ಶುಗರ್ ಸ್ಪೈಕ್ ಹೆಸರಿನಲ್ಲಿ ಸಿಹಿ ತಿನ್ನುವ ಆಸೆಗೇಕೆ ಕಡಿವಾಣ ಹಾಕ್ತೀರಿ, ಈ ಗಿಲ್ಟ್‌ನಿಂದ ಮೊದಲು ಹೊರಬನ್ನಿ; ರಂಗಸ್ವಾಮಿ ಮೂಕನಹಳ್ಳಿ ಬರಹ
Oct 09, 2024 07:30 AM IST
ಶುಗರ್ ಸ್ಲೈಕ್ ಭಯ ಬಿಡಿ, ತಿಂದು ವರ್ಕೌಟ್ ಮಾಡಿ
- ಇತ್ತೀಚಿನ ದಿನಗಳಲ್ಲಿ ಯಾವ ವಸ್ತು ತಿನ್ನಬೇಕು ಅಂದ್ರು ಯೋಚನೆ ಮಾಡ್ತೀವಿ, ಅದಕ್ಕೆ ಕಾರಣ ‘ಶುಗರ್ ಸ್ಪೆಕ್‘ ಎನ್ನುವ ಪದ. ಶುಗರ್ ಸ್ಪೆಕ್‌ನ ಪರಿಣಾಮಕ್ಕಿಂತ ಈ ಪದವೇ ಜನರಲ್ಲಿ ಹೆಚ್ಚು ಭಯ ಹುಟ್ಟಿಸುತ್ತಿದೆ. ಆ ಕಾರಣಕ್ಕೆ ಹಲವರು ಸಿಹಿ ತಿನ್ನುವ ಆಸೆಗೆ ಕಡಿವಾಣ ಹಾಕಿ ಬದುಕುತ್ತಿದ್ದಾರೆ, ಈ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿಯವರ ಬರಹ ಇಲ್ಲಿದೆ.
ಕಳೆದ ಒಂದಿಷ್ಟು ವರ್ಷಗಳಿಂದ ಶುಗರ್ ಸ್ಪೈಕ್ ಎನ್ನುವ ಪದ ತುಂಬಾನೇ ಕೇಳಿಬರುತ್ತಿದೆ. ಶುಗರ್ ಸ್ಪೈಕ್ ಎಂದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗುವುದು. ಇದರಿಂದ ಸಕ್ಕರೆ ಕಾಯಿಲೆ ಆರಂಭವಾಗಬಹುದು ಎಂಬ ಭಯ ಹಲವರಿಗೆ. ಆ ಕಾರಣಕ್ಕೆ ಬಹುತೇಕರು ಸಿಹಿ ತಿನ್ನುವ ಆಸೆಗೆ ಕಡಿವಾಣ ಹಾಕಿ ಬದುಕುತ್ತಾರೆ. ಹಾಗಾದರೆ ಈ ಶುಗರ್ ಸ್ಪೈಕ್ ನಿಜನಾ, ಈ ಗಿಲ್ಟ್‌ನಿಂದ ಹೊರ ಬರೋದು ಹೇಗೆ, ಸಿಹಿ ತಿಂದಾಗ ಅದರ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಅಂದ್ರೆ ಏನು ಮಾಡ್ಬೇಕು ಎಂಬಿತ್ಯಾದಿ ಅಂಶಗಳನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ರಂಗಸ್ವಾಮಿ ಮೂಕನಹಳ್ಳಿ. ಅವರ ಬರಹವನ್ನು ನೀವೂ ಓದಿ.
ರಂಗಸ್ವಾಮಿ ಮೂಕನಹಳ್ಳಿ ಬರಹ
ಇವತ್ತು ದಿನ ಹೇಗಾಗಿ ಬಿಟ್ಟಿದೆ ಗೊತ್ತಾ? ಏನನ್ನೂ ತಿನ್ನುವಂತಿಲ್ಲ! ದರಿದ್ರ ಪಾಶ್ಚಾತ್ಯ ಪ್ರಭಾವ ಎಷ್ಟು ಹೆಚ್ಚಾಗಿದೆ ಎಂದರೆ 'ಶುಗರ್ ಸ್ಪೈಕ್ ' ಎನ್ನುವ ಪದವನ್ನು ಕೇಳಿ ಸಾಕಾಗಿದೆ. ಅಲ್ಲ ಕಣ್ರೀ ಶುಗರ್ ಸ್ಪೈಕ್ ಆಗದೆ ಇರಲು ಹೇಗೆ ಸಾಧ್ಯ? ನಾವು ತಿನ್ನುವ ಪ್ರತಿಯೊಂದು ಆಹಾರ ಪದಾರ್ಥದಲ್ಲೂ ಸಕ್ಕರೆ ಅಂಶ ಇದ್ದೆ ಇರುತ್ತದೆ. ನಾನು ಸಿಹಿ ತಿನ್ನುವುದೇ ಇಲ್ಲ ಎಂದು ನೀವೊಂದು ಮುಷ್ಟಿಯಷ್ಟು ಮೆಣಸಿನಕಾಯಿ ತಿಂದರೂ ಅದರಲ್ಲೂ ಸಕ್ಕರೆ ಅಂಶ ಇದ್ದೆ ಇರುತ್ತದೆ. ಆಹಾರ ತಜ್ಞರು, ಫಿಟ್ನೆಸ್ ಗುರುಗಳು ಸಕ್ಕರೆ ಎಂದರೆ ಬೆಚ್ಚಿ ಬೀಳುತ್ತಾರೆ. ಅವರ ಮಾತನ್ನು ಕೇಳುವವರ ಬದುಕನ್ನು ಮೂರಾಬಟ್ಟೆ ಮಾಡಿ ಬಿಟ್ಟಿದ್ದಾರೆ. ಸಕ್ಕರೆ ತಿನ್ನುವುದು ತಪ್ಪಲ್ಲ ಅದನ್ನು ಕರಗಿಸದೆ ಕೂರುವುದು ತಪ್ಪು. ಅಲ್ಲದೆ ಈ ಸಕ್ಕರೆ ಎನ್ನುವುದು ಪ್ರತಿಯೊಬ್ಬರ ಮೇಲೆ ಬೇರೆ ರೀತಿಯಲ್ಲಿ ಪ್ರಭಾವ ಬೀರುತ್ತದೆ. ನನ್ನ ಬಂಗಾಲಿ ಮಿತ್ರನೊಬ್ಬ ಐದು ಚಮಚ ಸಕ್ಕರೆಯಿಲ್ಲದೆ ಒಂದು ಲೋಟ ಟೀ ಕುಡಿಯುವುದೇ ಇಲ್ಲ. ಶುಗರ್ ಸ್ಪೈಕ್ ಎನ್ನುವುದು ಅವನ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ. ನಾನು ನೋಡಿದ ದಿನದಿಂದ ಇಂದಿಗೂ ಹಾಗೆ ತಾಜಾತನ ಅವನಲ್ಲಿ ಉಳಿದುಕೊಂಡಿದೆ. ಶುಗರ್ ಸ್ಪೈಕ್ ಮನುಷ್ಯನ ಯೌವ್ವನವನ್ನು ಕಸಿದು ಬಿಡುತ್ತದೆ ಎನ್ನುವುದು ಎಷ್ಟು ಬಕ್ವಾಸ್ ಎಂದು ಅವನನ್ನು ನೋಡಿದಾಗೆಲ್ಲಾ ಅನ್ನಿಸುತ್ತದೆ. ಹಾಗೆಂದು ಎಲ್ಲರೂ ಅವನಂತೆ ಸಕ್ಕರೆ ತಿನ್ನಲೂ ಬಾರದು ಎನ್ನುವುದು ಕೂಡ ಸತ್ಯ. ಒಟ್ಟಾರೆ ಇದಿಷ್ಟೇ ಸತ್ಯ ಎಂದು ಮೆಡಿಕಲ್ ಸೈನ್ಸ್ ಹೇಳಿದರೆ ಅದಕ್ಕೊಂದು ಅಪವಾದ ಇದ್ದೆ ಇರುತ್ತದೆ.
ಹೌದು ಇಷ್ಟೆಲ್ಲಾ ಮಾತು ಈಗ ಏಕೆ ಬಂತು ಎನ್ನುವ ಪ್ರಶ್ನೆ ನಿಮ್ಮಲ್ಲಿ ಸಹಜವಾಗಿ ಹುಟ್ಟಿರುತ್ತದೆ. ಅದಕ್ಕೆ ನನ್ನ ಬಳಿ ಉತ್ತರವೂ ಸಿದ್ಧವಿದೆ. ನೋಡ್ರಿ ಜಗತ್ತಿನಾದ್ಯಂತ ಜನ ಸೇಮ್ ಕಣ್ರೀ. ನಮ್ಮಲ್ಲಿ ಹಬ್ಬದ ದಿನಗಳಲ್ಲಿ ಹೊಟ್ಟೆ ಬಿರಿಯುವಂತೆ ತಿನ್ನುವುದಿಲ್ಲವೇ ಥೇಟ್ ಹಾಗೆ ಜಗತ್ತಿನ ಎಲ್ಲಾ ದೇಶಗಳಲ್ಲೂ ಜನ ಅವರವರ ಹಬ್ಬದ ಸಮಯದಲ್ಲಿ ಮಿತಿ ಮೀರಿ ತಿನ್ನುತ್ತಾರೆ. ಅಲ್ಲದೆ ನಮ್ಮಲ್ಲಿ ಪಾಯಸ ಕುಡಿಯುವ ಸವಾಲು , ಒಬ್ಬಟ್ಟು ತಿನ್ನುವ ಸವಾಲು ಇರುವಂತೆ ಎಲ್ಲಾ ದೇಶಗಳಲ್ಲೂ ಒಂದಲ್ಲ ಒಂದು ಇದನ್ನು ಹೋಲುವ ಸವಾಲುಗಳು ಕೂಡ ಇವೆ. ಜರ್ಮನಿಯಲ್ಲಿ ಅಂಡೆ ಗಾತ್ರದ ಪಾತ್ರೆಯಲ್ಲಿ ಬಿಯರ್ ಇಡುತ್ತಾರೆ. ಹೆಚ್ಚಿನ ಬಿಯರ್ ಕುಡಿದವನನ್ನು ಜಯಶಾಲಿ ಎಂದು ಘೋಷಿಸುತ್ತಾರೆ. ನಮ್ಮಲ್ಲಿ ಫೈವ್ ಸ್ಟಾರ್ ಅಥವಾ ತೀರಾ ಹೈ ಎಂಡ್ ಹೋಟೆಲ್‌ಗೆ ಹೋಗಿ ಊಟ ಮಾಡಿ ಬಂದ ನಂತರ ಅಯ್ಯೋ ಹೊಟ್ಟೇನೆ ತುಂಬಲಿಲ್ಲ ಬರಿ ಪ್ರೆಸೆಂಟೇಷನ್ ಅಷ್ಟೇ ಎನ್ನುವ ಮಾತನ್ನು ಆಡುತ್ತೇವೆ. ಬೇರೆ ದೇಶಗಳಲ್ಲೂ ಜನ ಇದೆ ಮಾತು ಆಡುತ್ತಾರೆ. ಮನೆಯಲ್ಲಿ ಮಾಂಸ ಸುಟ್ಟು (BBQ) ತಿನ್ನುವುದರ ಮಜಾ ಹೋಟೆಲ್‌ನಲ್ಲಿ ಎಲ್ಲಿ ಸಿಗಬೇಕು ಎನ್ನುವ ಮಾತುಗಳಿಗೆ ಸಾವಿರ ಬಾರಿ ಸಾಕ್ಷಿಯಾಗಿದ್ದೇನೆ.
ನನಗೆ ಸಿಹಿ ತಿಂಡಿ ಇಷ್ಟವಿಲ್ಲ, ಇವತ್ತು ಅಂತಲ್ಲ ಸಣ್ಣವನಿಂದ ಎಲೆ ಕೊನೆಯಲ್ಲಿ ಹಾಕುತ್ತಿದ್ದ ಪಾಯಸವನ್ನು ಸಹ ತಿಂದವನಲ್ಲ. ನನಗೆ ಸಿಹಿ ಮೇಲೆ ವಿಶೇಷ ವ್ಯಾಮೋಹವಿಲ್ಲ. ಹಾಗೆಂದು ಅದನ್ನು ದ್ವೇಷಿಸುವ ಪೈಕಿ ಕೂಡ ಅಲ್ಲ. ಅದನ್ನು ಕೂಡ ಯಾರೋ ಒಬ್ಬರು ಇಷ್ಟಪಟ್ಟು ತಿನ್ನುತ್ತಾರೆ ಅಲ್ಲವೇ ಹೀಗಾಗಿ ಅದನ್ನು ದ್ವೇಷಿಸುವ ಪ್ರಶ್ನೆಯಿಲ್ಲ. ಆದರೆ ನಾನು ಇಂದಿಗೂ ಎಲೆಕೊನೆಯ ಪಾಯಸ ಕೂಡ ತಿನ್ನುವುದಿಲ್ಲ. ಆದರೆ ಪುರಿಅಂಟಿನ ಉಂಡೆ ನನಗೆ ಬಹಳ ಇಷ್ಟ. ಇತ್ತೀಚಿಗೆ ಅದನ್ನು ನೋಡಿರುವುದು ಕೂಡ ಕಡಿಮೆ. ನಿನ್ನೆ ನನ್ನಮ್ಮ ಅದೆಲ್ಲಿಗೆ ಹೋಗಿದ್ದಳೋ ಗೊತ್ತಿಲ್ಲ ಮನೆಯಲ್ಲಿ ಎರಡು ಪುರಿ ಉಂಡೆ ಕಂಡವು. ಅದರಲ್ಲಿ ಒಂದನ್ನು ತೆಗೆದುಕೊಂಡು ತಿನ್ನುತ್ತಾ ಐದಾರು ಕಿಲೋಮೀಟರ್ ವಾಕ್ ಹೋಗಿ ಬಂದೆ. ಇವತ್ತು ಇನ್ನೊಂದು ತಿನ್ನುತ್ತಾ ಇದನ್ನು ಬರೆಯಲು ಕುಳಿತೆ. ಶುಗರ್ ಸ್ಪೈಕ್ ಎನ್ನುವ ಗಿಲ್ಟ್‌ನಿಂದ ಹೊರಬರಬೇಕು ಎಂದರೆ ಏನು ಮಾಡಬೇಕು? ಮೇಲಿನ ಸಾಲುಗಳನ್ನು ಓದಿ ಅರ್ಥವಾಗುತ್ತದೆ.
ಮನುಷ್ಯ ತಾನು ಮಾಡುವ ತಪ್ಪನ್ನು ಕೂಡ ಅದೆಷ್ಟು ಅಚ್ಚುಕಟ್ಟಾಗಿ ಒಪ್ಪಕ್ಕೆ ಇಟ್ಟುಕೊಳ್ಳುತ್ತಾನೆ ಅಲ್ವಾ? ಅಂದಹಾಗೆ ಈ ವಿಷಯದಲ್ಲೂ ನಾವೆಲ್ಲಾ ಸೇಮ್ ಕಣ್ರೀ, ನಮ್ಮ ತಪ್ಪು ತಪ್ಪೇ ಅಲ್ಲ! ಶುಭವಾಗಲಿ
ಸೆಪ್ಟೆಂಬರ್ 8 ರಂದು ರಂಗಸ್ವಾಮಿ ಅವರು ಈ ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಹಲವರು ಅವರ ಪೋಸ್ಟ್‌ಗೆ ಲೈಕ್, ಕಾಮೆಂಟ್ ಮಾಡುತ್ತಿದ್ದಾರೆ.
ರಂಗಸ್ವಾಮಿ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ
Sugar spike ಆಗೋದು ಸಹಜ ಆದರೆ ಎಷ್ಟು ಅನ್ನೋದು ನಾವು ಎಂಥ ಸಿಹಿ ತಿನ್ನುತ್ತೇವೆ ಅನ್ನೋದರ ಮೇಲೆ ಹೋಗುತ್ತೆ. ಉದಾಹರಣೆಗೆ ಬರೀ ಸಿಂಪಲ್ ಕಾರ್ಬ್ ಇರುವಂತಹ eggless ಕೇಕುಗಳು , ಜಿಲೇಬಿ, donuts ಮೊದಲಾದ ಸಿಹಿ ತಿಂದರೆ spike ಹೆಚ್ಚು.. ಆದರೆ ಸಾಕಷ್ಟು ಪ್ರೊಟೀನ್ ಮತ್ತು ಫೈಬರ್ ಮಿಶ್ರಿತ ತಿಂಡಿಗಳಾದ ಬಂಗಾಳಿ ಸಿಹಿಗಳು, ನಮ್ಮ ರೆಗ್ಯುಲರ್ ಮದುವೆ ಮನೆ ಲಡ್ಡು, ಪುರಿ ಉಂಡೆ, ಪಾಯಸ, ಮೊಟ್ಟೆ ಮತ್ತು ಬಗೆ ಬಗೆ ಹಣ್ಣುಗಳ ಸಾಂಪ್ರದಾಯಿಕ ಕೇಕು ಮತ್ತು pie ಗಳು ಇತ್ಯಾದಿಗಳಲ್ಲಿ ಸಕ್ಕರೆ ಅಂಶ ಇದ್ದರೂ ಮಿಕ್ಕ dry fruits, ತುಪ್ಪದಂತಹ ಬೆಣ್ಣೆಯಂತಹ healthy fats, ಹಾಲಿನ ಪ್ರೊಟೀನ್, ಮೊಟ್ಟೆಯ ಪ್ರೊಟೀನ್ ಇಂದ spike minimize ಆಗುತ್ತೆ.. ರೆಸಿಪಿ ಅನ್ನೋದು ಬರೀ ಪದಾರ್ಥಗಳ ಮಿಶ್ರಣ ಮಾತ್ರ ಅಲ್ಲ.. ಅದೊಂದು ವಿಜ್ಞಾನ.. ಅದನ್ನು ತಿಳಿಯದೇ ಈಗಿನ influencers ಸುಮ್ನೆ fear mongering ಮಾಡುತ್ತವೆ.. ಹಾಗೆಯೇ ಖಾಲಿ ಹೊಟ್ಟೆಯಲ್ಲಿ ಸಿಹಿ ತಿನ್ನಬಾರದು.. ಹೊಟ್ಟೆ ತುಂಬಾ ಪುಷ್ಟಿಕರವಾದ ಊಟ ಮಾಡಿ ಕೊನೆಗೆ ಒಂದು ತುಂಡು ಸಿಹಿ ತಿಂದರೆ ಯಾವ spike ಊ ಆಗಲ್ಲ.. Spike ಆದರೂ ಸಮಸ್ಯೆ ಅಂತೂ ಆಗಲ್ಲ‘ ಎಂದು ಧರ್ಮಶ್ರೀ ಅಯ್ಯಂಗಾರ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
‘ನಾನು sugar spike ಅಂತೆಲ್ಲಾ ತಲೆ ಕೆಡಿಸಿಕೊಳ್ಳಲ್ಲ..ಆದ್ರೆ ದಪ್ಪ ಆಗೋ ಬಗ್ಗೆ ಭಯ ಇದೆ. ಸಿಹಿ ಅಂದ್ರೆ ತುಂಬಾ ಇಷ್ಟ.cravings ಇದೆ ಸಿಹಿ ಬಗ್ಗೆ.ಮೀರೊಕ್ಕಾಗ್ತಿಲ್ಲ.ಕಬ್ಬಿನ season ನಲ್ಲಂತೂ ಜಲ್ಲೆ ಜಲ್ಲೆ ಕಬ್ಬುಗಳನ್ನು ಸಿಪ್ಪೆಯನ್ನೂ ಹಲ್ಲಿನಿಂದಲೇ ಕಚ್ಚಿ ತೆಗೆದು ಜಗಿದು ಜಗಿದು ಬಿಸಾಡ್ತೀನಿ. ಇದೂ ಒಂದು ಅತಿರೇಕವೇ!!‘ ಎಂದು ಜಯಲಕ್ಷ್ಮೀ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
‘ಅರ್ಥ ಆಗದ ಸಕ್ಕರೆ ರೋಗ.
ಯಾವುದು ಬಳಸೋದು ಅಂತ.
ಏನೇ ಡಯಟ್ಟು ಆದರೂ ಏರುವ ರೋಗ‘ ಎಂದು ಶ್ರೀಗಂಧ ಎನ್ನುವವರು ಕವನದ ರೂಪದಲ್ಲಿ ಕಾಮೆಂಟ್ ಮಾಡಿದ್ದಾರೆ.
‘ನನ್ನ ತಂಗಿಯ ಅತ್ತೆ ಊಟಕ್ಕೂ ಸಕ್ಕರೆ ಹಾಕಿಕೊಂಡು ತಿಂದು, ಗಂಡನಿಗೆ ಬೇಕೋ ಬೇಡವೋ ಅವರಿಗೂ ಬಡಿಸುತ್ತಿದ್ದರು. ಅವರ ಅಡುಗೆಗಳೆಲ್ಲವು ಪಾಯಸದಂತೆ ಇರುತ್ತಿತ್ತು. ಗಂಡ ಹೆಂಡತಿ ಇಬ್ಬರೂ 93 ವರುಷ ಬಾಳಿ ಬದುಕಿ, ಆಸ್ಪತ್ರೆಗೆ ಅಲೆದಾಡದೆ; ಹೆಚ್ಚು ನರಳದೆ ಸುಖ ಮರಣ ಹೊಂದಿದರು. ವೈದ್ಯಕೀಯದ ಮಾತುಗಳನ್ನೆಲ್ಲಾ ಸುಳ್ಳಾಗಿಸಿದವರು !’ ವೀಣಾ ಸೂರ್ಯನಾರಾಯಣ ಎನ್ನುವವರ ಕಾಮೆಂಟ್ ಹೀಗಿದೆ.