Bathroom Singing Benefits: ನೀವು ಬಾತ್‌ರೂಮ್ ಸಿಂಗರಾ? ಸ್ನಾನದ ಮನೆಯಲ್ಲಿ ಹಾಡು ಹೇಳೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
Oct 22, 2023 12:00 PM IST
ಸ್ನಾನದ ಮನೆಯಲ್ಲಿ ಹಾಡು ಹೇಳೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
- ಜಗತ್ತಿನಲ್ಲಿ ಶೇ 90 ರಷ್ಟು ಮಂದಿ ಬಾತ್‌ರೂಮ್ ಸಿಂಗರ್‌ಗಳಾಗಿರುತ್ತಾರೆ. ಆದರೆ ಇವರು ಬಾತ್‌ರೂಮ್‌ನಲ್ಲಿ ಮಾತ್ರ ಯಾಕೆ ಹಾಡುತ್ತಾರೆ ಎಂಬುದು ಬಹುಶಃ ಹಲವರಿಗೆ ತಿಳಿದಿರಲಿಕ್ಕಿಲ್ಲ. ಅದರೊಂದಿಗೆ ಬಾತ್‌ರೂಮ್‌ನಲ್ಲಿ ಹಾಡುವುದು ಹೇಳುವುದು ಏಕೆ, ಇದರಿಂದ ಆಗುವ ಪ್ರಯೋಜನವಾದ್ರೂ ಏನು ಎಂಬ ಬಗ್ಗೆ ನಾವು ಯೋಚಿಸುವುದಿಲ್ಲ. ಆದರೆ ಇದರಿಂದ ಖಂಡಿತ ಪ್ರಯೋಜನವಿದೆ.
ಬಹುಶಃ ವಿಶ್ವದಲ್ಲಿ ನಾವು ಏಕಾಂಗಿಯಾಗಿ ಕಾಲ ಕಳೆಯುವ ಜಾಗ ಎಂದರೆ ಅದು ಬಾತ್‌ರೂಮ್ ಎನ್ನಬಹುದು. ಬಾತ್‌ರೂಮ್‌ನಲ್ಲಿ ನಾವು ನಮಗೆ ಇಷ್ಟಬಂದಂತೆ ಇರಬಹುದು. ಅಲ್ಲಿ ನಮಗೆ ತೊಂದರೆ ನೀಡುವವರು, ಕಿರಿಕಿರಿ ಮಾಡುವವರು ಯಾರೂ ಇಲ್ಲ. ಹೀಗೆ ಇರು, ಹಾಗೆ ಇರುವ ಎಂದು ಆರ್ಡರ್ ಮಾಡುವವರು ಅಲ್ಲಿ ಇರುವುದಿಲ್ಲ. ಆ ಕಾರಣಕ್ಕೆ ಹಲವರಿಗೆ ಬಾತ್‌ರೂಮ್ ಫೇವರಿಟ್ ಜಾಗವಾಗಿರುತ್ತದೆ. ಈ ಫೇವರಿಟ್ ಹೇಗೆ ಎಂದರೆ ನಾವು ಹಲವರು ಬಾತ್‌ರೂಮ್‌ನಲ್ಲಿ ಖುಷಿಯಿಂದ ಹಾಡು ಹೇಳುತ್ತಿರುತ್ತೇವೆ.
ನಮ್ಮಲ್ಲಿ ಹಲವರು ಬಾತ್‌ರೂಮ್ ಸಿಂಗರ್‌ಗಳಿದ್ದಾರೆ. ಜಗತ್ತಿನಲ್ಲಿ ಶೇ 90 ರಷ್ಟು ಮಂದಿ ಬಾತ್‌ರೂಮ್ ಸಿಂಗರ್ಸ್‌ಗಳಾಗಿರುತ್ತಾರೆ. ಆದರೆ ಬೇರೆ ಯಾವ ಸಮಯದಲ್ಲೂ ಹಾಡು ಹೇಳದ ನಾವು ಬಾತ್‌ರೂಮ್‌ನಲ್ಲಿ ಮಾತ್ರ ಹಾಡು ಹೇಳುವುದು ಏಕೆ? ಸ್ನಾನ ಮಾಡುವಾಗ ಹಾಡು ಹೇಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವೇ? ಇದರಿಂದ ಆಗುವ ಪ್ರಯೋಜನಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ನೀವು ಬಾತ್‌ರೂಮ್‌ನಲ್ಲಿ ಹಾಡು ಹೇಳುವಾಗ ನಿಮ್ಮ ಧ್ವನಿ ಅಲ್ಲಿ ಪ್ರತಿಧ್ವನಿಸುತ್ತದೆ. ಕನ್ನಡಿಗಳು, ಗೋಡೆಯ ಮೇಲ್ಮೈಗಳು ವಿಶಿಷ್ಟವಾದ ಧ್ವನಿಯನ್ನು ಸೃಷ್ಟಿಸುತ್ತವೆ. ಈ ಧ್ವನಿ ತರಂಗಗಳು ಗೋಡೆಗಳಿಂದ ಪುಟಿಯುತ್ತವೆ. ರಿಬೌಂಡ್ ಆಗಿ ನಮ್ಮ ಸ್ವರ ನಮಗೆ ಕೇಳಿಸುತ್ತದೆ. ಇದು ನಮಗೆ ಹೊಸ ರೀತಿಯ ಅನುಭವವನ್ನು ನೀಡುತ್ತದೆ.
ಒತ್ತಡ ನಿವಾರಣೆ
ಹಲವರಿಗೆ ಮಳೆ ಬರುವಾಗ ಹಾಡುವುದು, ಡಾನ್ಸ್ ಮಾಡುವುದು ಇಷ್ಟ. ಏಕೆಂದರೆ ಮಳೆಯಲ್ಲಿ ಹಾಡುವುದು ಮತ್ತು ನೃತ್ಯ ಮಾಡುವುದರಿಂದ ನಮ್ಮ ಮನಸ್ಸಿನ ಒತ್ತಡದ ಮಟ್ಟ ಕಡಿಮೆಯಾಗುತ್ತದೆ. ಅದೇ ರೀತಿ ಸ್ನಾನ ಮಾಡುವಾಗಲೂ ಹಾಡುವುದು, ಡಾನ್ಸ್ ಮಾಡುವುದು ಒಂದು ರೀತಿಯ ಮಾನಸಿಕ ಸಂತೋಷಕ್ಕೆ ಕಾರಣವಾಗುತ್ತದೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ಡಾನ್ಸ್ ಮಾಡುವಾಗ ಹುಷಾರು, ಇದರಿಂದ ಜಾರಿ ಬೀಳುವ ಸಾಧ್ಯತೆಯೂ ಇದೆ ಎಂಬುದನ್ನು ಮರೆಯಬೇಡಿ.
ಬಾತ್‌ರೂಮ್ ಖಾಸಗಿ ಸ್ಥಳವಾಗಿದ್ದು, ಅಲ್ಲಿ ನಾವು ನಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು. ನಮ್ಮ ಧ್ವನಿಯಲ್ಲಿನ ಮಾಧುರ್ಯವು ನಮಗೆ ಉತ್ಸಾಹ ನೀಡುತ್ತದೆ.
ಬಾತ್‌ರೂಮ್‌ನಲ್ಲಿ ಹಾಡುವಾಗ ಧ್ವನಿ ತರಂಗಗಳು ಗೋಡೆಗಳಿಂದ ಪುಟಿಯುತ್ತವೆ. ಇದು ಕೆಲವು ರೀತಿಯ ಕಂಪನವನ್ನು ಉಂಟುಮಾಡುತ್ತದೆ. ಇದು ನಮ್ಮ ಧ್ವನಿಗೆ ಹೆಚ್ಚು ಆಳವನ್ನು ನೀಡುತ್ತದೆ. ಅದಕ್ಕಾಗಿಯೇ ಅನೇಕ ಜನರು ಸ್ನಾನಗೃಹದಲ್ಲಿ ಹಾಡಲು ಇಷ್ಟಪಡುತ್ತಾರೆ.
ಆತ್ಮವಿಶ್ವಾಸ ಹೆಚ್ಚುತ್ತದೆ
ಬಾತ್ ರೂಂನಲ್ಲಿ ಹಾಡುವುದು ಹೆಚ್ಚು ಆತ್ಮವಿಶ್ವಾಸವನ್ನು ನೀಡುತ್ತದೆ. ಇದು ಭಾವನೆಗಳ ಅಭಿವ್ಯಕ್ತಿಯನ್ನು ಉತ್ತೇಜಿಸುತ್ತದೆ. ಭಾವನಾತ್ಮಕವಾಗಿ ಇದು ನಮಗೆ ಸಾಂತ್ವನವನ್ನೂ ನೀಡುತ್ತದೆ.
ಮನಸ್ಥಿತಿ ಸುಧಾರಣೆ
ಸ್ನಾನದಮನೆಯಲ್ಲಿ ಹಾಡುವುದರಿಂದ ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಒತ್ತಡವನ್ನು ಕಡಿಮೆಯಾಗುವ ಜೊತೆಗೆ, ಸಕಾರಾತ್ಮಕ ಮನಸ್ಥಿತಿ ಲಭಿಸುತ್ತದೆ. ಇದು ನಮ್ಮ ಸಂಪೂರ್ಣ ಜೀವನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗೆ ಹಾಡುವುದರಿಂದ ನಮ್ಮ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ನಮ್ಮ ಮೆದುಳು ಚುರುಕಾಗುತ್ತದೆ. ಮೆದುಳಿನಲ್ಲಿ ಖುಷಿಯ ಹಾರ್ಮೋನ್‌ಗಳು ಕೆಲಸ ಮಾಡಲು ಆರಂಭಿಸುತ್ತದೆ. ಇದರಿಂದ ಮೆದುಳಿನ ದಕ್ಷತೆಯು ಸುಧಾರಿಸುತ್ತದೆ.
ಹಲವರಿಗೆ ಬಾತ್‌ರೂಮ್‌ನಲ್ಲಿ ಹಾಡುವುದು ಬಾಲಿಶ ಎನ್ನಿಸಬಹುದು. ಬಾತ್‌ರೂಮ್‌ನಲ್ಲಿ ಹಾಡುವುದಕ್ಕೆ ಗಂಡು-ಹೆಣ್ಣು ಎಂಬ ಭೇದವೂ ಇಲ್ಲ. ಬಾತ್‌ರೂಮ್‌ನಲ್ಲಿ ಹಾಡುವುದು ಸಾಮಾಜಿಕ ಸಂಬಂಧಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ನಮಗೆ ಅಚ್ಚುಮೆಚ್ಚಿನ ನೆನಪುಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳ
2004ರಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಬಾತ್ರೂಮ್‌ನಲ್ಲಿ ಹಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ಅಂಶವು ಬೆಳಕಿಗೆ ಬಂದಿದೆ. ಸ್ನಾನಗೃಹದಲ್ಲಿ ಹಾಡುವವರ ದೇಹದಲ್ಲಿ ಪ್ರತಿರಕ್ಷಣಾ ಸಾಮರ್ಥ್ಯ ಹೆಚ್ಚುತ್ತದೆ ಎಂಬುದನ್ನು ಸಂಶೋಧನೆ ತೋರಿಸಿದೆ. ಈ ಪ್ರತಿಕಾಯಗಳು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.
ಶ್ವಾಸಕೋಶದ ಸಮಸ್ಯೆಗಳಿಗೆ ಪರಿಹಾರ
ಸ್ನಾನಗೃಹದಲ್ಲಿ ಹಾಡುವುದರಿಂದ ಶ್ವಾಸಕೋಶದ ಕಾರ್ಯವನ್ನು ಸುಧಾರಿಸಬಹುದು. ಈ ಸಮಯದಲ್ಲಿ ಆಳವಾದ ಉಸಿರಾಟ ಮತ್ತು ಉಸಿರಾಟದ ನಿಯಂತ್ರಣವನ್ನು ಅಭ್ಯಾಸ ಮಾಡಿ. ಇದು ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ. ಆಸ್ತಮಾ, ದೀರ್ಘಕಾಲದ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸಾರ್ಡರ್, ಸಿಸ್ಟಿಕ್ ಫೈಬ್ರೋಸಿಸ್, ಕ್ಯಾನ್ಸರ್ ಮತ್ತು ಇತರ ಅನೇಕ ಕಾಯಿಲೆಗಳಿಂದ ಉಂಟಾಗುವ ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಶ್ವಾಸಕೋಶದ ಸ್ನಾಯುಗಳನ್ನು ಬಲಪಡಿಸುತ್ತದೆ. ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ.
ಇದು ನಮ್ಮಲ್ಲಿ ಮಾತನಾಡುವ ಕೌಶಲವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಡುವುದರಿಂದ ಮಿದುಳಿನ ಹಲವು ಭಾಗಗಳನ್ನು ಏಕಕಾಲದಲ್ಲಿ ಪ್ರಚೋದಿಸುತ್ತದೆ. ಆಟಿಸಂ, ಪಾರ್ಕಿನ್ಸನ್ ಕಾಯಿಲೆ, ಪಾರ್ಶ್ವವಾಯು ನಂತರದ ಅಫೇಸಿಯಾ, ಮಾತು ತೊದಲುವಿಕೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸ್ನಾನದ ಮನೆಯಲ್ಲಿ ಗಾಯನಾಸ್ಯ ಮಾಡುವುದರಿಂದ ಮಾತಿನ ಕೌಶಲ ಸುಧಾರಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಉಚ್ಛರಣೆ ಸುಧಾರಿಸುತ್ತದೆ
ಹಾಡುವುದರಿಂದ ಪದಗಳ ಉಚ್ಚರಣೆ ಸುಲಭವಾಗುತ್ತದೆ. ಈ ಮೂಲಕ ಅವರು ಇತರರೊಂದಿಗೆ ಸುಲಭವಾಗಿ ಮತ್ತು ಸ್ಪಷ್ಟವಾಗಿ ಸಂವಹನ ನಡೆಸುತ್ತಾರೆ. ಹಾಗಾಗಿ ಬಾತ್ ರೂಮ್ ನಲ್ಲಿ ಹಾಡುಗಳನ್ನು ಹಾಡುವುದರಿಂದ ಎಷ್ಟೋ ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ ತಜ್ಞರು.
ನೋಡಿದ್ರಲ್ಲಾ ಬಾತ್‌ರೂಮ್‌ನಲ್ಲಿ ಹಾಡು ಹೇಳುವುದರಿಂದ ಒಂದಲ್ಲ ಎರಡಲ್ಲ ಹಲವು ಪ್ರಯೋಜನಗಳಿವೆ. ಇದರಿಂದ ನೇರವಾಗಿ ಮಾನಸಿಕ ಆರೋಗ್ಯದ ಮೇಲೆ ಪ್ರಯೋಜನಗಳು ಇದ್ದರೂ ಕೂಡ ಇದು ಪರೋಕ್ಷವಾಗಿ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.