logo
ಕನ್ನಡ ಸುದ್ದಿ  /  ಜೀವನಶೈಲಿ  /  Rekha Aduge Youtuber Interview: 1200 ರೂ. ಸಂಬಳಕ್ಕೆ ಗಾರ್ಮೆಂಟ್ಸ್‌ಗೆ ಹೋಗ್ತಿದ್ದ ಹುಡುಗಿ ಈಗ ಹೆಸರಾಂತ ಯೂಟ್ಯೂಬರ್‌..ಕಿರು ಸಂದರ್ಶನ

Rekha Aduge YouTuber Interview: 1200 ರೂ. ಸಂಬಳಕ್ಕೆ ಗಾರ್ಮೆಂಟ್ಸ್‌ಗೆ ಹೋಗ್ತಿದ್ದ ಹುಡುಗಿ ಈಗ ಹೆಸರಾಂತ ಯೂಟ್ಯೂಬರ್‌..ಕಿರು ಸಂದರ್ಶನ

Rakshitha Sowmya HT Kannada

Sep 22, 2022 12:41 PM IST

google News

ಯೂಟ್ಯೂಬರ್‌ ರೇಖಾ ಜೊತೆಗೆ ಸಂದರ್ಶನ

• ಎಸ್‌ಎಸ್‌ಎಲ್‌ಸಿಯಲ್ಲಿ 2 ಬಾರಿ ಫೇಲ್‌ ಆದೆ, ನಂತರ ಮತ್ತೆ ಓದಬೇಕು ಎನಿಸಲಿಲ್ಲ. 7ನೇ ಕ್ಲಾಸ್‌ನಲ್ಲಿದ್ದಾಗಲೇ ಅಡುಗೆ ಕಲಿತೆ. ಗ್ಯಾಸ್‌ ಇರಲಿಲ್ಲ, ಒಲೆ, ಸೀಮೆ ಎಣ್ಣೆ ಸ್ಟೋವ್‌ನಲ್ಲಿ ಅಡುಗೆ ಮಾಡುತ್ತಿದ್ದೆ. ಅಮ್ಮನಿಗೆ ಸಹಾಯ ಮಾಡುತ್ತಾ 1 ವರ್ಷ ಮನೆಯಲ್ಲೇ ಇದ್ದೆ.
ಯೂಟ್ಯೂಬರ್‌ ರೇಖಾ ಜೊತೆಗೆ ಸಂದರ್ಶನ
ಯೂಟ್ಯೂಬರ್‌ ರೇಖಾ ಜೊತೆಗೆ ಸಂದರ್ಶನ

ಈಗಂತೂ ಯಾರು ನೋಡಿದ್ರೂ ಯೂಟ್ಯೂಬ್‌ ಚಾನೆಲ್‌ ಹೊಂದಿರುತ್ತಾರೆ. ಯೂಟ್ಯೂಬ್‌ ಆರಂಭಿಸೋದು ಸುಲಭದ ಕೆಲಸ. ಆದರೆ ಸಬ್ಸ್‌ಕ್ರೈಬರ್‌ಗಳನ್ನು ಗಳಿಸುವುದು, ಅಪ್‌ಲೋಡ್‌ ಮಾಡುವ ಕಂಟೆಂಟ್‌ಗಳಿಗೆ ಜನರ ಮೆಚ್ಚುಗೆ ಪಡೆಯುವುದು ಬಹಳ ಕಷ್ಟದ ಕೆಲಸ. ಅಂತದ್ದರಲ್ಲಿ 21 ಲಕ್ಷ ಸಬ್ಸ್‌ಕ್ರೈಬರ್‌ ಪಡೆಯುವುನ್ನು ಸಾಧನೆ ಅಂತಾನೇ ಹೇಳಬಹುದು.

ಇವರ ಹೆಸರು ರೇಖಾ, ಸಹೋದರ ಉದಯ್‌ ಜೊತೆ 5 ವರ್ಷಗಳ ಹಿಂದೆ ಇವರು ಆರಂಭಿಸಿದ‌ ಕುಕಿಂಗ್‌ ಯೂಟ್ಯೂಬ್‌ ಚಾನೆಲ್‌ಗೆ ಈಗ 21 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ಈ ಕುಕಿಂಗ್‌ ಯೂಟ್ಯೂಬ್‌ ಚಾನೆಲ್‌ ಮೊದಲ ಸ್ಥಾನದಲ್ಲಿದೆ. 'ರೇಖಾ ಅಡುಗೆ' ಯೂಟ್ಯೂಬ್‌ ಚಾನೆಲ್‌ನ ರೇಖಾ, ತಾವು ಯೂಟ್ಯೂಬ್‌ ಆರಂಭಿಸಿದ್ದು ಹೇಗೆ..? ಅದಕ್ಕೂ ಮೊದಲು ಅವರು ಯಾವ ಕೆಲಸ ಮಾಡುತ್ತಿದ್ದರು..? ಯೂಟ್ಯೂಬ್‌ನಿಂದ ಅವರ ಜೀವನ ಹೇಗೆ ಬದಲಾಯ್ತು..? ಎಲ್ಲಾ ವಿಚಾರವನ್ನು ಹಿಂದೂಸ್ತಾನ್‌ ಟೈಮ್ಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

ಯೂಟ್ಯೂಬರ್‌ ರೇಖಾ

ನೀವು ಹುಟ್ಟಿ ಬೆಳೆದದ್ದು ಎಲ್ಲಿ..?

ನಾನು ಹುಟ್ಟಿದ್ದು ಬೆಂಗಳೂರಿನ ಬೈಯ್ಯಪ್ಪನ ಹಳ್ಳಿ. ಈಗ ಹೆಬ್ಬಗೋಡಿಯ ತಿರುಪಾಳ್ಯದಲ್ಲಿ ನೆಲೆಸಿದ್ದೇವೆ. ತಂದೆ, ಗಾರೆ ಕೆಲಸ ಮಾಡುತ್ತಾರೆ, ತಾಯಿ ಗೃಹಿಣಿ. ತಂಗಿ, ತಮ್ಮ ಇದ್ದಾರೆ. ನನಗೆ ಓದುವುದರಲ್ಲಿ ಆಸಕ್ತಿ ಇರಲಿಲ್ಲ. ಎಸ್‌ಎಸ್‌ಎಲ್‌ಸಿಯಲ್ಲಿ 2 ಬಾರಿ ಫೇಲ್‌ ಆದೆ, ನಂತರ ಮತ್ತೆ ಓದಬೇಕು ಎನಿಸಲಿಲ್ಲ. 7ನೇ ಕ್ಲಾಸ್‌ನಲ್ಲಿದ್ದಾಗಲೇ ಅಡುಗೆ ಕಲಿತೆ. ಗ್ಯಾಸ್‌ ಇರಲಿಲ್ಲ, ಒಲೆ, ಸೀಮೆ ಎಣ್ಣೆ ಸ್ಟೋವ್‌ನಲ್ಲಿ ಅಡುಗೆ ಮಾಡುತ್ತಿದ್ದೆ. ಅಮ್ಮನಿಗೆ ಸಹಾಯ ಮಾಡುತ್ತಾ 1 ವರ್ಷ ಮನೆಯಲ್ಲೇ ಇದ್ದೆ.

ಎಲ್ಲಿಯೂ ಕೆಲಸಕ್ಕೆ ಸೇರಲಿಲ್ವಾ..?

ಸುಮ್ಮನೆ ಮನೆಯಲ್ಲಿ ಕೂತು ಕಾಲ ಕಳೆಯುವ ಬದಲಿಗೆ ಏನಾದರೂ ಕೆಲಸ ಮಾಡೋಣ ಎಂದು ನಿರ್ಧರಿಸಿದೆ. ನನಗೆ ಟೈಲರಿಂಗ್‌ನಲ್ಲಿ ಕೂಡಾ ಆಸಕ್ತಿ ಇತ್ತು. ಒಂದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಸಿಕ್ತು. ಆರಂಭದಲ್ಲಿ ತಿಂಗಳಿಗೆ 1200 ರೂಪಾಯಿ ಸಂಬಳ ಕೊಡುತ್ತಿದ್ದರು. ಕೆಲಸ ಬಹಳ ಕಷ್ಟ ಇತ್ತು. ಸ್ವಲ್ಪ ತಪ್ಪು ಮಾಡಿದರೂ ಎಲ್ಲರೆದುರು ಬೈಯ್ಯುತ್ತಿದ್ದರು, ಆಗ ನನಗೆ ಬಹಳ ಬೇಸರವಾಗುತ್ತಿತ್ತು. 4 ವರ್ಷಗಳು ಅಲ್ಲಿ ಕೆಲಸ ಮಾಡಿ ನಂತರ ಬೇರೆ ಕಂಪನಿಗೆ ಸೇರಿದೆ. ಅಲ್ಲಿ 4000 ಸಂಬಳ ಫಿಕ್ಸ್‌ ಮಾಡಿದರು.

ಹೊಸ ಕಂಪನಿ ನನಗೆ ಬಹಳ ಇಷ್ಟವಾಯ್ತು. ಅಲ್ಲಿ ನನಗೆ ಬಹಳ ಪ್ರೋತ್ಸಾಹ ನೀಡುತ್ತಿದ್ದರು. ಮಹಿಳಾ ದಿನಾಚರಣೆ, ದಸರಾ ಸೇರಿದಂತೆ ಹಬ್ಬ ಹರಿದಿನ ಹಾಗೂ ವಿಶೇಷ ದಿನಗಳಲ್ಲಿ ಕೆಲವೊಂದು ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ರಂಗೋಲಿ, ಕುಕಿಂಗ್‌, ಮೆಹಂದಿ, ಆಟ ಎಲ್ಲದಕ್ಕೂ ನಾನು ಭಾಗವಹಿಸಿ ಬಹುಮಾನ ಪಡೆಯುತ್ತಿದ್ದೆ. ಇದಾದ ನಂತರ ಕಂಪನಿಯ ಇತರ ಉದ್ಯೋಗಿಗಳು ನನ್ನನ್ನು ಗುರುತಿಸಿ ಮಾತನಾಡುತ್ತಿದ್ದರು. ಇದರಿಂದ ನನಗೆ ಬಹಳ ಸಂತೋಷವಾಗುತ್ತಿತ್ತು.

ರೇಖಾ ಸಹೋದರ ಉದಯ್

ಯೂಟ್ಯೂಬ್‌ ಆರಂಭಿಸಿದ್ದು ಏಕೆ..?

ಎರಡನೇ ಕಂಪನಿಯಲ್ಲಿ 5 ವರ್ಷಗಳು ಕೆಲಸ ಮಾಡಿದೆ. ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಕಾಡತೊಡಗಿತು. ಚಿಕಿತ್ಸೆ ಪಡೆಯಲು ರಜೆ ಹಾಕಿದೆ. ನನ್ನ ಪರಿಸ್ಥಿತಿ ನೋಡಿ ಕಂಪನಿಯ ಸಿಬ್ಬಂದಿಗಳು ಕೂಡಾ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖವಾಗಿ ಬನ್ನಿ ಎಂದು ಬೆಂಬಲ ನೀಡಿದರು. ಆ ಸಮಯದಲ್ಲಿ ನನ್ನ ತಮ್ಮ ಉದಯ್‌ಗೆ ವಿದ್ಯಾಭ್ಯಾಸ ಕೂಡಾ ಮುಗಿದಿತ್ತು. ಮನೆಯಲ್ಲಿ ಕೆಲವೊಂದು ಸಮಸ್ಯೆ ಶುರುವಾಯ್ತು. ಆದ್ದರಿಂದ ಆತ ಇನ್ಫೋಸಿಸ್‌ನಲ್ಲಿ ಕೆಲಸಕ್ಕೆ ಸೇರಿದ. ನಾನು ಸಂಬಳದಲ್ಲಿ ಉಳಿತಾಯ ಮಾಡಿದ ಹಣ ಸಂಪೂರ್ಣ ಚಿಕಿತ್ಸೆಗೆ ಖರ್ಚಾಯ್ತು.

ನಾನು ಕಂಪನಿಯಲ್ಲಿ ಕುಕಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾಗ ಅಲ್ಲಿ ಉಳಿದ ಸಾಮಗ್ರಿಗಳನ್ನು ಮನೆಗೆ ತರುತ್ತಿದ್ದೆ. ನನ್ನ ತಮ್ಮನಿಗೆ ಯೂಟ್ಯೂಬ್‌ ಚಾನೆಲ್‌ ಮಾಡಬೇಕೆಂದು ಮೊದಲಿನಿಂದಲೂ ಆಸೆ ಇತ್ತು. ಸುಮ್ಮನೆ 2 ರೆಸಿಪಿ ವಿಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದೆವು. ಅದರೆ ಅದಕ್ಕೆ ನೆಗೆಟಿವ್‌ ಕಮೆಂಟ್‌ ಬಂದ ಕಾರಣ ಡಿಲೀಟ್‌ ಮಾಡಬೇಕಾಯ್ತು. ಆಗ ಕನ್ನಡದಲ್ಲಿ ಹೆಚ್ಚು ಕುಕಿಂಗ್‌ ಚಾನೆಲ್‌ ಇರಲಿಲ್ಲ. ಹಿಂದಿಯ ನಿಶಾ ಮಧುಲಿಕಾ, ಕಬಿತಾ ಕಿಚನ್‌ ಯೂಟ್ಯೂಬ್‌ ವಿಡಿಯೋಗಳನ್ನು ನಾನು ಹೆಚ್ಚಾಗಿ ನೋಡುತ್ತಿದ್ದೆ. ಒಳ್ಳೆ ಕ್ವಾಲಿಟಿ ಇದ್ದರೆ ಜನರು ನೋಡುತ್ತಾರೆ ಎಂಬ ಆಸೆಯಿಂದ ಪರಿಚಯಸ್ಥರ ಸಹಾಯದಿಂದ ಕ್ಯಾಮರಾ ಖರೀದಿಸಿ ಮತ್ತೆ ವಿಡಿಯೋ ಮಾಡಲು ಆರಂಭಿಸಿದೆವು. ಬಹಳ ಚರ್ಚೆ ಮಾಡಿ ಕೊನೆಗೆ ನನ್ನ ತಮ್ಮ ಚಾನೆಲ್‌ಗೆ 'ರೇಖಾ ಅಡುಗೆ' ಎಂದು ಹೆಸರಿಟ್ಟ. ಸಿಹಿಯಿಂದ ಆರಂಭಿಸೋಣ ಎಂದು ಮೊದಲು ಪೈನಾಪಲ್‌ ಕೇಸರಿಬಾತ್‌ ಮಾಡಿದ್ದೆ.

ನಿಮ್ಮ ಸಾಹಸಕ್ಕೆ ತಂದೆ-ತಾಯಿ ಬೆಂಬಲ ಇತ್ತಾ..?

ತಂದೆ-ತಾಯಿ ಯಾವಾಗಲೂ ನಮಗೆ ಸಪೋರ್ಟ್‌ ಮಾಡುತ್ತಿದ್ದರು. ಅದರೆ ಸಂಬಂಧಿಕರು ನೆರೆಹೊರೆಯವರು, ನಮ್ಮನ್ನು ಅಣಕಿಸುತ್ತಿದ್ದರು. ಇಷ್ಟು ದುಡ್ಡು ಖರ್ಚು ಮಾಡುವ ಅಗತ್ಯ ಏನಿದೆ..? ಎಂದು ಪ್ರಶ್ನಿಸುತ್ತಿದ್ದರು. ಆದರೆ ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಒಂದೊಳ್ಳೆ ಹೆಸರು ಮಾಡಬೇಕು ಎಂಬುದೇ ನನ್ನ ಗುರಿಯಾಗಿತ್ತು.

ಕುಟುಂಬದೊಂದಿಗೆ ರೇಖಾ

ಚಾನೆಲ್‌ ಇಷ್ಟು ಹೆಸರು ಗಳಿಸಲು ಯಾವ ರೀತಿ ಶ್ರಮ ಪಟ್ಟಿದ್ದೀರ..?

ಜನರು ನಮ್ಮ ವಿಡಿಯೋಗಳಿಗೆ ಮಾಡುತ್ತಿದ್ದ ಕಮೆಂಟ್‌ಗಳ ಮೂಲಕ ತಪ್ಪು ತಿದ್ದಿಕೊಳ್ಳುತ್ತಿದ್ದೆವು. ಪಾತ್ರೆಗಳನ್ನು ಬದಲಿಸುವಂತೆ ಸಲಹೆ ನೀಡುತ್ತಿದ್ದರು. ಹೊಸ ಹೊಸ ರೆಸಿಪಿಗಳನ್ನು ತೋರಿಸುವಂತೆ ಕೇಳುತ್ತಿದ್ದರು. ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುವಾಗ ಅಲ್ಲಿ ಬೇರೆ ರಾಜ್ಯದವರ ಬಳಿ ಅಲ್ಲಿನ ಅಡುಗೆ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದೆ. ಗೊತ್ತಿಲ್ಲದ ರೆಸಿಪಿಯನ್ನು ಮತ್ತೊಬ್ಬರಿಂದ ಕೇಳಿ ತಿಳಿದು ಪ್ರಯೋಗ ಮಾಡಿ ನಂತರ ರೆಕಾರ್ಡ್‌ ಮಾಡುತ್ತಿದ್ದೆವು. ನಾನು ಕೆಲಸಕ್ಕೆ ಹೋಗುತ್ತಿದ್ದರಿಂದ ಪ್ರತಿ ಭಾನುವಾರ ಒಂದೇ ಸಲಕ್ಕೆ 5-6 ವಿಡಿಯೋ ಮಾಡುತ್ತಿದ್ದೆವು.

ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ 3-4 ವರ್ಷದವರೆಗೂ ಉದಯ್‌ ಕೆಲಸಕ್ಕೆ ಹೋಗುತ್ತಿದ್ದ. ಕೆಲಸಕ್ಕೆ ಹೋಗುವಾಗ, ಬರುವಾಗ ಬಸ್‌, ಆಟೋದಲ್ಲೇ ಮೊಬೈಲ್‌ನಲ್ಲಿ ಎಡಿಟ್‌ ಮಾಡಿ ಅಪ್‌ಲೋಡ್‌ ಮಾಡುತ್ತಿದ್ದ. ಕೆಲವೊಮ್ಮೆ ರಾತ್ರಿ 1 ಗಂಟೆವರೆಗೂ ಎಡಿಟ್‌ ಮಾಡುತ್ತಿದ್ದ. ಸಬ್ಸ್‌ಕ್ರೈಬರ್‌ ಹೆಚ್ಚಾಗುತ್ತಿದ್ದಂತೆ ಹೆಚ್ಚಿನ ವಿಡಿಯೋಗಳನ್ನು ಕೇಳುತ್ತಿದ್ದರು. ಕೆಲಸಕ್ಕೆ ಹೋಗುತ್ತಾ ಇದೆಲ್ಲಾ ಮಾಡಲು ಸಾಧ್ಯವಿಲ್ಲ. ನನಗೆ ಮತ್ತೆ ಆರೋಗ್ಯ ಸಮಸ್ಯೆ ಶುರುವಾಯ್ತು. ಕೆಲಸ ಅಥವಾ ಯೂಟ್ಯೂಬ್‌ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಕೊನೆಗೆ ಇಬ್ಬರೂ ಕೆಲಸ ಬಿಟ್ಟು ಇದರಲ್ಲೇ ಸಂಪೂರ್ಣ ತೊಡಗಿಸಿಕೊಂಡೆವು.

ಅಂದಿಗೂ-ಇಂದಿಗೂ ಲೈಫ್‌ ಹೇಗಿದೆ, ಮುಂದಿನ ಪ್ಲಾನ್‌ ಏನು..?

ಯೂಟ್ಯೂಬ್‌ ನಮ್ಮ ಜೀವನ ಬದಲಿಸಿದೆ. ಯೂಟ್ಯೂಬ್‌ನಿಂದ ಬಂದ ಹಣದಲ್ಲಿ ಮನೆ ಆಲ್ಟ್ರೇಷನ್‌ ಮಾಡಿಸಿದ್ದೇವೆ. ಒಡವೆ ಮಾಡಿಸಿಕೊಂಡಿದ್ದೇನೆ. ನನ್ನ ತಂಗಿ ಮದುವೆ ಮಾಡಿದ್ದೇನೆ. ಮತ್ತೊಂದು ಕ್ಯಾಮೆರಾ ತೆಗೆದುಕೊಂಡಿದ್ದೇವೆ. ಕಂಪ್ಯೂಟರ್‌, ಟ್ರೈಪಾಡ್‌ ಎಲ್ಲವೂ ಇದೆ. ವಿಡಿಯೋ ಕ್ವಾಲಿಟಿ ಕೂಡಾ ಬಹಳ ಚೆನ್ನಾಗಿದೆ. ಇದುವರೆಗೂ 1241 ವಿಡಿಯೋಗಳನ್ನು ಅಪ್‌ಲೋಡ್‌ ಮಾಡಿದ್ದೇವೆ. ನನಗಿಂತ ನನ್ನ ತಮ್ಮ ಬಹಳ ಕಷ್ಟಪಟ್ಟಿದ್ದಾನೆ. ಎಲ್ಲಾ ಕ್ರೆಡಿಟ್ಸ್‌ ಉದಯ್‌ಗೆ ಸಲ್ಲಬೇಕು. ಯೂಟ್ಯೂಬ್‌ನಿಂದ ಬಂದ ಹಣವನ್ನು ಮೊದಲು ಜೀವನದಲ್ಲಿ ನೋಡಿರಲಿಲ್ಲ.

ರೇಖಾ ಅಡುಗೆ ಯೂಟ್ಯೂಬ್‌ ಚಾನೆಲ್‌ಗೆ 21 ಲಕ್ಷ ಸಬ್ಸ್‌ಕ್ರೈಬರ್ಸ್‌ ಇದ್ದಾರೆ

ಕೆಲಸಕ್ಕೆ ಹೋಗುವಾಗ ನನ್ನನ್ನು ಬೈಯ್ಯುತ್ತಿದ್ದವರು ಈಗ ನಮ್ಮನ್ನು ಹೊಗಳುತ್ತಿದ್ದಾರೆ. ನಮ್ಮನ್ನು ನೋಡಿ ಅನೇಕರು ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದಾರೆ. ವಿದೇಶಗಳಿಂದ ಕೂಡಾ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೊರಗೆ ಹೋದರೂ ಜನರು ನನ್ನನ್ನು ಗುರುತಿಸಿ ಮಾತನಾಡಿಸುತ್ತಾರೆ. ನಮ್ಮ ಕುಕಿಂಗ್‌ ಚಾನೆಲ್‌ ನೋಡಿ ಬಹಳಷ್ಟು ಜನರು ಅಡುಗೆ ಕಲಿತಿದ್ದಾರೆ. ಕೆಲವರು ಸ್ಪಾನ್ಸರ್‌ ವಿಡಿಯೋ ಮಾಡಲು ಕೇಳುತ್ತಾರೆ. ಆದರೆ ನಾನು ಹಣಕ್ಕಾಗಿ ಅವೆಲ್ಲವನ್ನೂ ಒಪ್ಪಿಕೊಳ್ಳುವುದಿಲ್ಲ.

ಸದ್ಯಕ್ಕೆ ಯೂಟ್ಯೂಬ್‌ ಬಿಟ್ಟು ಬೇರೆ ಏನೂ ಪ್ಲಾನ್‌ ಇಲ್ಲ. ಆದರೆ ಒಂದು ಮನೆ ಕಟ್ಟಬೇಕು, ಸ್ಟುಡಿಯೋ ಮಾಡಬೇಕು, ತಮ್ಮನ ಮದುವೆ ಮಾಡಬೇಕು. ನನ್ನದು 'ರೇಖಾ ಟ್ಯಾಲೆಂಟ್‌' ಎಂಬ ಮತ್ತೊಂದು ವಿಡಿಯೋ ಇದೆ. ಅದರ ಕಡೆಗೂ ಗಮನ ಕೊಡಬೇಕು. ತಂಗಿ ಈಗ ಗರ್ಭಿಣಿ, ಇನ್ನೂ ಮನೆಯ ಜಬಾಬ್ದಾರಿಗಳಿವೆ.

ಇಷ್ಟು ವಿಡಿಯೋಗಳಲ್ಲಿ ಯಾವ ರೆಸಿಪಿಗೆ ಹೆಚ್ಚು ವ್ಯೂವ್ಸ್‌ ಬಂದಿದೆ..?

ಬಿಸಿಬೇಳೆ ಬಾತ್‌ ರೆಸಿಪಿಯನ್ನು 11 ಮಿಲಿಯನ್‌ಗೂ ಹೆಚ್ಚು ಮಂದಿ ನೋಡಿದ್ದಾರೆ. ನಿಜ ಹೇಳಬೇಕೆಂದರೆ ನನಗೆ ಬಿಸಿಬೇಳೆ ಬಾತ್‌ ಎಂದರೆ ಇಷ್ಟವೇ ಇಲ್ಲ, ಆದರೆ ಅದೇ ವಿಡಿಯೋವನ್ನು ಅಷ್ಟೊಂದು ಜನರು ನೋಡಿದ್ದಾರೆ. ಅದು ನಿಜಕ್ಕೂ ನನಗೆ ವಿಶೇಷ.

ಸಾಮಾನ್ಯ ಹುಡುಗಿ ರೇಖಾ ಇಷ್ಟು ಸಾಧನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ

ನಿಮ್ಮ ಸಬ್ಸ್‌ಕ್ರೈಬರ್‌ಗಳಿಗೆ ಏನು ಹೇಳಲು ಇಷ್ಟಪಡುತ್ತೀರಿ..?

ನಮಗೆ ಇಷ್ಟು ಪ್ರೀತಿ ನೀಡಿದ ಜನರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ನಿಮ್ಮಿಂದ ನಾವು ಬಹಳ ಕಲಿತಿದ್ದೇನೆ. ನಿಮ್ಮ ಬೆಂಬಲ ಹೀಗೇ ಇರಲಿ. ಎಷ್ಟೋ ಜನರು ನಾನು ಮಾತನಾಡುವ ರೀತಿ ನೋಡಿ ಕನ್ನಡ ಸರಿಯಾಗಿ ಬರುವುದಿಲ್ಲ ಎಂದುಕೊಂಡಿದ್ದಾರೆ. ಆದರೆ ನನಗಿರುವ ಆರೋಗ್ಯ ಸಮಸ್ಯೆಯಿಂದ ನಾನು ಸ್ಪಷ್ಟವಾಗಿ ಮಾತನಾಡಲು ಆಗುತ್ತಿಲ್ಲ, ಇದಕ್ಕೆ ಕ್ಷಮೆ ಇರಲಿ.

ರೇಖಾ ಹಾಗೂ ಉದಯ್‌ ಪಟ್ಟ ಶ್ರಮ ಇಂದು ಫಲ ನೀಡಿದೆ. ಸಾಮಾನ್ಯ ಕುಟುಂಬಕ್ಕೆ ಸೇರಿದ ರೇಖಾ, ಇಂದು ಕನ್ನಡದಲ್ಲಿ 21 ಲಕ್ಷ ಸಬ್ಸ್‌ಕ್ರೈಬರ್‌ಗಳನ್ನು ಪಡೆಯುವಷ್ಟು ಬೆಳೆದಿದ್ದಾರೆ ಎಂದರೆ ಅವರ ಸಾಧನೆ ಎಷ್ಟು ಎನ್ನುವುದು ತಿಳಿಯುತ್ತದೆ. ರೇಖಾ ಹಾಗೂ ಉದಯ್‌ ಇನ್ನೂ ಹೆಚ್ಚಿನ ಸಾಧನೆ ಮಾಡಲಿ, ಅವರ ಕನಸುಗಳೆಲ್ಲಾ ಈಡೇರಲಿ ಎಂದು ಹಾರೈಸೋಣ.

ವಿಭಾಗ

ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ