logo
ಕನ್ನಡ ಸುದ್ದಿ  /  ಜೀವನಶೈಲಿ  /  ಅತಿಯಾದ ಚಳಿಯು ಹೈ ಬಿಪಿ ಸಮಸ್ಯೆ ಇರುವವರಲ್ಲಿ ಬ್ರೈನ್‌ ಹೆಮರೇಜ್‌, ಪಾರ್ಶ್ವವಾಯು ಹೆಚ್ಚಲು ಕಾರಣವಾಗುತ್ತಿದೆ; ಇರಲಿ ಎಚ್ಚರ

ಅತಿಯಾದ ಚಳಿಯು ಹೈ ಬಿಪಿ ಸಮಸ್ಯೆ ಇರುವವರಲ್ಲಿ ಬ್ರೈನ್‌ ಹೆಮರೇಜ್‌, ಪಾರ್ಶ್ವವಾಯು ಹೆಚ್ಚಲು ಕಾರಣವಾಗುತ್ತಿದೆ; ಇರಲಿ ಎಚ್ಚರ

Reshma HT Kannada

Dec 24, 2023 10:14 AM IST

google News

ಸಾಂಕೇತಿಕ ಚಿತ್ರ

    • ಚಳಿಗಾಲ ಪ್ರಾರಂಭವಾದಂತೆ ಒಂದಿಲ್ಲೊಂದು ಸಮಸ್ಯೆಗಳು ಉಂಟಾಗುವುದು ಸಹಜ. ಶೀತ ವಾತಾವರಣವು ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಲ್ಲಿ ಹೆಚ್ಚು ಸಮಸ್ಯೆ ಎದುರಾಗುವಂತೆ ಮಾಡುತ್ತದೆ. ತಾಪಾಮಾನ ಕಡಿಮೆಯಾಗುವ ಕಾರಣ ಬ್ರೈನ್‌ ಸ್ಟ್ರೋಕ್‌ ಹಾಗೂ ಹೆಮರೇಜ್‌ ಅಪಾಯ ಹೆಚ್ಚಬಹುದು ಎನ್ನುತ್ತಾರೆ ತಜ್ಞರು.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಚಳಿಗಾಲ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದಿದೆ. ಕಳೆದೊಂದು ವಾರದಿಂದ ಚಳಿ ಜೋರಾಗಿದೆ. ಶೀತ ವಾತಾವರಣ ಹೆಚ್ಚಿದಂತೆ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತವೆ. ಈ ನಡುವೆ ವೈದ್ಯರು ಅಧಿಕ ರಕ್ತದೊತ್ತಡ ಅಥವಾ ಹೈ ಬಿಪಿ ಇರುವವರಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ವಾತಾವರಣದಲ್ಲಿ ಥಂಡಿ ಹೆಚ್ಚಾದಂತೆ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಲ್ಲಿ ಪಾರ್ಶ್ವವಾಯು ಹಾಗೂ ಬ್ರೈನ್‌ ಹೆಮರೇಜ್‌ ಅಪಾಯ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ದೆಹಲಿ, ಬೆಂಗಳೂರು ಸೇರಿದಂತೆ ಪ್ರಮುಖ ನಗರದಲ್ಲಿ ತಾಪಮಾನ ಇಳಿಕೆಯಾಗುತ್ತಿದೆ. ಇದು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇತ್ತೀಚಿನ ಅಧ್ಯಯನವು ಶೀತ ವಾತಾವರಣ ಹಾಗೂ ಮೆದುಳಿನ ರಕ್ತಸ್ರಾವದ ಅಪಾಯದ ನಡುವಿನ ಸಂಬಂಧದ ಮೇಲೆ ಬೆಳಕು ಚೆಲ್ಲಿದೆ.

ʼಸೈನ್ಸ್‌ ಡೈರೆಕ್ಟ್‌ ಅಮೆರಿಕನ್‌ ಹಾರ್ಟ್‌ ಅಸೋಸಿಯೇಷನ್‌ ಜರ್ನಲ್‌ ಮತ್ತು ಪಬ್‌ಮೆಡ್‌ ಸೇರಿದಂತೆ ಕೆಲವು ಪ್ರಮುಖ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನಗಳ ಸರಣಿಯು ಈ ಆಘಾತಕಾರಿ ಅಂಶದ ಬಗ್ಗೆ ಪ್ರಕಟಿಸಿದೆ. ಶೀತ ವಾತಾವರಣವು ಮೆದುಳಿನ ರಕ್ತಸ್ರಾವವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇದು ಬಿಪಿ ಹಾಗೂ ಹೈ ಬಿಪಿಯಿಂದ ಬಳಲುತ್ತಿರುವವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆʼ ಎಂದು ದೆಹಲಿಯ ಮ್ಯಾಕ್ಸ್‌ ಆಸ್ಪತ್ರೆ ಹಿರಿಯ ವೈದ್ಯ ಡಾ. ಮನೀಶ್‌ ವೈಶ್‌ ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳುತ್ತಾರೆ.

ʼಹಿಮಪಾತಕ್ಕಿಂತ ಶೀತ ವಾತಾವರಣವು ಡೇಂಜರಸ್‌, ಹೆಮರಾಜಿಕ್‌ ಸ್ಟ್ರೋಕ್‌ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಬಹಿರಂಗ ಪಡಿಸಿದ್ದಾರೆ.

ʼಭಾರತದಲ್ಲಿ ಚಳಿಯ ಪ್ರಮಾಣ ಹೆಚ್ಚುತ್ತಿರುವುದರಿಂದ ಬಿಪಿ ಸಮಸ್ಯೆ ಹೊಂದಿರುವ ರೋಗಿಗಳು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕುʼ ಎಂದು ತಜ್ಞರು ಸಲಹೆ ನೀಡುತ್ತಾರೆ.

ʼಸಾಮಾನ್ಯ ವ್ಯಕ್ತಿಗಳು ಅಂದರೆ ಬಿಪಿ ಸಮಸ್ಯೆ ಇಲ್ಲದವರು ಕೂಡ ಶೀತ ವಾತಾವರಣದಲ್ಲಿ ಅಧಿಕ ರಕ್ತದೊತ್ತಡದ ಅಪಾಯವನ್ನು ಎದುರಿಸಬಹುದು. ಇದು ಸೆರೆಬ್ರಲ್‌ ಹೆಮರೇಜ್‌ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಆ ಕಾರಣಕ್ಕೆ ಪ್ರತಿಯೊಬ್ಬರೂ ಚಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಲು ಸೂಕ್ತ ಮಾರ್ಗ ಅನುಸರಿಸುವುದು ಅವಶ್ಯʼ ಎನ್ನುತ್ತಾರೆ ನವದೆಹಲಿಯ ಸುಶ್ರುತ್ ಬ್ರೈನ್ ಮತ್ತು ಸ್ಪೈನ್‌ನ ಹಿರಿಯ ವೈದ್ಯ ಡಾ. ಯಶ್ಪಾಲ್‌ ಸಿಂಗ್‌ ಬುಂದೇಲಾ ಐಎಎನ್‌ಎಸ್‌ಗೆ ಹೇಳಿದ್ದಾಗಿ ಇಂಡಿಯಾ.ಕಾಮ್‌ ತಿಳಿಸಿದೆ.

ರಕ್ತದೊತ್ತಡದ ಮಟ್ಟವನ್ನು ನಿರ್ವಹಿಸುವುದು ಮತ್ತು ತೀವ್ರವಾದ ಹಿಮ ವಾತಾವರಣದಿಂದ ರಕ್ಷಿಸಿಕೊಳ್ಳಲು ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸೇರಿದಂತೆ ಕೆಲವು ಸುರಕ್ಷತಾ ಕ್ರಮಗಳ ಮೂಲಕ ಬ್ರೈನ್‌ ಹೆಮರೇಜ್‌ಗೆ ಸಂಬಂಧಿಸಿದ ಸಂಭಾವ್ಯ ಅಪಾಯವನ್ನು ಕಡಿಮೆ ಮಾಡಲು ಸಾಧ್ಯ ಎನ್ನುತ್ತಾರೆ ತಜ್ಞರು.

ʼಚಳಿಗಾಲ ಆರಂಭವಾದ ಕೂಡಲೇ ಅಧಿಕ ರಕ್ತದೊತ್ತಡ ಹಾಗೂ ಹೃದಯರಕ್ತನಾಳದ ಸಮಸ್ಯೆಗಳನ್ನು ಹೊಂದಿರುವವರು ನಿಯಮಿತ ಆರೋಗ್ಯ ತಪಾಸಣೆ, ಸೂಕ್ತವಾದ ರಕ್ತದೊತ್ತಡದ ಮಟ್ಟವನ್ನು ಕಾಪಾಡಿಕೊಳ್ಳುವುದು, ತಂಪಾದ ವಾತಾವರಣಕ್ಕೆ ದೇಹವನ್ನು ತೆರೆದುಕೊಳ್ಳುವಾಗ ಸಾಕಷ್ಟು ಬೆಚ್ಚಗಿರುವುದು ಸೇರಿದಂತೆ ಕೆಲವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆʼ ಎಂದು ಡಾ. ಬುಂಡೆಲಾ ಹೇಳುತ್ತಾರೆ.

ಯಾರಾದರೂ ಬ್ರೈನ್‌ ಹೆಮರೇಜ್‌ಗೆ ತುತ್ತಾದರೆ ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಮುಖ್ಯವಾಗುತ್ತದೆ.

ಬ್ರೈನ್‌ ಹೆಮರೇಜ್‌ ಸಾಮಾನ್ಯ ಲಕ್ಷಣಗಳು

ಮೆದುಳಿನ ರಕ್ತಸ್ರಾವ ಅಥವಾ ಬ್ರೈನ್‌ ಹೆಮರೇಜ್‌ ಕಾಣಿಸಿಕೊಂಡರೆ ಹಠಾತ್‌ ಅತಿಯಾದ ತಲೆನೋವು, ದೇಹದ ಒಂದು ಭಾಗದಲ್ಲಿ ನಿಶಕ್ತಿ ಅಥವಾ ಮರಗಟ್ಟುವುದು, ಮಾತಾನಾಡಲು ಹಾಗೂ ಅರ್ಥಮಾಡಿಕೊಳ್ಳಲು ತೊಂದರೆ ಉಂಟಾಗುವುದು, ದೃಷ್ಟಿ ಮಂದವಾಗುವುದು, ತಲೆಸುತ್ತು ವಾಕರಿಕೆ, ವಾಂತಿ ಇಂತಹ ಲಕ್ಷಣಗಳು ಕಾಣಿಸಬಹುದು. ಕೆಲವೊಮ್ಮೆ ಪ್ರಜ್ಞೆ ಕಳೆದುಕೊಳ್ಳುವುದು ಅಥವಾ ಮಾನಸಿಕ ಸ್ಥಿತಿ ಬದಲಾವಣೆ ಕೂಡ ಉಂಟಾಗಬಹುದು.

ʼಮೆದುಳಿನ ರಕ್ತಸ್ರಾವವನ್ನು ನಿರ್ವಹಿಸುವಲ್ಲಿ ಸಮಯವು ಅತ್ಯಂತ ಮುಖ್ಯವಾಗಿದೆ. ತಕ್ಷಣಕ್ಕೆ ಆಸ್ಪತ್ರೆಗೆ ಕರೆದ್ಯೊಯ್ದು ತುರ್ತು ಚಿಕಿತ್ಸೆ ಕೊಡಿಸಬೇಕು. ಪ್ರಮುಖ ಸಂಕೇತಗಳನ್ನು ಸ್ಥಿರವಾಗಿಸುವುದು, ಆಕ್ಸಿಜನ್ ಪ್ರಮಾಣವನ್ನು ಖಾತ್ರಿ ಪಡಿಸಿಕೊಳ್ಳುವುದು, ರಕ್ತದೊತ್ತಡವನ್ನು ನಿಯಂತ್ರಿಸುವುದು ಮುಖ್ಯವಾಗುತ್ತದೆʼ ಎನ್ನುತ್ತಾರೆ ತಜ್ಞರು.

ಚಳಿಗಾಲದಲ್ಲಿ ಮೆದುಳಿನ ರಕ್ತಸ್ರಾವ ಹಾಗೂ ಪಾರ್ಶ್ವವಾಯು ಮಾತ್ರವಲ್ಲ, ಹೃದಯಾಘಾತದ ಅಪಾಯವೂ ಹೆಚ್ಚು. ಹಾಗಾಗಿ ಸಾಕಷ್ಟು ಎಚ್ಚರ ವಹಿಸುವುದು ಮುಖ್ಯವಾಗುತ್ತದೆ. ನೀವು ಈಗಾಗಲೇ ಬಿಪಿ, ಮಧುಮೇಹದಂತಹ ಸಮಸ್ಯೆ ಎದುರಿಸುತ್ತಿದ್ದರೆ ಇನ್ನಷ್ಟು ಗಮನ ನೀಡಬೇಕಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ