logo
ಕನ್ನಡ ಸುದ್ದಿ  /  ಜೀವನಶೈಲಿ  /  ನಿರಂತರವಾಗಿ ಸಂಗಾತಿಯ ಮೊಬೈಲ್ ಪರಿಶೀಲಿಸುತ್ತಿದ್ದೀರಾ: ದಾಂಪತ್ಯದಲ್ಲಿ ಅಪನಂಬಿಕೆ ಹೆಚ್ಚಾಗಲು ಕಾರಣವಾಗಬಹುದು

ನಿರಂತರವಾಗಿ ಸಂಗಾತಿಯ ಮೊಬೈಲ್ ಪರಿಶೀಲಿಸುತ್ತಿದ್ದೀರಾ: ದಾಂಪತ್ಯದಲ್ಲಿ ಅಪನಂಬಿಕೆ ಹೆಚ್ಚಾಗಲು ಕಾರಣವಾಗಬಹುದು

Priyanka Gowda HT Kannada

Oct 05, 2024 01:00 PM IST

google News

ದಾಂಪತ್ಯದಲ್ಲಿ ಒಂದು ಸಣ್ಣ ಸಂದೇಹ ಕಾಣಿಸಿಕೊಂಡರೂ ಸಂಬಂಧ ಕಹಿಯಾಗಬಹುದು.

    • ಪತಿ-ಪತ್ನಿಯಾಗಲಿ, ಪ್ರೇಮಿಯಾಗಲಿ ಈ ಸಂಬಂಧವು ನಂಬಿಕೆಯ ಮೇಲೆ ನಿಂತಿರುತ್ತದೆ. ಒಂದು ಸಣ್ಣ ಸಂದೇಹ ಕಾಣಿಸಿಕೊಂಡರೂ ಸಂಬಂಧ ಕಹಿಯಾಗಬಹುದು. ಅದರಲ್ಲೂ ಅನುಮಾನ ಮೂಡಿದಾಗ ಪತಿ ಅಥವಾ ಪತ್ನಿ, ಅಥವಾ ಪ್ರೇಮಿಗಳು ತನ್ನ ಸಂಗಾತಿಯ ಮೊಬೈಲ್ ಅನ್ನು ಕದ್ದು ನೋಡಲು ಮುಂದಾಗುತ್ತಾರೆ. ಆದರೆ, ಈ ರೀತಿ ಮಾಡುವುದು ಖಂಡಿತಾ ತಪ್ಪು.
ದಾಂಪತ್ಯದಲ್ಲಿ ಒಂದು ಸಣ್ಣ ಸಂದೇಹ ಕಾಣಿಸಿಕೊಂಡರೂ ಸಂಬಂಧ ಕಹಿಯಾಗಬಹುದು.
ದಾಂಪತ್ಯದಲ್ಲಿ ಒಂದು ಸಣ್ಣ ಸಂದೇಹ ಕಾಣಿಸಿಕೊಂಡರೂ ಸಂಬಂಧ ಕಹಿಯಾಗಬಹುದು. (Unsplash)

ದಾಂಪತ್ಯ ಜೀವನ ಅಲುಗಾಡಲು ಪ್ರಾರಂಭಿಸಿದಾಗ ಸಂಗಾತಿಯ ಮಧ್ಯೆ ಬಿರುಕು ಮೂಡುತ್ತದೆ. ಏನೇ ನಿರ್ಧಾರ ತೆಗೆದುಕೊಂಡರೂ ಸಂಗಾತಿಗೆ ಇದು ಅನುಮಾನ ಮೂಡಲು ಕಾರಣವಾಗಬಹುದು. ಪತಿ-ಪತ್ನಿಯಾಗಲಿ, ಪ್ರೇಮಿಯಾಗಲಿ ಈ ಸಂಬಂಧವು ನಂಬಿಕೆಯ ಮೇಲೆ ನಿಂತಿರುತ್ತದೆ. ಒಂದು ಸಣ್ಣ ಸಂದೇಹ ಕಾಣಿಸಿಕೊಂಡರೂ ಸಂಬಂಧ ಕಹಿಯಾಗಬಹುದು. ಅದರಲ್ಲೂ ಅನುಮಾನ ಮೂಡಿದಾಗ ಪತಿ ಅಥವಾ ಪತ್ನಿ, ಅಥವಾ ಪ್ರೇಮಿಗಳು ತನ್ನ ಸಂಗಾತಿಯ ಮೊಬೈಲ್ ಅನ್ನು ಕದ್ದು ನೋಡಲು ಮುಂದಾಗುತ್ತಾರೆ. ಆದರೆ, ಈ ರೀತಿ ಮಾಡುವುದು ಖಂಡಿತಾ ತಪ್ಪು. ಸಂಗಾತಿ ಆಗಲಿ ಯಾರೇ ಆಗಲಿ ಬೇರೆಯವರ ಪ್ರೈವೆಸಿ (ಖಾಸಗಿ ವಿಚಾರ) ಪರಿಶೀಲಿಸುವುದು ಅಷ್ಟು ಉತ್ತಮವಾದ ನಡೆಯಲ್ಲ. ತನ್ನ ಮೊಬೈಲ್ ಅನ್ನು ಪರಿಶೀಲಿಸುತ್ತಿದ್ದಾರೆ ಎಂದು ಸಂಗಾತಿಗೆ ತಿಳಿದರೆ ಇದು ಅಭದ್ರತೆ, ಕೆಟ್ಟ ಅನುಭವ ಅಥವಾ ತಾತ್ಸಾರಕ್ಕೆ ಕಾರಣವಾಗಬಹುದು. ಆದರೆ, ನಮ್ಮಲ್ಲಿ ಬಹಳಷ್ಟು ಮಂದಿ ಈ ಮನಸ್ಥಿತಿಯನ್ನು ಹೊಂದಿದ್ದಾರೆ.

ಸಂಗಾತಿಯ ಮೊಬೈಲ್ ಪರಿಶೀಲಿಸುವುದು ಸರಿಯೇ?

ಯಾರೇ ಆಗಲಿ ಗಂಡ ಅಥವಾ ಹೆಂಡತಿ ತಮ್ಮ ಸಂಗಾತಿಯ ಮೊಬೈಲ್ ಅನ್ನು ಪರಿಶೀಲಿಸುವುದು ಅಷ್ಟು ಸಮಂಜಸವಲ್ಲ ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೇ ಸಂಬಂಧಕ್ಕೆ ನಂಬಿಕೆಯೇ ಮೂಲಧಾರ. ಸಂಗಾತಿಯ ಫೋನ್ ಅನ್ನು ಪರಿಶೀಲಿಸುವುದರಿಂದ ಪರಸ್ಪರರ ನಂಬಿಕೆ, ವಿಶ್ವಾಸವನ್ನು ಕುಂಠಿತಗೊಳಿಸುತ್ತದೆ. ಈ ರೀತಿ ಮಾಡುವುದರಿಂದ ಸಂಬಂಧ ಮತ್ತಷ್ಟು ಹದಗೆಡಬಹುದು.

ದಾಂಪತ್ಯದಲ್ಲಿ ಅಪನಂಬಿಕೆ ಹೆಚ್ಚಾಗಲು ಕಾರಣವಾಗಬಹುದು

ಸಂಗಾತಿಯ ಮೊಬೈಲ್ ಪರಿಶೀಲಿಸುವುದು ಅನುಮಾನ ಹೆಚ್ಚಾಗಲು ಕಾರಣವಾಗಬಹುದು. ಒಮ್ಮೆ ಮೊಬೈಲ್ ಚೆಕ್ ಮಾಡಿದ ಮೇಲೆ ಅದು ಅಲ್ಲಿಗೇ ಕೊನೆಯಾಗುವುದಿಲ್ಲ. ಮತ್ತೆ ಮತ್ತೆ ಪುನರಾವರ್ತನೆಯಾಗುತ್ತದೆ. ಇದರಿಂದ ಸಂಗಾತಿ ತಾನು ಅಸುರಕ್ಷಿತಳಾ/ನಾಗಿದ್ದೇನೆ ಎಂಬ ಬೇಸರ ಅಥವಾ ಸಿಟ್ಟು ಮಾಡಿಕೊಳ್ಳಲು ಶುರುವಾಗಬಹುದು. ಈ ವರ್ತನೆ ಆಕ್ರಮಣಕಾರಿಯಾಗಿಯೂ ಬದಲಾಗಬಹುದು. ಫೋನ್ ಪರಿಶೀಲಿಸುವ ಅಭ್ಯಾಸವು ಒಂದು ಗೀಳಾಗಿ ಪರಿವರ್ತನೆಯಾಗಬಹುದು. ಮುಂದೆ ಇದು ಮಾನಸಿಕ ಆರೋಗ್ಯ, ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು.

ದಾಂಪತ್ಯ ಜೀವನ ಚೆನ್ನಾಗಿರಲು ಈ ನಿಯಮ ಅನುಸರಿಸಿ

ಸಂಭಾಷಣೆ ಅಗತ್ಯ: ದಾಂಪತ್ಯದಲ್ಲಿ ಸಂವಹನ ಬಹಳ ಅತ್ಯಗತ್ಯ. ಸಂಗಾತಿಯ ಬಗ್ಗೆ ಸಂಶಯಗೊಳ್ಳಲು, ಬೇಹುಗಾರಿಕೆ ಮಾಡುವ ಬದಲು ತಮ್ಮ ಅಭದ್ರತೆಯ ಕಾರಣಗಳನ್ನು ಕುಳಿತು ಚರ್ಚಿಸಬೇಕು. ಇಬ್ಬರೂ ಒಟ್ಟಿಗೆ ಸೇರಿ ಕೆಲಸ ಮಾಡಬೇಕು. ಈ ರೀತಿ ಇಬ್ಬರೂ ಪರಸ್ಪರ ಮಾತನಾಡುವುದರಿಂದ ಸಮಸ್ಯೆ ಬಗೆಹರಿಯಬಹುದು. ಹೀಗಾಗಿ ದಾಂಪತ್ಯದಲ್ಲಿ ವಿಶ್ವಾಸರ್ಹತೆಯೂ ಹೆಚ್ಚಬಹುದು.

ವಿಶ್ವಾಸವನ್ನು ಹೆಚ್ಚಿಸಿ: ಪರಸ್ಪರ ವಿಶ್ವಾಸವನ್ನು ಗಳಿಸಿಕೊಳ್ಳುವುದು ದಾಂಪತ್ಯ ಜೀವನವನ್ನು ಉತ್ತಮವಾಗಿಸಬಹುದು. ದಾಂಪತ್ಯದಲ್ಲಿ ಗೌಪ್ಯತೆ, ಪಾರದರ್ಶಕತೆ ಕಾಪಾಡುವುದು ಸಂಬಂಧಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ದಾಂಪತ್ಯದಲ್ಲಿ ಅನುಮಾನವನ್ನು ಬಗೆಹರಿಸಿಕೊಳ್ಳುವುದು ಬಹಳ ಮುಖ್ಯ.

ನೇರ ಮಾತು: ದಾಂಪತ್ಯದಲ್ಲಿ ಸಂಗಾತಿ ಮೇಲೆ ಅನುಮಾನ ಮೂಡಲು ಶುರುವಾದರೆ, ಈ ಬಗ್ಗೆ ಕುಳಿತು ಮಾತನಾಡಬೇಕು. ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳಬೇಕು. ತನ್ನ ಸಂಗಾತಿಗಾಗಿ ಸಮಯವನ್ನು ಮೀಸಲಿಡಬೇಕು. ಇಬ್ಬರೂ ಹೊರಗೆಲ್ಲಾದರೂ ಸುತ್ತಾಡಿ ಸಮಯ ಕಳೆಯಬಹುದು. ಹಾಗೆಯೇ ಎಲ್ಲಾ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಯಾವ ಮಾಹಿತಿಯನ್ನು ಹಂಚಿಕೊಳ್ಳಬೇಕು, ಯಾವುದನ್ನು ಖಾಸಗಿಯಾಗಿಡಬೇಕು ಅನ್ನುವುದನ್ನು ಇಬ್ಬರೂ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.

ನಂಬಿಕೆ ಕಾಪಾಡಿಕೊಳ್ಳಿ: ದಾಂಪತ್ಯದಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ. ಎರಡು ಕೈ ಸೇರಿದರೆ ಚಪ್ಪಾಳೆ ಎಂಬ ಮಾತಿನಂತೆ ಇಬ್ಬರೂ ನಂಬಿಕೆ ಕಾಪಾಡಿಕೊಳ್ಳಬೇಕು, ಪರಸ್ಪರರನ್ನು ಗೌರವಿಸಬೇಕು. ತಾವು ಸುರಕ್ಷಿತವಾಗಿದ್ದೇವೆ ಎಂಬ ನಂಬಿಕೆ ಬಂದಾಗ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದರಿಂದ ಸಂಗಾತಿ ಮೇಲಿನ ನಂಬಿಕೆಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳುವುದಿಲ್ಲ. ಜೊತೆಗೆ ಪರಸ್ಪರರನ್ನು ಗೌರವಿಸುವುದು ಬಹಳ ಮುಖ್ಯ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ