ರಾಯಚೂರಿನಲ್ಲಿ ಒಗ್ಗರಣೆ ಮಂಡಕ್ಕಿ ಮಿರ್ಚಿ ಬಜ್ಜಿಗೆ ಬಹಳ ಫೇಮಸ್ ಈ ಸದಪ್ಪ ಹೋಟೆಲ್
Sep 15, 2023 06:00 PM IST
ಮಿರ್ಚಿ ಮಂಡಕ್ಕಿಗೆ ಫೇಮಸ್ ರಾಯಚೂರಿನ ಸದಪ್ಪ ಹೋಟೆಲ್
ಉತ್ತರ ಕರ್ನಾಟಕ ಭಾಗದ ಒಂದೊಂದು ಜಿಲ್ಲೆಯಲ್ಲೂ ಈ ಮಿರ್ಚಿ ಮಂಡಕ್ಕಿಗೆ ಒಂದೊದು ಹೋಟೆಲ್ ಫೇಮಸ್ ಆಗಿರುತ್ತದೆ. ಹಾಗೇ ನೀವು ರಾಯಚೂರಿಗೆ ಹೋದರೆ ಅಲ್ಲಿ ಸದಪ್ಪ ಒಗ್ಗರಣೆ ಹೋಟೆಲ್ ಬಹಳ ಫೇಮಸ್.
ಸಂತೆ, ಜಾತ್ರೆಗೆ ಹೋದವರು ಅಲ್ಲಿ ಕಡ್ಲೆಪುರಿ ತಿನ್ನದೆ ಬರುವುದಿಲ್ಲ. ತಿನ್ನೋದು ಮಾತ್ರವಲ್ಲ ಕಡ್ಲೆಪುರಿಯೊಂದಿಗೆ ಒಂದಿಷ್ಟು ಖಾರಾ ಬೂಂದಿ ಅಥವಾ ಸಿಹಿ ಬೂಂದಿ, ಹುರಿಗಡಲೆ ಸೇರಿಸಿ ಪಾರ್ಸಲ್ ಕಟ್ಟಿಸಿಕೊಂಡು ಬರೋದು ವಾಡಿಕೆ. ಆ ಕಡ್ಲೆಪುರಿಯನ್ನು ಮಡಿಲಲ್ಲಿ ಹಾಕಿಕೊಂಡು ತಿನ್ನುವುದೇ ಒಂದು ರೀತಿ ಚೆಂದ. ಜೊತೆಗೆ ಒಂದಿಷ್ಟು ಕಾಫಿ ಅಥವಾ ಟೀ ಇದ್ದರೆ ಇನ್ನೂ ಖುಷಿ.
ರಾಯಚೂರಿನ ಸದಪ್ಪ ಹೋಟೆಲ್
ಕಡ್ಲೆಪುರಿಯನ್ನು ಕೆಲವೆಡೆ ಮಂಡಕ್ಕಿ ಅಂತಾನೂ ಕರೆಯುತ್ತಾರೆ. ಮಂಡಕ್ಕಿಯನ್ನು ಮೊದಲೇ ಹೇಳಿದಂತೆ ಕೆಲವರು ಖಾರ/ಸಿಹಿ ಬೂಂದಿ ಜೊತೆ ತಿನ್ನಲು ಇಷ್ಟಪಟ್ಟರೆ, ಕೆಲವರಿಗೆ ತೆಂಗಿಕಾಯಿಚೂರಿನ ಜೊತೆ ತಿನ್ನಲು ಇಷ್ಟ. ಇನ್ನೂ ಕೆಲವರು ಕಾಫಿ/ಟೀ ಜೊತೆಗೆ ಮಿಕ್ಸ್ ಮಾಡಿ ತಿನ್ನುವುದನ್ನು ನೋಡಿದ್ದೇವೆ. ಆದರೆ ಈ ರೀತಿಯ ತಿನ್ನುವ ಅಭ್ಯಾಸ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಮೈಸೂರು, ಮಂಡ್ಯ, ಬೆಂಗಳೂರು ಕಡೆ ಮಂಡಕ್ಕಿಯಿಂದ ಭೇಲ್ ಪುರಿ, ಚುರುಮುರಿ ಅಥವಾ ಒಗ್ಗರಣೆ ಕಡ್ಲೆಪುರಿ ತಯಾರಿಸಿದರೆ ಉತ್ತರ ಕರ್ನಾಟಕದ ಕಡೆ ಮಂಡಕ್ಕಿಯಿಂದ ಬೇರೆಯದ್ದೇ ಡಿಶ್ ಮಾಡ್ತಾರೆ. ಅದನ್ನು ಮಿರ್ಚಿ ಮಂಡಕ್ಕಿ ಬಹಳ ಫೇಮಸ್.
ಉತ್ತರ ಕರ್ನಾಟಕ ಭಾಗದ ಒಂದೊಂದು ಜಿಲ್ಲೆಯಲ್ಲೂ ಈ ಮಿರ್ಚಿ ಮಂಡಕ್ಕಿಗೆ ಒಂದೊದು ಹೋಟೆಲ್ ಫೇಮಸ್ ಆಗಿರುತ್ತದೆ. ಹಾಗೇ ನೀವು ರಾಯಚೂರಿಗೆ ಹೋದರೆ ಅಲ್ಲಿ ಸದಪ್ಪ ಒಗ್ಗರಣೆ ಹೋಟೆಲ್ ಬಹಳ ಫೇಮಸ್. ಇದು 50 ವರ್ಷದ ಹಳೆಯ ಹೋಟೆಲ್. ರಾಯಚೂರಿನ ಎಪಿಎಂಸಿ ಮಾರ್ಕೆಟ್ ಬಳಿ ಹೋಗಿ ಸದಪ್ಪ ಹೋಟೆಲ್ ಎಂದು ಯಾರಿಗೆ ಕೇಳಿದರೂ ಈ ಹೋಟೆಲ್‌ಗೆ ದಾರಿ ತೋರಿಸುತ್ತಾರೆ. ಸುತ್ತಮುತ್ತಲಿನ ಕಾಲೇಜು, ಅಂಗಡಿ, ಮಾರ್ಕೆಟ್‌ನಲ್ಲಿ ಕೆಲಸ ಮಾಡುವವರು ತಪ್ಪದೆ ಸದಪ್ಪ ಹೋಟೆಲ್‌ಗೆ ಬಂದು ಮಿರ್ಚಿ ಮಂಡಕ್ಕಿ ತಿಂದು ಹೋಗುತ್ತಾರೆ.
50 ವರ್ಷಗಳ ಹಿಂದಿನ ಹೋಟೆಲ್
ಸದಪ್ಪ ಎಂಬುವವರು 50 ವರ್ಷಗಳ ಹಿಂದೆ 250 ರೂಪಾಯಿ ಬಂಡವಾಳದಿಂದ ಆರಂಭಿಸಿದ ಹೋಟೆಲ್ ಇದು. ಆಗೆಲ್ಲಾ ಒಂದು ಚೀಲ ಮಂಡಕ್ಕಿಗೆ 15 ರೂಪಾಯಿ ಹಾಗೂ ಒಂದು ಮಿರ್ಚಿ ಮಂಡಕ್ಕಿಗೆ 15 ಪೈಸೆ ಬೆಲೆ ಇತ್ತು. ಕಾಲ ಕಳೆದಂತೆ ಸಾಮಗ್ರಿಗಳ ಬೆಲೆಯೂ ಹೆಚ್ಚಾದಂತೆ ಮಿರ್ಚಿ ಮಂಡಕ್ಕಿ ಬೆಲೆಯನ್ನು ಫಿಕ್ಸ್ ಮಾಡಲಾಗಿದೆ. ಈಗ ಸದಪ್ಪ ಅವರ ಇಬ್ಬರು ಮಕ್ಕಳಾದ ಮಲ್ಲಿಕಾರ್ಜುನ್ ಹಾಗೂ ಶರಣ ಬಸವ, ಹೋಟೆಲ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ತಂದೆ ಶುರು ಮಾಡಿದ ಹೋಟೆಲ್‌ನಲ್ಲೇ ಈಗಲೂ ಕೆಲಸ ಮುಂದುವರೆಸಿಕೊಂಡು ಬಂದಿದ್ದಾರೆ. ಸದಪ್ಪ ಅವರದ್ದೀಗ ರಿಟೈರ್ಡ್ ಲೈಫ್. ಆದರೂ ಅವರ ಹೆಸರಿನ ಹೋಟೆಲ್ ಮಾತ್ರ ಸುತ್ತಮುತ್ತ ಬಹಳ ಫೇಮಸ್.
ಸದಪ್ಪ ಹೋಟೆಲ್‌ನಲ್ಲಿ ಸೋಮವಾರದಿಂದ ಶನಿವಾರದವರೆಗೂ ಬೆಳಗ್ಗೆ 7 ರಿಂದ ಸಂಜೆ 4ವರೆಗೆ, ಭಾನುವಾರ ಬೆಳಗ್ಗೆ 7 ರಿಂದ 11 ಗಂಟೆವೆರಗೂ ಮಾತ್ರ ಮಿರ್ಚಿ, ಒಗ್ಗರಣೆ ಮಂಡಕ್ಕಿ ದೊರೆಯುತ್ತದೆ. ನಂತರ ಹೋಟೆಲ್ ಬಾಗಿಲು ಮುಚ್ಚಲಾಗುತ್ತದೆ. ಒಂದು ವೇಳೆ ಯಾರಾದರೂ ಆರ್ಡರ್ ನೀಡಿದರೆ ಮಾತ್ರ ಒಗ್ಗರಣೆ ಮಂಡಕ್ಕಿ ಮಾಡಿಕೊಡುತ್ತಾರೆ. ಸಮೀಪದಲ್ಲೇ ಮಂಡಕ್ಕಿ ಮಾಡುವ ಭಟ್ಟಿ ಇದೆ. ಪ್ರತಿ ದಿನ ಫ್ರೆಷ್ ಆಗಿ ಅಲ್ಲಿಂದ ತಂದು ಒಗ್ಗರಣೆ ಮಂಡಕ್ಕಿ ಮಾಡಲಾಗುತ್ತದೆ.
ಇಲ್ಲಿ ಮಿರ್ಚಿ ಬಜ್ಜಿ, ಒಗ್ಗರಣೆ ಮಂಡಕ್ಕಿ ಹಾಗೂ ಟೀ ದೊರೆಯುತ್ತದೆ. ಮಂಡಕ್ಕಿ ಜೊತೆಗೆ ನಿಂಬೆ ಹಣ್ಣಿನ ಚೂರು, ಬೆಳ್ಳುಳ್ಳಿ ಚಟ್ನಿ ಪುಡಿ, ಮಿರ್ಚಿ ಬಜ್ಜಿ ಜೊತೆ ಸೇರಿಸಿ ಕೊಡಲಾಗುತ್ತದೆ. ಭೇಲ್ ಪುರಿ, ಚುರುಮುರಿಗಿಂತ ಮಿರ್ಚಿ ಮಂಡಕ್ಕಿ ರುಚಿ ಬೇರೆಯೇ ಇರುತ್ತದೆ. ನೀವು ರಾಯಚೂರಿಗೆ ಹೋದರೆ ಒಮ್ಮೆ ಸದಪ್ಪ ಹೋಟೆಲ್‌ಗೆ ಹೋಗಿ ಬನ್ನಿ.
ಬರಹ: ರಕ್ಷಿತಾ
ಈ ಕಾಲಂ ಬಗ್ಗೆ ನಿಮ್ಮ ಅಭಿಪ್ರಾಯ, ಸಲಹೆಯನ್ನು ನಮಗೆ ತಿಳಿಸಿ
ಇ-ಮೇಲ್: ht.kannada@htdigital.in
ಇಂತಹ ಇನ್ನಷ್ಟು ಕಾಲಂಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ