ನಿಮ್ಮ ಬ್ಲಡ್ ಗ್ರೂಪ್‌ಗೆ ಹೊಂದುವ ಫುಡ್ ತಗೊಳ್ಳಿ; ಹೀಗಂತ ಯಾರಾದ್ರೂ ಹೇಳಿದ್ರಾ?, ಏನಿದು ಬ್ಲಡ್ ಗ್ರೂಪ್ ಫುಡ್ ಅಂತ ತಿಳಿಯೋಣ
Sep 29, 2024 04:31 PM IST
ಬ್ಲಡ್ ಗ್ರೂಪ್ ಫುಡ್ (ಸಾಂಕೇತಿಕ ಚಿತ್ರ)
ಆಹಾರಕ್ಕೂ ಆರೋಗ್ಯಕ್ಕೂ ಹತ್ತಿರದ ಸಂಬಂಧ. ಆಹಾರದಲ್ಲಿ ಸ್ವಲ್ಪ ಏರುಪೇರಾದರೂ ಆರೋಗ್ಯ ಕೆಡೋದು ಖಚಿತ. ಹೀಗಿರುವಾಗ, “ನಿಮ್ಮ ಬ್ಲಡ್ ಗ್ರೂಪ್‌ಗೆ ಹೊಂದುವ ಫುಡ್ ತಗೊಳ್ಳಿ”- ಹೀಗಂತ ಯಾರಾದ್ರೂ ಹೇಳಿದ್ರಾ?. ಸದ್ಯ ಇದು ಚರ್ಚೆಯಲ್ಲಿರುವ ಕಾರಣ ಏನಿದು ಬ್ಲಡ್ ಗ್ರೂಪ್ ಫುಡ್ ಅಂತ ತಿಳಿದುಕೊಂಡಿರುವುದು ಅಗತ್ಯ.
ನಮ್ಮ ನಿಮ್ಮ ಬದುಕಿನಲ್ಲಿ ಆಹಾರ ಮತ್ತು ಆರೋಗ್ಯ ಇವೆರಡಕ್ಕೂ ಬಹಳ ಮಹತ್ವ. ದಶಕಗಳ ಹಿಂದೆ ಬಳಕೆಯಲ್ಲಿದ್ದ ಆಹಾರ ಹೊಸ ತಲೆಮಾರಿಗೆ ಗೊತ್ತಿಲ್ಲ. ಹೊಸ ತಲೆಮಾರಿನ ಫ್ಯೂಷನ್ ಫುಡ್‌ಗಳು ಹಳೆ ತಲೆಮಾರಿನವರಿಗೆ ಹಿಡಿಸಲ್ಲ. ಇರಲಿ ಅದರು ಬೇರೆಯೇ ವಿಚಾರ. ಇತ್ತೀಚೆಗೆ ಆಹಾರಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳೇ ಹೆಚ್ಚು. ಇದನ್ನು ಅನೇಕ ಸಂಶೋಧನೆ, ಅಧ್ಯಯನಗಳು ಖಚಿತಪಡಿಸಿವೆ ಕೂಡ. ಇನ್ನು ಆರೋಗ್ಯ ಕಾಪಾಡುವ ಸಲುವಾಗಿ ಆಹಾರ ಸೇವನೆಗೆ ಪ್ಲಾನ್ ಕೂಡ ಮಾಡಲಾಗುತ್ತಿದೆ. ಇದಕ್ಕೆ ಡಯೆಟ್ ಪ್ಲಾನಿಂಗ್ ಎಂದು ಹೆಸರು. ಆರೋಗ್ಯ ಸಮಸ್ಯೆ ಕಡಿಮೆ ಮಾಡುವುದಕ್ಕೆ ಈಚೆಗೆ ಗಮನಸೆಳೆಯುತ್ತಿರುವ ಹೊಸ ಡಯೆಟ್ - “ಬ್ಲಡ್ ಟೈಪ್ ಫುಡ್”. ಇದನ್ನೇ “ಬ್ಲಡ್ ಟೈಪ್ ಡಯೆಟ್” ಎಂದೂ ಹೇಳುತ್ತಾರೆ. ಹೀಗಾಗಿ, ನಿಮ್ಮ ಬ್ಲಡ್ ಗ್ರೂಪ್‌ಗೆ ಹೊಂದುವ ಫುಡ್ ತಗೊಳ್ಳಿ ಎಂದು ಕೆಲವರು ಹೇಳುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆದಿದೆ. ಇದರ ಪ್ರಕಾರ, ನಿಮ್ಮ ಬ್ಲಡ್ ಗ್ರೂಪ್‌ಗೆ ಅನುಗುಣವಾಗಿ ಆಹಾರ ಸೇವಿಸಿದರೆ ಆರೋಗ್ಯವಾಗಿರಬಹುದು ಎಂಬು ಭರವಸೆ. ಆದರೆ ಈ ಪರಿಕಲ್ಪನೆ ಸ್ವಲ್ಪ ವಿವಾದಾತ್ಮಕ ಎಂಬ ಮಾತಿದೆ. ಸರಿಯಾದ ವೈಜ್ಞಾನಿಕ ತಳಹದಿ ಇಲ್ಲ ಎಂಬ ಮಾತೂ ಇದೆ. ಮಾಹಿತಿಗಾಗಿ ಮಾತ್ರವೇ ಈ ವಿಚಾರವನ್ನು ಇಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.
ರಕ್ತದ ಮಾದರಿ ಮತ್ತು ಬ್ಲಡ್ ಟೈಪ್ ಡಯೆಟ್
ರಕ್ತದ ಮಾದರಿ ವಿಚಾರಕ್ಕೆ ಬಂದರೆ ಮನುಷ್ಯರಲ್ಲಿ ಪ್ರಮುಖವಾಗಿ ನಾಲ್ಕು ರಕ್ತದ ಮಾದರಿಗಳು- ಎ, ಬಿ, ಎಬಿ ಮತ್ತುಒ. ಪ್ರತಿಯೊಂದು ರಕ್ತದ ಮಾದರಿಯು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಪೂರ್ವಜರ ಆಹಾರದ ಆಧಾರದ ಮೇಲೆ ವಿಕಸನಗೊಂಡಿದೆ ಎಂದು ಭಾವಿಸಲಾಗಿದೆ. ಉದಾಹರಣೆಗೆ, ಟೈಪ್ O, ಹಳೆಯ ರಕ್ತದ ಮಾದರಿ. ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಆಹಾರದೊಂದಿಗೆ ಬೆಸೆದುಕೊಂಡಿದೆ. ಮತ್ತೊಂದೆಡೆ, ಟೈಪ್ ಎ ಹೆಚ್ಚು ಧಾನ್ಯಗಳು ಮತ್ತು ತರಕಾರಿಗಳೊಂದಿಗೆ ಅನುಕೂಲಕರವಾಗಿದೆ ಎಂದು ನಂಬಲಾಗಿದೆ.
ಇನ್ನು ಬ್ಲಡ್ ಟೈಪ್ ಡಯೆಟ್ ವಿಚಾರಕ್ಕೆ ಬಂದರೆ, ಇದು ಡಾ. ಪೀಟರ್ ಡಿ'ಅಡಾಮೊ ಅವರು ಪ್ರತಿಪಾದಿಸುತ್ತಿರುವ ಆಹಾರ ಕ್ರಮ. ಇದನ್ನು ಅವರು ತಮ್ಮ ಪುಸ್ತಕ "ಈಟ್ ರೈಟ್ 4 ಯುವರ್ ಟೈಪ್" ನಲ್ಲಿ ಪ್ರತಿಪಾದಿಸಿದ್ದು, ಬ್ಲಡ್ ಗ್ರೂಪ್ ಫುಡ್ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿದ್ದಾರೆ. ಅವರ ಸಿದ್ಧಾಂತದ ಪ್ರಕಾರ, ಅತ್ಯುತ್ತಮ ಆರೋಗ್ಯಕ್ಕಾಗಿ ವ್ಯಕ್ತಿಗಳು ತಮ್ಮ ರಕ್ತದ ಪ್ರಕಾರಕ್ಕೆ ಅನುಗುಣವಾಗಿ ಆಹಾರವನ್ನು ಸೇವಿಸಬೇಕು. ವಿವಿಧ ರೀತಿಯ ರಕ್ತದ ಗುಂಪುಗಳಿವೆ. ನಿಮ್ಮ ರಕ್ತದ ಗುಂಪನ್ನು ಅವಲಂಬಿಸಿ, ನೀವು ತಿನ್ನಬೇಕಾದ ಆಹಾರವು ವಿಭಿನ್ನವಾಗಿರುತ್ತದೆ. ನೀವು ಸೇವಿಸುವ ಆಹಾರವು ನಿಮ್ಮ ರಕ್ತದ ಗುಂಪಿನ ಆಹಾರಕ್ಕೆ ಸೂಕ್ತವಾಗಿರಬೇಕು . ನಿಮ್ಮ ರಕ್ತದ ಗುಂಪು ನೀವು ತಿನ್ನುವ ಆಹಾರವನ್ನು ಒಪ್ಪದಿದ್ದರೆ ಅದು ದೇಹದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ವಾಕರಿಕೆ, ವಾಂತಿ, ಭೇದಿ, ಹೊಟ್ಟೆನೋವು, ಗ್ಯಾಸ್ಟ್ರಿಕ್ ಸಮಸ್ಯೆಗಳು ಬರುತ್ತವೆ. ಅವರ ಪ್ರತಿಪಾದನೆ ಸಂಕ್ಷಿಪ್ತ ನೋಟ ಹೀಗಿದೆ-
ಯಾವ ಬ್ಲಡ್ ಟೈಪ್‌ಗೆ ಏನು ಆಹಾರ
ಎ ಬ್ಲಡ್ ಗ್ರೂಪ್: ದ್ರಾಕ್ಷಿ, ಬೆರಿಹಣ್ಣು, ಆಪ್ರಿಕಾಟ್, ಕುಂಬಳಕಾಯಿ, ಕ್ಯಾರೆಟ್ ಸೇರಿ ತರಕಾರಿ, ದವಸ ಧಾನ್ಯಗಳು ಸೇರಿ ಸಸ್ಯಾಹಾರಿ ಆಹಾರ ಕ್ರಮ ಅನುಸರಿಸಬೇಕು ಎಂದು ಒತ್ತಿಹೇಳುತ್ತದೆ
ಬಿ ಬ್ಲಡ್ ಗ್ರೂಪ್: ಚಿಕನ್ ಮತ್ತು ಕೆಲವು ಧಾನ್ಯಗಳನ್ನು ತಿನ್ನಬಾರದು. ಆದರೆ, ಬೀಟ್‌ರೂಟ್, ಕಾಟೇಜ್ ಚೀಸ್, ಮೊಸರು, ಬಾದಾಮಿ, ದ್ರಾಕ್ಷಿಗಳು, ಬಿಳಿಬದನೆ, ಮೆಣಸು, ಕಿಡ್ನಿ ಬೀನ್ಸ್, ಮಟನ್, ಹಸುವಿನ ಹಾಲು, ಡೇರಿ ಉತ್ಪನ್ನ ಮತ್ತು ಮಾಂಸ, ತರಕಾರಿಗಳನ್ನು ಒಳಗೊಂಡಂತೆ ಸಮತೋಲಿತ ಆಹಾರ ಕ್ರಮ ಅನುಸರಿಸಬೇಕು ಎಂಬುದನ್ನು ಪ್ರತಿಪಾದಿಸುತ್ತದೆ.
ಎಬಿ ಬ್ಲಡ್ ಗ್ರೂಪ್: ಮಟನ್, ಕೆಂಪು ವೈನ್, ಬೆಳ್ಳುಳ್ಳಿ, ಕಡಲೆಕಾಯಿ ಬೆಣ್ಣೆ, ಹಾಲು, ಮೊಸರು, ಅಂಜೂರ, ಮಸೂರ, ಮೊಟ್ಟೆಗಳು, ವಾಲ್ನಟ್ಸ್, ಹೂಕೋಸು, ಕಲ್ಲಂಗಡಿಗಳು ತೋಫು, ಸಮುದ್ರಾಹಾರ ಸೇರಿ ಎ ಮತ್ತು ಬಿ ಬ್ಲಡ್ ಗ್ರೂಪ್‌ಗಳ ಹೈಬ್ರಿಡ್ ಮಾದರಿಯ ಆಹಾರ ಕ್ರಮ ಅನುಸರಿಸಬೇಕು. ಆದರೆ, ಎಬಿ ರಕ್ತದ ಗುಂಪಿನವರು ಜೋಳ, ಚಿಕನ್, ಬಾಳೆಹಣ್ಣುಗಳನ್ನು ಕಡಿಮೆ ಸೇವಿಸಬೇಕು.
ಒ ಬ್ಲಡ್ ಗ್ರೂಪ್: ಧಾನ್ಯಗಳು ಮತ್ತು ಡೈರಿಗಳನ್ನು ಕಡಿಮೆ ಮಾಡಿ, ಮಾಂಸ ಮತ್ತು ಮೀನಿನಂತಹ ಹೆಚ್ಚಿನ ಪ್ರೋಟೀನ್ ಆಹಾರಗಳು ಅಂದರೆ, ಚಿಕನ್, ಈರುಳ್ಳಿ, ಆಲಿವ್ ಎಣ್ಣೆ, ಶುಂಠಿ, ಮಟನ್, ಬೆಣ್ಣೆ, ಬಾಳೆಹಣ್ಣು, ಮೀನು, ಮಾವಿನ ಹಣ್ಣು,ಬಾದಾಮಿ ತಿನ್ನಬಹುದು. ಆದರೆ, ಗೋಧಿ ಹಿಟ್ಟಿನಿಂದ ಮಾಡಿದ ಆಹಾರಗಳು, ಸೋಯಾಬೀನ್ ಎಣ್ಣೆಯಿಂದ ಬೇಯಿಸಿದ ಆಹಾರಗಳು ಮತ್ತು ಕಿಡ್ನಿ ಬೀನ್ಸ್ ಅನ್ನು ಮಿತವಾಗಿ ತಿನ್ನಬೇಕು.
ವಿಭಾಗ