ಚಿಕನ್ ಅಷ್ಟೇ ಅಲ್ಲ ಮೊಟ್ಟೆಯಿಂದಲೂ ಮಾಡಬಹುದು ಸಖತ್ ಟೇಸ್ಟಿ ಘೀ ರೋಸ್ಟ್‌, ಇದರ ರುಚಿಗೆ ನೀವು ಫಿದಾ ಆಗೋದು ಖಂಡಿತ, ಒಮ್ಮೆ ಮಾಡಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಚಿಕನ್ ಅಷ್ಟೇ ಅಲ್ಲ ಮೊಟ್ಟೆಯಿಂದಲೂ ಮಾಡಬಹುದು ಸಖತ್ ಟೇಸ್ಟಿ ಘೀ ರೋಸ್ಟ್‌, ಇದರ ರುಚಿಗೆ ನೀವು ಫಿದಾ ಆಗೋದು ಖಂಡಿತ, ಒಮ್ಮೆ ಮಾಡಿ ನೋಡಿ

ಚಿಕನ್ ಅಷ್ಟೇ ಅಲ್ಲ ಮೊಟ್ಟೆಯಿಂದಲೂ ಮಾಡಬಹುದು ಸಖತ್ ಟೇಸ್ಟಿ ಘೀ ರೋಸ್ಟ್‌, ಇದರ ರುಚಿಗೆ ನೀವು ಫಿದಾ ಆಗೋದು ಖಂಡಿತ, ಒಮ್ಮೆ ಮಾಡಿ ನೋಡಿ

ಮೊಟ್ಟೆಯಿಂದ ಮಾಡುವ ಖಾದ್ಯಗಳು ಸಖತ್ ಟೇಸ್ಟಿ ಆಗಿರುತ್ತೆ. ಇದು ಆರೋಗ್ಯಕ್ಕೂ ತುಂಬಾನೇ ಉತ್ತಮ. ಪ್ರತಿನಿತ್ಯ ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಎಗ್‌ ಬುರ್ಜಿ, ಎಗ್‌ ಫ್ರೈ, ಎಗ್ ಬಿರಿಯಾನಿ ಅಂತೆಲ್ಲಾ ತಿಂದು ಬೇಸರ ಆಗಿದ್ರೆ ಒಮ್ಮೆ ಎಗ್‌ ಘೀ ರೋಸ್ಟ್ ಟ್ರೈ ಮಾಡಿ. ಈ ರೆಸಿಪಿ ನಿಮಗೆ ಇಷ್ಟವಾಗೋದು ಖಂಡಿತ.

ಎಗ್‌ ಘೀ ರೋಸ್ಟ್‌
ಎಗ್‌ ಘೀ ರೋಸ್ಟ್‌

ಪ್ರತಿದಿನ ಮೊಟ್ಟೆ ತಿನ್ನುವುದರಿಂದ ಅಪೌಷ್ಟಿಕತೆಯಿಂದ ದೂರ ಉಳಿಯಬಹುದು. ಬೇಯಿಸಿದ ಮೊಟ್ಟೆ ಸಖತ್ ಟೇಸ್ಟಿ ಆಗಿರುತ್ತೆ. ಇದರಿಂದ ಕೆಲವು ಖಾದ್ಯಗಳನ್ನೂ ತಯಾರಿಸಬಹುದು. ಸಾಮಾನ್ಯವಾಗಿ ಬೇಯಿಸಿದ ಮೊಟ್ಟೆಯಿಂದ ಎಗ್‌ ಫ್ರೈ ಮಾಡ್ತಾರೆ. ಆದರೆ ಮೊಟ್ಟೆಯಿಂದ ಸಖತ್ ಟೇಸ್ಟಿ ಆಗಿರೋ ಘೀ ರೋಸ್ಟ್‌ ಕೂಡ ಮಾಡಬಹುದು. ಇದೇನಪ್ಪಾ ಚಿಕನ್ ಘೀ ರೋಸ್ಟ್ ಗೊತ್ತು, ಏನಿದು ಎಗ್‌ ಘೀ ರೋಸ್ಟ್ ಅಂತ ಯೋಚಿಸ್ತಾ ಇದೀರಾ, ಖಂಡಿತ ಈ ರೆಸಿಪಿ ನೀವೊಮ್ಮೆ ಟ್ರೈ ಮಾಡಿ.

ಮನೆಗೆ ನೆಂಟರು ಬಂದಾಗ ಅಥವಾ ಭಾನುವಾರದ ಹೊತ್ತು ಹೊಸ ರುಚಿ ಟ್ರೈ ಮಾಡಬೇಕು ಅಂತಿದ್ರೆ ನೀವು ಇದನ್ನು ಒಮ್ಮೆ ಮಾಡಬಹುದು. ಒಮ್ಮೆ ತಿಂದರೆ ಇದರ ರುಚಿಗೆ ನಿಮಗೆ ಮತ್ತೆ ಮತ್ತೆ ಬೇಕು ಅನ್ನಿಸೋದು ಸುಳ್ಳಲ್ಲ.

ಎಗ್ ಘೀ ರೋಸ್ಟ್ ರೆಸಿಪಿಗೆ ಬೇಕಾದ ಪದಾರ್ಥಗಳು

ಮೊಟ್ಟೆ - ನಾಲ್ಕು, ‌ತುಪ್ಪ - ಐದು ಚಮಚ, ಈರುಳ್ಳಿ - ಎರಡು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ, ಕೊತ್ತಂಬರಿ - ಒಂದು ಚಮಚ, ಜೀರಿಗೆ - ಒಂದು ಚಮಚ, ಮೆಣಸು - ಅರ್ಧ ಚಮಚ, ಲವಂಗ - ಆರು, ದಾಲ್ಚಿನ್ನಿ - ಸಣ್ಣ ತುಂಡು, ಕರಿಮೆಣಸು - ಹತ್ತು, ಟೊಮೆಟೊ - 2, ಕರಿಬೇವು - ಐದಾರು ಎಸಳು, ಅರಿಶಿನ - ಅರ್ಧ ಚಮಚ, ಉಪ್ಪು - ರುಚಿಗೆ

ಎಗ್ ಘೀ ರೋಸ್ಟ್ ಮಾಡುವ ವಿಧಾನ

ಮೊದಲಿಗೆ ಮೊಟ್ಟೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಬದಿಗೆ ಇರಿಸಿಕೊಳ್ಳಿ. ಒಲೆಯ ಮೇಲೆ ಪ್ಯಾನ್ ಇಟ್ಟು ಕೊತ್ತಂಬರಿ ಸೊಪ್ಪು, ಮೆಣಸು, ಲವಂಗ, ದಾಲ್ಚಿನ್ನಿ, ಜೀರಿಗೆ ಮತ್ತು ಕರಿಮೆಣಸನ್ನು ಫ್ರೈ ಮಾಡಿ. ಅವುಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ ಪಕ್ಕಕ್ಕೆ ಇಡಿ. ಈಗ ಬಾಣಲಿಯನ್ನು ಒಲೆಯ ಮೇಲೆ ಇಟ್ಟು ತುಪ್ಪ ಹಾಕಿ. ತುಪ್ಪ ಬಿಸಿಯಾದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಈರುಳ್ಳಿ ಬಣ್ಣ ಬದಲಾಗುವವರೆಗೂ ಹುರಿದುಕೊಂಡು ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಜೊತೆಗೆ ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಎಲ್ಲವನ್ನೂ ಮಿಶ್ರಣ ಮಾಡಿ ನಂತರ ಪುಡಿ ಮಾಡಿಟ್ಟುಕೊಂಡ ಮಸಾಲೆ ಪುಡಿಗಳನ್ನು ಸೇರಿಸಿ. ಈ ಎಲ್ಲವನ್ನೂ ಕಡಿಮೆ ಉರಿಯಲ್ಲಿ ಮಿಶ್ರಣ ಮಾಡುತ್ತಿರಿ. ಉರಿ ಜಾಸ್ತಿ ಇಟ್ಟರೆ ಮಸಾಲೆ ಹಾಳಾಗುತ್ತೆ ನೆನಪಿರಲಿ. ಈಗ ಈ ಮಿಶ್ರಣಕ್ಕೆ ಕಾಲು ಕಪ್ ನೀರು ಸೇರಿಸಿ. ಅದಕ್ಕೆ ಬೇಯಿಸಿಟ್ಟುಕೊಂಡ ಮೊಟ್ಟೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಕಡಿಮೆ ಉರಿಯಲ್ಲಿ ಕಾಲು ಗಂಟೆ ಬಿಡಿ. ಈಗ ನಿಮ್ಮ ಮುಂದೆ ಸಖತ್ ಟೇಸ್ಟಿ ಆಗಿರೋ ಎಗ್ ಘೀ ರೋಸ್ಟ್ ತಿನ್ನಲು ಸಿದ್ಧ.

ಈ ಥರ ಎಗ್‌ ಘೀ ರೋಸ್ಟ್ ಮಾಡಿಕೊಟ್ಟರೆ ಮೊಟ್ಟೆ ಬೇಡ ಎನ್ನುವ ಮಕ್ಕಳು ಕೂಡ ಬೇಕು ಬೇಕು ಎಂದು ಕೇಳಿ ತಿನ್ನುತ್ತಾರೆ. ಆದರೆ ಮಕ್ಕಳಿಗೆ ಕೊಡುವಾಗ ಖಾರ ಕಡಿಮೆ ಹಾಕೋದನ್ನು ಮರಿಬೇಡಿ. ಬಿಸಿ ಬಿಸಿ ಅನ್ನ, ಚಪಾತಿ, ರೋಟಿಗೆ ಇದು ಮಸ್ತ್ ಕಾಂಬಿನೇಷನ್ ಎನ್ನುತ್ತದೆ. ದೋಸೆ ಜೊತೆಗೂ ಇದನ್ನು ನೆಂಜಿಕೊಂಡು ತಿನ್ನಬಹುದು.

Whats_app_banner