ಭಾನುವಾರ ಸ್ಪೆಷಲ್ ಅಡುಗೆ ಮಾಡ್ಬೇಕು ಅಂತಿದ್ರೆ ಹೋಟೆಲ್ ಶೈಲಿಯಲ್ಲಿ ಬೋಟಿ ಕರಿ ಮಾಡಿ; ಸಖತ್ ಸಿಂಪಲ್ ರೆಸಿಪಿಯಿದು
Oct 25, 2024 08:23 PM IST
ಬೋಟಿ ಕರಿ
- ಮಟನ್ ಪ್ರಿಯರಿಗೆ ಬೋಟಿ ಕರಿ ಹೊಸತೇನಲ್ಲ. ಭಾನುವಾರದ ಹೊತ್ತು ಭರ್ಜರಿ ಭೋಜನ ನಿಮ್ಮದಾಗಬೇಕು ಎಂದರೆ ಮನೆಯಲ್ಲೇ ಬೋಟಿ ಕರಿ ಮಾಡಿ. ಹೋಟೆಲ್‌ಗಳಲ್ಲಿ ನೀವು ಬೋಟಿ ಕರಿ ತಿಂದಿರಬಹುದು. ಅಂಥದ್ದೇ ರುಚಿಯ ಬೋಟಿ ಕರಿಯನ್ನು ಮನೆಯಲ್ಲೂ ಮಾಡಬಹುದು. ರೆಸಿಪಿ ಇಲ್ಲಿದೆ.
ಹೋಟೆಲ್‌ಗಳಲ್ಲಿ ಬೋಟಿ ಕರಿ ತಿಂದಾಗ ಅದರ ರುಚಿಗೆ ನೀವು ಫಿದಾ ಆಗಿರಬಹುದು. ಬೋಟಿ ಕರಿ ನೋಡಿದಾಗ ಇದನ್ನು ಮಾಡೋದು ಕಷ್ಟ ಇರಬಹುದು ಎಂದು ನೀವು ಅಂದುಕೊಂಡಿರಬಹುದು. ಆದರೆ ಹೋಟೆಲ್ ಶೈಲಿಯಲ್ಲೇ ಮನೆಯಲ್ಲೂ ಬೋಟಿ ಕರಿ ಮಾಡಬಹುದು. ಬಿಸಿ ಬಿಸಿ ಅನ್ನದ ಜೊತೆ ಬೋಟಿ ಕರಿ ಇದ್ದರೆ ಅದರ ರುಚಿಗೆ ನೀವು ಫಿದಾ ಆಗೋದು ಪಕ್ಕಾ.
ಬೋಟಿ ತಿನ್ನೋದು ಆರೋಗ್ಯಕ್ಕೂ ಉತ್ತಮ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಬೋಟಿಯನ್ನು ಕತ್ತರಿಸುವುದು ಸ್ವಚ್ಛ ಮಾಡುವುದು ಕೊಂಚ ಕಷ್ಟ. ಆದರೆ ಇದನ್ನು ಚಿಕ್ಕದಾಗಿ ಕತ್ತರಿಸಿ, ಬಿಸಿ ನೀರಿನಲ‍್ಲಿ ಹಾಕಬೇಕು. ನಂತರ ಇದರಿಂದ ಸಖತ್ ಟೇಸ್ಟಿ ಆಗಿರೋ ಕರಿ ತಯಾರಿಸಬಹುದು.
ಬೋಟಿ ಕರಿ ರೆಸಿಪಿ
ಬೇಕಾಗುವ ಪದಾರ್ಥಗಳು: ಮಟನ್ ಬೋಟಿ – ಅರ್ಧ ಕೆಜಿ, ಶುಂಠಿ – ಒಂದು ತುಂಡು, ಬೆಳ್ಳುಳ್ಳಿ ಎಸಳು – 10, ಲವಂಗ – 3, ಏಲಕ್ಕಿ – 3, ದಾಲ್ಚಿನ್ನಿ – ಸಣ್ಣ ತುಂಡು, ಈರುಳ್ಳಿ – 2, ಎಣ್ಣೆ – 2 ಚಮಚ, ಬಿರಿಯಾನಿ ಎಲೆ – 2, ತೆಂಗಿನತುರಿ – 2 ಚಮಚ, ಹಸಿಮೆಣಸು – 2, ಅರಿಸಿನ – ಚಿಟಿಕೆ, ಕೊತ್ತಂಬರಿ ಪುಡಿ – 1ಚಮಚ, ಗರಂ ಮಸಾಲ – ಅರ್ಧ ಚಮಚ, ಉಪ್ಪು – ರುಚಿಗೆ
ಬೋಟಿ ಕರಿ ತಯಾರಿಸುವ ವಿಧಾನ
ಮೊದಲು ಬೋಟಿ ತುಂಡುಗಳನ್ನು ಚೆನ್ನಾಗಿ ಬಿಸಿ ನೀರಿನಲ್ಲಿ ತೊಳೆದು ಪಕ್ಕಕ್ಕೆ ಇರಿಸಿ. ನಂತರ ಬಾಣಲಿಗೆ ಮೂರು ಲೋಟ ನೀರು ಸೇರಿಸಿ, ಅದಕ್ಕೆ ಅರಿಸಿನ ಹಾಕಿ ಬೋಟಿ ತುಂಡುಗಳನ್ನು ಸೇರಿಸಿ. ಇದನ್ನು 10 ನಿಮಿಷಗಳ ಕಾಲ ದೊಡ್ಡ ಉರಿಯಲ್ಲಿ ಬೇಯಿಸಿ. ಈ ರೀತಿ ಮಾಡುವುದರಿಂದ ಬೋಟಿ ಚೆನ್ನಾಗಿ ಸ್ವಚ್ಛವಾಗುತ್ತದೆ. ನಂತರ ಇದನ್ನು ಸೋಸಿಕೊಂಡು ಪಕ್ಕಕ್ಕೆ ಇರಿಸಿ. ಮಿಕ್ಸಿ ಜಾರಿನಲ್ಲಿ ಶುಂಠಿ, ಬೆಳ್ಳುಳ್ಳಿ, ಏಲಕ್ಕಿ, ಲವಂಗ, ದಾಲ್ಚಿನ್ನಿ ಸೇರಿಸಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಮಿಕ್ಸಿನಲ್ಲಿ ಈರುಳ್ಳಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಕುಕ್ಕರ್ ಮೇಲೆ 4 ಚಮಚ ಎಣ್ಣೆ ಹಾಕಿ. ಅದಕ್ಕೆ ಬಿರಿಯಾನಿ ಎಲೆ, ರುಬ್ಬಿಕೊಂಡ ಈರುಳ್ಳಿ ಮಿಶ್ರಣವನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ನಂತರ ರುಬ್ಬಿಕೊಂಡ ಶುಂಠಿ–ಬೆಳ್ಳುಳ್ಳಿ ಮಿಶ್ರಣವನ್ನು ಹಾಕಿ. ಅದಕ್ಕೆ ಹಸಿಮೆಣಸಿನಕಾಯಿ ಉದ್ದಕ್ಕೆ ಕತ್ತರಿಸಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
ಈ ಮಿಶ್ರಣಕ್ಕೆ ಬೋಟಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಗರಂ ಮಸಾಲ, ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಲೋಟ ನೀರು ಹಾಕಿ ಕುಕ್ಕರ್ ಮುಚ್ಚಿ ಎರಡು ಸೀಟಿ ಬರುವವರೆಗೆ ಬೇಯಿಸಿ. ಕುಕ್ಕರ್ ಮುಚ್ಚಳ ತೆಗೆದ ನಂತರ ಇನ್ನೂ ಹೆಚ್ಚು ನೀರು ಇದ್ದರೆ ಸುಮಾರು ಹತ್ತು ನಿಮಿಷ ಒಲೆಯ ಮೇಲೆ ಬೇಯಿಸಿ. ನಂತರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಸ್ಟವ್ ಆಫ್ ಮಾಡಿ. ಈಗ ನಿಮ್ಮ ಮುಂದೆ ರುಚಿಯಾದ ಬೋಟಿ ಕರಿ ತಿನ್ನಲು ಸಿದ್ಧ. ಇದನ್ನು ಬಿಸಿ ಅನ್ನ ರೋಟಿ, ಚಪಾತಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.
ಹಲವರಿ ಬೋಟಿ ಕರಿ ಇಷ್ಟ ಆದ್ರೂ ಅದನ್ನು ಮಾಡೋದು ಕಷ್ಟ ಅಂತ ಮನೆಯಲ್ಲಿ ಮಾಡಲು ಹಿಂಜರಿಕೆ ಮಾಡುತ್ತಾರೆ, ಯಾಕೆಂದರೆ ಇದನ್ನು ಸ್ವಚ್ಛ ಮಾಡುವುದು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ. ಆದರೆ ಬೋಟಿಯನ್ನು ಖರೀದಿಸುವ ಮುನ್ನ ಚಿಕ್ಕದಾಗಿ ಕತ್ತರಿಸಿ ಮನೆಗೆ ತನ್ನಿ. ನಂತರ ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತರ ಸಾರು ತಯಾರಿಸಿ.
ವಿಭಾಗ