ಚಪಾತಿ ಜತೆ ಸವಿಯಿರಿ ಟೇಸ್ಟಿ ಬೆಳ್ಳುಳ್ಳಿ ಮೆಂತ್ಯ ಕರಿ: ಒಮ್ಮೆ ರುಚಿ ಸವಿದರೆ ಮತ್ತೆ ಮತ್ತೆ ತಿನ್ನುವಿರಿ
Dec 02, 2024 03:55 PM IST
ಚಪಾತಿ ಜತೆ ಸವಿಯಿರಿ ಟೇಸ್ಟಿ ಬೆಳ್ಳುಳ್ಳಿ ಮೆಂತ್ಯ ಕರಿ: ಒಮ್ಮೆ ರುಚಿ ಸವಿದರೆ ಮತ್ತೆ ಮತ್ತೆ ತಿನ್ನುವಿರಿ
ಚಪಾತಿ ಜತೆ ದಿನಾ ಒಂದೇ ರೀತಿ ಗ್ರೇವಿ ತಿಂದು ಬೇಜಾರಾಗಿದ್ದರೆ, ಈ ರೀತಿ ಡಿಫರೆಂಟ್ ಆಗಿ ಬೆಳ್ಳುಳ್ಳಿ-ಮೆಂತ್ಯ ಕರಿ ತಯಾರಿಸಿ. ರುಚಿಯೂ ತುಂಬಾ ಚೆನ್ನಾಗಿರುತ್ತದೆ. ಕರಿ ಮಾಡುವ ವಿಧಾನ ಕೂಡ ತುಂಬಾ ಸಿಂಪಲ್. ಇಲ್ಲಿದೆ ಬೆಳ್ಳುಳ್ಳಿ-ಮೆಂತ್ಯ ಗ್ರೇವಿ ರೆಸಿಪಿ ತಯಾರಿಸುವ ವಿಧಾನ.
ನಿತ್ಯ ಚಪಾತಿ ಮಾಡುವಾಗ ಬಗೆಬಗೆಯ ಕರಿ ತಿನ್ನಬೇಕು ಎಂದೆನಿಸುತ್ತದೆ. ದಿನಾ ಒಂದೇ ರೀತಿಯ ಖಾದ್ಯ ಬೇಸರ ತರಿಸಬಹುದು. ಇದರಿಂದ ಚಪಾತಿ ತಿನ್ನಲು ಕೂಡ ಇಷ್ಟವಾಗದೆ ಇರಬಹುದು. ಹೀಗಾಗಿ ವಿವಿಧ ಬಗೆಯ ಕರಿ ಮಾಡಿದರೆ ತಿನ್ನಲು ರುಚಿಕರವಾಗಿರುತ್ತದೆ. ನೀವು ಬೆಳ್ಳುಳ್ಳಿ-ಮೆಂತ್ಯ ಕರಿಯನ್ನು ಎಂದಾದರೂ ಸವಿದಿದ್ದೀರಾ? ಚಪಾತಿ ಜತೆ ಸವಿಯಲು ಬಹಳ ರುಚಿಕರವಾಗಿರುತ್ತದೆ. ಈ ರೆಸಿಪಿ ಮಾಡುವುದು ತುಂಬಾನೇ ಸರಳ. ಇಲ್ಲಿದೆ ಪಾಕವಿಧಾನ.
ಬೆಳ್ಳುಳ್ಳಿ-ಮೆಂತ್ಯ ಗ್ರೇವಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ಮೆಂತ್ಯ- ಎರಡು ಗೊಂಚಲು, ಬೆಳ್ಳುಳ್ಳಿ- 8, ಲವಂಗ- 1, ಈರುಳ್ಳಿ- 1, ಟೊಮೆಟೊ- ಒಂದು, ಕಡಲೆಬೇಳೆ- ಒಂದು ಚಮಚ, ಕಡಲೆಕಾಯಿ- ಒಂದು ಚಮಚ, ಎಳ್ಳು- ಒಂದು ಚಮಚ, ಗೋಡಂಬಿ- 4, ನೀರು- ಅರ್ಧ ಕಪ್, ಎಣ್ಣೆ- ಮೂರು ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ- ಒಂದು ಟೀ ಚಮಚ, ಒಣ ಮೆಣಸಿನಕಾಯಿ- ನಾಲ್ಕು, ಅರಿಶಿನ- ಅರ್ಧ ಟೀಚಮಚ, ಗರಂ ಮಸಾಲೆ- ಅರ್ಧ ಟೀ ಚಮಚ, ಮೆಣಸಿನ ಪುಡಿ- 1 ಟೀ ಚಮಚ, ಬೆಣ್ಣೆ- ಒಂದು ಟೀ ಚಮಚ, ಮೊಸರು (ಬೇಕಿದ್ದರೆ ಮಾತ್ರ)- ಎರಡು ಚಮಚ.
ತಯಾರಿಸುವ ವಿಧಾನ: ಈ ಗ್ರೇವಿಯನ್ನು ತಯಾರಿಸಲು ಮೊದಲು ಮಸಾಲೆ ಪೇಸ್ಟ್ ತಯಾರಿಸಿ. ಅದಕ್ಕಾಗಿ ಸ್ಟೌವ್ ಮೇಲೆ ಬಾಣಲೆ ಇಟ್ಟು ಕಡಲೆಬೇಳೆ, ಶೇಂಗಾ, ಎಳ್ಳು, ಗೋಡಂಬಿ ಹಾಕಿ ಸ್ವಲ್ಪ ಹುರಿಯಿರಿ.
- ಬೆಂದ ನಂತರ ಅವುಗಳನ್ನು ಮಿಕ್ಸಿಂಗ್ ಜಾರ್‌ಗೆ ಹಾಕಿ ಅರ್ಧ ಕಪ್ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.
- ತೊಳೆದ ಮೆಂತ್ಯವನ್ನು ನುಣ್ಣಗೆ ಕತ್ತರಿಸಿ.
- ಇನ್ನೊಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಒಂದು ಟೀ ಚಮಚ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದ ನಂತರ, ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳು ಮತ್ತು ಮೆಂತ್ಯ ಸೇರಿಸಿ. ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಬೆಳ್ಳುಳ್ಳಿ ಎಸಳು ಮತ್ತು ಮೆಂತ್ಯವನ್ನು ಚೆನ್ನಾಗಿ ಹುರಿಯಿರಿ. ಎಲೆ ಮೃದುವಾದ ನಂತರ, ಅದನ್ನು ಪಕ್ಕಕ್ಕೆ ಇರಿಸಿ.
- ಅದೇ ಬಾಣಲೆಯಲ್ಲಿ ಎರಡು ಚಮಚ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದಾಗ ಜೀರಿಗೆ, ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ.
- ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದಾಗ ಒಣಮೆಣಸು, ಅರಿಶಿನ, ಮೆಣಸಿನ ಪುಡಿ, ಟೊಮೆಟೊ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಅದರಲ್ಲಿ ಅರ್ಧ ಕಪ್ ನೀರು ಸುರಿದು ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಹೆಚ್ಚು ನೀರು ಸೇರಿಸಬಹುದು. ಜತೆಗೆ ಮೊಸರು ಸೇರಿಸಿ (ಬೇಕಿದ್ದರೆ ಮಾತ್ರ).
- ಮಿಶ್ರಣ ಮಾಡುವಾಗ ಅವುಗಳನ್ನು ಮೂರು ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ಗರಂ ಮಸಾಲೆ ಸೇರಿಸಿ.
- ನಂತರ ಅದನ್ನು ಫ್ರೈ ಮಾಡಿ. ಮೆಂತ್ಯ ಮತ್ತು ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಾಲ್ಕು ನಿಮಿಷಗಳ ಕಾಲ ಬೆರೆಸಿ ಬೇಯಿಸಿ. ಅಷ್ಟೇ, ಬೆಳ್ಳುಳ್ಳಿ-ಮೆಂತ್ಯ ಕರಿ ಸವಿಯಲು ಸಿದ್ಧ.
ತುಂಬಾ ಸರಳವಾಗಿ ತಯಾರಿಸಬಹುದಾದ ರೆಸಿಪಿಯಿದು. ನೀವು ಟ್ರೈ ಮಾಡಿ ನೋಡಿ. ಚಪಾತಿ ಜತೆ ಸವಿಯಲು ತುಂಬಾ ಚೆನ್ನಾಗಿರುತ್ತದೆ.
ವಿಭಾಗ