logo
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಆಧಾರ್​ ಕಾರ್ಡ್​ ದುರುಪಯೋಗ ಆಗಿದೆಯೇ ಇಲ್ಲವೇ ಎನ್ನುವುದನ್ನು ತಿಳಿಯಬೇಕಾ: ಇದ್ದಲ್ಲೇ ಚೆಕ್ ಮಾಡಿ ಹೀಗೆ

ನಿಮ್ಮ ಆಧಾರ್​ ಕಾರ್ಡ್​ ದುರುಪಯೋಗ ಆಗಿದೆಯೇ ಇಲ್ಲವೇ ಎನ್ನುವುದನ್ನು ತಿಳಿಯಬೇಕಾ: ಇದ್ದಲ್ಲೇ ಚೆಕ್ ಮಾಡಿ ಹೀಗೆ

Prasanna Kumar P N HT Kannada

Aug 30, 2024 06:12 AM IST

google News

ಆಧಾರ್​ ಕಾರ್ಡ್

    • Aadhar Card Scams: ಬೇರೆಯವರು ನಿಮ್ಮ ಆಧಾರ್​ ಬಳಸುತ್ತಿದ್ದಾರಾ ಎಂಬುದರ ಕುರಿತು ತಿಳಿಯಬೇಕೇ? ಹಾಗಿದ್ದರೆ ಈ ಹಂತಗಳನ್ನು ಅನುಕರಿಸಿ, ಮಾಹಿತಿ ಪಡೆಯಿರಿ.
ಆಧಾರ್​ ಕಾರ್ಡ್
ಆಧಾರ್​ ಕಾರ್ಡ್

Aadhar Card Scams: ಪ್ರತಿಯೊಂದಕ್ಕೂ ಆಧಾರ್​ ಕಾರ್ಡ್ ಎಷ್ಟು ಮುಖ್ಯ ಎಂಬುದನ್ನು ತಿಳಿದೇ ಇದ್ದೀರಿ. ಬ್ಯಾಂಕ್​ ಖಾತೆಗೆ ಲಿಂಕ್, ಸರ್ಕಾರಿ ಕೆಲಸಗಳು ಸೇರಿದಂತೆ ಹಲವೆಡೆ ಈ ಮಹತ್ವದ ದಾಖಲೆಯನ್ನು ಕೊಟ್ಟಿದ್ದೀವಿ. ನಾವು ಭಾರತೀಯ ಪ್ರಜೆ ಎನ್ನಲು ಗುರುತಿನ ಚೀಟಿಯೂ ಆಗಿದೆ. ಯಾವುದೇ ಕೆಲಸವಿದ್ದರೂ ಆಧಾರ್ ಒಂದಿದ್ದರೆ ಸಾಕು. ಹಾಗಾಗಿ ಇದರ ಮಹತ್ವ ಎಷ್ಟಿದೆ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಆದರೆ ಉಪಯೋಗದ ಜೊತೆಗೆ ದುರುಪಯೋಗದ ಸಾಧ್ಯತೆಯೂ ಹೆಚ್ಚಾಗಿದೆ. ನಿಮ್ಮದೇ ಆಧಾರ್ ಬಳಸಿ ವಂಚನೆಗಳನ್ನೂ ಮಾಡಲಾಗುತ್ತಿದೆ!

ಪ್ರತಿಯೊಬ್ಬರು ಸಹ ಬ್ಯಾಂಕ್​ ಖಾತೆಗೆ ಆಧಾರ್​ ಲಿಂಕ್ ಮಾಡಿರುತ್ತಾರೆ. ಹೀಗಾಗಿ ಆಧಾರ್ ಮಾಹಿತಿ ಸೋರಿಕೆಯಾದರೆ, ಬ್ಯಾಂಕ್​ನಲ್ಲಿಟ್ಟಿರುವ ದುಡ್ಡನ್ನು ಎಗರಿಸೋಕೂ ಪ್ರಯತ್ನಿಸಬಹುದು. ಹಾಗಾಗಿ ನಿಮ್ಮ ಆಧಾರ್ ಕಾರ್ಡ್ ದುರುಪಯೋಗ ಆಗುತ್ತಿದೆಯೇ? ಬೇರೆಯವರು ನಿಮ್ಮ ಆಧಾರ್​ ಬಳಸುತ್ತಿದ್ದಾರಾ ಎಂಬುದರ ಕುರಿತು ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಒಂದೊಮ್ಮೆ ದುರುಪಯೋಗ ಆಗುತ್ತಿದ್ದರೆ, ಹೇಗೆ, ಎಲ್ಲಿ ದೂರು ಸಲ್ಲಿಸಬಹುದು? ಈ ಮುಂದೆ ತಿಳಿಯಿರಿ.

ನೀವು ನಿಮ್ಮ ಆಧಾರ್​ ದುರುಪಯೋಗ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಲು ಯಾವುದೋ ಸೈಬರ್ ಸೆಂಟರ್​ ಅಥವಾ ಯಾವುದೋ ಕಚೇರಿಗೋ ಹೋಗುವಂತಿಲ್ಲ. ನೀವಿರುವ ಜಾಗ ಅಥವಾ ಮನೆಯಲ್ಲೇ ಕೂತು ಪರಿಶೀಲನೆ ನಡೆಸಿ. ಹಾಗಿದ್ದರೆ ಪರಿಶೀಲನೆ ನಡೆಸುವುದು ಹೇಗೆ? ಇಲ್ಲಿದೆ ನೋಡಿ ಸುಲಭವಾದ ವಿವರ.

ಮೊದಲ ಹಂತ: ಗೂಗಲ್​ನಲ್ಲಿ UIDAIನ (https://uidai.gov.in/) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಪುಟ ಆರಂಭದಲ್ಲಿ ನಿಮ್ಮಿಷ್ಟದ ಭಾಷೆ ಆಯ್ಕೆ ಮಾಡಿ.

ಎರಡನೇ ಹಂತ: 'ಮೈ ಆಧಾರ್​' ವಿಭಾಗದಲ್ಲಿರುವ 'ಆಧಾರ್​ ಅಪ್ಡೇಟ್​ ಹಿಸ್ಟರಿ' ಮೇಲೆ ಕ್ಲಿಕ್ ಮಾಡಿ. ಆಗ ಮತ್ತೊಂದು ಟ್ಯಾಬ್ ತೆರೆದುಕೊಳ್ಳುತ್ತದೆ.

ಮೂರನೇ ಹಂತ: ಹೊಸ ಟ್ಯಾಬ್ ಓಪನ್ ಆದ ನಂತರ ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಎಂಟರ್​ ಮಾಡಿ. ನಂತರ ಸೆಂಡ್ ಒಟಿಪಿ ಆಯ್ಕೆ ಆರಿಸಿ.

ನಾಲ್ಕನೇ ಹಂತ: ಆಧಾರ್​ಗೆ ಲಿಂಕ್ ಮಾಡಿರುವ ಮೊಬೈಲ್ ನಂಬರ್​​ ಒಟಿಪಿ ಬರುತ್ತದೆ. ಆ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿ ನಮೂದಿಸಿ ಮತ್ತು ನೀವು ಯಾವಾಗ ಹಿಸ್ಟರಿ ನೋಡಲು ಬಯಸುತ್ತೀರಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

5ನೇ ಹಂತ: ಆಗ ನಿಮ್ಮ ಆಧಾರ್ ಕಾರ್ಡ್‌ ಸಂಪೂರ್ಣ ಇತಿಹಾಸವನ್ನು ಒಂದೇ ಬಾರಿಗೆ ದಾಖಲೆಗಳ ರೂಪದಲ್ಲಿ ನೋಡಬಹುದು. ಇಲ್ಲಿ ದಾಖಲೆಗಳು ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಬಹುದು.

ಈ ಸಂಖ್ಯೆಗೆ ಕರೆ ಮಾಡಿ ತಿಳಿಯಿರಿ

ನಿಮ್ಮ ಆಧಾರ್​ ಕಾರ್ಡ್​ ಅನ್ನು ಮತ್ತೊಬ್ಬರು ಬೇರೊಂದು ಸ್ಥಳದಲ್ಲಿ ಬಳಸಿದ್ದಾರೆ ಎಂದು ನಿಮಗೆ ಅನುಮಾನ ಬಂದರೆ ದೂರು ಕೂಡ ಕೊಡಬಹುದು. ನೀವು ಟೋಲ್ ಫ್ರೀ ಸಂಖ್ಯೆ 1947ಗೆ ಕರೆ ಮಾಡಿ ದೂರು ನೀಡಬಹುದು. ಅಲ್ಲದೆ, UIDAIನ ಅಧಿಕೃತ ವೆಬ್‌ಸೈಟ್‌ನಲ್ಲೂ ದೂರು ಕೊಡಬಹುದು. ಅಥವಾ ಇಮೇಲ್ ಮೂಲಕ ದುರುಪಯೋಗದ ಬಗ್ಗೆ ಮಾಹಿತಿ ನೀಡಬಹುದು. ಆಧಾರ್‌ ಸಮಸ್ಯೆ ಮಾಹಿತಿ ತಿಳಿಯಬೇಕೆಂದರೆ ಸಹಾಯವಾಣಿ ಸಂಖ್ಯೆ 1800-180-1947 ಅಥವಾ 011-1947 ಗೂ ಕರೆ ಮಾಡಿ ತಿಳಿಯಬಹುದು.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ