logo
ಕನ್ನಡ ಸುದ್ದಿ  /  ಜೀವನಶೈಲಿ  /  ಏನಿದು ಗುಡ್‌ ಗರ್ಲ್‌ ಸಿಂಡ್ರೋಮ್‌; ಇದರ ಲಕ್ಷಣಗಳೇನು; ಇಲ್ಲಿದೆ ವಿವರ

ಏನಿದು ಗುಡ್‌ ಗರ್ಲ್‌ ಸಿಂಡ್ರೋಮ್‌; ಇದರ ಲಕ್ಷಣಗಳೇನು; ಇಲ್ಲಿದೆ ವಿವರ

Reshma HT Kannada

Aug 31, 2023 08:00 PM IST

google News

ಗುಡ್‌ ಗರ್ಲ್‌ ಸಿಂಡ್ರೋಮ್‌

    • ಗುಡ್‌ ಗರ್ಲ್‌ ಸಿಂಡ್ರೋಮ್‌ ಅನ್ನುವುದು ಮನೋವಿಜ್ಞಾನಕ್ಕೆ ಸಂಬಂಧಿಸಿದ ಪದ ಖಂಡಿತ ಅಲ್ಲ. ಆದರೆ ಇದು ನಿರ್ದಿಷ್ಟ ನಡವಳಿಕೆ ಹಾಗೂ ಪ್ರವೃತ್ತಿಯನ್ನು ಹೊಂದಿರುವ ಹುಡುಗಿಯರ ಬಗ್ಗೆ ವಿವರಿಸಲು ಬಳಸುವ ಪದ. ಗುಡ್‌ ಗರ್ಲ್‌ ಸಿಂಡ್ರೋಮ್‌ ಇವರ ಹುಡುಗಿಯರನ್ನು ಕಂಡು ಇತರರು ಸಂತೋಷ ಪಡಬಹುದು, ಆದರೆ ಇದು ಸ್ವತಃ ಅವರ ಸಂತೋಷ, ನೆಮ್ಮದಿಯನ್ನು ಕಸಿಯುತ್ತದೆ.
ಗುಡ್‌ ಗರ್ಲ್‌ ಸಿಂಡ್ರೋಮ್‌
ಗುಡ್‌ ಗರ್ಲ್‌ ಸಿಂಡ್ರೋಮ್‌

ʼನೋಡಲ್ಲಿ, ಆ ಹುಡುಗಿ ಎಷ್ಟು ಒಳ್ಳೆಯವಳು, ಎಂಥ ನಯ, ವಿನಯ, ಸೌಜನ್ಯ. ಮಾತು ಅಷ್ಟೇ ತುಂಬಾ ಮೃದು. ನಡವಳಿಕೆನೂ ಹಾಗೆ, ಅಪ್ಪಟ ಅಪರಂಜಿ, ಹುಡುಗೀರು ಅಂದ್ರೆ ಹಾಗ್‌ ಇರಬೇಕುʼ ಈ ರೀತಿ ಯಾವುದೋ ಹುಡುಗಿಯ ಬಗ್ಗೆ ಯಾರೋ ಮಾತನಾಡುವುದು ಕೇಳಿದ್ರೆ ಖುಷಿ ಆಗುತ್ತೆ, ಅಲ್ದೇ ನಾವು ಹಾಗೆ ಇರಬೇಕು ಅನ್ನಿಸುವುದು ಸಹಜ. ಒಳ್ಳೆಯರು ಅನ್ನಿಸಿಕೊಳ್ಳೋದು ಯಾರಿಗೆ ಬೇಡ ಹೇಳಿ. ಆದರೆ ಒಳ್ಳೆಯವರು ಅನ್ನಿಸಿಕೊಳ್ಳೋ ಭರದಲ್ಲಿ ನಮ್ಮತನ ಬಿಡಬಾರದು ಅಲ್ವಾ?

ಆದರೆ ಕೆಲವು ಹುಡುಗಿಯರು ಯಾವುದೋ ಕಾರಣಕ್ಕೆ ತಾವು ಅತಿ ಒಳ್ಳೆಯವರು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಎಲ್ಲರನ್ನೂ ಮೆಚ್ಚಿಸಲು ಪರದಾಡುತ್ತಾರೆ. ಯಾವ ವಿರುದ್ಧವೂ ಮಾತನಾಡದೇ ಮೌನವಾಗಿ ಸಹಿಸುತ್ತಾರೆ, ಯಾರಿಗೂ ನೋವು ಮಾಡುವುದನ್ನು ಅವರು ಇಷ್ಟಪಡುವುದಿಲ್ಲ. ಕೆಲವೊಮ್ಮೆ ಹೆಣ್ಣುಮಕ್ಕಳ ಈ ಗುಣಗಳೇ ಅವರನ್ನು ಅಸಹಾಯಕರನ್ನಾಗಿಸುತ್ತದೆ. ಇದರಿಂದ ಅವರಲ್ಲಿ ಸಂತೋಷ ಮರೆಯಾಗಬಹುದು. ಅತೃಪ್ತಿಯ ಭಾವ ಮೂಡಬಹುದು. ಇದಕ್ಕೆ ಗುಡ್‌ ಗರ್ಲ್‌ ಸಿಂಡ್ರೋಮ್‌ ಎನ್ನುತ್ತಾರೆ. ಹಾಗಾದ್ರೆ ಏನಿದು ಗುಡ್‌ ಗರ್ಲ್‌ ಸಿಂಡ್ರೋಮ್‌, ಇದರ ಲಕ್ಷಣಗಳೇನು, ಇದರಿಂದ ಹೊರ ಬರುವುದು ಹೇಗೆ? ಇಲ್ಲಿದೆ ವಿವರ.

ಏನಿದು ಗುಡ್‌ ಗರ್ಲ್‌ ಸಿಂಡ್ರೋಮ್‌

ಗುಡ್‌ ಗರ್ಲ್‌ ಸಿಂಡ್ರೋಮ್‌ ಅನ್ನುವುದು ಮನೋವಿಜ್ಞಾನಕ್ಕೆ ಸಂಬಂಧಿಸಿದ ಪದ ಖಂಡಿತ ಅಲ್ಲ. ಆದರೆ ಇದು ನಿರ್ದಿಷ್ಟ ನಡವಳಿಕೆ ಹಾಗೂ ಪ್ರವೃತ್ತಿಯನ್ನು ಹೊಂದಿರುವ ಹುಡುಗಿಯರ ಬಗ್ಗೆ ವಿವರಿಸಲು ಬಳಸುವ ಪದ. ಗುಡ್‌ ಗರ್ಲ್‌ ಸಿಂಡ್ರೋಮ್‌ ಇವರ ಹುಡುಗಿಯರನ್ನು ಕಂಡು ಇತರರು ಸಂತೋಷ ಪಡಬಹುದು, ಆದರೆ ಇದು ಸ್ವತಃ ಅವರ ಸಂತೋಷ, ನೆಮ್ಮದಿಯನ್ನು ಕಸಿಯುತ್ತದೆ. ಅಸಹಾಯಕ ಪರಿಸ್ಥಿತಿ ಅವರ ಕೈ ಕಟ್ಟಿ ಹಾಕಬಹುದು. ಇದರಿಂದ ಈ ಸಿಂಡ್ರೋಮ್‌ ಹೊಂದಿರುವ ಹೆಣ್ಣುಮಕ್ಕಳು ಸಮಸ್ಯೆಗಳನ್ನು ಎದುರಿಸಬಹುದು. ಕೆಲವೊಮ್ಮೆ ಈ ಗುಡ್‌ ಗರ್ಲ್‌ ಸಿಂಡ್ರೋಮ್‌ ಹೆಣ್ಣುಮಕ್ಕಳಲ್ಲಿ ಖಿನ್ನತೆ, ಆತಂಕದಂತಹ ಮಾನಸಿಕ ಸಮಸ್ಯೆಗೂ ಕಾರಣವಾಗಬಹುದು.

ಗುಡ್‌ ಗರ್ಲ್‌ ಸಿಂಡ್ರೋಮ್‌ನ ಲಕ್ಷಣಗಳೇನು, ಇದರಿಂದಾಗುವ ಸಮಸ್ಯೆಗಳೇನು?

ಜನರನ್ನು ಮೆಚ್ಚಿಸುವುದು: ಗುಡ್‌ ಗರ್ಲ್‌ ಸಿಂಡ್ರೋಮ್‌ ಹೊಂದಿರುವವರಲ್ಲಿ ಸದಾ ತಾನು ಇನ್ನೊಬ್ಬರನ್ನು ಮೆಚ್ಚಿಸಬೇಕು ಎನ್ನುವ ಭಾವವಿರುತ್ತದೆ. ಆ ಕಾರಣದಿಂದಾಗಿ ಅವರು ತಮ್ಮ ಇಷ್ಟ, ಕಷ್ಟದ ಕಡೆಗೆ ಗಮನ ಹರಿಸುವುದಿಲ್ಲ. ಬೇರೆಯವರಿಗೆ ಬೇಸರವಾಗಬಾರದು ಎನ್ನುವ ಕಾರಣಕ್ಕೆ ಇಲ್ಲ ಎನ್ನಲು ಅವರಿಂದ ಸಾಧ್ಯವಾಗುವುದಿಲ್ಲ. ಆ ಕಾರಣದಿಂದ ಹಸಿವಿನಿಂದ ಬಳಲುವುದು, ಮಾನಸಿಕ ಒತ್ತಡ, ಕಿರಿಕಿರಿ ಮುಂತಾದವುಗಳನ್ನು ಎದುರಿಸಬಹುದು. ಆಂತರಿಕ ಧ್ವನಿ ಬೇರೆಯದ್ದನ್ನೇ ಹೇಳುತ್ತಿದ್ದರೂ ಕೂಡ ಅದನ್ನು ಕೇಳಿಸಿಕೊಳ್ಳದೇ ನಗುವಿನ ಮುಖವಾಡ ಧರಿಸಿ ಇರುತ್ತಾರೆ. ಇದರಿಂದ ಆ ಮಹಿಳೆ ಅಥವಾ ಹುಡುಗಿ ತನ್ನ ಮೇಲೆ ತಾನು ನಂಬಿಕೆ ಕಳೆದುಕೊಳ್ಳಬಹುದು.

ನಿರಾಕರಣೆಯ ಭಯ: ಯಾರೋ ತಮ್ಮನ್ನು ನಿರಾಕರಿಸುತ್ತಾರೆ, ದೂರ ಮಾಡುತ್ತಾರೆ ಎನ್ನುವ ಕಾರಣಕ್ಕೆ ತಿನ್ನುವುದು, ತೊಡುವುದು ಇಂತಹ ಚಿಕ್ಕಪುಟ್ಟ ವಿಷಯದಲ್ಲೂ ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳುವುದು ಹಿಂಜರಿಯಬಹುದು. ಇನ್ನೊಬ್ಬರ ಇಷ್ಟದಂತೆ ಬದುಕಲು ಮನಸ್ಸು ಮಾಡಬಹುದು. ವಾದ ಮಾಡುವುದು, ನಿರಾಕರಿಸುವುದಕ್ಕೆ ಹಿಂದೇಟು ಹಾಕಬಹುದು. ಇದರಿಂದ ತಮಗೆ ಅತೃಪ್ತಿ ಉಂಟಾಗಿದ್ದರೂ ಕೂಡ ಅವರು ಅದನ್ನು ವ್ಯಕ್ತಪಡಿಸದೆ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳದೇ ಸುಮ್ಮನಿರುತ್ತಾರೆ.

ಪರಿಪೂರ್ಣತೆ: ಜೀವನದ ಎಲ್ಲಾ ಅಂಶಗಳಲ್ಲಿ ಪರಿಪೂರ್ಣತೆಯನ್ನು ಸಾಧಿಸಲು ಪ್ರಯತ್ನಿಸುವುದು, ಸಾಧಿಸಲಾಗದ ಮಾನದಂಡಗಳನ್ನು ಹೊಂದಿಸಲು ಪ್ರಯತ್ನಿಸುವುದು ಮಾಡುತ್ತಾರೆ. ಇದು ಸಾಧ್ಯವಾಗದೇ ಇದ್ದಾಗ ಖಿನ್ನತೆಗೆ ಒಳಗಾಗುವ ಸಂದರ್ಭವೂ ಬರಬಹುದು. ಕೆಲವೊಮ್ಮೆ ಇದು ಒಸಿಡಿ, ಖಿನ್ನತೆ, ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.

ಮಿತಿ ಹೇರಿಕೆ: ಈ ಸಿಂಡ್ರೋಮ್‌ ಹೊಂದಿರುವವರು ತಾವೇ ತಮಗೆ ಒಂದು ಮಿತಿ ಹೇರಿಕೊಂಡು ಬದುಕುತ್ತಿರುತ್ತಾರೆ. ಬೇರೆಯವರ ಜೊತೆ ಮನಸ್ಸು ಬಿಚ್ಚಿ ಮಾತನಾಡಲು ಹಿಂಜರಿಯಬಹುದು. ಇದರಿಂದ ಅವರನ್ನು ಅವರೇ ನಿರ್ಲಕ್ಷ್ಯ ಮಾಡಿಕೊಳ್ಳಬಹುದು. ಸ್ವ ಕಾಳಜಿಯ ವಿಚಾರದಲ್ಲೂ ಹಿಂಜರಿಕೆ ಮಾಡಬಹುದು. ಜನರನ್ನು ಮೆಚ್ಚಿಸುವ ಈ ಗುಣವು ಅವರಲ್ಲಿ ಇಲ್ಲ ಎನ್ನಲು ಬರುವುದಿಲ್ಲ.

ಎಲ್ಲದರ ಜವಾಬ್ದಾರಿ ತೆಗೆದುಕೊಳ್ಳುವುದು: ಗುಡ್‌ ಗರ್ಲ್‌ ಸಿಂಡ್ರೋಮ್‌ ಇರುವವರು ಎಲ್ಲಾ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳಲು ಬಯಸಬಹುದು. ತಮ್ಮಿಂದ ಸಾಧ್ಯವಾಗದೇ ಇದ್ದರೂ ಬೇರೆಯವರನ್ನು ಮೆಚ್ಚಿಸುವ ಸಲುವಾಗಿ, ಇನ್ನೊಬ್ಬರಿಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು, ಇದು ಅವರ ಮೇಲೆ ಅವರೇ ಒತ್ತಡ ಹೇರಿಕೊಳ್ಳುವಂತೆ ಮಾಡುತ್ತದೆ.

ಸ್ವಯಂ ಆದ್ಯತೆ ತೆಗೆದುಕೊಂಡರೆ ಪಶ್ಚಾತ್ತಾಪ: ಈ ಸಿಂಡ್ರೋಮ್‌ ಇರುವ ಹುಡುಗಿಯರು ಎಂದಿಗೂ ತಮ್ಮ ಮೇಲೆ ತಾವು ಕಾಳಜಿ ವಹಿಸುವುದಿಲ್ಲ. ಒಂದು ವೇಳೆ ಅಪ್ಪಿತಪ್ಪಿ ಕಾಳಜಿ ವಹಿಸುವಂತಹ ಪರಿಸ್ಥಿತಿ ಬಂದರೂ ಅದಕ್ಕಾಗಿ ಪಶ್ಚಾತ್ತಾಪ ಪಡುತ್ತಾರೆ. ಇದರಿಂದ ಆತಂಕ ಅವರನ್ನು ಕಾಡಬಹುದು.

ಗುಡ್‌ ಸಿಂಡ್ರೋಮ್‌ನಿಂದ ಹೊರ ಬರುವುದು ಹೇಗೆ?

ಖಂಡಿತ ಒಂದೇ ದಿನಕ್ಕೆ ಈ ಸಿಂಡ್ರೋಮ್‌ನಿಂದ ಹೊರ ಬರಲು ಸಾಧ್ಯವಿಲ್ಲ, ಯಾಕೆಂದರೆ ಇದು ಬಾಲ್ಯದಿಂದ ಅಥವಾ ಯೌವನದ ದಿನಗಳಿಂದಲೂ ನಿಮ್ಮಲ್ಲಿ ರೂಢಿಯಾಗಿರಬಹುದು. ಆದರೆ ಇದರ ಪರಿಣಾಮವನ್ನು ತಗ್ಗಿಸಲು ಈ ಕೆಲವು ಅಂಶಗಳನ್ನು ತಲೆಯಲ್ಲಿ ಇರಿಸಿಕೊಳ್ಳಬೇಕು.

  • ಮಾನಸಿಕ ತಜ್ಞರಿಂದ ಸಹಾಯ ಪಡೆಯಿರಿ. ನಿರಂತರವಾಗಿ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿ. ಸಮಾಜ ಏನು ಹೇಳಬಹುದು ಎಂದು ಚಿಂತಿಸಬೇಡಿ.
  • ನೀವು ಬೇರೆಯವರಿಗೆ ನೀಡುವ ಗಮನದ ಬಗ್ಗೆ ಮಿತಿ ಹಾಕಿಕೊಳ್ಳಿ.
  • ಬೇರೆಯವರು ಏನು ಹೇಳಬಹುದು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.
  • ನಿಮ್ಮ ಅಂತರಾತ್ಮದ ಮಾತನ್ನು ಕೇಳಿಸಿಕೊಳ್ಳಿ.
  • ಭಾವನಾತ್ಮಕವಾಗಿ ಬೇರೆಯವರ ಮೇಲೆ ಅವಲಂಬಿತವಾಗುವುದಕ್ಕೆ ಕಡಿವಾಣ ಹಾಕಿ.
  • ಬೇರೆಯವರನ್ನು ಮೆಚ್ಚಿಸುವ ಐಡಿಯಾ ಹುಡುಕುವ ಬದಲು ನಿಮ್ಮನ್ನು ನೀವು ಮೆಚ್ಚಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ