್ನಾಗಿ ಫ್ರೈ ಮಾಡಿ ನೊರೆ ಕಡಿಮೆಯಾದಾಗ ಹೊರತೆಗೆಯಬಹುದು. ಎಲ್ಲಾ ಚಕ್ಕುಲಿಗಳನ್ನು ಹೀಗೆ ಹುರಿಯಿರಿ. ಗರಿಗರಿಯಾದ ಕುರುಕುಲು ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಮಕ್ಕಳು ಸಂಜೆ ಶಾಲೆಯಿಂದ ಬಂದ ಕೂಡಲೇ ಈ ಸ್ನಾಕ್ಸ್ ಅನ್ನು ಸಿದ್ಧಪಡಿಸಿ ಕೊಡಬಹುದು. ಬೇಕರಿ ತಿಂಡಿಗಳನ್ನು ತಿನ್ನುವ ಬದಲು ಮನೆಯಲ್ಲೇ ಮಾಡಿದ ಈ ರಾಗಿ ಚಕ್ಕುಲಿ ತಿನ್ನಲು ತುಂಬಾ ರುಚಿಕರವಾಗಿರುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ.
ವಿಭಾಗ