logo
ಕನ್ನಡ ಸುದ್ದಿ  /  ಜೀವನಶೈಲಿ  /  ಬಹುಮುಖ ಪ್ರತಿಭೆ ಅರ್ಪಿತಾ ಉದಯ್ ನಾಯಕ್ ಭರತನಾಟ್ಯ ರಂಗಪ್ರವೇಶ ಫೆ 17ರ ಸಂಜೆ 5ಕ್ಕೆ; ಮೈಸೂರು ಜಗನ್ಮೋಹನ ಅರಮನೆಯಲ್ಲಿ ನಾಟ್ಯ ಸಂಭ್ರಮ

ಬಹುಮುಖ ಪ್ರತಿಭೆ ಅರ್ಪಿತಾ ಉದಯ್ ನಾಯಕ್ ಭರತನಾಟ್ಯ ರಂಗಪ್ರವೇಶ ಫೆ 17ರ ಸಂಜೆ 5ಕ್ಕೆ; ಮೈಸೂರು ಜಗನ್ಮೋಹನ ಅರಮನೆಯಲ್ಲಿ ನಾಟ್ಯ ಸಂಭ್ರಮ

Umesh Kumar S HT Kannada

Feb 17, 2024 08:08 AM IST

google News

ಮೈಸೂರು ಜಗನ್ಮೋಹನ ಅರಮನೆಯಲ್ಲಿ ಇಂದು (ಫೆ 17) ಸಂಜೆ 5ಕ್ಕೆ ಬಹುಮುಖ ಪ್ರತಿಭೆ ಅರ್ಪಿತಾ ಉದಯ್ ನಾಯಕ್ ಭರತನಾಟ್ಯ ರಂಗಪ್ರವೇಶದ ನಾಟ್ಯ ಸಂಭ್ರಮ ನಡೆಯಲಿದೆ.

  • ಮೈಸೂರು ಜಗನ್ಮೋಹನ ಅರಮನೆ ವೇದಿಕೆಯಲ್ಲಿಇಂದು (ಫೆ 17) ಸಂಜೆ 5ಕ್ಕೆ ಬಹುಮುಖ ಪ್ರತಿಭೆ ಅರ್ಪಿತಾ ಉದಯ್ ನಾಯಕ್ ಭರತನಾಟ್ಯ ರಂಗಪ್ರವೇಶ ನಡೆಯಲಿದೆ. ಉದಯೋನ್ಮುಖ ಪ್ರತಿಭೆ ನಾಟ್ಯ ಸಂಭ್ರಮದ ವಿವರ ಇಲ್ಲಿದೆ. (ಲೇಖನ - ಶಿವಮೊಗ್ಗ ರಾಮ್‌) 

ಮೈಸೂರು ಜಗನ್ಮೋಹನ ಅರಮನೆಯಲ್ಲಿ ಇಂದು (ಫೆ 17) ಸಂಜೆ 5ಕ್ಕೆ ಬಹುಮುಖ ಪ್ರತಿಭೆ ಅರ್ಪಿತಾ ಉದಯ್ ನಾಯಕ್ ಭರತನಾಟ್ಯ ರಂಗಪ್ರವೇಶದ ನಾಟ್ಯ ಸಂಭ್ರಮ ನಡೆಯಲಿದೆ.
ಮೈಸೂರು ಜಗನ್ಮೋಹನ ಅರಮನೆಯಲ್ಲಿ ಇಂದು (ಫೆ 17) ಸಂಜೆ 5ಕ್ಕೆ ಬಹುಮುಖ ಪ್ರತಿಭೆ ಅರ್ಪಿತಾ ಉದಯ್ ನಾಯಕ್ ಭರತನಾಟ್ಯ ರಂಗಪ್ರವೇಶದ ನಾಟ್ಯ ಸಂಭ್ರಮ ನಡೆಯಲಿದೆ.

ಸಾಮಾನ್ಯವಾಗಿ ನೃತ್ಯ ಕಲಿತವರು ರಂಗಪ್ರವೇಶ ಮಾಡುವುದು ವಾಡಿಕೆ. ಇತ್ತೀಚಿನ ದಿನಗಳಲ್ಲಿ ಅದು ಪ್ಯಾಷನ್ ಕೂಡಾ. ಆದರೆ ಕಲೆಯನ್ನು ಒಂದು ಜೀವನದ ಪ್ರಮುಖ ಗುರಿ ಮತ್ತು ತಪಸ್ಸು ಎಂದು ಭಾವಿಸಿ ಅಭ್ಯಾಸ ಮಾಡುವವರು ವಿರಳಾತಿ ವಿರಳ. ಅಂಥವರ ಸಾಲಿಗೆ ಸೇರುವ ಉದಯೋನ್ಮುಖ ಪ್ರತಿಭೆಯೇ ಅರ್ಪಿತಾ ಉದಯ ನಾಯಕ.

ಹೌದು. ಈಕೆ ಕೇವಲ ನರ್ತಕಿ ಅಲ್ಲ. ಬಹುಮುಖಿ... ಸಂಗೀತ, ವಾಲಿಬಾಲ್, ಕ್ವಿಜ್, ಬರವಣಿಗೆ ಕಲೆ, ನೃತ್ಯ ಸಂಯೋಜನೆ- ಹೀಗೆ ಹತ್ತು ಹಲವು ಪ್ರತಿಭೆಗಳ ಸಂಗಮ. ವೃತ್ತಿಯಲ್ಲಿ ಈಗ ಬಿಜಿನೆಸ್ ಅನಾಲಿಸ್ಟ್. ಎಲ್ಲವನ್ನೂ ಸಮನ್ವಯ ಮಾಡಿಕೊಂಡೇ ಕಲೆಗೆ ತನ್ನ ಬದ್ಧತೆ ತೋರಿಸುವ ಅಪರೂಪದ ಪ್ರತಿಭೆ.

ಗೋಕರ್ಣ ಮೂಲದ ಕುಟುಂಬದ ಈ ಹೆಮ್ಮೆಯ ಕುಡಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲೇ ಇಂಜಿನಿಯರಿಂಗ್ ಪದವಿ ವರೆಗೆ ಶಿಕ್ಷಣ ಪಡೆದು, ಸಮರ್ಥ ಗುರುವಿನ ಕೃಪೆಯಲ್ಲಿ ಸಂಗೀತ, ನೃತ್ಯಗಳನ್ನೂ ಅಭ್ಯಸಿಸಿ, ವೇತನ ಬರುವ ವೃತ್ತಿಯನ್ನೂ ನಿರ್ವಹಿಸಿಕೊಂಡು ಇದೀಗ ರಂಗಪ್ರವೇಶಕ್ಕೆ ಸಿದ್ಧರಾಗಿದ್ದಾರೆ ಎಂದರೆ ಅದು ದೊಡ್ಡ ಸಾಧನೆಯೇ ಸರಿ. ಈ ಕ್ರಿಯಾಶೀಲ ವ್ಯಕ್ತಿತ್ವದ ಕಥೆ ವಿಶೇಷ ಮತ್ತು ವಿಭಿನ್ನ. ಇಂದಿನ ಯುವಜನರಿಗೆ ಈಕೆ ಮಾದರಿ.

ಅಮ್ಮನೇ ಪ್ರೇರಣೆ- ಅಪ್ಪನೇ ಆಧಾರ

ಮನೆ ಮೊದಲ ಪಾಠಶಾಲೆ. ಜನನಿಯೇ ಮೊದಲ ಗುರು ಎಂಬುದು ನಾಣ್ಣುಡಿ. ಅದಕ್ಕೆ ಪೂರಕವಾಗಿಯೇ ಅರ್ಪಿತಾ ತಮ್ಮ ಬಾಲ್ಯದ ದಿನಗಳು ದೊರಕಿರುವುದು ಯೋಗಾಯೋಗ. ಅಮ್ಮ ನನ್ನನ್ನು ಆಟ ಆಡಿಸುವಾಗ, ಉಣಿಸುವಾಗ, ತೂಗುವಾಗ, ರಮಿಸುವಾಗ, ಹಾಡುತ್ತಲೇ ಇರುತ್ತಿದ್ದರು. ಮೈಸೂರು ಮಲ್ಲಿಗೆ ಸಂಕಲನದ ಪದ್ಯಗಳು (ಕೆಎಸ್. ನರಸಿಂಹಸ್ವಾಮಿ) ಎಂದರೆ ಅವರಿಗೆ ಬಹು ಪ್ರಿಯ. ಸದಾ ಅದನ್ನೇ ಗುನುಗುತ್ತಿದ್ದರು. ಇದನ್ನು ಎಳವೆಯಿಂದಲೇ ಕೇಳಿ ಕೇಳಿ ಅದಕ್ಕೆ ನನ್ನ ಮನ ಸಂಗೀತಾಸಕ್ತಿಗೆ ನೆಲೆ ಆಯಿತು. ಗಾಯನ ಕಲಿ ಎಂದು ಒಳಗಿನಿಂದಲೇ ಪ್ರೇರಣೆ ನೀಡುತ್ತ ಇತ್ತು. ಒಳಮನದ ದನಿಗೆ ಓಗೊಟ್ಟೆ. ನಾನೂ ಸಂಗೀತ ಕಲಿಯುತ್ತೇನೆ.. ಎಂದು ಕೇಳಿಕೊಂಡೆ. ಅಮ್ಮ ಸ್ಪಂದಿಸಿದರು. ಅದೇ ನನಗೆ ಸಂಗೀತ- ಮತ್ತು ನಂತರ ನೃತ್ಯ ಕಲಿಕೆಗೆ ಪ್ರೇರಣೆ ನೀಡಿತು. ಇಂದು ನಾನು ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆ ಮುಗಿಸಿ, ಅಂತಿಮ ವಿದ್ವತ್ ಪರೀಕ್ಷೆಗೆ ತಯಾರಿ ನಡೆಸುತ್ತ ಇದ್ದೇನೆ. ಈ ನಡುವೆ ರಂಗಪ್ರವೇಶಕ್ಕೂ ಸಿದ್ಧಳಾಗಿರುವೆ. ಇದಕ್ಕೆ ಅಮ್ಮನೇ ಮೂಲ. ಅಪ್ಪನೇ ಆಧಾರ ಎನ್ನುತ್ತಾರೆ ಅರ್ಪಿತಾ.

ಹೌದು. ಇದೀಗ ಫೆ. 17ರಂದು ಗುರು, ಹಿರಿಯರ ಸಮ್ಮುಖ ಭರತನಾಟ್ಯ ರಂಗಪ್ರವೇಶ ಮಾಡಲಿರುವ ಮೈಸೂರಿನ ಈ ಯುವ ಕಲಾವಿದೆ ತನ್ನ ಅಮ್ಮನ ಸ್ಫೂರ್ತಿ ಮತ್ತು ಪ್ರೇರಣೆಯನ್ನು ಸ್ಮರಿಸಿಕೊಂಡೇ ರಂಗಕ್ಕೆ ಪದಾರ್ಪಣೆ ಮಾಡುವ ಶುಭ ಅವಸರದಲ್ಲಿರುವುದು ವಿಶೇಷ. ಜೆಸಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಬಿಜಿನೆಸ್ ಅನಾಲಿಸ್ಟ್ ವೃತ್ತಿನಿರತೆ. ಇವರ ಪ್ರವೃತ್ತಿ ಹಲವು. ಅದರಲ್ಲಿ ಸಂಗೀತ ಮತ್ತು ನರ್ತನ ಪ್ರಧಾನ ಎಂಬುದಿಲ್ಲಿ ಮಹತ್ವದ್ದು.

ಬೆಳೆದುಬಂದ ಪರಿ: ಉದ್ಯೋಗ ನಿಮಿತ್ತ ಉದಯ ನಾಯಕ ಮತ್ತು ಸುವರ್ಣಾ ನಾಯಕ ದಂಪತಿ ಮೈಸೂರಿನಲ್ಲೇ ನೆಲೆಸಬೇಕಾಯಿತು. ಹಾಗಾಗಿ ಅರ್ಪಿತಾ ಓದಿದ್ದು, ಬರೆದದ್ದು, ಹಾಡುವ- ನರ್ತಿಸುವ ಪಾಠ ಕಲಿತದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ. 5ನೇ ವರ್ಷದವಳಿದ್ದಾಗೇ ಗುರು ಸರಸ್ವತಿ ಅವರಲ್ಲಿ ನರ್ತನದ ಮೊದಲ ಹೆಜ್ಜೆ ಕಲಿಕೆ. ನಂತರ ವಿದುಷಿ ಮಿತ್ರಾ ನವೀನ್ ಗರಡಿಯಲ್ಲಿ ಭರತನಾಟ್ಯ ಕಲಿಕೆಗೆ ಶಿಷ್ಯತ್ವ ಸ್ವೀಕಾರ. 17 ವರುಷದ ಕಲಾ ಪಯಣದಲ್ಲಿ ಈಕೆ ಜೂನಿಯರ್, ಸೀನಿಯರ್ ಪರೀಕ್ಷೆಗಳನ್ನು ಅತ್ಯುತ್ತಮ ಶ್ರೇಣಿಯಲ್ಲೇ ಪೂರ್ಣಗೊಳಿಸಿಕೊಂಡು ಇದೀಗ ಪೋಸ್ಟ್ ವಿದ್ವತ್ ಪರೀಕ್ಷೆಗೆ ತಾಲೀಮು ನಡೆಸುತ್ತ ಇದ್ದಾರೆಂಬುದು ವಿಶೇಷ.

ಶಾಲಾ ಪರೀಕ್ಷೆಗಳಾದ ಎಸ್ಸೆಸ್ಸೆಲ್ಸಿ, ಪಿಯುಸಿ (ವಿಜ್ಞಾನ), ನಂತರ ಜೆಸಿ ಕಾಲೇಜಿನಲ್ಲಿ ಬಿಇ (ಬಯೋ ಟೆಕ್ನಾಲಜಿ)- ಎಲ್ಲವುಗಳಲ್ಲೂ ಈಕೆ ಅತ್ಯುನ್ನತ ಶ್ರೇಣಿಯನ್ನೇ ಮುಡಿಗೇರಿಸಿಕೊಂಡ ಪ್ರತಿಭಾನ್ವಿತೆ. ಕನ್ನಡದಲ್ಲಿ ನೂರಕ್ಕೆ ನೂರು ಅಂಕವನ್ನು ಎಸ್ಸೆಸ್ಸೆಲ್ಸಿಯಲ್ಲಿ ಪಡೆದ ಸಾಧನೆಗೆ ಮೈಸೂರು ಜಿಲ್ಲಾಡಳಿತ ಗೌರವಾರ್ಪಣೆ ಮಾಡಿದ್ದು ಸವಿ ಸವಿ ನೆನಪು. ಸಾಂಸ್ಕೃತಿಕ ಕಾರ್ಯಕ್ರಮ, ಕ್ವಿಜ್‌ನೊಂದಿಗೆ ವಾಲಿಬಾಲ್ ಕ್ರೀಡೆಯಲ್ಲೂ ಪ್ರತಿಭೆ ಹೊಮ್ಮಿತು. ಇದಲ್ಲದೇ ಪ್ರತಿಭಾ ಕಾರಂಜಿಯಲ್ಲೂ ಹಲವು ಬಹುಮಾನ. ಬೆಳೆಯುವ ಸಿರಿ ಮೊಳಕೆಯಲ್ಲಿ....

ಪ್ರತಿಭಾ ಸಂಗಮ, ಗುರುವಿನೊಂದಿಗೆ ಹೆಜ್ಜೆ.. ಗೆಜ್ಜೆ ...

ಇಂಜಿನಿಯರಿಂಗ್ ಪದವಿ ಅಧ್ಯಯನ ಸಂದರ್ಭ ಜೆಸಿ ಕಾಲೇಜಿನ ಸಂಗೀತ ಕ್ಲಬ್ ಆಗಿರುವ ‘ನಾದ’ ವನ್ನು ಮುನ್ನಡೆಸುವ ಸಾರಥ್ಯ. ಕವಿತೆ, ಅಂದವಾದ ಬರವಣಿಗೆ, ಸ್ಕೆಚ್ಚಿಂಗ್ ಕಲೆಗಳೂ ಕರಗತವಾದದ್ದು ಹದಿಹರೆಯದ ವಸಂತದಲ್ಲೇ. ಗುರು ಮಿತ್ರಾ ನವೀನ್‌ರಲ್ಲಿ ನೃತ್ಯ, ವಿದ್ವಾನ್ ನವೀನ್ ಅವರ ಬಳಿ ಶಾಸ್ತ್ರೀಯ ಗಾಯನ ಅಭ್ಯಾಸ ಈಕೆಯನ್ನು ಭರವಸೆಯ ಕಲಾವಿದೆಯನ್ನಾಗಿ ರೂಪಿಸಲು ವರವಾಯಿತು.

ನೃತ್ಯ ಕಲಿಯುತ್ತಲೇ ಗುರುವಿನೊಂದಿಗೆ ಅರ್ಪಿತಾ ಹಲವು ವೇದಿಕೆ ಕಾರ್ಯಕ್ರಮಗಳನ್ನೂ ನೀಡಿದ್ದಾರೆ. ಮೈಸೂರು ದಸರಾ ಉತ್ಸವ, ನೂಪುರ ಉತ್ಸವ, ಕೃಷ್ಣ ಜಯಂತಿ, ನವರಾತ್ರಿ ಉತ್ಸವ- ನಾದ ನೃತ್ಯೋಪಾಸನಾ- ಇವುಗಳಲ್ಲಿ ಅರ್ಪಿತಾ ಅವರ ಸಹ ನರ್ತನ ಕಲಾಗಾರಿಕೆಯನ್ನು ಕಲಿಸಿತು. ಇದಲ್ಲದೇ ವಿಶೇಷ ನೃತ್ಯ ರೂಪಕಗಳಲ್ಲಿ ಅರ್ಪಿತಾ ಪಾತ್ರ ನಿರ್ವಹಿಸಿ ಮೆಚ್ಚುಗೆ ಗಳಿಸಿದರು. ಆದಿಪೂಜ್ಯಾದಲ್ಲಿ ಶಿವನಾಗಿ, ಧರ್ಮ ವಿಜಯದಲ್ಲಿ ರಾವಣನಾಗಿ, ಶ್ರೀಕೃಷ್ಣ ವಿಲಾಸದಲ್ಲಿ ಯಶೋದೆಯಾಗಿ ಈಕೆ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ.

ನಾನೂ ಕಲಾ ಶಿಕ್ಷಕಿ ಆಗುವೆ ಎನ್ನುವ ಅರ್ಪಿತಾ ರಂಗ ಪ್ರವೇಶಕ್ಕೆ ಜಗನ್ಮೋಹನ ಅರಮನೆಯೇ ವೇದಿಕೆ

ಬಯೋ ಟೆಕ್ನಾಲಜಿ ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ತಕ್ಷಣ ರಾಜಧಾನಿ ಬೆಂಗಳೂರಿನಲ್ಲಿ ಅನೇಕ ಕಂಪನಿಗಳು ಉದ್ಯೋಗದ ಕರೆ ನೀಡಿದವು. ಆದರೆ ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆ ಪೂರ್ಣ ಮಾಡಲೇಬೇಕು ಎಂಬ ಹಟತೊಟ್ಟ ಅರ್ಪಿತಾ, ಮೈಸೂರನ್ನೇ ನೆಲೆ ಮಾಡಿಕೊಂಡರು. ಇಲ್ಲೇ ಉದ್ಯೋಗ ಪಡೆದರು. ಮುಂದೆ ನಾನೂ ನೃತ್ಯ ಶಿಕ್ಷಕಿ ಆಗಬೇಕು. ನನ್ನ ಗುರು ಮಿತ್ರಾ ಅವರಂತೆ ನೂರಾರು ಮಕ್ಕಳಿಗೆ ನರ್ತನ ಪಾಠ ಮಾಡಬೇಕು ಎನ್ನುತ್ತಾರೆ ಅರ್ಪಿತಾ.

ವಿದುಷಿ ಮಿತ್ರಾ ನವೀನ್ ಅವರ ಶಿಷ್ಯೆ, ಮೈಸೂರಿನ ನಾದ ವಿದ್ಯಾಲಯದ ವಿದ್ಯಾರ್ಥಿನಿ ಅರ್ಪಿತಾ ನಾಯಕ ಭರತನಾಟ್ಯ ರಂಗಪ್ರವೇಶ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಫೆ. 17ರ ಸಂಜೆ 5ಕ್ಕೆ ವಿಜೃಂಭಿಸಲಿದೆ. ಬೆಂಗಳೂರಿನ ನೃತ್ಯಗಂಗಾ ಪ್ರದರ್ಶನ ಕಲಾ ಕೇಂದ್ರದ ನಿರ್ದೇಶಕಿ ವಿದುಷಿ ರೂಪಶ್ರೀ ಮಧುಸೂದನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಶಾಸಕ ಟಿ.ಎಸ್. ಶ್ರೀವತ್ಸ ಅತಿಥಿಗಳಾಗಿದ್ದಾರೆ.

(ಲೇಖನ - ಶಿವಮೊಗ್ಗ ರಾಮ್‌)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ