ಮದುವೆಯ ದಿನ ಸುಂದರವಾಗಿ ಕಾಣಬೇಕೆಂಬ ಆಸೆಯಾ: ಹಾಗಿದ್ದರೆ ಮೇಕಪ್ ಕಲಾವಿದರನ್ನು ಆಯ್ಕೆ ಮಾಡುವ ಮುನ್ನ ಈ ವಿಚಾರ ತಿಳಿದಿರಲಿ
Nov 02, 2024 08:30 AM IST
ಮದುವೆಯ ದಿನ ಸುಂದರವಾಗಿ ಕಾಣಬೇಕೆಂಬ ಆಸೆಯಾ: ಹಾಗಿದ್ದರೆ ಮೇಕಪ್ ಕಲಾವಿದರನ್ನು ಆಯ್ಕೆ ಮಾಡುವ ಮುನ್ನ ಈ ವಿಚಾರ ತಿಳಿದಿರಲಿ
- ಮದುವೆಯ ದಿನದಂದು ಸುಂದರವಾಗಿ ಕಾಣಬೇಕು ಎಂಬುದು ಪ್ರತಿಯೊಬ್ಬ ವಧುವಿನ ಆಸೆಯಾಗಿರುತ್ತದೆ. ಇದಕ್ಕಾಗಿ ಬಹಳ ಮುಂಚಿತವಾಗಿಯೇ ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ಸುಂದರವಾಗಿ ಕಾಣಲು ಮೇಕಪ್ ಕಲಾವಿದರನ್ನು ಆಯ್ಕೆ ಮಾಡುವ ಮುನ್ನ ಈ ವಿಚಾರ ತಿಳಿದಿರಲೇಬೇಕು.
ಪ್ರತಿಯೊಬ್ಬ ಹುಡುಗಿಯೂ ತನ್ನ ಮದುವೆಯ ದಿನದಂದು ಸುಂದರವಾಗಿ ಕಾಣಲು ಇಷ್ಟಪಡುತ್ತಾರೆ. ಆದರೆ, ಈ ಬಯಕೆಯನ್ನು ಕಾರ್ಯಗತಗೊಳಿಸುವುದು ಅಷ್ಟು ಸುಲಭವಲ್ಲ. ಇದಕ್ಕಾಗಿ, ಮೇಕಪ್‌ನಿಂದ ಕೂದಲಿನವರೆಗೆ ಮತ್ತು ಲೆಹೆಂಗಾದಿಂದ ಆಭರಣಗಳವರೆಗೆ ಎಲ್ಲವೂ ನಿಮ್ಮ ಇಷ್ಟಕ್ಕೆ ಅನುಗುಣವಾಗಿ ತಯಾರಾಗಿರಬೇಕು. ಇದಕ್ಕಾಗಿ ಬಹಳ ಮುಂಚಿತವಾಗಿಯೇ ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ಆದರೆ, ಮದುವೆಯ ಸಿದ್ಧತೆ ವೇಳೆ ವಧುವಿಗೆ ಬೇಕಾಗಿರುವ ಎಲ್ಲಾ ಪೂರ್ವ ತಯಾರಿಗಳನ್ನು ಕೈಗೊಳ್ಳುವಾಗ ಆಯಾಸ ಮಾತ್ರವಲ್ಲದೆ ಒತ್ತಡವನ್ನು ಉಂಟುಮಾಡುತ್ತವೆ. ಹೀಗಾಗಿ ಮೇಕಪ್ ಕಲಾವಿದ ಮತ್ತು ಹೇರ್ ಆರ್ಟಿಸ್ಟ್ ಆಯ್ಕೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ನಿರ್ಧಾರಗಳನ್ನು ನೀವು ಸೂಕ್ತ ಸಮಯಕ್ಕೆ ತೆಗೆದುಕೊಳ್ಳುವುದು ಬಹಳ ಮುಖ್ಯ. ಇದರಿಂದಾಗಿ ಮದುವೆಯ ದಿನದಂದು ನೀವು ಅನೇಕ ವರ್ಷಗಳಿಂದ ಕಲ್ಪಿಸಿಕೊಳ್ಳುತ್ತಿರುವಂತೆಯೇ ಕಾಣುತ್ತೀರಿ. ಮೇಕಪ್ ಮತ್ತು ಹೇರ್ ಆರ್ಟಿಸ್ಟ್ ಅನ್ನು ಕಾಯ್ದಿರಿಸುವ ಮೊದಲು ಏನನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ನಿಮ್ಮ ಬಜೆಟ್ ನಿರ್ಧರಿಸಿ
ಸುಂದರ ವಧುವಾಗಿ ತಯಾರಾಗಬೇಕು ಅನ್ನೋದು ಬಹುತೇಕರ ಬಯಕೆ. ಇದಕ್ಕಾಗಿ ವೃತ್ತಿಪರ ವಧುವಿನ ಮೇಕಪ್ ಕಲಾವಿದರ ಕೊರತೆಯೇನೂ ಇಲ್ಲ. ಆದರೆ, ನಿಮ್ಮ ಬಜೆಟ್‌ಗೆ ಅನುಗುಣವಾಗಿ ನೀವು ಅವರನ್ನು ಕಾಯ್ದಿರಿಸಬಹುದು. ಏಕೆಂದರೆ ವೃತ್ತಿಪರ ಮೇಕಪ್ ಕಲಾವಿದರು ತಮ್ಮ ಸೇವೆಗಳನ್ನು ಕೆಲವು ಸಾವಿರದಿಂದ ಲಕ್ಷಗಳವರೆಗಿನ ಬಜೆಟ್‌ನಲ್ಲಿ ನೀಡುತ್ತಿದ್ದಾರೆ. ಹೀಗಾಗಿ ನಿಮ್ಮ ಮದುವೆಯ ಬಜೆಟ್ ಅನ್ನು ನೀವು ನಿರ್ಧರಿಸಿದಾಗ, ಅದರಲ್ಲಿ ಮೇಕಪ್‌ಗಾಗಿ ಪ್ರತ್ಯೇಕವಾಗಿ ಹಣವನ್ನು ಮೀಸಲಿಡುವುದು ಬಹಳ ಮುಖ್ಯ.
ಮೇಕಪ್ ಕಲಾವಿದರನ್ನು ಬುಕ್ ಮಾಡುವಾಗ ಉಂಟಾಗುವ ಗೊಂದಲವನ್ನು ಕಡಿಮೆ ಮಾಡಲು, ನಿಮ್ಮ ಮದುವೆಯ ಮೇಕಪ್‌ಗಾಗಿ ನೀವು ಮಾತನಾಡುತ್ತಿರುವ ಪ್ರತಿಯೊಬ್ಬ ಮೇಕಪ್ ಕಲಾವಿದನ ಹೆಸರು ಮತ್ತು ಶುಲ್ಕವನ್ನು ಬರೆದಿಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಬಜೆಟ್‌ಗೆ ಯಾವ ಮೇಕಪ್ ಕಲಾವಿದ ಸರಿಹೊಂದುತ್ತಾರೆ ಎಂದು ನಿರ್ಧರಿಸಲು ನಿಮಗೆ ಸುಲಭವಾಗುತ್ತದೆ. ನೀವು ಈ ಸಿದ್ಧತೆಗಳನ್ನು ಮುಂಚಿತವಾಗಿ ಮಾಡದಿದ್ದರೆ, ಮದುವೆಗೆ ಸ್ವಲ್ಪ ಮೊದಲು, ನೀವು ಅದೇ ಮೇಕಪ್ ಕಲಾವಿದರನ್ನು ಹೆಚ್ಚಿನ ಬೆಲೆಗೆ ಆಯ್ಕೆ ಮಾಡಬೇಕಾಗಬಹುದು.
ಮೇಕಪ್ ಕಲಾವಿದರನ್ನು ಆಯ್ಕೆ ಮಾಡುವಾಗ ಸಮಗ್ರವಾಗಿ ಪರಿಶೀಲಿಸಿ
ಈಗಂತೂ ಮದುವೆಗೆ ಮೇಕಪ್ ಕಲಾವಿದರನ್ನು ಆಯ್ಕೆ ಮಾಡುವುದು ತುಂಬಾನೇ ಸುಲಭ. ಇದಕ್ಕಾಗಿ ಮೇಕಪ್ ಕಲಾವಿದರ ಸಾಮಾಜಿಕ ಮಾಧ್ಯಮದ ಪ್ರೊಫೈಲ್‌ಗೆ ಭೇಟಿ ನೀಡಿ. ಇದರಲ್ಲಿ ಅವರು ಈ ಹಿಂದೆ ಮಾಡಿರುವ ಮೇಕಪ್ ವಿಡಿಯೋ, ಫೋಟೋಗಳನ್ನು ಅಪ್ಲೋಡ್ ಮಾಡಿರುತ್ತಾರೆ. ಇಷ್ಟು ಮಾತ್ರವಲ್ಲದೆ ಹಳೆಯ ಗ್ರಾಹಕರ ಪ್ರತಿಕ್ರಿಯೆಯೂ ಇರುತ್ತದೆ. ಕಾಮೆಂಟ್‍ಗಳನ್ನು ಓದಲು ಮರೆಯದಿರಿ. ಮದುವೆಯ ದಿನದಂದು ಆರಾಮದಾಯಕವಾಗಿರುವುದು ಬಹಳ ಮುಖ್ಯ. ಹೀಗಾಗಿ ಹಳೆಯ ಗ್ರಾಹಕರ ಪ್ರತಿಕ್ರಿಯೆ ಏನಿದೆ? ಮೇಕಪ್ ಕಲಾವಿದರ ಸ್ವಭಾವಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳಿಗೆ ಹೆಚ್ಚಿನ ಗಮನ ನೀಡಿ. ಅಲ್ಲದೆ, ನಿಮ್ಮ ಮಾತನ್ನು ಆಲಿಸುವ ಮತ್ತು ಅದನ್ನು ಅಳವಡಿಸಿಕೊಳ್ಳುವ ಮೇಕಪ್ ಕಲಾವಿದರನ್ನು ಆಯ್ಕೆ ಮಾಡಿ.
ಮದುವೆಯ ಸಿದ್ಧತೆ ಕೈಗೊಂಡಾಗ ಎಲ್ಲರೂ ತಮ್ಮ ಚರ್ಮದ ಆರೈಕೆ ಮತ್ತು ಮೇಕಪ್ ಬಗ್ಗೆ ಕಾಳಜಿ ವಹಿಸುತ್ತೇವೆ. ಆದರೆ, ಕೇಶವಿನ್ಯಾಸಗಳ ಬಗ್ಗೆ ಮರೆತುಬಿಡುತ್ತೇವೆ. ಕೇಶವಿನ್ಯಾಸವು ವಧುವಿನ ಮೇಕಪ್‌ನ ಪ್ರಮುಖ ಭಾಗವಾಗಿದೆ. ಕೇಶವಿನ್ಯಾಸದ ವಿಷಯದಲ್ಲಿ ನಿಮ್ಮ ಹೇರ್ ಸ್ಟೈಲಿಸ್ಟ್ ಅನ್ನು ಕುರುಡಾಗಿ ಅನುಸರಿಸಬೇಡಿ. ನೀವೇ ಸ್ವಲ್ಪ ಸಾಮಾಜಿಕ ಜಾಲತಾಣ ಅಥವಾ ಅಂತರ್ಜಾಲದಲ್ಲಿ ತಡಕಾಡಿ. ನಿಮ್ಮ ಮುಖ ಮತ್ತು ಸೀರೆಗೆ ಯಾವ ರೀತಿಯ ಕೇಶವಿನ್ಯಾಸವು ಚೆನ್ನಾಗಿ ಕಾಣುತ್ತದೆ ಎಂಬುದನ್ನು ನೋಡಿ. ನಿಮ್ಮ ಆಯ್ಕೆಯ ಕೇಶವಿನ್ಯಾಸವನ್ನು ಆರಿಸಿ. ನಂತರ ಸ್ಟೈಲಿಸ್ಟ್ ಸಲಹೆಯ ಪ್ರಕಾರ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ಕೇಶವಿನ್ಯಾಸವನ್ನು ನಿರ್ಧರಿಸಿ.
ಮೇಕಪ್ ಕಲಾವಿದರೊಂದಿಗೆ ಮುಕ್ತವಾಗಿ ಮಾತನಾಡಿ
ನೀವು ಯಾವುದೇ ಚರ್ಮದ ಸಮಸ್ಯೆಗಳನ್ನು ಹೊಂದಿದ್ದರೆ, ಮೊದಲು ಅದರ ಬಗ್ಗೆ ಮೇಕಪ್ ಕಲಾವಿದರೊಂದಿಗೆ ಮಾತನಾಡುವುದು ಉತ್ತಮ. ಮೇಕಪ್ ಮೂಲಕ ಮೊಡವೆಗಳನ್ನು ಮರೆಮಾಡುವ ಬಗ್ಗೆ ಮಾತನಾಡುವುದು ಸೇರಿದಂತೆ ಇತ್ಯಾದಿ ಬಗ್ಗೆ ಚರ್ಚಿಸಬಹುದು. ಕೆಲವು ಮೇಕಪ್ ಕಲಾವಿದರು ಮೇಕಪ್ ಮಾಡುವ ಮೊದಲು ನಿರ್ದಿಷ್ಟ ಚರ್ಮ ಚಿಕಿತ್ಸೆಗಳನ್ನು ಸಹ ಶಿಫಾರಸು ಮಾಡಬಹುದು.
ಪ್ರಯೋಗಗಳು ಅಗತ್ಯ
ಮದುವೆಯ ದಿನಕ್ಕಿಂತ ಮೊದಲು ಕೂದಲು ಮತ್ತು ಮೇಕಪ್ ಪ್ರಯೋಗಗಳನ್ನು ತೆಗೆದುಕೊಳ್ಳಬಹುದು. ಕೇಶವಿನ್ಯಾಸ ಮತ್ತು ಮೇಕಪ್ ಮಾಡುವ ಮೂಲಕ ಅವು ನಿಮಗೆ ಸರಿಹೊಂದುತ್ತದೆಯೇ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ವಿಶೇಷವೆಂದರೆ ಈ ಸೌಲಭ್ಯವು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ನಿಮ್ಮ ಮುಖದ ಆಕಾರ ಮತ್ತು ಮೈಬಣ್ಣಕ್ಕೆ ಅನುಗುಣವಾಗಿ ಯಾವ ರೀತಿಯ ಬಣ್ಣ ಮತ್ತು ಮೇಕಪ್ ಅನ್ನು ಬಳಸಬಹುದು ಎಂಬುದನ್ನು ತಿಳಿಯಲು ಸುಲಭವಾಗುತ್ತದೆ. ನಿಮ್ಮ ಮದುವೆಯ ಉಡುಗೆ ಸಿದ್ಧವಾದ ನಂತರ ಮದುವೆಗೆ ಒಂದು ತಿಂಗಳು ಇರುವಾಗ ಮೇಕಪ್ ಮತ್ತು ಕೇಶವಿನ್ಯಾಸ ಪ್ರಯೋಗವನ್ನು ಮಾಡಬಹುದು.
ವಿಭಾಗ