logo
ಕನ್ನಡ ಸುದ್ದಿ  /  ಜೀವನಶೈಲಿ  /  Natural Air Purifier: ಮನೆಯ ವಾತಾವರಣ ಪರಿಶುದ್ಧಗೊಳಿಸುವ ಒಳಾಂಗಣ ಗಿಡಗಳಿವು, ಈ ಸಸ್ಯಗಳು ಮನೆಯಲ್ಲಿದ್ರೆ ಯಾವ ಏರ್‌ ಪ್ಯೂರಿಫೈರ್‌ ಬೇಡ ನೋಡಿ

Natural Air Purifier: ಮನೆಯ ವಾತಾವರಣ ಪರಿಶುದ್ಧಗೊಳಿಸುವ ಒಳಾಂಗಣ ಗಿಡಗಳಿವು, ಈ ಸಸ್ಯಗಳು ಮನೆಯಲ್ಲಿದ್ರೆ ಯಾವ ಏರ್‌ ಪ್ಯೂರಿಫೈರ್‌ ಬೇಡ ನೋಡಿ

Reshma HT Kannada

Nov 21, 2024 02:41 PM IST

google News

ಮನೆಯೊಳಗಿನ ವಾತಾವರಣ ಶುದ್ಧವಾಗಿಸುವ ಒಳಾಂಗಣ ಸಸ್ಯಗಳು

    • ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವುದು ಹಲವರಿಗೆ ಉಸಿರಾಟದ ಸಮಸ್ಯೆಯನ್ನು ತಂದೊಡ್ಡಿದೆ. ಭಾರತದ ಪ್ರಮುಖ ನಗರಗಳಲ್ಲಿ ವಾತಾವರಣ ಕಲುಷಿತವಾಗಿರುವುದರಿಂದ ಈ ಸಂದರ್ಭದಲ್ಲಿ ಮನೆಯೊಳಗಿನ ಪರಿಸರವನ್ನು ಮಾಲಿನ್ಯಮುಕ್ತವಾಗಿ ಇರಿಸಿಕೊಳ್ಳುವುದು ಅವಶ್ಯವಾಗಿದೆ. ಇದಕ್ಕೆ ಮನೆಗೆ ಏರ್ ಪ್ಯೂರಿಫೈರ್‌ ತರಬೇಕು ಅಂತೇನಿಲ್ಲ, ಈ ಗಿಡಗಳನ್ನ ಬೆಳೆಸಿದರೆ ಸಾಕು. 
ಮನೆಯೊಳಗಿನ ವಾತಾವರಣ ಶುದ್ಧವಾಗಿಸುವ ಒಳಾಂಗಣ ಸಸ್ಯಗಳು
ಮನೆಯೊಳಗಿನ ವಾತಾವರಣ ಶುದ್ಧವಾಗಿಸುವ ಒಳಾಂಗಣ ಸಸ್ಯಗಳು

ಅತಿಯಾದ ಕೈಗಾರಿಕೆ, ಹೆಚ್ಚುತ್ತಿರುವ ವಾಹನಗಳ ಓಡಾಟ, ರಾಸಾಯನಿಕಗಳ ಬಳಕೆ ಹೀಗೆ ಹಲವು ಕಾರಣಗಳಿಂದ ವಾತಾವರಣ ಕಲುಷಿತವಾಗಿರುವುದು ಸುಳ್ಳಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ಅತಿಯಾಗಿ ಕುಸಿದಿದ್ದು, ಶುದ್ಧ ಗಾಳಿ ಉಸಿರಾಡಲು ಕಷ್ಟವಾಗಿದೆ. ಸಾಮಾನ್ಯವಾಗಿ ಪ್ರಮುಖ ನಗರಗಳಲ್ಲಿ ಇಂಥದ್ದೇ ಪರಿಸ್ಥಿತಿ ಇದೆ.

ಮನೆಯ ಹೊರಗೆ ಮಾತ್ರವಲ್ಲ ಒಳಗಿನ ವಾತಾವರಣ ಕೂಡ ಕಲುಷಿತವಾಗಿದೆ. ಇಂತಹ ಸಮಯದಲ್ಲಿ ಹೊರಗಿನ ವಾತಾವರಣ ಸಾಧ್ಯವಾಗಿಲ್ಲ ಎಂದರೆ ಕನಿಷ್ಠ ಪಕ್ಷ ಮನೆಯ ಒಳಗಿನ ವಾತಾವರಣವನ್ನಾದರೂ ಶುದ್ಧವಾಗಿ ಇಟ್ಟುಕೊಂಡು, ಶುದ್ಧ ಗಾಳಿ ಉಸಿರಾಡೋಣ ಎಂದು ಹಲವರು ಅಂದುಕೊಳ್ಳುತ್ತಾರೆ. ಮನೆಯೊಳಗಿನ ವಾತಾವರಣವನ್ನ ಶುದ್ಧವಾಗಿ ಇರಿಸಿಕೊಳ್ಳುವ ಸಲುವಾಗಿ ಹಲವರು ಏರ್‌ ಪ್ಯೂರಿಫೈರ್‌ ಬಳಕೆ ಮಾಡುತ್ತಾರೆ. ಆದರೆ ಇದರ ದರ, ನಿರ್ವಹಣೆ ವೆಚ್ಚ ಎಲ್ಲವೂ ಕೊಂಚ ದುಬಾರಿಯಾಗಿರುವ ಕಾರಣ ಎಲ್ಲವೂ ಏರ್‌ ಪ್ಯೂರಿಫೈರ್‌ ತರಲು ಸಾಧ್ಯವಿಲ್ಲ. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಸುವ ಕೆಲವು ಗಿಡಗಳಿವೆ. ಈ ಒಳಾಂಗಣ ಸಸ್ಯಗಳು ಮನೆಯ ಅಂದ ಹೆಚ್ಚಿಸುವ ಜೊತೆಗೆ ಪರಿಸರವನ್ನೂ ಶುದ್ಧ ಮಾಡುತ್ತವೆ. ಅಂತಹ ಕೆಲವು ಗಿಡಗಳ ಬಗ್ಗೆ ನಾವಿಲ್ಲಿ ತಿಳಿಸುತ್ತೇವೆ.

ಅಲೊವೇರಾ

ಲೋಳೆಸರ ಎಂದೂ ಕರೆಯುವ ಈ ಗಿಡವನ್ನು ಬೆಡ್‌ರೂಮ್‌ನಿಂದ ಆಫೀಸ್‌ವರೆಗೆ ಎಲ್ಲಿ ಬೇಕಾದರೂ ಇರಿಸಬಹುದು. ಇದು ಫಾರ್ಮಾಲ್ಡಿಹೈಡ್, ಕ್ಸೈಲೀನ್ ಮತ್ತು ಟೊಲ್ಯೂನ್‌ನಂತಹ ವಾಯುಮಾಲಿನ್ಯದ ಅಂಶಗಳನ್ನು ಹೀರಿಕೊಳ್ಳುತ್ತದೆ. ಇದರಿಂದ ತ್ವಚೆಯ ಅಂದವನ್ನೂ ಹೆಚ್ಚಿಸಿಕೊಳ್ಳಬಹುದು.

ಸ್ಪೈಡರ್ ಪ್ಲಾಂಟ್‌

ಬೇಡರ ಬಲೆಯಂತೆ ಎಲೆಗಳನ್ನು ಹರಡಿಕೊಂಡಿರುವ ಸ್ಪೈಡರ್ ಪ್ಲಾಂಟ್ ಅಶುದ್ಧ ವಾತಾವರಣವನ್ನು ಶುದ್ಧಗೊಳಿಸಲು ಹೇಳಿ ಮಾಡಿಸಿದ ಗಿಡ. ಇದು ಮನೆಯೊಳಗಿನ ವಾತಾವರಣವನ್ನು ಶುದ್ಧವಾಗಿರಿಸಲು ಸಹಾಯ ಮಾಡುತ್ತದೆ. ಟೊಲ್ಯೂನ್, ಕಾರ್ಬನ್ ಮಾನಾಕ್ಸೈಡ್, ಕ್ಸೈಲೀನ್ ಮತ್ತು ಫಾರ್ಮಾಲ್ಡಿಹೈಡ್‌ನಂತಹ ಹಾನಿಕಾರಕ ರಾಸಾಯನಿಕ ಅಂಶಗಳನ್ನು ಇದು ತೆಗೆದುಹಾಕುತ್ತದೆ.

ಪೀಸ್ ಲಿಲ್ಲಿ

ಸಾಮಾನ್ಯವಾಗಿ ಕಚೇರಿಗಳಲ್ಲಿ ಸ್ಟಾರ್ ಹೋಟೆಲ್‌ಗಳಲ್ಲಿ ಈ ಗಿಡವನ್ನು ಬೆಳೆಸಿರುತ್ತಾರೆ. ಪಾಟ್‌ನಲ್ಲಿ ಬೆಳೆಯಬಹುದಾದ ಈ ಗಿಡ ನೈಸರ್ಗಿಕವಾಗಿ ವಾತಾವರಣವನ್ನು ಶುದ್ಧವಾಗಿರಿಸುತ್ತದೆ. ಇದು ಮನೆ ಅಥವಾ ಕೋಣೆಯ ವಾತಾವರಣದಲ್ಲಿರುವ ಅಶುದ್ಧ ಗಾಳಿಯನ್ನು ಶುದ್ಧವಾಗಿಸುತ್ತದೆ.

ಇಂಗ್ಲಿಷ್ ಐವಿ

ಇದೊಂದು ಬಳ್ಳಿ ರೂಪದ ಗಿಡ. ಇದನ್ನು ಸುಲಭವಾಗಿ ಕಿಟಕಿಗಳಿಗೆ ಹಬ್ಬಿಸಿ ಬಿಡಬಹುದು. ಇದರಿಂದ ಮನೆಯ ಅಂದ ಹೆಚ್ಚುವುದು ಮಾತ್ರವಲ್ಲ ವಾತಾವರಣವು ಶುದ್ಧವಾಗಿರುತ್ತದೆ. ಈ ಗಿಡವು ಉರಿಯೂತದ, ಆಂಟಿಆರ್ಥ್ರಿಟಿಕ್, ಆಂಟಿವೈರಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ.

ಸ್ನೇಕ್ ಪ್ಲಾಂಟ್

ಸ್ನೇಕ್ ಪ್ಲಾಂಟ್ ಅನ್ನು ಕೂಡ ಸುಲಭವಾಗಿ ಕುಂಡದಲ್ಲಿ ಬೆಳೆಯಬಹುದು. ಇದು ವಾತಾವರಣದಲ್ಲಿರುವ ಕಲ್ಮಶವನ್ನು ತೆಗೆದುಹಾಕುತ್ತದೆ, ಇದನ್ನು ನೆಡುವುದರಿಂದ ಹಾವುಗಳ ಹತ್ತಿರ ಸುಳಿಯುವುದಿಲ್ಲ ಎಂದು ಹೇಳಲಾಗುತ್ತದೆ.

ಬೋಸ್ಟನ್ ಜರಿಗಿಡ

ಜರಿಗಿಡಗಳನ್ನು ಕುಬ್ಜ ಸಸ್ಯಗಳು ಎಂದು ಕರೆಯುತ್ತಾರೆ. ಇದು ಒಳಾಂಗಣದಲ್ಲಿ ಇರಿಸಲು ಹೇಳಿ ಮಾಡಿಸಿದಂತದ್ದು. ಇದನ್ನು ಅಲಂಕಾರಕ್ಕೆ ಮಾತ್ರವಲ್ಲ. ಹಾನಿಕಾರಕ ಜೀವಾಣುಗಳಿಂದ ಮನೆಯ ವಾತಾವರಣನ್ನು ರಕ್ಷಿಸುತ್ತದೆ. ತೇವಾಂಶವನ್ನು ಸುಧಾರಿಸುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ