Fried Rice Syndrome: 5 ದಿನ ಹಿಂದಿನ ಪಾಸ್ತ ತಿಂದು ಮೃತಪಟ್ಟ 20ರ ಯುವಕ, ಫ್ರೈಡ್ ರೈಸ್ ಸಿಂಡ್ರೋಮ್ ವಿಡಿಯೋ ವೈರಲ್
Nov 10, 2023 07:00 AM IST
ಒಂದು ರೀತಿಯ ಬ್ಯಾಕ್ಟೀರಿಯಾ ಉಂಟುಮಾಡುವ ಆಹಾರ ವಿಷ (ಫುಡ್ ಪಾಯ್ಸನ್) ಈ ಫ್ರೈಡ್ ರೈಸ್ ಸಿಂಡ್ರೋಮ್
ಐದು ದಿನ ಹಳೆಯ ತಂಗಳು ಪಾಸ್ತವನ್ನು ಸೇವಿಸಿದ ನಂತರ 20 ವರ್ಷದ ಯುವಕ ಮೃತಪಟ್ಟ ಬಳಿಕ ಫ್ರೈಡ್ ರೈಸ್ ಸಿಂಡ್ರೋಮ್ ಕುರಿತ ವಿಡಿಯೋ ವೈರಲ್ ಆಗಿದೆ. 2008ರಲ್ಲಿ ಕೂಡ ಈ ವಿಚಾರ ಗಮನಸೆಳೆದಿತ್ತು. ಏನಿದು ಫ್ರೈಡ್ ರೈಸ್ ಸಿಂಡ್ರೋಮ್, ಗುಣಲಕ್ಷಣವೇನು, ಚಿಕಿತ್ಸೆ ಹೇಗೆ ಎಂಬಿತ್ಯಾದಿ ವಿವರ ಇಲ್ಲಿದೆ.
ಫ್ರೈಡ್ ರೈಸ್ ಸಿಂಡ್ರೋಮ್ - ಈ ಹೆಸರೇ ಒಂದು ಥರಾ ವಿಚಿತ್ರವಾಗಿದೆ ಅಲ್ವ. ಇದು ಒಂದು ರೀತಿಯ ಫುಡ್ ಪಾಯ್ಸನ್. ಇದಕ್ಕೆ ಸಂಬಂಧಿಸಿದ ವಿಡಿಯೋ ಟಿಕ್‌ಟಾಕ್‌ನಲ್ಲಿ ಇತ್ತೀಚೆಗೆ ವೈರಲ್ ಆಗಿದೆ. 15 ವರ್ಷ ಹಿಂದೆ ಅಂದರೆ 2008ರಲ್ಲಿ 20 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಬೆನ್ನಿಗೆ ಈ ವಿಡಿಯೋ ಅಂದು ಮೊದಲ ಸಲ ವೈರಲ್ ಆಗಿತ್ತು.
ರೆಫ್ರಿಜರೇಟರ್‌ನಲ್ಲಿ ಇರಿಸದೇ ಇದ್ದ 5 ದಿನ ಹಳೆಯ ಪಾಸ್ತವನ್ನು ಸೇವಿಸಿದ ವ್ಯಕ್ತಿಯೊಬ್ಬ ಮೃತಪಟ್ಟ ಬಳಿಕ ಟಿಕ್‌ಟಾಕರ್ ಒಬ್ಬ ಇತ್ತೀಚೆಗೆ ಶೇರ್ ಮಾಡಿದ ವಿಡಿಯೋ ಈಗ ಗಮನಸೆಳೆಯುವುದಕ್ಕೆ ಕಾರಣ.
ಈಗ ವೈರಲ್ ಆಗಿರುವ ವೀಡಿಯೊ ನೆಟಿಜನ್‌ಗಳಲ್ಲಿ ಭಾರಿ ಭಯವನ್ನು ಹುಟ್ಟುಹಾಕಿದೆ. ಏಕೆಂದರೆ, ಜನರು ಉಳಿದ ಆಹಾರವನ್ನು ಅಥವ ತಂಗಳನ್ನು ಸೇವಿಸುವುದು ಸಾಮಾನ್ಯ. ರೆಫ್ರಿಜರೇಟ್ ಮಾಡದ ಅಥವಾ ಫ್ರಿಜ್‌ನಲ್ಲಿ ಇಡದ ತಂಗಳನ್ನವನ್ನು ರೆಸ್ಟೋರೆಂಟ್‌ಗಳಲ್ಲಿ ಫ್ರೈಡ್ ರೈಸ್ ಖಾದ್ಯಗಳಿಗೆ ಬಳಸುತ್ತಾರೆ. ಇದನ್ನು ತಿಂದು ಹೊಟ್ಟೆ ಸಮಸ್ಯೆ ಎದುರಾದಾಗ ಆ ಸಮಸ್ಯೆಗೆ ಫ್ರೈಡ್ ರೈಸ್ ಸಿಂಡ್ರೋಮ್ ಎಂದು ಹೆಸರಿಡಲಾಗಿದೆ.
ಏನಿದು ಫ್ರೈಡ್ ರೈಸ್ ಸಿಂಡ್ರೋಮ್
ಫ್ರೈಡ್ ರೈಸ್ ಸಿಂಡ್ರೋಮ್ ಎಂಬುದು ಬ್ಯಾಸಿಲಸ್ ಸೆರಿಯಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಒಂದು ರೀತಿಯ ಆಹಾರ ವಿಷ ಅಥವಾ ಫುಡ್ ಪಾಯ್ಸನ್. ಈ ಬ್ಯಾಕ್ಟೀರಿಯಾ ಸಾಮಾನ್ಯವಾಗಿ ಎಲ್ಲ ರೀತಿಯ ಪರಿಸರದಲ್ಲೂ ಕಂಡುಬರುತ್ತದೆ.
ಈ ಸಾಮಾನ್ಯ ಬ್ಯಾಕ್ಟೀರಿಯ ಕೆಲವು ಆಹಾರ ಪದಾರ್ಥಗಳನ್ನು ಸೇರಿದರೆ ಅದು ಶರೀರದಲ್ಲಿ ಆಹಾರ ಸಮಸ್ಯೆ ಉಂಟುಮಾಡುತ್ತದೆ. ಆದರೆ ಫ್ರಿಜ್‌ನಲ್ಲಿ ಇರಿಸದೇ ಹೊರಗೇ ಇಟ್ಟ ಆಹಾರಕ್ಕೆ ಈ ಬ್ಯಾಕ್ಟೀರಿಯಾ ಸೇರಿದರೆ ಆಗ ಅದು ಆಹಾರ ವಿಷಕ್ಕೆ ಕಾರಣವಾಗಬಹುದು. ವಿಶೇಷವಾಗಿ ಪಾಸ್ತಾ, ಅನ್ನ, ಬ್ರೆಡ್ ಮುಂತಾದ ಪಿಷ್ಟ, ಕಾರ್ಬೋಹೈಡ್ರೇಟ್ ಭರಿತ ಆಹಾರದಲ್ಲಿ ಈ ಬ್ಯಾಕ್ಟೀರಿಯಾ ಬಹುಬೇಗ ತನ್ನ ಕೆಲಸ ಮಾಡುತ್ತದೆ.
ಇತರ ಬ್ಯಾಕ್ಟೀರಿಯಾಗಳಿಗಿಂತ ಭಿನ್ನವಾಗಿ, ಬ್ಯಾಸಿಲಸ್ ಸೆರಿಯಸ್ ಒಂದು ರೀತಿಯ ಕೋಶವನ್ನು ಉತ್ಪಾದಿಸುತ್ತದೆ. ಇದನ್ನು ಬೀಜಕ ಎಂದು ಕರೆಯಲಾಗುತ್ತದೆ. ಇದು ಶಾಖ ನಿರೋಧಕವಾಗಿದೆ. ಅದಕ್ಕಾಗಿಯೇ ಈ ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡ ಆಹಾರವನ್ನು ಬಿಸಿ ಮಾಡುವುದರಿಂದ, ಅವು ಕೊಲ್ಲಲ್ಪಡುವುದಿಲ್ಲ. ಆ ಆಹಾರದಲ್ಲಿ ಸುಪ್ತವಾಗಿದ್ದರೂ, ಈ ಬೀಜಕಗಳು ವೇಗವಾಗಿ ಬೆಳೆಯುತ್ತವೆ ಮತ್ತು ಸರಿಯಾದ ತಾಪಮಾನ ಮತ್ತು ಪರಿಸ್ಥಿತಿಗಳಲ್ಲಿ ಸಕ್ರಿಯವಾಗುತ್ತವೆ. ಹಾಗೆ, ಫ್ರೈಡ್ ರೈಸ್ ಸಿಂಡ್ರೋಮ್ ಉಂಟಾಗುತ್ತದೆ.
ಫ್ರೈಡ್ ರೈಸ್ ಸಿಂಡ್ರೋಮ್ ಉಂಟಾದಾಗ ಏನಾಗುತ್ತದೆ
ಬ್ಯಾಸಿಲಸ್ ಸೆರಿಯಸ್‌ನಿಂದ ಕಲುಷಿತಗೊಂಡ ಆಹಾರವನ್ನು ಯಾರಾದರೂ ಸೇವಿಸಿದರೆ ಅಂತಹ ಸಂದರ್ಭದಲ್ಲಿ, ಅದರ ಬೀಜಕಗಳಿಂದ ಉತ್ಪತ್ತಿಯಾಗುವ ವಿಷವು ವ್ಯಕ್ತಿಯನ್ನು ಅನಾರೋಗ್ಯಕ್ಕೆ ತಳ್ಳುತ್ತವೆ.
ರೋಗಲಕ್ಷಣಗಳು ಅತಿಸಾರದಿಂದ ವಾಂತಿಯವರೆಗೆ ಇರಬಹುದು. ಸರಿಯಾದ ಚಿಕಿತ್ಸೆ ನೀಡಿದ ಕೆಲವೇ ದಿನಗಳಲ್ಲಿ ಅನಾರೋಗ್ಯವು ಸಾಮಾನ್ಯವಾಗಿ ಪರಿಹರಿಸಲ್ಪಡುತ್ತದೆ. ಆದುದರಿಂದ ಇದು ವಿಶೇಷವಾಗಿ ಮಾರಣಾಂತಿಕವಲ್ಲ. ಆದಾಗ್ಯೂ, ಈ ರೀತಿಯ ಆಹಾರ ವಿಷದಿಂದ ಬಳಲುತ್ತಿರುವಾಗ ಮಕ್ಕಳು ಮತ್ತು ಅನಾರೋಗ್ಯ ಪೀಡಿತರಿಗೆ ಗಂಭೀರ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ತೀವ್ರ ಪ್ರಕರಣಗಳಲ್ಲಿ, ಈ ಬ್ಯಾಕ್ಟೀರಿಯಾವು ಕರುಳಿನ ಸೋಂಕನ್ನು ಉಂಟುಮಾಡಬಹುದು. ಇದು ತೀವ್ರವಾದ ಪಿತ್ತಜನಕಾಂಗದ ವೈಫಲ್ಯ ಮತ್ತು ಸಾವಿಗೆ ಕಾರಣವಾಗುತ್ತದೆ.
ಫ್ರೈಡ್ ರೈಸ್ ಸಿಂಡ್ರೋಮ್ ತಡೆಯಲು ಏನು ಮಾಡಬಹುದು
ಬ್ಯಾಸಿಲಸ್ ಸೆರಿಯಸ್ ಕೆಲವೇ ಗಂಟೆಗಳಲ್ಲಿ ಬೆಳೆದು, ದ್ವಿಗುಣವಾಗಬಹುದಾಗಿದೆ. ಹೀಗಾಗಿ ಅಡುಗೆ ಮಾಡಿದ 2 ಗಂಟೆಯ ಒಳಗೆ ಅದನ್ನು ಫ್ರಿಜ್‌ನಲ್ಲಿ ಇರಿಸಬೇಕು ಎಂದು ಯುಎಸ್‌ಡಿಎ ಸಲಹೆ ನೀಡುತ್ತದೆ.
ಯಾವುದೇ ಆಹಾರ ಪದಾರ್ಥ ಸರಿಯಾಗಿಲ್ಲ ಎಂಬ ಅನುಮಾನ ಹುಟ್ಟಿದರೆ ಅದನ್ನು ತಿನ್ನಬಾರದು. ಬೇರೆಯವರು ಅದನ್ನು ತಿನ್ನದಂತೆ ತಡೆಯಬೇಕು.
ಫ್ರೈಡ್ ರೈಸ್ ಸಿಂಡ್ರೋಮ್‌ಗೆ ಚಿಕಿತ್ಸೆ ಏನು
ಆರೋಗ್ಯವಂತರಾಗಿದ್ದರೆ ಫ್ರೈಡ್ ರೈಸ್ ಸಿಂಡ್ರೋಮ್ ಉಂಟಾದರೆ, ಸರಿಯಾದ ಜಲಸಂಚಯನ ಅಂದರೆ ಸರಿಯಾಗಿ ನೀರು ಕುಡಿದು ಮತ್ತು ವಿಶ್ರಾಂತಿ ಪಡೆಯುವ ಮೂಲಕ ಕೆಲವೇ ದಿನಗಳಲ್ಲಿ ಮೊದಲಿನಂತಾಗಬಹುದು. ಆದಾಗ್ಯೂ, ತೀವ್ರತರವಾದ ಪ್ರಕರಣಗಳಲ್ಲಿ, ಜಲಸಂಚಯನವನ್ನು ಕಾಪಾಡಿಕೊಳ್ಳಲು ರೋಗಿಗಳಿಗೆ ಅಭಿದಮನಿ ದ್ರವಗಳು ಬೇಕಾಗಬಹುದು.
ಗಂಭೀರ ಕಾಯಿಲೆ ಹೊಂದಿದವರು, ಮಕ್ಕಳು ಅಥವಾ ರೋಗನಿರೋಧಕ ಶಕ್ತಿ ಹೊಂದಿರದ ಜನರು ಮಾತ್ರ ಗಂಭೀರ ವೈದ್ಯಕೀಯ ಸಮಸ್ಯೆಗಳನ್ನು ಎದುರಿಸುತ್ತಾರೆ.
ತಂಗಳು ಪಾಸ್ತವನ್ನು ಸೇವಿಸಿದ ನಂತರ ಮರಣಹೊಂದಿದ 20 ವರ್ಷದ ಯುವಕನಿಗೆ ಸಂಬಂಧಿಸಿ, 5 ದಿನಗಳ ದೀರ್ಘಾವಧಿಯು ಬ್ಯಾಕ್ಟೀರಿಯಾವು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲು ಅವಕಾಶ ಮಾಡಿಕೊಟ್ಟಿತು. ಅದುವೇ ದೊಡ್ಡಮಟ್ಟಿನ ಆಹಾರವಿಷವಾಗಿ ಬದಲಾಯಿತು ಎಂದು ಟುಡೇ ವರದಿ ವಿವರಿಸಿದೆ.