ಆಯುಧಪೂಜೆಯಂದು ಹೀಗಿರಲಿ ನಿಮ್ಮ ಮನೆ ಅಲಂಕಾರ, ನವರಾತ್ರಿಯ 9ನೇ ದಿನ ಆಯುಧಗಳ ಜತೆ ಮನೆಯನ್ನೂ ಸಿಂಗರಿಸಲು ಇಲ್ಲಿದೆ ಒಂದಿಷ್ಟು ಐಡಿಯಾಗಳು
Oct 10, 2024 01:20 PM IST
ಆಯುಧ ಪೂಜೆಯಂದು ಮನೆ ಅಲಂಕಾರ
- ಭಾರತದಾದ್ಯಂತ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ನಾಳೆ ಅಂದರೆ ಅಕ್ಟೋಬರ್ 11 ರಂದು ನವರಾತ್ರಿಯ ಒಂಬತ್ತನೇ ದಿನ. ಈ ದಿನ ಆಯುಧ ಪೂಜೆ ಮಾಡುವುದು ವಿಶೇಷ. ಮನೆ, ಅಂಗಡಿ–ಮುಂಗಟ್ಟುಗಳು, ಕಚೇರಿಗಳಲ್ಲಿ ಇರುವ ವಿವಿಧ ಸಾಮಗ್ರಿ, ಸಲಕರಣೆಗಳನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ಈ ಬಾರಿ ಆಯುಧ ಪೂಜೆಗೆ ವಿಶೇಷವಾಗಿ ಮನೆ ಅಲಂಕರಿಸಬೇಕು ಎನ್ನುವವರಿಗೆ ಇಲ್ಲಿದೆ ಒಂದಿಷ್ಟು ಐಡಿಯಾ.
ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬ ಹಾಗೂ ಹತ್ತನೇ ದಿನದ ವಿಜಯದಶಮಿ ಅಥವಾ ದಸರಾ ಹಬ್ಬವನ್ನು ಭಾರತದಲ್ಲಿ ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಮಹಿಷಾಸುರ ಎಂಬ ರಾಕ್ಷಸನಿಂದ ಪ್ರಪಂಚವನ್ನು ರಕ್ಷಿಸಲು ದುರ್ಗಾಮಾತೆಯು 9 ದಿನಗಳ ಕಾಲ ಘೋರ ಹೋರಾಟ ಮಾಡಿ 10ನೇ ದಿನ ಅಂದರೆ ವಿಜಯದಶಮಿಯ ದಿನ ಮಹಿಷ ವಧೆ ಮಾಡುತ್ತಾಳೆ. ಈ ಹಿನ್ನೆಲೆಯಲ್ಲಿ 9 ದಿನಗಳ ಕಾಲ ದುರ್ಗಾದೇವಿಯನ್ನು ವಿವಿಧ ರೂಪಗಳಲ್ಲಿ ಆರಾಧಿಸಲಾಗುತ್ತದೆ.
ನವರಾತ್ರಿ 9ನೇ ದಿನ ಅಂದರೆ ನವಮಿಯ ದಿನ ಆಯುಧ ಪೂಜೆಯನ್ನು ಮಾಡಲಾಗುತ್ತದೆ. ನವರಾತ್ರಿಯಲ್ಲಿ ಆಯುಧ ಪೂಜೆಗೂ ವಿಶೇಷ ಮಹತ್ವವಿದೆ. ದುರ್ಗಾದೇವಿಯು ಮಹಿಷಾಸುರನನ್ನು ವಿವಿಧ ಆಯುಧಗಳಿಂದ ಗಂಭೀರವಾಗಿ ಗಾಯಗೊಳಿಸಿದ ದಿನದ ಹಿನ್ನೆಲೆಯಲ್ಲಿ ಈ ದಿನದಂದು ಆಯುಧ ಪೂಜೆಯನ್ನು ಮಾಡಲಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.
ದಕ್ಷಿಣ ಭಾರತದಲ್ಲಿ ಆಯುಧ ಪೂಜೆಗೆ ವಿಶೇಷ. ಈ ದಿನ ವಾಹನಗಳು, ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಮನೆಯಲ್ಲಿ ಬಳಸುವ ಕತ್ತಿ, ಚಾಕು, ಕೊಡಲಿಯಂತಹ ವಿವಿಧ ಸಲಕರಣೆಗಳಿಗೆ ಪೂಜೆ ಮಾಡಲಾಗುತ್ತದೆ. ಆಯುಧಗಳನ್ನು ಚೆನ್ನಾಗಿ ತೊಳೆದು, ಹೂವು, ಕುಂಕುಮ ಅರಿಸಿನದಿಂದ ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ಈ ವರ್ಷ ಆಯುಧ ಪೂಜೆಯಂದು ಮನೆಯನ್ನು ವಿಶೇಷವಾಗಿ ಅಲಂಕರಿಸಬೇಕು ಎಂದುಕೊಂಡಿದ್ದರೆ ಈ ಐಡಿಯಾ ನಿಮಗೆ ಇಷ್ಟವಾಗಬಹುದು ನೋಡಿ.
ಆಯುಧ ಪೂಜೆಯಂದು ಹೀಗಿರಲಿ ಮನೆ ಅಲಂಕಾರ
ರಂಗೋಲಿ: ಹಬ್ಬಗಳು ಎಂದ ಮೇಲೆ ರಂಗೋಲಿ ಇಲ್ಲ ಎಂದರೆ ಅದು ಪರಿಪೂರ್ಣವಾಗುವುದಿಲ್ಲ. ಆಯುಧ ಪೂಜೆಯಂದು ಮನೆಯ ಮುಂದೆ ಹಾಗೂ ಆಯುಧಗಳನ್ನ ಇರಿಸಿ ಪೂಜೆ ಮಾಡುವ ಜಾಗ ಹಾಗೂ ದೇವರ ಮನೆಯ ಮುಂದೆ ದೇವಿ ರೂಪವನ್ನು ರಂಗೋಲಿ ಚಿತ್ತಾರ ಮೂಲಕ ಮೂಡಿಸಬಹುದು. ವಿವಿಧ ಬಣ್ಣಗಳು ಹಾಗೂ ಹೂವಿನ ಪಕಳೆಗಳಿಂದ ದೇವಿಯ ರೂಪವನ್ನು ಮೂಡಿಸಿ, ಆಯುಧಪೂಜೆಯ ಸಂಭ್ರಮವನ್ನು ಹೆಚ್ಚಿಸಿ. ಇದಲ್ಲದೇ ಆಯುಧಗಳ ಮೇಲೂ ಚಿಕ್ಕ ಚಿಕ್ಕ ರಂಗೋಲಿ ಬಿಡಿಸಬಹುದು.
ಗೋಡೆ ಅಲಂಕಾರ ಹೀಗಿರಲಿ: ಆಯುಧಪೂಜೆಯಂದು ಗೋಡೆಗಳನ್ನು ಕೂಡ ಸುಂದರವಾಗಿ ಅಲಂಕರಿಸಬಹುದು. ಬಾಳೆಎಲೆ, ತೆಂಗಿನ ಓಲೆಗಳಿಂದ ಸಿಂಗರಿಸಬಹುದು. ಬಾಳೆಯ ದಿಂಡು ಕೂಡ ಸಿಂಗಾರಕ್ಕೆ ಹೇಳಿ ಮಾಡಿಸಿದ್ದು. ಇವೆಲ್ಲಾ ನೈಸರ್ಗಿಕ ಅಲಂಕಾರಿಕ ವಸ್ತುಗಳು, ಆದರೆ ಇವೆಲ್ಲಾ ನಿಮಗೆ ಸಿಗುವುದಿಲ್ಲ ಎಂದಾದರೆ ಗೋಡೆಗಳಿಗೆ ಅಲಂಕರಿಸಲು ಬಗೆ ಬಗೆಯ ವಸ್ತುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಬಣ್ಣದ ಕಾಗದ, ಜರಿಯ ಚಿತ್ತಾರವಿರುವ ಬಟ್ಟೆಗಳು, ಹೂವಿನ ಚಿತ್ತಾರವಿರುವ ಮಾಲೆಗಳಿಂದ ಗೋಡೆಯನ್ನು ಅಲಂಕರಿಸಿ. ಮಧ್ಯದಲ್ಲಿ ದೇವಿಯ ದೊಡ್ಡ ಫೋಟೊವನ್ನು ಕೂಡ ಇರಿಸಬಹುದು. ನಂತರ ಗೋಡೆಯ ಬಳಿ ಟೇಬಲ್ ಇಟ್ಟು ಅದರ ಮೇಲೆ ಆಯುಧ ಪೂಜೆಗೆ ಇರಿಸುವ ವಸ್ತುಗಳನ್ನು ಇಟ್ಟು ಪೂಜೆ ಮಾಡಬಹುದು.
ಮನೆಗೆ ತೋರಣ: ಹಬ್ಬಗಳು ಹಾಗೂ ವಿಶೇಷ ದಿನಗಳಲ್ಲಿ ಮನೆಗೆ ತೋರಣ ಕಟ್ಟುವುದು ಸಾಮಾನ್ಯ. ಆಯುಧ ಪೂಜೆಯಂದು ಕೂಡ ಮನೆ ಮುಂಬಾಗಿಲು, ದೇವರ ಕೋಣೆಗೆ ಮಾವಿನಎಲೆ ಹಾಗೂ ಹಲಸಿನ ಎಲೆಗಳಿಂದ ತೋರಣ ಕಟ್ಟಿ ಅಲಂಕರಿಸಿ, ತೋರಣಕ್ಕಿಂತ ಸುಂದರ ಅಲಂಕಾರ ಇನ್ನೊಂದಿಲ್ಲ. ಆಯುಧಗಳನ್ನು ಇರಿಸುವ ಟೇಬಲ್‌ಗಳೂ ಮಾವಿನ ಎಲೆ ಹಾಗೂ ಹಲಸಿನ ಎಲೆಗಳಿಂದ ಸಿಂಗರಿಸಿ.
ದೀಪಗಳು: ದೀಪಗಳು ಎಂದರೆ ಕತ್ತಲೆಯನ್ನು ಓಡಿಸುವ ದಿವ್ಯಶಕ್ತಿ ಎಂದರ್ಥ. ಆಯುಧಪೂಜೆಯ ಸಂದರ್ಭ ದೀಪಗಳಿಂದಲೂ ಮನೆಯನ್ನು ಅಲಂಕರಿಸಬಹುದು. ಆಯುಧ ಪೂಜೆ ಮಾಡುವ ಸ್ಥಳವನ್ನು ವಿವಿಧ ಬಣ್ಣದ ದೀಪಗಳಿಂದ ಅಲಂಕಾರ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೂಪದ ಎಲೆಕ್ಟ್ರಾನಿಕ್ ದೀಪಗಳು ಸಿಗುವ ಕಾರಣ ಅವುಗಳನ್ನು ತಂದು ಅಲಂಕರಿಸಿ ಹಬ್ಬದ ಕಳೆಯನ್ನು ಇನ್ನಷ್ಟು ಹೆಚ್ಚಿಸಬಹುದು.
ಆಯುಧ ಪೂಜೆಯಲ್ಲಿ ಮನೆ ಅಲಂಕರಿಸುವ ಉದ್ದೇಶ
ಹಿಂದೂ ಧರ್ಮದಲ್ಲಿ ಮನೆಯನ್ನು ಮಂದಿರ ಎಂದರೆ ದೇವಾಲಯದ ಸ್ವರೂಪ ಎಂದೇ ಪರಿಗಣಿಸಲಾಗುತ್ತದೆ. ಆ ಕಾರಣಕ್ಕೆ ಈ ದಿನದಂದು ಮನೆಯನ್ನು ಅಲಂಕರಿಸಬೇಕು. ಈ ದಿನ ಮನೆ ಅಲಂಕಾರ ಮಾಡುವುದಕ್ಕೆ ವಿಶೇಷ ಪ್ರಾಧಾನ್ಯವಿದೆ. ಇದು ಮನೆಯಲ್ಲಿರುವ ಆಯುಧವನ್ನು ಪ್ರತಿನಿಧಿಸುವ ವಸ್ತುಗಳಿಗೆ ಗೌರವ ನೀಡುವುದನ್ನು ಸೂಚಿಸುತ್ತದೆ. ಆಯುಧ ಪೂಜೆಯ ಸಮಯದಲ್ಲಿ, ಜನರು ತಮ್ಮ ಜೀವನೋಪಾಯ ಮತ್ತು ವೃತ್ತಿಗೆ ಸಂಬಂಧಿಸಿದ ವಸ್ತುಗಳನ್ನು ಪೂಜಿಸುತ್ತಾರೆ. ಇದರಿಂದ ದುರ್ಗಾದೇವಿಯನ್ನು ಸಂತುಷ್ಠಿಗೊಳಿಸಲಾಗುತ್ತದೆ.