logo
ಕನ್ನಡ ಸುದ್ದಿ  /  ಜೀವನಶೈಲಿ  /  Muton Rara: ಆಪ್ತಮಿತ್ರ ರಾರಾ ಅಲ್ಲ, ಇದು ಮಟನ್‌ ರಾರಾ; ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರಿಸುತ್ತೆ ಈ ಖಾದ್ಯ

Muton Rara: ಆಪ್ತಮಿತ್ರ ರಾರಾ ಅಲ್ಲ, ಇದು ಮಟನ್‌ ರಾರಾ; ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರಿಸುತ್ತೆ ಈ ಖಾದ್ಯ

Reshma HT Kannada

Jun 15, 2024 07:00 PM IST

google News

ಆಪ್ತಮಿತ್ರ ರಾರಾ ಅಲ್ಲ, ಇದು ಮಟನ್‌ ರಾರಾ; ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರಿಸುತ್ತೆ ಈ ಖಾದ್ಯ

    • ಮಾಂಸಾಹಾರ ಪ್ರಿಯರು ಮಟನ್‌ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರಿಸಿಕೊಳ್ಳುತ್ತಾರೆ. ಮಟನ್ ಕರಿ, ಮಟನ್‌ ಬಿರಿಯಾನಿ ತಿಂದು ತಿಂದು ಬೇಜಾರು ಬಂದಿದ್ದರೆ ನೀವು ಈ ವೀಕೆಂಡ್‌ಗೆ ಮಟನ್ ರಾರಾ ರೆಸಿಪಿಯನ್ನು ಟ್ರೈ ಮಾಡಿ ನೋಡಬಹುದು.
ಆಪ್ತಮಿತ್ರ ರಾರಾ ಅಲ್ಲ, ಇದು ಮಟನ್‌ ರಾರಾ; ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರಿಸುತ್ತೆ ಈ ಖಾದ್ಯ
ಆಪ್ತಮಿತ್ರ ರಾರಾ ಅಲ್ಲ, ಇದು ಮಟನ್‌ ರಾರಾ; ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರಿಸುತ್ತೆ ಈ ಖಾದ್ಯ

ಮಟನ್ ಪ್ರಿಯರಿಗೆ ಮಟನ್ ಮಾಂಸದಿಂದ ಏನನ್ನಾದರೂ ಹೊಸ ಭಕ್ಷ್ಯಗಳನ್ನು ತಯಾರಿಸುವುದು ಎಂದರೆ ಎಲ್ಲಿಲ್ಲದ ಪ್ರೀತಿ. ಆದರೆ ಪ್ರತಿ ಬಾರಿ ಮಟನ್ ಸಾರು ತಿಂದು ತಿಂದು ನಿಮಗೂ ಬೇಜಾರು ಬಂದಿರಬಹುದು. ಹೀಗಾಗಿ ಮಟನ್ ಮಾಂಸದಿಂದ ಹೊಸದೇನಾದರೂ ಭಕ್ಷ್ಯ ತಯಾರಿಸಬೇಕು ಎಂದುಕೊಂಡಿದ್ದರೆ ನೀವು ಮಟನ್ ರಾರಾ ಎಂಬ ಸುವಾಸನೆಯುಕ್ತ ಭಕ್ಷ್ಯವನ್ನು ತಯಾರಿಸಬಹುದಾಗಿದೆ. ಇದು ವಿವಿಧ ಮಸಾಲೆಗಳನ್ನು ಸೇರಿಸಿ ಮಾಡುವ ದಪ್ಪ ಗ್ರೇವಿಯಾಗಿದೆ. ಬಿಸಿಬಿಸಿಯಾದ ಅನ್ನ ಅಥವಾ ಪರೋಟಾದೊಂದಿಗೆ ಸವಿದರೆ ಅದರ ಮಜಾವೇ ಬೇರೆ.

ಮಟನ್ ರಾರಾ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಮಟನ್ ತುಂಡುಗಳು 500 ಗ್ರಾಂ, ಕತ್ತರಿಸಿದ ಈರುಳ್ಳಿ 2, ಕತ್ತರಿಸಿದ ಟೊಮೆಟೋ 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ದೊಡ್ಡ ಚಮಚ, ಅರಿಶಿಣ 1 ಚಮಚ, ಕಾರದಪುಡಿ 1 ಚಮಚ, ಗರಂ ಮಸಾಲಾ 1 ಚಮಚ, ಚಕ್ಕೆ 1 ತುಂಡು, ಏಲಕ್ಕಿ 3, ಲವಂಗ 3, ಕೊತ್ತಂಬರಿ ಸೊಪ್ಪು 1ಕಪ್, ಉಪ್ಪು ರುಚಿಗೆ ತಕ್ಕಷ್ಟು, ಅಡುಗೆ ಎಣ್ಣೆ ಅಳತೆ ತಕ್ಕಷ್ಟು, ತುಪ್ಪ ಅಳತೆಗೆ ತಕ್ಕಷ್ಟು

ಮಟನ್ ರಾರಾ ತಯಾರಿಸುವ ವಿಧಾನ

ಕುಕ್ಕರ್ ಪಾತ್ರೆಯನ್ನು ತೆಗೆದುಕೊಂಡು ಇದಕ್ಕೆ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿ ಮಾಡಿದ ಬಳಿಕ ಇದಕ್ಕೆ ಚಕ್ಕೆ, ಏಲಕ್ಕಿ ಹಾಗೂ ಲವಂಗಗಳನ್ನು ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ಬಳಿಕ ಕತ್ತರಿಸಿದ ಈರುಳ್ಳಿಯನ್ನು ಹಾಗೂ ಹೊಂಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ. ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ಹಸಿ ವಾಸನೆ ಹೋದ ಬಳಿಕ ಟೊಮೆಟೊ ಹಾಕಿ ಟೊಮೆಟೊ ಕರಗುವವರೆಗೂ ಹುರಿದುಕೊಳ್ಳಿ.

ಎಲ್ಲಾ ಮಸಾಲೆಗಳು ಚೆನ್ನಾಗಿ ಬೆಂದ ಬಳಿಕ ಇದಕ್ಕೆ ಮಟನ್ ಪೀಸ್, ಅರಿಸಿನ, ಖಾರದ ಪುಡಿ ಹಾಗೂ ಉಪ್ಪನ್ನು ಹಾಕಿ. ಮಟನ್ ತುಂಡುಗಳು ಕಂಡು ಬಣ್ಣಕ್ಕೆ ತಿರುಗುವವರೆಗೂ ಬೇಯಿಸಿಕೊಳ್ಳಿ. ಅಳತೆಗೆ ತಕ್ಕಷ್ಟು ನೀರನ್ನು ಹಾಕಿ ಮಟನ್ ತುಂಡುಗಳನ್ನು ಬೇಯುವವರೆಗೂ ವಿಶಲ್ ಕೂಗಿಸಿ.

ಈಗ ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಇದಕ್ಕೆ ತುಪ್ಪವನ್ನು ಹಾಕಿ ಬಿಸಿಯಾದ ಬಳಿಕ ಮತ್ತೊಂದಿಷ್ಟು ಈರುಳ್ಳಿಯನ್ನು ಹಾಕಿಕೊಳ್ಳಿ. ಈರುಳ್ಳಿ ಹೊಂಬಣ್ಣಕ್ಕೆ ತಿರುಗುವವರೆಗೂ ನೀವು ಬೇಯಿಸಿಕೊಳ್ಳಬೇಕು. ಈಗ ಕುಕ್ಕರ್‌ನಲ್ಲಿ ನೀವು ಬೇಯಿಸಿಕೊಂಡ ಮಟನ್ ಹಾಗೂ ಗ್ರೇವಿಯನ್ನು ಈ ಪಾತ್ರೆಗೆ ಹಾಕಿಕೊಂಡು ಕೆಲವು ನಿಮಿಷಗಳವರೆಗೆ ಬೇಯಿಸಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಮಟನ್ ರಾರಾವನ್ನು ಅಲಂಕರಿಸಿ.

ಮಟನ್ ರಾರಾದ ರುಚಿ ಇನ್ನಷ್ಟು ಹೆಚ್ಚಬೇಕು ಎಂದರೆ ನೀವು ಎಳೆ ಮಟನ್ ಮಾಂಸವನ್ನು ಖರೀದಿ ಮಾಡಬೇಕು. ಖಾರದ ಪುಡಿಯನ್ನು ನಿಮಗೆ ಎಷ್ಟು ಖಾರ ಎಂಬುದನ್ನು ಆಧರಿಸಿ ಹಾಕಿಕೊಳ್ಳಿ. ಮಟನ್ ರಾರಾದ ರುಚಿ ಹೆಚ್ಚಿಸಲು ಕೊನೆಯಲ್ಲಿ ಎರಡು ಚಮಚ ತುಪ್ಪವನ್ನು ಮೇಲಿನಿಂದ ಹಾಕಿ. ಮಟನ್ ರಾರಾವನ್ನು ನೀವು ಗಾಳಿಯಾಡದ ಪಾತ್ರೆಯಲ್ಲಿ ಫ್ರಿಡ್ಜ್‌ನಲ್ಲಿಟ್ಟು ಮೂರು ದಿನಗಳವರೆಗೆ ಬಳಸಬಹುದಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ