Parenting: ಪೋಷಕರೇ, ಮಗುವಿನೊಂದಿಗೆ ಆತ್ಮೀಯತೆ ಹೆಚ್ಚಬೇಕಾ; ಹಾಗಿದ್ರೆ ಕ್ವಾಲಿಟಿ ಟೈಮ್‌ಗೆ ನೀಡಿ ಪ್ರಾಮುಖ್ಯ
ಇತ್ತೀಚಿನ ಒತ್ತಡ ಬದುಕಿನಲ್ಲಿ ಮಕ್ಕಳು ಹಾಗೂ ಪೋಷಕರು ನಡುವಿನ ಸಂಬಂಧದಲ್ಲಿ ಆತ್ಮೀಯತೆ ಎನ್ನುವುದೇ ಇರುವುದಿಲ್ಲ. ತಮ್ಮ ಬ್ಯುಸಿ ಬದುಕಿನ ನಡುವೆ ಪೋಷಕರಿಗೆ ಮಕ್ಕಳತ್ತ ಗಮನ ಹರಿಸಲೂ ಸಾಧ್ಯವಾಗುವುದಿಲ್ಲ. ಆ ಕಾರಣಕ್ಕೆ ಮಕ್ಕಳು ಭಿನ್ನವಾಗಿ ಬೆಳೆದು ಬಿಡುತ್ತಾರೆ. ಮಕ್ಕಳೊಂದಿಗೆ ಆತ್ಮೀಯತೆ ಹೆಚ್ಚಬೇಕು ಅಂದ್ರೆ ಪೋಷಕರು ಮಾಡಬೇಕಾಗಿದಿಷ್ಟು.
ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಪೋಷಕರು ಸಾಕಷ್ಟು ವಿಷಯಗಳನ್ನು ಅರಿತಿರಬೇಕು. ಮಕ್ಕಳನ್ನು ಬೆಳೆಸುವುದು ನಿಜಕ್ಕೂ ಸುಲಭದ ಕೆಲಸವಲ್ಲ. ಮಕ್ಕಳನ್ನು ಬೆಳೆಸುವುದು ಎಂದರೆ ಅವರಿಗೆ ಬೇಕಾಗಿದ್ದನ್ನೆಲ್ಲಾ ಕೊಡಿಸುವುದು ಎಂದರ್ಥವಲ್ಲ. ಇದೆಲ್ಲಕ್ಕಿಂತಲೂ ಮುಖ್ಯವಾದುದು ಮಕ್ಕಳಿಗೆ ಸಮಯ ನೀಡುವುದು. ನಿಮ್ಮ ಮಗುವಿನೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಬಹಳ ಮುಖ್ಯವಾಗುತ್ತದೆ. ಇದರಿಂದ ಮಕ್ಕಳ ಭಾವನಾತ್ಮಕ ಹಾಗೂ ಮಾನಸಿಕ ಯೋಗಕ್ಷೇಮ ಸುಧಾರಿಸುವುದು ಮಾತ್ರವಲ್ಲ, ಇದು ಪೋಷಕರು ಹಾಗೂ ಮಕ್ಕಳ ನಡುವೆ ಒಂದು ಗಟ್ಟಿಯಾದ ಬಾಂಧವ್ಯ ಮೂಡಲು ಕಾರಣವಾಗುತ್ತದೆ.
ಪ್ರತಿ ಪೋಷಕರು ತಮ್ಮ ಮಕ್ಕಳೊಂದಿಗೆ ಅರ್ಥಪೂರ್ಣ ಮತ್ತು ಶಾಶ್ವತ ಸಂಪರ್ಕ ಹೊಂದಿರಲು ಇಷ್ಟಪಡುವುದು ಸಹಜ. ಆದರೆ ಇಂದಿನ ವೇಗ ಹಾಗೂ ಒತ್ತಡದ ಜಗತ್ತಿನಲ್ಲಿ ಮಕ್ಕಳೊಂದಿಗೆ ಬೆರೆತು ಇರಲು ಸಮಯ ಹಾಗೂ ಶಕ್ತಿ ಎರಡನ್ನೂ ಹೊಂದಿಸುವುದು ಸವಾಲಾಗಬಹುದು. ಆದರೂ ಮಕ್ಕಳೊಂದಿಗೆ ಒಂದಿಷ್ಟು ಕ್ವಾಲಿಟಿ ಟೈಮ್ ಕಳೆಯುವ ಮೂಲಕ ಅವರೊಂದಿಗಿನ ನಿಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಬಹುದು, ಜೊತೆಗೆ ಇದು ಅವರ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುತ್ತದೆ. ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಹೇಗೆ, ಪೋಷಕರಿಗೆ ಇಲ್ಲಿದೆ ಒಂದಿಷ್ಟು ಸಲಹೆ.
ಪ್ರಾಶಸ್ತ್ಯವನ್ನು ಗುರುತಿಸಿ: ನಿಮ್ಮ ಮಗುವಿನೊಂದಿಗೆ ಕ್ವಾಲಿಟಿ ಟೈಮ್ ಕಳೆಯಲು ವಾರದಲ್ಲಿ ಒಂದು ದಿನ ಅಥವಾ ಒಂದಿಷ್ಟು ನಿರ್ದಿಷ್ಟ ಸಮಯವನ್ನು ಮೀಸಲಿಡಿ. ಅದು ರಾತ್ರಿ ವೇಳೆ ನೀವು ಮಗುವಿನೊಂದಿಗೆ ಆಟವಾಡುವ ಗಳಿಗೆಯೂ ಆಗಬಹುದು. ಮನೆಯ ಹೊರಗಿನ ಪಾರ್ಕ್‌ನಲ್ಲಿ ವಾಕ್ ಮಾಡುವುದು, ರಾತ್ರಿ ಊಟದ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಮಾತುಕತೆ ನಡೆಸುವುದು ಹೀಗೆ ಇಂತಹ ಹಲವು ಅಂಶಗಳು ಮುಖ್ಯವಾಗುತ್ತದೆ.
ಇದನ್ನೂ ಓದಿ: Parenting: ಹದಿಹರೆಯದ ಮಕ್ಕಳ ಭಾವನಾತ್ಮಕ ಸಮಸ್ಯೆ ಅರಿಯಲು ಪೋಷಕರು ಗಮನಿಸಬೇಕಾದ ಅಂಶಗಳಿವು
ಎಲ್ಲಾ ಅಡಚಣೆಗಳನ್ನು ದೂರ ಮಾಡಿ: ನೀವು ಮಗುವಿನಿಂದಿಗೆ ನೀವು ಗುಣಮಟ್ಟದ ಸಮಯ ಕಳೆಯಲು ಬಯಸಿದರೆ ನಿಮ್ಮ ಫೋನ್, ಟಿವಿ ಮುಂತಾದವುಗಳಿಂದ ದೂರವಿರಿ. ಬೇರಾವುದೇ ಅಡಚಣೆಗಳು ನಿಮ್ಮ ಹಾಗೂ ಮಗುವಿನ ನಡುವಿನ ಸಮಯಕ್ಕೆ ಅಡ್ಡಿಯಾಗದೇ ಇರಲಿ.
ಮಕ್ಕಳು ಹೇಳುವುದನ್ನು ಕೇಳಿಸಿಕೊಳ್ಳಿ: ನೀವು ಮಗುವಿನೊಂದಿಗೆ ಯಾವುದೇ ವಿಚಾರಗಳನ್ನು ಮಾತನಾಡುತ್ತಿರಲಿ ಮಗು ಹೇಳುವುದನ್ನು ಗಮನವಿಟ್ಟು ಕೇಳಿಸಿ. ನಿಮ್ಮ ಸಂಪೂರ್ಣ ಗಮನ ಮಗುವಿನ ಮಾತಿನ ಮೇಲಿರಲಿ. ಕಣ್ಣಲ್ಲಿ ಕಣ್ಣಲ್ಲಿ ನೀವು ಮಗುವಿನ ಮಾತು ಕೇಳಿಸಿಕೊಳ್ಳುವುದು, ಮಗುವಿನ ಮಾತಿಗೆ ಸ್ಪಂದಿಸುವುದು ಮುಖ್ಯವಾಗುತ್ತದೆ.
ಆಸಕ್ತಿ ಹುಟ್ಟುವಂತೆ ಮಾಡಿ: ನಿಮ್ಮ ಮಗುವಿನ ವಿಚಾರಗಳಲ್ಲಿ ನಿಮಗೆ ಆಸಕ್ತಿ ಇದೆ ಎಂಬುದನ್ನು ತೋರಿಸುವುದು ಮುಖ್ಯವಾಗುತ್ತದೆ. ನಿಮ್ಮ ಮಗುವಿನ ಅಂದಿನ ದಿನ ಹೇಗಿತ್ತು, ಶಾಲೆಯಲ್ಲಿ ಏನೇನು ನಡೆಯಿತು, ಅವರ ಸ್ನೇಹಿತರು, ಆಸಕ್ತಿಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ. ಆಗ ಅವರಿಗೆ ನೀವು ಅವರಿಗೆ ಮುಖ್ಯವಾದ ವಿಷಯಗಳ ಬಗ್ಗೆ ಕಾಳಜಿ ವಹಿಸುತ್ತೀರಿ ಎಂಬುದು ಅರ್ಥವಾಗುತ್ತದೆ.
ಅವರ ಆಸಕ್ತಿಗಳಲ್ಲಿ ನೀವು ಭಾಗವಹಿಸಿ: ನಿಮ್ಮ ಮಗುವಿಗೆ ನಿರ್ದಿಷ್ಟ ಹವ್ಯಾಸ ಹಾಗೂ ಚಟುವಟಿಕೆಯ ಬಗ್ಗೆ ಆಸಕ್ತಿ ಇದ್ದರೆ ಅದರಲ್ಲಿ ನೀವೂ ತೊಡಗಿಕೊಳ್ಳಿ. ಮಕ್ಕಳೊಂದಿಗೆ ಆತ್ಮೀಯತೆ ಹೆಚ್ಚಲು ಇದು ಬಹಳ ಮುಖ್ಯ.
ಚಟುವಟಿಕೆಗಳಿಗೆ ಸಮಯ ನೀಡಿ: ಮಗುವಿನ ಚಟುವಟಿಕೆಗೆ ನಿಮ್ಮ ಸಮಯ ಅಗತ್ಯ ಖಂಡಿತ ಇರುತ್ತದೆ, ಮಗು ಬಯಸುವುದು ಕೂಡ ಅದನ್ನೆ. ಹಾಗಾಗಿ ನಿಮ್ಮ ಮಗುವಿನ ಚಟುವಟಿಕೆಗಳಲ್ಲಿ ಸಾಧ್ಯವಾದಷ್ಟು ಭಾಗವಾಗಿಸಿ. ಮಗುವನ್ನು ಪ್ರತ್ಯೇಕವಾಗಿ ಇಟ್ಟು ನಿಮ್ಮ ಪಾಡಿಗೆ ನೀವು ಇರುವ ಗುಣ ಖಂಡಿತ ಒಳ್ಳೆಯದಲ್ಲ.
ಪ್ರೀತಿ ತೋರಿಸಿ: ಮಗುವಿನ ಮೇಲೆ ಮನಸ್ಫೂರ್ತಿಯಾಗಿ ಪ್ರೀತಿ ತೋರಿಸುವುದು ಬಹಳ ಮುಖ್ಯವಾಗುತ್ತದೆ. ಪ್ರೀತಿ ವ್ಯಕ್ತಿ ಪಡಿಸಲು ದೈಹಿಕ ಸ್ಪರ್ಶವು ಪ್ರಮುಖ ಮಾರ್ಗ. ಅದು ಅಪ್ಪುಗೆ, ಮುತ್ತ, ಬೆನ್ನ ತಟ್ಟುವುದು ಹೀಗೆ ಮಾಡುವುದರಿಂದ ಮಗುವಿಗೆ ನೀವು ಕಾಳಜಿ ವಹಿಸುತ್ತೀರಿ ಎಂದು ಅರ್ಥವಾಗುತ್ತದೆ.
ಸ್ಥಿರವಾಗಿರಿ: ಗುಣಮಟ್ಟದ ಸಮಯವು ನಿಮ್ ಮಗುವಿನೊಂದಿಗೆ ನಿಮ್ಮ ಸಂಬಂಧದ ನಿಯಮಿತ ಮತ್ತು ಸ್ಥಿರವಾದ ಭಾಗವಾಗಿರಬೇಕು. ಅದನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ.
ಈ ಟಿಪ್ಸ್‌ಗಳನ್ನು ನಿರಂತರವಾಗಿ ಅನುಸರಿಸುವ ಮೂಲಕ ನೀವು ನಿಮ್ಮ ಮಕ್ಕಳೊಂದಿಗೆ ಆತ್ಮೀಯ ಹೆಚ್ಚಿಸಿಕೊಳ್ಳಬಹುದು. ಅಲ್ಲದೆ ಅವರೊಂದಿಗೆ ಗುಣಮಟ್ಟದ ಸಮಯವನ್ನೂ ಎಂಜಾಯ್ ಮಾಡಬಹುದು. ಇದು ಮಕ್ಕಳ ಬೆಳವಣಿಗೆಗೂ ಉತ್ತಮ.
ವಿಭಾಗ