ಬೆಂಗಳೂರಿನಿಂದ ಶಬರಿಮಲೆಗೆ ರೈಲಿನಲ್ಲಿ ಹೋಗುವುದು ಹೇಗೆ? ಸಮೀಪದ ರೈಲು ನಿಲ್ದಾಣ, ಟಿಕೆಟ್ ದರ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
Oct 22, 2024 10:39 AM IST
ಬೆಂಗಳೂರಿನಿಂದ ಶಬರಿಮಲೆಗೆ ಹೋಗಲು ರೈಲುಗಳು ಇವೆಯಾ? ಉತ್ತಮ ರೈಲು ಮಾರ್ಗ ಯಾವುದು, ಟಿಕೆಟ್ ದರ ಸೇರಿದಂತೆ ಅಗತ್ಯ ಮಾಹಿತಿ ತಿಳಿಯಿರಿ.
- ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆ ಅಯ್ಯಪ್ಪನ ಭಕ್ತರು ಮಾಲೆ ಧರಿಸಿ ಶಬರಿಮಲೆಗೆ ಹೋಗುತ್ತಾರೆ. ಯಾವ ಮಾರ್ಗದಲ್ಲಿ ಹೋದರೆ ಒಳ್ಳೆಯದೆಂದು ಯೋಚಿಸುತ್ತಾರೆ. ಹೀಗಾಗಿ ಬೆಂಗಳೂರಿನಿಂದ ಶಬರಿಮಲೆಗೆ ನೇರ ರೈಲು ಸಂಪರ್ಕ ಇದೆಯೇ? ಎಷ್ಟು ರೈಲುಗಳಿವೆ, ರಿಸರ್ವೇಶನ್ ಶುರುವಾಗಿದೆಯೇ? ಬೆಸ್ಟ್ ಟ್ರೇನ್ ರೂಟ್ ಯಾವುದು? ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಲಕ್ಷಾಂತರ ಮಂದಿ ಅಯ್ಯಪ್ಪನ ಭಕ್ತರು ಸಾಮಾನ್ಯವಾಗಿ ಕಾರ್ತಿಕ ಮಾಸದಲ್ಲಿ ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಪಡೆಯಲು ಶಬರಿಮಲೆಗೆ ಹೋಗುತ್ತಾರೆ. ಈ ವೇಳೆ ಯಾವ ಮಾರ್ಗದಲ್ಲಿ ಹೋದರೆ ಬೇಗ ಹೋಗಬಹುದು, ನೇರ ರೈಲು ವ್ಯವಸ್ಥೆ ಇದೆಯಾ, ಸುರಕ್ಷಿತ ಮಾರ್ಗ ಹೀಗೆ ಹಲವು ಲೆಕ್ಕಾಚಾರಗಳನ್ನು ಹಾಕಿಕೊಳ್ಳಲುತ್ತಾರೆ. ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆಯಲು ಪ್ಲಾನ್ ಮಾಡುವ ಭಕ್ತರಿಗಾಗಿ ರೈಲು ಮಾರ್ಗದ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರಿನಿಂದ ಶಬರಿಮಲೆಗೆ ಹೋಗಲು ನೇರ ರೈಲು ವ್ಯವಸ್ಥೆ ಇಲ್ಲ. ಆದರೆ ಶಬರಿಮಲೆಗೆ ಅತಿ ಸಮೀಪದ ಚೆಂಗನೂರು ರೈಲ್ವೆ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಬಸ್ ಮೂಲಕ ಶಬರಿಮಲೆಗೆ ಹೋಗಬಹುದು. ರೈಲಿನಲ್ಲಿ ಬೆಂಗಳೂರಿನಿಂದ ಚೆಂಗನೂರು ರೈಲು ಮಾರ್ಗದ ಅಂತರ 732 ಕಿಲೋ ಮೀಟರ್ ಇದ್ದು, 14 ಗಂಟೆಗಳ ಪ್ರಯಾಣ ಇರುತ್ತದೆ. ಚೆಂಗನೂರಿನಿಂದ ಪಂಪಗೆ ಬಸ್‌ನಲ್ಲಿ 2 ಗಂಟೆಗಳ ಪ್ರಯಾಣ ಇರುತ್ತೆ. ಪಂಪದಿಂದಲೇ ಶಬರಿಮಲೆಗೆ ಕಾಲ್ನಡಿಗೆ ಮೂಲಕ ಹೋಗಬೇಕಾಗುತ್ತದೆ.
ಬೆಂಗಳೂರು-ಕನ್ಯಾಕುಮಾರಿ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಬೆಂಗಳೂರಿನಿಂದ ಚೆಂಗನೂರು ಮಾರ್ಗವಾಗಿ ನಿತ್ಯ ಹಲವಾರು ರೈಲುಗಳು ಪ್ರಯಾಣಿಸುತ್ತವೆ. ಆದರೆ ಕೆಲವೊಂದು ರೈಲುಗಳು ಚೆಂಗನೂರು ರೈಲ್ವೆ ನಿಲ್ದಾಣದಲ್ಲಿ ಸ್ಟಾಪ್ ಕೊಡುವುದಿಲ್ಲ. ಇಂಥ ಸಂದರ್ಭದಲ್ಲಿ ಕೊಟ್ಟಾಯಂಗೆ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಕೊಟ್ಟಾಯಂನಲ್ಲಿ ಎಲ್ಲಾ ರೈಲುಗಳ ನಿಲುಗಡೆ ಇರುತ್ತದೆ. ಕೊಟ್ಟಾಯಂನಿಂದ ಪಂಪಗೆ 95 ಕಿಲೋ ಮೀಟರ್ ಅಂತರವಿದ್ದು ಬಸ್‌ನಲ್ಲಿ 2 ಗಂಟೆ 15 ನಿಮಿಷ ಸಮಯ ತೆಗೆದುಕೊಳ್ಳುತ್ತದೆ.
ಕೆಲವೊಂದು ರೈಲುಗಳು ಕೊಟ್ಟಾಯಂ-ಚೆಂಗನೂರು ಮಾರ್ಗದಲ್ಲಿ ಸಂಚರಿಸುವುದಿಲ್ಲ. ಕೆಲವು ರೈಲುಗಳು ಅಲಪುಜ ಮಾರ್ಗವಾಗಿ ಸಂಚರಿಸುತ್ತವೆ. ಬೆಂಗಳೂರಿನಿಂದ ಎರ್ನಾಕುಲಂಗೆ ಸಾಕಷ್ಟು ರೈಲುಗಳ ವ್ಯವಸ್ಥೆ ಇದೆ. ಹೀಗಾಗಿ ಬೆಂಗಳೂರಿನಿಂದ ಎರ್ನಾಕುಲಂ ತಲುಪಿದರೆ, ಈ ಜಂಕ್ಷನ್‌ನಿಂದ ಚೆಂಗನ್ನೂರಿಗೆ ಸಾಕಷ್ಟು ರೈಲುಗಳ ಆಯ್ಕೆ ಇರುತ್ತದೆ. ಬೆಂಗಳೂರಿನಿಂದ ಚೆಂಗನೂರು ಮಾರ್ಗವಾಗಿ ಸಾಗುವ ರೈಲುಗಳು, ಇತರೆ ನಗರಗಳಿಂದ ಬಂದು ಬೆಂಗಳೂರು ಮಾರ್ಗವಾಗಿ ಚೆಂಗನೂರು ಮಾರ್ಗವಾಗಿ ಸಾಗುವ ರೈಲುಗಳು ಸೇರಿದಂತೆ ಒಟ್ಟು 40 ರೈಲುಗಳ ವ್ಯವಸ್ಥೆ ಇದೆ. ಈಗಾಗಲೇ ಬುಕ್ಕಿಂಗ್ ಕೂಡ ಶುರುವಾಗಿದ್ದು, ಬೆಂಗಳೂರಿನಿಂದ ಚೆಂಗನೂರಿಗೆ 1 ವಿಶೇಷ ರೈಲಿನ ವ್ಯವಸ್ಥೆಯನ್ನು ಮಾಡಲಾಗಿದೆ.
ಬೆಸ್ಟ್ ಟ್ರೇನ್ ರೂಟ್ ಯಾವುದು?
ಬೆಂಗಳೂರಿನಿಂದ ಶಬರಿಮಲೆಗೆ ಚೆಂಗನೂರು ಮಾರ್ಗವೇ ಉತ್ತಮ ಆಯ್ಕೆಯಾಗಿದೆ. ಈ ಮಾರ್ಗದ ಪ್ರಮುಖ ರೈಲು ನಿಲ್ದಾಣಗಳೆಂದರೆ ಬೆಂಗಳೂರಿನಿಂದ ಸೇಲಂ, ಇರೋಡ್, ಕೊಯಂಬತ್ತೂರು, ಪಾಲಕಡ್, ತ್ರಿಸೂರ್, ಎರ್ನಾಕುಲಂ ಜಂಕ್ಷನ್, ಕೊಟ್ಟಾಂ ಹಾಗೂ ಚೆಂಗನೂರು. ಬೆಂಗಳೂರಿನಿಂದ ಚೆಂಗನೂರಿಗೆ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಟಿಕೆಟ್ ದರ 770 ರೂಪಾಯಿಯಿಂದ 1515 ರೂಪಾಯಿವರೆಗೆ ಇದೆ. ಈ ದರಗಳು ರೈಲು ಮತ್ತು ಕೋಚ್‌ಗಳ ಆಧಾರ ಮೇಲೆ ನಿರ್ಧಾರವಾಗಿರುತ್ತದೆ.