ಗಾಂಧಿ ಜಯಂತಿ 2024; ಜಗತ್ತಿನಲ್ಲಿ ಬದಲಾವಣೆ ಕಾಣಬಯಸುತ್ತೀರಾದರೆ ಮಹಾತ್ಮ ಗಾಂಧಿಯವರ ಈ 10 ನುಡಿಮುತ್ತುಗಳನ್ನೊಮ್ಮೆ ಗಮನಿಸಿ
Sep 27, 2024 12:41 PM IST
ಜಗತ್ತಿನಲ್ಲಿ ಬದಲಾವಣೆ ಕಾಣಬಯಸುತ್ತೀರಾದರೆ ಮಹಾತ್ಮ ಗಾಂಧಿಯವರ ನುಡಿಮುತ್ತು ಗಮನಿಸಿ. (ಸಾಂಕೇತಿಕ ಚಿತ್ರ)
ಜಗತ್ತಿನಲ್ಲಿ ಶಾಂತಿ, ಅಹಿಂಸೆ, ಸಹಾನುಭೂತಿಯ ಹೋರಾಟದ ವಿಚಾರ ಪ್ರಸ್ತಾಪವಾದಾಗ ನೆನಪಾಗುವುದೇ ರಾಷ್ಟ್ರ ಪಿತ, ಬಾಪು ಎಂದೇ ಜನಪ್ರಿಯರಾದ ಮಹಾತ್ಮ ಗಾಂಧಿ. ಈ ಸಲದ ಗಾಂಧಿ ಜಯಂತಿ ಸನಿಹದಲ್ಲಿದೆ. ಜಗತ್ತಿನಲ್ಲಿ ಬದಲಾವಣೆ ಕಾಣಬಯಸುತ್ತೀರಾದರೆ ಮಹಾತ್ಮ ಗಾಂಧಿಯವರ ಈ 10 ನುಡಿಮುತ್ತುಗಳ ಕಡೆಗೊಮ್ಮೆ ಗಮನಹರಿಸಿ.
ಶಾಂತಿ, ಅಹಿಂಸೆ, ಸಹಾನುಭೂತಿಯ ತತ್ತ್ವಗಳನ್ನು ಪ್ರತಿಪಾದಿಸುತ್ತ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಪುಣ್ಯ ಪುರುಷ ಮಹಾತ್ಮ ಗಾಂಧಿ ಅವರ 155ನೇ ಜಯಂತಿ ಸಮೀಪದಲ್ಲಿದೆ. ಭಾರತದಲ್ಲಿ ಈಗಾಗಲೇ ಗಾಂಧಿ ಜಯಂತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಶುರುವಾಗಿವೆ. ಜಾಗತಿಕ ಮಟ್ಟದಲ್ಲೂ ವಿವಿಧ ದೇಶಗಳಲ್ಲಿ ಕಾರ್ಯಕ್ರಮಗಳ ಆಯೋಜನೆಯಾಗಿದ್ದು, ಅವರ ತತ್ತ್ವಶಾಸ್ತ್ರ, ಜೀವನಾದರ್ಶನಗಳು ಜಗತ್ತಿನ ಮೇಲೆ ಪ್ರಭಾವ ಬೀರಿವೆ. ಪ್ರತಿ ವರ್ಷ ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿ ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿಯೂ ಆಚರಿಸಲಾಗುತ್ತಿದೆ. ಗಾಂಧಿ ಜಯಂತಿಯ ದಿನ ರಾಜ್ ಘಾಟ್‌ನಲ್ಲಿ ಅವರ ಸಮಾಧಿ ಸ್ಥಳದಲ್ಲಿ ಸರಣಿ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಪುಷ್ಪನಮನ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಶಿಕ್ಷಣ ಸಂಸ್ಥೆಗಳು ಗಾಂಧಿಯವರ ಜೀವನ ಮತ್ತು ಮೌಲ್ಯಗಳನ್ನು ಎತ್ತಿ ತೋರಿಸುವ ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತವೆ. ಸಮಕಾಲೀನ ಸಮಾಜದಲ್ಲಿ ಅವರ ಬೋಧನೆಗಳ ಪ್ರಸ್ತುತತೆಯ ಕುರಿತು ಚರ್ಚೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುತ್ತವೆ. ಇನ್ನು ಸ್ಥಳೀಯ ಮಟ್ಟದಲ್ಲಿ ಸಾಮುದಾಯಿಕ ಕಾರ್ಯಕ್ರಮಗಳನ್ನು ಅನೇಕ ಸಂಘ ಸಂಸ್ಥೆಗಳು ಆಯೋಜಿಸುತ್ತವೆ. ಸ್ವಚ್ಛತಾ ಅಭಿಯಾನ, ಜನಜಾಗೃತಿ ಅಭಿಯಾನಗಳು ನಡೆಯುತ್ತವೆ. ಅವರ ಘೋಷ ವಾಕ್ಯಗಳನ್ನು ಜಾಗೃತಿಗಾಗಿ ಬಳಸಲಾಗುತ್ತದೆ.
ಇನ್ನು ಅಂತಾರಾಷ್ಟ್ರೀಯ ಮಟ್ಟದ ಆಚರಣೆಗಳನ್ನು ಗಮನಿಸುವುದಾದರೆ, ಮಹಾತ್ಮ ಗಾಂಧಿ ಅವರ ಜೀವನಾದರ್ಶಗಳನ್ನು ಗೌರವಿಸುವುದಕ್ಕಾಗಿ, ಅಹಿಂಸೆಯ ಮಹತ್ವವನ್ನು ಸಾರುವುದಕ್ಕಾಗಿ ವಿಶ್ವ ಸಂಸ್ಥೆಯು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸುತ್ತದೆ. ಅಲ್ಲದೆ ಸಾಮಾಜಿಕ ನ್ಯಾಯ, ಬಿಕ್ಕಟ್ಟು ಪರಿಹಾರಕ್ಕೆ ಅಹಿಂಸಾ ಮಾರ್ಗ ಅನುಸರಿಸುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ.
ಮಹಾತ್ಮ ಗಾಂಧಿಯವರ ಪ್ರೇರಣಾದಾಯಿ 10 ನುಡಿಮುತ್ತುಗಳು
1) ಜಗತ್ತು ಬದಲಾಗಬೇಕು ಎಂದು ಹೇಳುವವರು, ಮೊದಲು ತಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು.
2) ನೀವು ಏನು ಯೋಚಿಸುತ್ತೀರಿ, ನೀವು ಏನು ಹೇಳುತ್ತೀರಿ ಮತ್ತು ನೀವು ಏನು ಮಾಡುತ್ತೀರಿ ಎಂಬುದರ ನಡುವೆ ಸಾಮರಸ್ಯ ಇದ್ದರೆ ಅದುವೇ ಸಂತೋಷ.
3) ಬಲವು ದೈಹಿಕ ಸಾಮರ್ಥ್ಯದಿಂದ ಬರುವುದಲ್ಲ. ಅದು ಅದಮ್ಯ ಸಂಕಲ್ಪದಿಂದ ಬರುವಂಥದ್ದು
4) ಕಣ್ಣಿಗೆ ಒಂದು ಕಣ್ಣು ಎನ್ನುತ್ತ ಹೊರಟರೆ ಅದು ಇಡೀ ಜಗತ್ತನ್ನು ಕುರುಡಾಗಿಸುತ್ತದೆ.
5) ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಸಾಕಷ್ಟನ್ನು ಭೂಮಿಯು ಒದಗಿಸುತ್ತದೆ. ಆದರೆ, ಅದು ಪ್ರತಿಯೊಬ್ಬ ಮನುಷ್ಯನ ದುರಾಸೆಯನ್ನು ಪೂರೈಸುವುದಿಲ್ಲ
6) ಸೌಮ್ಯವಾದ ರೀತಿಯಲ್ಲಿ, ನೀವು ಜಗತ್ತನ್ನು ಅಲ್ಲಾಡಿಸಬಹುದು
7) ಮನುಷ್ಯ ಆತನ ಆಲೋಚನೆಗಳದ್ದೇ ಪ್ರತಿರೂಪ. ಆತ ಏನನ್ನು ಆಲೋಚಿಸುವನೋ ಅದೇ ಆಗುತ್ತಾನೆ.
8) ಜಗತ್ತಿನಲ್ಲಿ ನೀವು ಕಾಣಬಯಸುವ ಬದಲಾವಣೆ ನೀವೇ ಆಗಿರಬೇಕು
9) ದುರ್ಬಲರು ಎಂದಿಗೂ ಕ್ಷಮಿಸಲಾರರು. ಕ್ಷಮೆಯು ಬಲಶಾಲಿಗಳ ಲಕ್ಷಣ
10) ಒಂದು ರಾಷ್ಟ್ರದ ಹಿರಿಮೆ ಮತ್ತು ಅದರ ನೈತಿಕ ಪ್ರಗತಿಯನ್ನು ಅದರ ಪ್ರಾಣಿಗಳನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ನೋಡಿ ನಿರ್ಣಯಿಸಬಹುದು
ಮಹಾತ್ಮ ಗಾಂಧಿ ಯಾರು?
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ ಮಹಾತ್ಮ ಗಾಂಧಿ ಅವರ ಪೂರ್ಣ ಹೆಸರು ಮೋಹನ್ ದಾಸ್ ಕರಮಚಂದ್ ಗಾಂಧಿ. ಅವರು 1869ರ ಅಕ್ಟೋಬರ್ 2ರಂದು ಕರಮ ಚಂದ್ ಗಾಂಧಿ ಮತ್ತು ಪುತಲೀ ಬಾಯಿ ಅವರ ಪುತ್ರನಾಗಿ ಜನಿಸಿದರು. ಶಿಕ್ಷಣದ ಬಳಿಕ ವಕೀಲಿಕೆ ಆರಂಭಿಸಿದ ಅವರು ವಸಾಹತುಶಾಹಿ ವಿರೋಧಿಯಾಗಿ ಹೋರಾಟ ನಡೆಸಿದರು. ರಾಷ್ಟ್ರೀಯ ವಾದಿಯಾಗಿ, ರಾಜಕೀಯ ನೀತಿ ಶಾಸ್ತ್ರಜ್ಞನಾಗಿ, ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿ ಮುನ್ನಡೆಸುವಲ್ಲಿ ಅಹಿಂಸಾ ಹೋರಾಟವನ್ನು ಬಳಸಿದರು. ಪ್ರಪಂಚದಾದ್ಯಂತ ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಚಳುವಳಿಗಳಿಗೆ ಪ್ರೇರಣೆಯಾದರು. 1914 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಅವರಿಗೆ ಮೊದಲ ಬಾರಿಗೆ ಅನ್ವಯಿಸಲಾದ ಮಹಾತ್ಮ ಬಿರುದು ಇಂದಿಗೂ ಚಾಲ್ತಿಯಲ್ಲಿದೆ. ಅವರು 1948ರ ಜನವರಿ 30 ರಂದು ನಾಥುರಾಮ್ ಗೋಡ್ಸೆ ಗುಂಡೇಟಿಗೆ ಬಲಿಯಾಗಿ ನಿಧನರಾದರು.