ಪೋಷಕರೇ, ಮಕ್ಕಳ ಮೇಲೆ ನಿಮ್ಮ ಅಭಿಪ್ರಾಯ ಹೇರದಿರಿ, ಅವರ ಕನಸುಗಳನ್ನು ಅವರೇ ಕಟ್ಟಿಕೊಳ್ಳಲು ಬಿಡಿ; ರೂಪಾರಾವ್ ಬರಹ
Nov 20, 2024 03:30 PM IST
ಪೇರೆಂಟಿಂಗ್ ಟಿಪ್ಸ್
- ರೂಪಾ ರಾವ್ ಬರಹ: ಪೋಷಕರಲ್ಲಿ ಮನವಿ. ಮಕ್ಕಳಿಗೆ ಯಾವುದನ್ನೂ ಹೇರಬೇಡಿ, ನಿಮ್ಮ ಯಾವ ಕನಸನ್ನೂ ನನಸು ಮಾಡುತ್ತೇವೆ ಎಂದು ವಚನ ನೀಡಿ ಅವರು ಹುಟ್ಟಿಲ್ಲ. ಅವರನ್ನು ಬೆಳೆಯಲು ಬಿಡಿ. ಅವರು ದಾರಿ ತಪ್ಪುವಾಗ ಎಚ್ಚರಿಸಿ, ಭರವಸೆ ಕೇಳಿದಾಗ ಅದನ್ನು ಕೊಡಿ, ಅವರ ಸಣ್ಣಸಾಧನೆಯನ್ನೂ ಪ್ರಶಂಸಿಸಿ. ಮಾರ್ಗದರ್ಶನ ಮಾಡುವಾಗ ಎಚ್ಚರದಿಂದಿರಿ.
ಮಕ್ಕಳನ್ನು ಸಾಕುವುದು ಖಂಡಿತ ಸುಲಭದ ಮಾತಲ್ಲ. ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ಅವರ ಅಭಿಪ್ರಾಯಗಳನ್ನು ಹೇರುತ್ತಿದ್ದಾರೆ. ಮಕ್ಕಳು ತಾವು ಅಂದುಕೊಂಡಂತೆ ಇರಬೇಕು ಎಂಬ ಹಂಬಲ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳು ತಮ್ಮ ಕನಸನ್ನು ಈಡೇರಿಸುವ ಸಲುವಾಗಿಯೇ ಹುಟ್ಟಿದವರು ಎಂಬ ಭಾವ ಕೆಲ ಪೋಷಕರದ್ದು. ಆದರೆ ಪೋಷಕರ ಮನೋಭಾವವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹಾಗೂ ಒಟ್ಟಾರೆ ಬೆಳವಣಿಗೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಈ ಬಗ್ಗೆ ತಮ್ಮ ಅನುಭವಕ್ಕೆ ಬಂದ ಉದಾಹರಣೆಯೊಂದರ ಮೂಲಕ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಆಪ್ತಸಮಾಲೋಚಕಿ ರೂಪಾರಾವ್.
ರೂಪಾ ರಾವ್ ಬರಹ ಇಲ್ಲಿದೆ
ಈ ಹುಡುಗ ಈಗಾಗಲೇ ಕಂಪನಿಯಲ್ಲಿ ಒಳ್ಳೆಯ ಕೆಲಸಗಾರನೆಂದು ಪ್ರಸಿದ್ದಿಯಾಗಿದ್ದಾನೆ. ಮೊನ್ನೆ ಮೊನ್ನೆ ಅತ್ಯುತ್ತಮ ಕೆಲಸಗಾರ ಅಂತೆಲ್ಲಾ ಅವಾರ್ಡ್ ಪಡೆದಿದ್ದಾನೆ. ಆದರೂ ಆತ ಸಂತೋಷದಿಂದಿಲ್ಲ, ಏನೋ ನಿರಾಸೆ, ಯಾವುದರಲ್ಲೂ ಆಸಕ್ತಿ ಇಲ್ಲ. ಪ್ರೀತಿ, ಪ್ರೇಮ, ಮದುವೆ ಯಾವುದೂ ಬೇಡ. ಮಾತುಕತೆ ಇಲ್ಲ, ಸದಾ ರೂಮಿನಲ್ಲಿ ಇರುತ್ತಾನೆ. ಯಾಂತ್ರಿಕ ಬದುಕು, ಕೆಲಸವೂ ಕುತ್ತಿಗೆಗೆ ಬಂದಿದೆ ಎಂದಾಗಲೇ ಮಾಡುವುದು.
ಅವನ ಅಪ್ಪ ಬದುಕೆಂದರೆ ಹೀಗೇ ಎಂದು ನಿರೀಕ್ಷೆಗಳ ಸೌಧ ಕಟ್ಟಿಕೊಂಡಿದ್ದಾರೆ. ಅವರು ತಾವು ಬದುಕನ್ನು ಗಳಿಸಿದ್ದು ಹೀಗೆ ಪರಿಪೂರ್ಣತೆಯಿಂದಾಗಿಯೇ ಎಂದು ನಂಬಿದ್ದಾರೆ. ಹಾಗಾಗಿ ತಮ್ಮ ಈ ಭ್ರಮಾಸೌಧವನ್ನು ಕಳಚಿ ಮಗನೊಂದಿಗೆ ನಿಲ್ಲಲಾರರು, ಮಗನನ್ನು ಹೊಗಳಿದರೂ ಅದು ಅವರಿಗೆ ಇಷ್ಟವಾದುದ್ದಲ್ಲ.
ಮಗನಿಗೋ ಬದುಕು ಬಂದಂತೆ ಬರಲಿ ಏನೋ ಒಂದು ಮಾಡಿಕೊಂಡು ಹೋಗೋಣ ಅನ್ನುವ ಮನಸ್ಥಿತಿ. ಅವನಿಗೆ ತನಗೆ ಬದುಕು ಸಿಕ್ಕಿದ್ದು ಹೀಗೇ. ಯಾವುದೂ ತನ್ನ ಕೈಲಿಲ್ಲ ಅದಕ್ಕಾಗಿ ಏಕೆ ವ್ಯರ್ಥ ಪ್ರಯತ್ನ ಎಂಬ ನಿರ್ಲಿಪ್ತ ಭಾವ. ಹೀಗಾಗಿ ಅಪ್ಪನ ಪರಿಪೂರ್ಣತೆ, ಯೋಜನೆ ಹಾಗೂ ನಿರೀಕ್ಷೆಗಳಿಗೆ ರಾಜಿಯಾಗಲಾರ, ಅಪ್ಪ ತನ್ನನ್ನು ಹೀಗೇ ಒಪ್ಪಿಕೊಳ್ಳಲಾರರೇಕೆ ಎಂಬ ಪ್ರಶ್ನೆ. ಇದಕ್ಕೆ ಕಾರಣವೂ ಅವರಲ್ಲಿಯೇ ಇದೆ.
ಎಂಜಿನಿಯರಿಂಗ್‌ನಲ್ಲಿ ಮೂರು ಸಲ ಫೇಲ್ ಆಗಿ ಓದುವುದನ್ನು ಬಿಟ್ಟು ಕೆಲಸಕ್ಕೆ ಸೇರಿದ. ಸೈಬರ್ ಸೆಕ್ಯೂರಿಟಿಯಲ್ಲಿ ಒಳ್ಳೆಯ ಪರಿಣತಿ ಹೊಂದಿ ಕೈತುಂಬಾ ಸಂಬಳ ಬರುವ ಕೆಲಸಕ್ಕೆ ಸೇರಿದ. ಅಲ್ಲಿಯೇ ಕಂಪನಿಯ ವತಿಯಿಂದ ಪ್ರತಿಷ್ಠಿತ ಸಂಸ್ಥೆಯಲ್ಲಿ ಬಿಸಿಎ ಮುಗಿಸಿದ್ದಾನೆ. ಈಗ ಒಳ್ಳೆಯ ಹುದ್ದೆಯಲ್ಲಿದ್ದಾನೆ.
ಆದರೆ ಅವನ ತಂದೆಗೆ ಆತ ಪಿಯುಸಿಯಲ್ಲಿ ಒಳ್ಳೆಯ ಅಂಕ ಪಡೆಯಲಿಲ್ಲ, ಎಂಜಿನಿಯರಿಂಗ್ ಸೀಟು ಕೊಡಿಸಿಯೂ ಆತ ಮುಗಿಸಲಿಲ್ಲ, ಎಂಬುದೇ ದೊಡ್ಡ ಕೊರತೆಯಾಗಿ ಅದಕ್ಕಾಗಿ ಈಗಲೂ ಮಗನನ್ನು ಈಗಲೂ ಹಂಗಿಸುವುದನ್ನು ಬಿಟ್ಟಿಲ್ಲ.
ನಿನ್ನ ಲಕ್ ಚೆನ್ನಾಗಿತ್ತು ಆದ್ದರಿಂದಲೇ ನಿನಗೆ ಕೆಲಸ ಸಿಕ್ಕಿತು ಎನ್ನುವ ಮೂಲಕ ಆತನ ಪ್ರತಿಭೆಯನ್ನು ಪ್ರಯತ್ನವನ್ನು ಮೂರಾಬಟ್ಟೆ ಮಾಡುತ್ತಿದ್ದಾರೆ. ವಿಚಿತ್ರ ಅಂದರೆ ಆತನೂ ತನಗೆ ಯಾವುದೇ ಟ್ಯಾಲೆಂಟ್ ಇಲ್ಲ, ತನಗೆ ಲಕ್‌ನಿಂದಲೇ ಇದೆಲ್ಲಾ ಸಿಗ್ತಿರೋದು ಎಂದು ನಂಬಿಬಿಟ್ಟಿದ್ದಾನೆ. ಇದರಿಂದ ಹೊಸ ಪ್ರಯತ್ನವನ್ನು ಏನೇ ಮಾಡಲೂ ಹೆದರುತ್ತಾನೆ. ಮದುವೆಯಾಗಿ ಸಂಸಾರವನ್ನೂ ಸರಿಯಾಗಿ ನಡೆಸಲಾರೆನೇನೋ ಎಂದು ಮದುವೆ ಆಗಲೂ ಭಯ, ಕಂಪನಿಯ ಹೊಸ ಜವಾಬ್ದಾರಿ ಹೊರಲು ಭಯ. ತಾಯಿ–ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೋ ಇಲ್ಲವೋ ಎಂಬ ಭಯ. ಈಗ ಇವನಿಗೆ ಮೂವತ್ತು ವರ್ಷ, ಅಪ್ಪನಿಗೆ 60ರ ಹತ್ತಿರ. ಈಗ ಅಪ್ಪ ನೀನು ಕೈಲಾಗದವನು ಎಂದು ದಿಟ್ಟಿಸಿ ಹೇಳಲಾರರು, ಈಗ ಮಗನ ಸಾಮರ್ಥ್ಯವನ್ನು ಗುರುತಿಸುತ್ತಾರಾದರೂ ಬಾಯಿಬಿಟ್ಟು ಹೇಳಲಾರರು. ಅವರಿಗೂ ಎಲ್ಲೋ ಮಗನ ಈ ನಡವಳಿಕೆಗೆ ತಾನೇ ಕಾರಣ ಎಂಬ ಅಪರಾಧಿ ಪ್ರಜ್ಞೆ, ಈಗ ಹೊಗಳಲು ಶುರು ಮಾಡಿದರೆ ಆ ಸತ್ಯ ಮಗನ ಬಾಯಿಂದ ಎಲ್ಲಿ ಬಂದುಬಿಡುತ್ತದೆಯೋ ಎಂಬ ಭಯ. ಅದನ್ನು ಎದುರಿಸಲಾಗದ ಭಯ. ಮಗನ ಸ್ಥಿತಿ ನೋಡಲಾರದೇ ಅವನನ್ನು ನನ್ನಲ್ಲಿಗೆ ಕರೆದುಕೊಂಡು ಬಂದದ್ದೂ ಸಹ ಅವರೇ.
ಮನುಷ್ಯರಲ್ಲಿ ಈ ಅನಿಶ್ಚಿತತೆಯ ಭಯ ಗೋಡೆಗಳನ್ನೇ ಕಟ್ಟಿ ಬಿಡುತ್ತವೆ. ಒಂದೆಡೆ ಮಗ ತನ್ನ ಸುತ್ತಲೂ ಸ್ವ–ಸಂಶಯದ ಗೋಡೆ ಕಟ್ಟಿಕೊಂಡಿದ್ದಾನೆ. ಇತ್ತ ಮಗ ತನ್ನ ತಪ್ಪನ್ನು ಎತ್ತಾಡಿಬಿಡುತ್ತಾನೋ ಎಂಬ ಅಪರಾಧಿ ಪ್ರಜ್ಞೆಯ ಗೋಡೆ ಅಪ್ಪ ಕಟ್ಟಿಕೊಂಡಿದ್ದಾರೆ.
ಹಾಗಾಗಿ ಇಬ್ಬರ ನಡುವೆ ಕೇವಲ ದೂರ ಸಂಪರ್ಕ ಮಾತ್ರ ಹತ್ತಿರವಿದ್ದೂ ಸಹ. ಅದನ್ನು ಉರುಳಿಸಿ ಮಗನಿಗೆ ತನ್ನ ಬಗ್ಗೆ ಆತ್ಮವಿಶ್ವಾಸ ಹಾಗೂ ಅಪ್ಪನಿಗೆ ತನ್ನ ಅಪರಾಧಿ ಪ್ರಜ್ಞೆಯನ್ನು ಪಶ್ಚಾತ್ತಾಪವಾಗಿ ಅರಳಿಸುವ ಪ್ರಯತ್ನ ನಡೆಯುತ್ತಿದೆ.
ಅಪ್ಪ ಅಮ್ಮ ಬೇರಿನಂತೆ, ಬೇರಿನಿಂದ ಸಿಗುವ ಪೋಷಕಾಂಶದಲ್ಲಿ ಏನೇ ಕೊರತೆಯಾದರೂ ಆ ಮರದ ಬೆಳವಣಿಗೆಯಲ್ಲಿ ಕಾಣುತ್ತದೆ.ಅದರಲ್ಲಿಯೂ ಭಾರತೀಯ ಸಂಸ್ಕೃತಿಯಲ್ಲಿ ಅಪ್ಪ ಅಮ್ಮ ನಮ್ಮ ಬದುಕಿನ ಭಾಗವೇ ಆಗಿಬಿಟ್ಟಿರುವ ಕಾರಣ ನಮ್ಮಲ್ಲಿ ಇದು ಹೆಚ್ಚು. ದಯವಿಟ್ಟು ಪೋಷಕರಲ್ಲಿ ಮನವಿ ಮಕ್ಕಳಿಗೆ ಯಾವುದನ್ನೂ ಹೇರಬೇಡಿ, ನಿಮ್ಮ ಯಾವ ಕನಸನ್ನೂ ಅವರು ನನಸು ಮಾಡುತ್ತೇವೆ ಎಂದು ವಚನ ಕೊಟ್ಟು ಅವರು ಹುಟ್ಟಿಲ್ಲ. ಅವರನ್ನು ಬೆಳೆಯಲು ಬಿಡಿ ಅವರು ದಾರಿ ತಪ್ಪುವಾಗ ಎಚ್ಚರಿಸಿ, ಅವರು ಭರವಸೆ ಕೇಳಿದಾಗ ಅದನ್ನು ಕೊಡಿ, ಅವರ ಪ್ರತಿ ಸಣ್ಣಸಾಧನೆಯನ್ನೂ ಪ್ರಶಂಸಿಸಿ. ಮಾರ್ಗದರ್ಶನ ಮಾಡುವಾಗ ಎಚ್ಚರದಿಂದಿರಿ, ಅವರಿಗೆ ತಮ್ಮ ಸ್ವಸಾಮರ್ಥ್ಯದ ಬಗ್ಗೆ ನಂಬಿಕೆ ಬರುವಂತೆ ಮಾಡಿ. ದೇವರಲ್ಲಿ ನಂಬಿಕೆ ಇರಲಿ ಆದರೆ ದೇವರೇ ಎಲ್ಲಾ ಮಾಡಿ ಕೊಡುತ್ತಾನೆ ಅಥವಾ ಕೊಡುವದಿಲ್ಲ ಎಂಬ ಮೂಢ ನಂಬಿಕೆ ಮೂಡಿಸಬೇಡಿ. ಇಂತಹ ಸುಳ್ಳು ನಂಬಿಕೆಗಳಿಂದಲೇ ಎಲ್ಲಾ ಸಾಫಲ್ಯ , ವೈಫಲ್ಯಗಳನ್ನು ಅದೃಷ್ಟದ ಮೇಲೆ ಹಾಕುವ ಮನೋಭಾವ ಮೂಡುವುದು.
ಇಂದು (ನವೆಂಬರ್ 20) ಬೆಳಿಗ್ಗೆ ರೂಪಾರಾವ್ ಈ ಪೋಸ್ಟ್ ಹಾಕಿದ್ದು ಈಗಾಗಲೇ 70ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. 10ಕ್ಕೂ ಹೆಚ್ಚು ಕಾಮೆಂಟ್ ಮಾಡುವ ಮೂಲಕ ಅವರ ಬರಹದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿಭಾಗ