logo
ಕನ್ನಡ ಸುದ್ದಿ  /  ಜೀವನಶೈಲಿ  /  Deepavali 2023: ಪೊಲಿ ಕೊಂಡು ಪೋ ಬಲಿಯೇಂದ್ರ; ಕರಾವಳಿಯಲ್ಲಿ ದೀಪಾವಳಿ ಆಚರಣೆಯೇ ವಿಭಿನ್ನ

Deepavali 2023: ಪೊಲಿ ಕೊಂಡು ಪೋ ಬಲಿಯೇಂದ್ರ; ಕರಾವಳಿಯಲ್ಲಿ ದೀಪಾವಳಿ ಆಚರಣೆಯೇ ವಿಭಿನ್ನ

HT Kannada Desk HT Kannada

Nov 08, 2023 07:46 AM IST

google News

ಮಂಗಳೂರಿನಲ್ಲಿ ದೀಪಾವಳಿಯಂದು ಬಲಿ ಚಕ್ರವರ್ತಿಯನ್ನು ಪೂಜಿಸುವ ಜನತೆ

  • Deepavali Celebration in Mangaluru: ಬಲಿ ಪಾಡ್ಯಮಿಯನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡಲಾಗುತ್ತದೆ. ಬಲಿ ಚಕ್ರವರ್ತಿಯನ್ನು ವಾಮನ ಮೆಟ್ಟಿದ್ದು ಶೋಷಣೆಯ ಪ್ರತೀಕ ಎಂಬ ವಾದವನ್ನೂ ಮಂಡಿಸುವವರಿದ್ದಾರೆ. ಮಹಾ ವಿಷ್ಣು ವಾಮನ ಅವತಾರ ತಾಳಿ, ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ ಎಂಬುದು ಜನಜನಿತ ಕಥೆ.

ಮಂಗಳೂರಿನಲ್ಲಿ ದೀಪಾವಳಿಯಂದು ಬಲಿ ಚಕ್ರವರ್ತಿಯನ್ನು ಪೂಜಿಸುವ ಜನತೆ
ಮಂಗಳೂರಿನಲ್ಲಿ ದೀಪಾವಳಿಯಂದು ಬಲಿ ಚಕ್ರವರ್ತಿಯನ್ನು ಪೂಜಿಸುವ ಜನತೆ (PC: @vpv_82, unsplash)

ಮಂಗಳೂರು: ದೀಪಾವಳಿಯನ್ನು ದೇಶಾದ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. ಹಾಗೇ ಕರ್ನಾಟಕದ ಕರಾವಳಿಯಲ್ಲೂ ಆಚರಣೆಯ ಸ್ವರೂಪ ಬೇರೆಯದ್ದೇ ಇದೆ. ತುಳುನಾಡು ಎಂದೇ ಕರೆಯಲ್ಪಡುವ ಕರಾವಳಿ ಕರ್ನಾಟಕದಲ್ಲಿ ಗೋಪೂಜೆ ಮತ್ತು ಬಲೀಂದ್ರನ ಆರಾಧನೆಗೆ ವಿಶೇಷ ಮಹತ್ವವಿದೆ. ಬಲಿಪಾಡ್ಯಮಿಯನ್ನು ಸೇರಿಸಿ, ದೀಪಾವಳಿಯನ್ನು 'ತುಡರ್ ಪರ್ಬ' ಎನ್ನಲಾಗುತ್ತದೆ.

ವಿಭಿನ್ನ ಆಚರಣೆ

ತುಳುನಾಡಿನ ಜನರು ದ್ರಾವಿಡ ಸಂಸ್ಕೃತಿಯ ಹಿನ್ನೆಲೆಯವರು. ನರಕ ಚತುರ್ದಶಿಯಂದು ತೈಲಾಭ್ಯಂಗನ, ಲಕ್ಷ್ಮೀಪೂಜೆಯ ದಿನ ಅಂಗಡಿ ಪೂಜೆ, ವ್ಯಾಪಾರ ವಹಿವಾಟು ವೃದ್ಧಿಗೆ ಪ್ರಾರ್ಥನೆ ಎಲ್ಲಾ ಕಡೆಗಳಲ್ಲಿ ಇರುವಂತೆ ಕರಾವಳಿಯಲ್ಲೂ ಇವೆ. ಆದರೆ ಬಲಿಪಾಡ್ಯಮಿಯನ್ನು ಆಚರಿಸುವ ಬಗೆ ವಿಭಿನ್ನ. ನಗರ ಸಂಸ್ಕೃತಿ ಬಂದ ಮೇಲೆ ಈ ಆಚರಣೆಗಳು ಕಡಿಮೆ. ಆದರೂ ಹಳ್ಳಿಗಳಲ್ಲಿ ಹಸುಗಳನ್ನು ಸಾಕುವ ಮನೆಗಳು, ಗೋಶಾಲೆಗಳಲ್ಲಿ ಗೋಪೂಜೆ ಹಾಗೂ ಬಲಿಪಾಡ್ಯಮಿಯ ಸಂದರ್ಭ ಬಲಿ ಚಕ್ರವರ್ತಿಯನ್ನು ಕರೆಯುವ ಸಂಪ್ರದಾಯವೂ ಇದೆ.

ಕೃಷಿ ಸಲಕರಣೆಗಳಿಗೆ ಪೂಜೆ

ಪಾಡ್ಯಮಿಯ ದಿನ, ಕೃಷಿ ಸಲಕರಣೆಗಳಿಗೆ ಪೂಜೆ ಮಾಡಲಾಗುತ್ತದೆ. ಗೊಬ್ಬರದ ರಾಶಿ, ಭತ್ತದ‌ ಕಣಜ ಮತ್ತು ಇನ್ನಿತರ‌ ಧಾನ್ಯ ರಾಶಿಗೂ ಪೂಜೆ‌ ಸಲ್ಲಿಸುತ್ತಾರೆ. ನಂತರ ಕೃಷಿ ಉಪಕರಣಗಳನ್ನು ತೊಳೆದು ಪಡಿಮಂಚದ‌ ಮೇಲೆ‌ ಜೋಡಿಸುತ್ತಾರೆ. ನಂತರ ಹೂವಿನ ಅಲಂಕಾರ ಮಾಡಿ ದೀಪಗಳನ್ನು ಇಟ್ಟು ಪೂಜಿಸುವ ಪದ್ಧತಿ ತುಳುನಾಡಲ್ಲಿದೆ. ಸಂಜೆ ಸಮಯದಲ್ಲಿ ಹಸುಗಳನ್ನು ತೊಳೆದು, ಅವುಗಳನ್ನು ಸಿಂಗರಿಸಿ ಪೂಜಿಸುತ್ತಾರೆ. ನಂತರ ಸಿಹಿ ಹಂಚುವುದು ದೀಪಾವಳಿ ದಿನದ‌ ವಿಶೇಷ. ಪ್ರತಿ ಹಸುವಿನಲ್ಲೂ ಸಾವಿರದೊಂದು ದೇವತೆಗಳು ನೆಲೆಸಿದ್ದಾರೆ‌ ಎಂಬುದು ಜನರ‌ ನಂಬಿಕೆ. ಈ ವಿಶೇಷ ದಿನದಂದು ಗೋವುಗಳ ಆಶೀರ್ವಾದ ಪಡೆಯುತ್ತಾರೆ. ವಿಶೇಷವಾಗಿ ಗೊಂಡೆ ಹೂವಿನ ಮಾಲೆ ಹಾಕಿ, ಕುಂಕುಮ ಇಡುತ್ತಾರೆ. ತಿನ್ನಲು ಅರಳಿನ ಜತೆಗೆ‌ ಸ್ವಲ್ಪ ಬೆಲ್ಲ ಕೊಡುತ್ತಾರೆ. ಹೀಗೆ ತುಳುನಾಡಿನ ಜನರು ಹಸು, ದನಗಳನ್ನು ಪೂಜಿಸಿ ಅವುಗಳಲ್ಲಿ ದೇವರನ್ನು ಕಾಣುತ್ತಾರೆ‌ . ಪೊಲಿ ಎಂಬ ಶಬ್ದಕ್ಕೆ ನಾನಾ ಅರ್ಥಗಳಿವೆ. ಬಲಿಪೂಜೆಯ ದಿನ ಗದ್ದೆಯಲ್ಲಿ ನಾನಾ ಆಹಾರಗಳನ್ನು ಇಟ್ಟು, ಬಲಿಯೇಂದ್ರನನ್ನು ಕರೆಯುವುದಕ್ಕೆ ಪೊಲಿ ಲೆಪ್ಪುನೆ ಎಂದು ಹೇಳುತ್ತಾರೆ.

ಬಲಿ ಚಕ್ರವರ್ತಿ ಮತ್ತು ವಾಮನನ ಕಥೆ

ಬಲಿ ಪಾಡ್ಯಮಿಯನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡಲಾಗುತ್ತದೆ. ಬಲಿ ಚಕ್ರವರ್ತಿಯನ್ನು ವಾಮನ ಮೆಟ್ಟಿದ್ದು ಶೋಷಣೆಯ ಪ್ರತೀಕ ಎಂಬ ವಾದವನ್ನೂ ಮಂಡಿಸುವವರಿದ್ದಾರೆ. ಮಹಾ ವಿಷ್ಣು ವಾಮನ ಅವತಾರ ತಾಳಿ, ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ ಎಂಬುದು ಜನಜನಿತ ಕಥೆ.

ಪ್ರಹ್ಲಾದನ ಮೊಮ್ಮಗ ಬಲಿ ಚಕ್ರವರ್ತಿ ದಾನಿಯಾಗಿದ್ದ. ತನ್ನ ರಾಜ್ಯದ ಜನರನ್ನು ಪ್ರೀತಿಯಿಂದ ನೋಡುತ್ತಿದ್ದ ಕಾರಣ ಜನರು ಆತನನ್ನು ಆರಾಧಿಸುತ್ತಿದ್ದರು. ಇದರಿಂದ ಇಂದ್ರಾದಿ ದೇವತೆಗಳು ವಿಚಲಿತರಾಗುತ್ತಾರೆ. ಮಹಾವಿಷ್ಣು ವಾಮನನ ಅವತಾರ ತಾಳಿ ಬಲಿಗೆ ಅರಿವಾಗದಂತೆ ಆತನ ಬಳಿ ವರವ ಕೇಳಿ, ಪಾತಾಳಕ್ಕೆ ತಳ್ಳಿದ ಎಂಬುದು ತುಳುನಾಡ ಹಿರಿಯರು ಹೇಳುವ ಕಥೆ.

ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದ ವಾಮನ

ನನಗೆ ದಾನ ನೀಡುವಿರೇ? ಎಂದು ಭಗವಾನ್‌ ವಿಷ್ಣುವಿನ ರೂಪದಲ್ಲಿರುವ ವಾಮನ ಕೇಳುತ್ತಾನೆ. ಆಗ ಬಲಿ ಚಕ್ರವರ್ತಿಯು ಏನು ಬೇಕು ಎಂದು ಕೇಳಿದಾಗ ನನಗೆ 3 ಹೆಜ್ಜೆ ಜಾಗ ಬೇಕು ಎನ್ನುತ್ತಾನೆ. ವಾಮನ ಮೊದಲ ಹೆಜ್ಜೆಯನ್ನು ಭೂಮಿಗೆ, ಎರಡನೇ ಹೆಜ್ಜೆಯನ್ನು ಆಕಾಶಕ್ಕೆ ಮತ್ತು ಮೂರನೇ ಹೆಜ್ಜೆಯನ್ನು ಬಲಿಯ ತಲೆಗೆ ಇಟ್ಟು ಪಾತಾಳಕ್ಕೆ ತಳ್ಳುತ್ತಾನೆ. ಮೋಸ ಹೋದ ಬಗ್ಗೆ ಅರಿವಾದ ಬಲಿಯು, ತಾನು ಇಲ್ಲಿಯತನಕ ದಾನವನ್ನು ಮಾಡುತ್ತಲೇ ಬಂದಿದ್ದೇನೆ. ಯಾರಿಗೂ ಇಲ್ಲ ಎಂದಿಲ್ಲ. ನಾನು ನಿಮಗೆ ಕೊಟ್ಟ ಮಾತಿಗೆ ತಪ್ಪಲಾರೆ. ಆದರೆ ನನ್ನದೊಂದು ಕಡೆಯ ಕೋರಿಕೆ ಇದೆ ಎನ್ನುತ್ತಾನೆ. ವಾಮನ ಏನದು ಎಂದಾಗ ನನ್ನ ಪ್ರೀತಿಯ ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ವರ್ಷಕ್ಕೆ ಒಂದು ಸಲ ನಾನು ನನ್ನ ನಾಡಿಗೆ ಬಂದು ಹೋಗಲು ಅನುಮತಿ ಕೊಡಿ ಎಂದಾಗ, ದೀಪಾವಳಿ ಪಾಡ್ಯಮಿಯಂದು ಬಾ ಎಂದು ವಾಮನ ಹೇಳಿದನೆಂಬ ಕಥೆ ಪ್ರಚಲಿತದಲ್ಲಿದೆ.

ವಾಮನನ ಬಳಿ ನಾನು ಯಾವಾಗ ತುಳುನಾಡಿಗೆ ಬರಬೇಕು ಎಂದು ಬಲಿಯು ಕೇಳಿದಾಗ ''ಕರ್ಗಲ್ ಕಾಯಿ ಪೋನಗ, ಬೊಲ್ಕಲ್ ಪೂ ಆನಗ, ಉಪ್ಪು ಕರ್ಪೂರ ಆನಗ, ಮಂಜೊಲು ಪಕ್ಕಿ ಮೈಪಾಡ್ನಗ, ಗುರುಗುಂಜಿದ ಕಲೆ ಮಾಯಿನಗ, ಉರ್ದು ಮದ್ದೊಲ್ ಆನಗ, ಜಾಲ್ ಪಾದೆ ಆನಗ, ಏರು ದಡ್ಡೆ ಆನಗ, ಗೊಡ್ಡೆರ್ಮೆ ಗೋಣೆ ಆನಗ, ತುಂಬೆದಡಿಟ್ ಕೂಟ ಆನಗ, ನೆಕ್ಕಿದಡಿಟ್ ಆಟ ಆನಗ, ದೊಂಬೆಲ್ಗ ಪಾಂಪು ಪಾಡ್ನಗ, ಆಕಾಶೊಗ್ ಲೆಂಚಿ ದೀನಗ, ಅಲೆಟ್ ಬೊಳ್ಳೆ ನೆಯಿ ಮುರ್ಕುನಗ, ದಂಟೆ ಅಜ್ಜಿ ಮದಿಮಲ್ ಆನಗ, ಆಟಿದ ಅಮಾಸೆ,, ಸೋನದ ಸಂಕ್ರಾಂತಿಗ್, ಬೊಂತೆಲ್‌ದ ಕೊಡಿಪರ್ಬೊಗು, ಆಜಿ ದಿನತ ಬಲಿ, ಮೂಜಿ ದಿನತ, ಪೊಲಿ ಕೊಂಡು ಪೋ ಬಲಿಯೇಂದ್ರ ಕೂ ಬಲಿಯಿಂದ್ರ'' ಎಂದು ಜಾನಪದ ಪಾಡ್ದನದಲ್ಲಿ ವಾಮನನು ಬಲಿಗೆ ಹೀಗೆ ಹೇಳಿದ ಎಂದು ಹೇಳಲಾಗಿದೆ.

ಜಾನಪದ ಪಾಡ್ದನ

''ಕರಿಕಲ್ಲು ಕಾಯಿ ಆಗುವಾಗ, ಬಿಳಿಕಲ್ಲು ಹೂ ಆಗುವಾಗ, ಉಪ್ಪು ಕರ್ಪೂರ ಆಗುವಾಗ, ಹಳದಿ ಹಕ್ಕಿ ಮಸಿ ತೆಗೆದಾಗ, ಗುಲಗಂಜಿಯ ಕಲೆ ಮಾಯ ಆಗುವಾಗ, ಉದ್ದು ಮೃದಂಗವಾದಾಗ, ಅಂಗಳದಲ್ಲಿ ಬಂಡೆ ಬೆಳೆದಾಗ, ಕೋಣ ದಡ್ಡನಾದಾಗ, ಗೊಡ್ಡು ಎಮ್ಮೆ ಎಳೆ ಹೋರಿ ಆದಾಗ, ತುಂಬೆಯ ಮರದಡಿ ಕೂಟ ಆದಾಗ, ನೆಕ್ಕಿ ಗಿಡದಡಿ ಆಟ ನಡೆಯುವಾಗ, ಆಕಾಶಕ್ಕೆ ಏಣಿ ಇಟ್ಟಾಗ, ಮಜ್ಜಿಗೆಯಲ್ಲಿ ಬೆಣ್ಣೆ ಮುಳುಗಿದಾಗ, ಊರುಗೋಲಿನ ಅಜ್ಜಿ ಮದುಮಗಳು ಆದಾಗ, ಆಷಾಢದ ಅಮಾವಾಸೆ,, ಶ್ರಾವಣದ ಸಂಕ್ರಾಂತಿ, ಬೊಂತೆಲ್‌ದ ಕೊಡಿಪರ್ಬಕ್ಕೆ ಬಂದು, 6 ದಿನಗಳ ಬಲಿ, 3 ದಿನಗಳ ಪೊಲಿ ಕೊಂಡು ಹೋಗು, ಬಲಿಯೇಂದ್ರ ಕೂ '' ಎಂಬುದು ಇದರ ಅರ್ಥವಾಗಿದೆ.

ಆದರೆ ಇದೆಲ್ಲಾ ಅಸಾಧ್ಯವಾದದ್ದು, ಇಂಥದ್ದು ಏನೂ ಆಗದ ಸ್ಥಿತಿಯಲ್ಲಿ ಬಲಿ ಬರಲು ಸಾಧ್ಯವೇ, ವಾಮನ ಇದರಲ್ಲೂ ಮೋಸ ಮಾಡಿದ್ದಾನೆ ಎಂದು ತುಳುನಾಡಿದ ಹಿರಿಯರು ಹೇಳುತ್ತಾರೆ. ಏನೇ ಇರಲಿ, ಬಲಿ ಚಕ್ರವರ್ತಿಯ ಮೇಲೆ ಅದಮ್ಯ ಪ್ರೀತಿ, ಅಕ್ಕರೆಯನ್ನು ಇಟ್ಟುಕೊಂಡಿರುವ ತುಳುನಾಡಿನ ಜನ, ಬಲಿಯೇಂದ್ರನನ್ನು ಪ್ರೀತಿಯಿಂದ ಸ್ವಾಗತಿಸುವ ದಿನವದು. ಒಂದು ಕಾಲದಲ್ಲಿ ತುಳುನಾಡನ್ನು ಆಳಿದ್ದಷ್ಟೇ ಅಲ್ಲ, ಜನರನ್ನೂ ತನ್ನ ಮನೆ ಮಕ್ಕಳಂತೆ ನೋಡಿಕೊಂಡಿದ್ದ ಎಂಬ ಹೆಮ್ಮೆ ತುಳುನಾಡಿನ ಜನರಲ್ಲಿದೆ.

ಬರಹ: ಹರೀಶ್‌ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ