Grape pickle recipe: ದ್ರಾಕ್ಷಿ ಉಪ್ಪಿನಕಾಯಿ ಸವಿದಿದ್ದೀರಾ? ಅನ್ನದ ಜತೆ ಇದು ಮಸ್ತ್ ಕಾಂಬಿನೇಷನ್.. ರೆಸಿಪಿ ಮಾಡುವ ಸರಳ ವಿಧಾನ ಇಲ್ಲಿದೆ.
Mar 19, 2023 10:39 AM IST
ದ್ರಾಕ್ಷಿ ಉಪ್ಪಿನಕಾಯಿ ಸವಿದಿದ್ದೀರಾ? ಅನ್ನದ ಜತೆ ಬಾಯಿ ಚಪ್ಪರಿಸಿ ತಿಂತೀರಾ.. ಈ ಸರಳ ರೆಸಿಪಿಯನ್ನ ಒಮ್ಮೆ ಟ್ರೈ ಮಾಡಿ..
- ಬಿಸಿ ಅನ್ನಕ್ಕೆ ಚೂರು ತುಪ್ಪ ಹಾಕಿ, ದ್ರಾಕ್ಷಿ ಹಣ್ಣಿನ ಉಪ್ಪಿನಕಾಯಿ ನಂಜಿಕೊಂಡು ತಿಂದರೆ, ಅದರ ರುಚಿಯೇ ಬೇರೆ ಬಿಡಿ.. ಮತ್ತಿನ್ನೇಕೆ ತಡ, ಈಗಲೇ ಈ ಸರಳ ರೆಸಿಪಿ ನಿಮ್ಮ ಮನೆಯಲ್ಲಿಯೇ ಟ್ರೈ ಮಾಡಿ..
instant Grape pickle recipe: ಉಪ್ಪಿನ ಕಾಯಿಗಳಲ್ಲಿ ಹಲವು ವಿಧಗಳಿವೆ. ಯಾವುದೇ ಪದಾರ್ಥ ಹಿಡಿದರೂ ಅದರಿಂದ ಉಪ್ಪಿನಕಾಯಿ ಮಾಡಬಹುದು. ಆದರೆ, ಥಟ್ ಅಂತ ಹೇಳುವುದಾದರೆ ಎಲ್ರಿಗೂ ಮಾವಿನ ಕಾಯಿ ಮತ್ತು ನಿಂಬೆ ಕಾಯಿ ನೆನಪಿಗೆ ಬರುತ್ತದೆ. ಈರುಳ್ಳಿ ಉಪ್ಪಿನಕಾಯಿ, ಟೊಮೆಟೊ ಹಣ್ಣಿನಿಂದಲೂ ಉಪ್ಪಿನ ಕಾಯಿ ಮಾಡಬಹುದೆಂಬುದನ್ನು ಇಲ್ಲಿ ಓದಿದ್ದೀರಾ.. ಇದೀಗ ಕಪ್ಪು ದ್ರಾಕ್ಷಿ ಹಣ್ಣಿನಿಂದ ಕಾರ ಎನಿಸುವ ಉಪ್ಪಿನಕಾಯಿ ಮಾಡಬಹುದು! ಹೊಟ್ಟೆಗೂ ಹಿತ, ಬಾಯಿಗೂ ರುಚಿ. ಕಡಿಮೆ ಸಮಯದಲ್ಲಿ, ಕಡಿಮೆ ಪದಾರ್ಥಗಳನ್ನು ಬಳಸಿಕೊಂಡು, ಫಟಾಫಟ್ ಅಂತ ಈ ರೆಸಿಪಿ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ...
ದ್ರಾಕ್ಷಿ ಉಪ್ಪಿನಕಾಯಿಗೆ ಬೇಕಿರುವ ಸಾಮಾಗ್ರಿ..
1 ಕಪ್ ಕಪ್ಪು ದ್ರಾಕ್ಷಿ
1 ಕಪ್ ಅಡುಗೆ ಎಣ್ಣೆ
ಅರ್ಧ ಕಪ್ ಸಾಸಿವೆ ಪುಡಿ
1/4 ಕಪ್ ಮೆಂತ್ಯೆ ಕಾಳಿನ ಪುಡಿ
1 ಟೇಬಲ್ ಸ್ಪೂನ್ ಅರಿಶಿನ
1 ಸಣ್ಣ ಸ್ಪೂನ್ ಇಂಗು
ಒಂದೂ ವರೆ ಚಮಚ ಕೆಂಪು ಖಾರದ ಪುಡಿ
5 ಎಸಳು ಬೆಳ್ಳುಳ್ಳಿ, ಮತ್ತು ಒಂದು ಇಂಚಿನ ಶುಂಠಿ
ಒಂದೂವರೆ ಚಮಚ ಬೆಲ್ಲದ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
1 ಟೇಬಲ್ ಸ್ಪೂನ್ ವಿನೇಗರ್
ದ್ರಾಕ್ಷಿ ಉಪ್ಪಿನಕಾಯಿ ಮಾಡುವ ವಿಧಾನ
- ಮೊದಲಿಗೆ ಕಪ್ಪು ದ್ರಾಕ್ಷಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.
- ಅದಾದ ಬಳಿಕ ವೃತ್ತಾಕಾರದ ಹೋಳುಗಳಾಗಿ ಕತ್ತರಿಸಿಕೊಳ್ಳಿ
- ಗ್ಯಾಸ್ ಆನ್ ಮಾಡಿ ಒಂದು ಪ್ಯಾನ್ ಇಟ್ಟು ಅದಕ್ಕೆ ಒಂದು ಕಪ್ ಎಣ್ಣೆ ಹಾಕಿ
- ಎಣ್ಣೆ ಕಾದ ಬಳಿಕ ಸಾಸಿವೆ ಮತ್ತು ಮೆಂತ್ಯೆ ಪುಡಿಯನ್ನು ಎಣ್ಣೆಗೆ ಹಾಕಿ
- ಅದಾದ ಬಳಿಕ ಚೂರು ಹಿಂಗು ಸೇರಿಸಿ ಚೆನ್ನಾಗಿ ಬಾಡಿಸಿ.
- 1 ಚಮಚ ಅರಿಶಿನ ಪುಡಿಯನ್ನೂ ಬೆರೆಸಿ
- ಖಾರದ ಪುಡಿಯನ್ನು ಸೇರಿಸಿ ಚೆನ್ನಾಗಿ ಬಾಡಿಸಿ ಮಿಶ್ರಣ ಮಾಡಿ..
- ಈ ಮಿಶ್ರಣಕ್ಕೆ ತರಿತರಿಯದ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ.
- ಬಳಿಕ ಬೆಲ್ಲದ ಪುಡಿಯನ್ನು ಸೇರಿಸಿ ಕಲಸಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ
- ಸಣ್ಣ ಉರಿಯಲ್ಲಿ ಚೂರು ಕುದಿ ಬರುತ್ತಿದ್ದಂತೆ, ಗ್ಯಾಸ್ ಆಫ್ ಮಾಡಿ
- ಬಳಿಕ ದ್ರಾಕ್ಷಿ ಹೋಳುಗಳಿದ್ದ ಬೌಲ್‌ಗೆ ಈ ಮಿಶ್ರಣವನ್ನು ಸುರಿಯಿರಿ.
- ಬಳಿಕ ವಿನೇಗರ್ ಹಾಕಿ ಎಲ್ಲವನ್ನೂ ಚನ್ನಾಗಿ ಮಿಶ್ರಣ ಮಾಡಿ
- ಇದಾದ ಬಳಿಕ ಈ ಮಿಶ್ರಣವನ್ನು ಗಾಜಿನ ಬಾಟಲಿಗೆ ಹಾಕಿ ಸೂರ್ಯನ ಬಿಸಲು ಬರುವ ಕಡೆ ಇರಿಸಿ.
- ಎರಡು ದಿನ ಹಾಗೆ ಇಟ್ಟ ಬಳಿಕ ದ್ರಾಕ್ಷಿ ಉಪ್ಪಿನ ಕಾಯಿ ಸವಿಯಲು ರೆಡಿ..
- ನೀವಿದನ್ನು ಬಿಸಿ ಬಿಸಿ ಅನ್ನದ ಜತೆಗೆ ತುಪ್ಪ ಹಾಕಿ ಬ್ಯಾಟಿಂಗ್ ಮಾಡಬಹುದು.. ರುಚಿಯ ಮಜವೇ ಬೇರೆ...
ವಿಭಾಗ