Parenting: ಮಕ್ಕಳ ವಿಚಾರವಾಗಿ ಹಲವು ಪೋಷಕರು ಎದುರಿಸುತ್ತಿರುವ, ಯಾರೂ ಚರ್ಚಿಸದ 10 ಸವಾಲಿನ ಸಂಗತಿಗಳಿವು
Feb 05, 2024 07:19 PM IST
ಮಕ್ಕಳ ವಿಚಾರವಾಗಿ ಹಲವು ಪೋಷಕರು ಎದುರಿಸುತ್ತಿರುವ, ಚರ್ಚಿಸಲು ಸಾಧ್ಯವಾಗದ 10 ಸವಾಲಿನ ಸಂಗತಿಗಳಿವು
- ಮಕ್ಕಳ ವಿಚಾರದಲ್ಲಿ ಪೋಷಕರು ಕೆಲವು ಸವಾಲುಗಳನ್ನು ಎದುರಿಸುವುದು ಸಹಜ. ಆದರೆ ಈ ಕೆಲವು ಸವಾಲುಗಳನ್ನು ಬೇರೆಯವರ ಎದುರು ಚರ್ಚಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಇದರಿಂದ ಪೋಷಕರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗುತ್ತಾರೆ. ಅಂತಹ 10 ಸವಾಲುಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಮೊದಲ ಬಾರಿ ಮಗು ಪಡೆಯುವ ಪ್ರತಿ ತಂದೆ-ತಾಯಿಯೂ ತಮ್ಮ ಮಗುವಿನ ಬಗ್ಗೆ ಸಾಕಷ್ಟು ಆಸೆ, ಕನಸು ಹಾಗೂ ನಿರೀಕ್ಷೆಗಳನ್ನು ಇರಿಸಿಕೊಂಡಿರುತ್ತಾರೆ. ಪೋಷಕರು ತಮ್ಮ ಮಕ್ಕಳಿಗಾಗಿ ಸಾಕಷ್ಟು ವಿಚಾರಗಳನ್ನು ತ್ಯಾಗ ಮಾಡಿರುತ್ತಾರೆ. ಮಗುವಿನ ಜನನೊಂದಿಗೆ ತಂದೆ-ತಾಯಿಯಲ್ಲಿ ಪ್ರೀತಿ, ತ್ಯಾಗ, ಸಂತಸ, ಬೆಳವಣಿಗೆ, ಬದಲಾವಣೆ ಈ ಎಲ್ಲವೂ ಬಂದಿರುತ್ತದೆ. ಆದರೆ ಪೋಷಕರಾಗುವ ಖುಷಿಯ ಜೊತೆಗೆ ಕೆಲವು ಸವಾಲುಗಳ ಕೂಡ ಜೊತೆಯಾಗುತ್ತವೆ. ಮಕ್ಕಳನ್ನು ಬೆಳೆಸುವಾಗ ಪೋಷಕರು ಸಾಕಷ್ಟು ಅಡೆತಡೆಗಳನ್ನು ಎದುರಿಸಬಹುದು. ಆರೋಗ್ಯಕರ ಸಂಬಂಧಕ್ಕಾಗಿ ಮಕ್ಕಳೊಂದಿಗೆ ಪ್ರೀತಿಯ ಜೊತೆಗೆ ಜವಾಬ್ದಾರಿಯಿಂದ ನಡೆದುಕೊಳ್ಳುವುದು ಮುಖ್ಯವಾಗುತ್ತದೆ. ಪೋಷಕರು ಎದುರಿಸುವ ಈ ಕೆಲವು ಸವಾಲುಗಳನ್ನು ಯಾರೂ ಚರ್ಚಿಸುವುದಿಲ್ಲ. ಮಾತ್ರವಲ್ಲ, ಇದು ಪೋಷಕರು ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ.
ತಪ್ಪಿತಸ್ಥ ಭಾವನೆ: ಇಂದಿನ ಒತ್ತಡದ ಯುಗದಲ್ಲಿ ವೃತ್ತಿ ಬದ್ಧತೆಯ ಕಾರಣದಿಂದ ಹಲವು ಪೋಷಕರು ತಮ್ಮ ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಿಲ್ಲ. ಜೊತೆಗೆ ಮಕ್ಕಳಿಗಾಗಿ ಸಮಯ ಕೊಡಲು ಅವರಿಂದ ಸಾಧ್ಯವಾಗುವುದಿಲ್ಲ. ತಮ್ಮ ಪಾಲನೆಯ ವಿಚಾರದಲ್ಲಿ ಪೋಷಕರು ತಪ್ಪಿತಸ್ಥ ಭಾವನೆ ಹೊಂದಿರುತ್ತಾರೆ. ಇದು ಅವರಲ್ಲಿ ಅಪರಾಧಿ ಭಾವ ಮೂಡುವಂತೆ ಮಾಡುತ್ತದೆ. ಮಾತ್ರವಲ್ಲ ಇದರಿಂದ ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ವೈಯಕ್ತಿಕ ಬದುಕನ್ನ ಸಮತೋಲನಗೊಳಿಸುವುದು: ಮಕ್ಕಳ ಲಾಲನೆ-ಪಾಲನೆಯ ನಡುವೆ ಸಾಕಷ್ಟು ಬಾರಿ ಪೋಷಕರು ತಮ್ಮ ವೈಯಕ್ತಿಕ ಇಷ್ಟ ಕಷ್ಟಗಳ ಬಗ್ಗೆ ಗಮನ ಹರಿಸಿರುವುದಿಲ್ಲ. ವೈಯಕ್ತಿಕ ಆಸಕ್ತಿಗಳು ಹಾಗೂ ಅಗತ್ಯಗಳನ್ನು ನಿರ್ಲಕ್ಷ್ಯ ಮಾಡಿರುತ್ತಾರೆ. ಪೋಷಕರಾಗಿದ್ದು, ವೈಯಕ್ತಿಕ ಬದುಕಿನ ನಡುವೆ ಸಮತೋಲನ ಸಾಧಿಸುವ ವಿಚಾರದಲ್ಲಿ ಸಾಕಷ್ಟು ಪೋಷಕರು ಸವಾಲು ಎದುರಿಸುತ್ತಾರೆ.
ದಣಿದ ಭಾವ: ಪೇರೆಂಟಿಂಗ್ ಎನ್ನುವುದು ಸುಲಭವಲ್ಲ. ಇದು ಪೋಷಕರನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ದಣಿಯುವಂತೆ ಮಾಡುತ್ತದೆ. ಮಕ್ಕಳ ಆರೈಕೆಗೆ ಸಂಬಂಧಿಸಿದ ನಿರಂತರ ಬೇಡಿಕೆಗಳು, ನಿದ್ದೆಯ ಕೊರತೆ ಹಾಗೂ ಇನ್ನಿತರ ಒತ್ತಡಗಳು ಸೇರಿಕೊಂಡು ಪೋಷಕರನ್ನು ಹೈರಾಣಾಗಿಸಬಹುದು. ಸಮಾಜದಲ್ಲಿನ ಕೆಲವು ಭಾವನೆಗಳ ಕಾರಣದಿಂದ ಪೋಷಕರು ತಮ್ಮ ವೈಯಕ್ತಿಕ ಅಭಿಪ್ರಾಯದತ್ತ ಗಮನ ಕೊಡುವುದು ಕಷ್ಟವಾಗಬಹುದು.
ದ್ವಂದ್ವ ಮನೋಭಾವ: ಮಗುವಿನ ಲಾಲನೆ ಪಾಲನೆಯ ನಡುವೆ ಪೋಷಕರು ಕೆಲವೊಮ್ಮೆ ದ್ವಂದ್ವ ಮನೋಭಾವವನ್ನು ಹೊಂದಿರುತ್ತಾರೆ. ಪ್ರೀತಿ-ದ್ವೇಷ, ಭರವಸೆ-ಹತಾಶೆ ಇಂತಹ ಭಾವನೆಗಳು ಕಾಡುವುದು ಸಹಜ. ಮಗು ಹುಟ್ಟಿದ ಖುಷಿ ಒಂದೆಡೆಯಾದರೆ ಜವಾಬ್ದಾರಿ ಭಾರ ಇನ್ನೊಂದೆಡೆ. ಒಮ್ಮೊಮ್ಮೆ ಮಗುವಿನ ಕಾರಣದಿಂದ ಮನೆಯಲ್ಲಿ ಇಷ್ಟೊಂದು ಖುಷಿ ಇದೆ ಎನ್ನಿಸಿದರೆ, ಕೆಲವೊಮ್ಮೆ ಇಲ್ಲದ ಬೇಸರವೂ ಕಾಡಬಹುದು. ಕೆಲವೊಮ್ಮೆ ಖುಷಿ, ಕೆಲವೊಮ್ಮೆ ಅಸಮಾಧಾನ ಎರಡೂ ಕಾಡಬಹುದು.
ವಾದ-ವಿವಾದಗಳು: ಇತ್ತೀಚಿನ ದಿನಗಳಲ್ಲಿ ಪೋಷಕರು ಬಿಡುವಿಲ್ಲದ ವೇಳಾಪಟ್ಟಿಯ ಕಾರಣ ಮಕ್ಕಳೊಂದಿಗೆ ಸಮಯ ಹೊಂದಿಸುವುದು ಕಷ್ಟವಾಗಬಹುದು. ತಮ್ಮ ಕಚೇರಿ ಕೆಲಸ, ಮಕ್ಕಳ ಶಾಲೆಯ ಈ ಎಲ್ಲಾ ವಿಚಾರಗಳು ಗಂಡ-ಹೆಂಡತಿ ನಡುವೆ ಮುನಿಸು, ವಾದ-ವಿವಾದಕ್ಕೂ ಕಾರಣವಾಗುತ್ತಿದೆ. ಕೆಲವೊಮ್ಮೆ ಈ ಕಾರಣದಿಂದಾಗಿಯೇ ಪೋಷಕರ ಮಧ್ಯೆ ಸಂಘರ್ಷ ಉಂಟಾಗಿ ಅದು ಮಕ್ಕಳ ಮೇಲೆ ಪರಿಣಾಮ ಬೀರುವುದೂ ಇದೆ. ಆ ಕಾರಣಕ್ಕೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸುವ ಕಲೆ ತಿಳಿದಿರಬೇಕು.
ಸಮಾಜದ ಟೀಕೆಗಳು: ಪೋಷಕತ್ವ ಅಥವಾ ಪೇರೆಂಟಿಂಗ್ ವಿಚಾರದಲ್ಲಿ ಸಮಾಜವು ಕೆಲವೊಂದು ಕಟ್ಟುಪಾಡುಗಳನ್ನು ಹಾಕಿಕೊಂಡಿದೆ. ನಾವು ಅದರಂತೆಯೇ ಇರಬೇಕು ಎಂಬ ಮನೋಭಾವವು ಪೋಷಕರಲ್ಲಿ ಹಿಂಸೆ ಮಾಡುತ್ತದೆ. ಅಲ್ಲದೆ ಜನರ ಟೀಕೆ, ತೀರ್ಪುಗಳ ಪೋಷಕರಲ್ಲಿ ಅಸಮಾಧಾನಕ್ಕೆ ಕಾರಣವಾಗಬಹುದು. ಇದು ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಬಹುದು.
ಬೆಂಬಲದ ಕೊರತೆ: ಹಲವು ಪೋಷಕರು ಭಾವನಾತ್ಮಕ, ದೈಹಿಕ ಅಥವಾ ಆರ್ಥಿಕ ಬೆಂಬಲದ ಕೊರತೆಯೊಂದಿಗೆ ಹೋರಾಡುತ್ತಾರೆ, ಇದು ಒತ್ತಡದ ಭಾವನೆಗಳನ್ನು ಉಲ್ಬಣಗೊಳ್ಳುವಂತೆ ಮಾಡಬಹುದು. ಇದರಿಂದ ಬಳಲಿಕೆ ಹಾಗೂ ಹತಾಶೆಯೂ ಹೆಚ್ಚಬಹುದು. ಗಂಡ-ಹೆಂಡತಿ ಇಬ್ಬರೂ ಮಕ್ಕಳ ವಿಚಾರದಲ್ಲಿ ಸಮಾನವಾಗಿ ಇರುವುದು ಮುಖ್ಯವಾಗುತ್ತದೆ.
ಸಂಬಂಧದಲ್ಲಿ ವೈಮನಸ್ಸು: ಮಕ್ಕಳ ಕಾರಣಕ್ಕೆ ಪೋಷಕರ ನಡುವೆ ವೈಮನಸ್ಸು ಉಂಟಾಗಬಹುದು. ಪೋಷಕರ ಭಾವನಾತ್ಮಕ, ದೈಹಿಕ ಮತ್ತು ಆರ್ಥಿಕ ಜವಾಬ್ದಾರಿಗಳೊಂದಿಗೆ, ಆದ್ಯತೆಗಳಲ್ಲಿನ ಬದಲಾವಣೆಯು ದಂಪತಿಗಳ ಸಂಬಂಧದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು.
ಎಂಪ್ಟಿ ನೆಸ್ಟ್ ಸಿಂಡ್ರೋಮ್: ಮಕ್ಕಳು ಬೆಳದು ದೊಡ್ಡವರಾಗುವವರೆಗೂ ಪೋಷಕರ ನೆರಳಿನಲ್ಲೇ ಇರುತ್ತಾರೆ. ಮನೆಯಲ್ಲಿ ಮಕ್ಕಳದೇ ಕಲರವ ಇರುತ್ತದೆ. ಆದರೆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅವರು ಮನೆಯಿಂದ ಹೊರ ಹೋಗುತ್ತಾರೆ, ಆಗ ಮನೆ, ಮನಸ್ಸು ಎರಡೂ ಖಾಲಿಯಾಗುವುದು ಸಹಜ. ಇದರಿಂದ ಹಲವು ಪೋಷಕರು ಎಂಪ್ಟಿ ನೆಸ್ಟ್ ಸಿಂಡ್ರೋಮ್ ಎದುರಿಸುತ್ತಾರೆ.
LGBTQ (ಲೆಸ್ಬಿಯನ್, ಗೇ, ಟ್ರಾನ್ಸ್‌ಜೆಂಡರ್...) ನಂತಹ ಮಕ್ಕಳು ಹುಟ್ಟಿದರೆ ಸಮಾಜ ಪೋಷಕರನ್ನು ನೋಡುವ ರೀತಿ ಬದಲಾಗುತ್ತದೆ. ಇದರಿಂದ ಪೋಷಕರಿಗೆ ಬಿಸಿ ತುಪ್ಪವನ್ನು ಕೈಯಲ್ಲಿ ಇರಿಸಿಕೊಂಡಂತಹ ಪರಿಸ್ಥಿತಿ ಎದುರಾಗುವುದು ಸಹಜ. ಇದು ಕೂಡ ಪೋಷಕರು ಎದುರಿಸುವ ಬಹುಮುಖ್ಯವಾದ ಸವಾಲುಗಳಲ್ಲಿ ಒಂದು.
ಹಲವು ಪೋಷಕರು ಈ ಮೇಲಿನ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸಿಯೇ ಎದುರಿಸುತ್ತಾರೆ. ಆದರೆ ಅವುಗಳನ್ನು ಸಮರ್ಥವಾಗಿ ನಿಭಾಯಿಸುವ ಮನೋಭಾವ ಹೊಂದಿರಬೇಕು. ಜೊತೆಗೆ ಗಂಡ-ಹೆಂಡತಿ ಇಬ್ಬರೂ ಸೇರಿ ಮಗುವಿನ ಜವಾಬ್ದಾರಿ ನಿರ್ವಹಿಸಬೇಕು. ಈ ಮಾತ್ರ ಪೇರೆಂಟಿಂಗ್ ಪರಿಪೂರ್ನ ಎನ್ನಿಸಿಕೊಳ್ಳುತ್ತದೆ.
ವಿಭಾಗ