ಮಕ್ಕಳಿಗೆ ದೀಪಾವಳಿ ಅಪಾಯವಾಗದಿರಲಿ; ಸುಟ್ಟಗಾಯ, ಅಲರ್ಜಿ ತಡೆಗಟ್ಟಲು ಪೋಷಕರಿಗೆ ಸುರಕ್ಷತಾ ಸಲಹೆಗಳು
Oct 30, 2024 07:22 AM IST
ಮಕ್ಕಳಿಗೆ ದೀಪಾವಳಿ ಅಪಾಯವಾಗದಿರಲಿ; ಗಾಯ, ಅಲರ್ಜಿ ತಡೆಗಟ್ಟಲು ಪೋಷಕರಿಗೆ ಸುರಕ್ಷತಾ ಸಲಹೆಗಳು
- Diwali 2024: ಸುಟ್ಟಗಾಯಗಳು, ಅಲರ್ಜಿ ಸೇರಿದಂತೆ ದೀಪಾವಳಿ ಸಂಭ್ರಮದ ನಡುವೆ ಹೆಚ್ಚಿನ ಅಪಾಯವನ್ನು ತಡೆಗಟ್ಟಲು ಪೋಷಕರು ಎಚ್ಚರ ವಹಿಸಬೇಕು. ಮಕ್ಕಳ ಹಬ್ಬದ ಸಂಭ್ರಮದ ಸಮಯದಲ್ಲಿ ಈ ಸುರಕ್ಷತಾ ಸಲಹೆಗಳನ್ನು ತಪ್ಪದೆ ಪಾಲಿಸಿ.
ದೀಪಾವಳಿ ಹಬ್ಬವೆಂದರೆ ಸಂಭ್ರಮವೋ ಸಂಭ್ರಮ. ಹೊಸಬಟ್ಟೆ, ಸಿಹಿತಿಂಡಿಗಳು, ಬಗೆ ಬಗೆಯ ದೀಪಗಳು, ರಂಗೋಲಿ, ಗೂಡುದೀಪ ಇವೆಲ್ಲಾ ಸಂಭ್ರಮವನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಮಕ್ಕಳಿಗೆ ದೀಪಾವಳಿಯಲ್ಲಿ ಇಷ್ಟವಾಗುವುದು ಪಟಾಕಿ. ಹಬ್ಬದ ಸಂತಸವನ್ನು ಪಟಾಕಿ ಹೆಚ್ಚಿಸುತ್ತದೆ. ಆದರೆ, ಹಬ್ಬಗಳ ನಡುವೆ ಗಾಯಗಳು ಮತ್ತು ಅವಘಡಗಳ ಸಂಭವ ಹೆಚ್ಚು. ಮಕ್ಕಳ ವಿಚಾರವಾಗಿ ಎಷ್ಟೇ ಜೋಪಾನವಾಗಿದ್ದರೂ ಸಾಲುವುದಿಲ್ಲ. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಮಕ್ಕಳಿಗೆ ಏನಾದರೂ ಗಾಯಗಳಾಗುವ ಸಂಭವ ಇರುತ್ತದೆ. ಹೀಗಾಗಿ ಪೋಷಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅವರಿಗೆ ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳುವುದು ತುಂಬಾ ಮುಖ್ಯ. ಆ ಮೂಲಕ ಮನೆಯ ಮಕ್ಕಳು ಅನಗತ್ಯ ಚಿಂತೆಗಳಿಲ್ಲದೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಬಹುದು.
ಮಕ್ಕಳ ಸುರಕ್ಷತೆ ಕುರಿತು ಎಚ್‌ಟಿ ಲೈಫ್‌ಸ್ಟೈಲ್ ಜೊತೆಗೆ ಗುರ್‌ಗಾಂವ್‌ನ ಮದರ್ಹುಡ್ ಆಸ್ಪತ್ರೆಯ ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ಸ್ ವೈದ್ಯಕೀಯ ನಿರ್ದೇಶಕ ಡಾ.ಸಂಜಯ್ ವಜೀರ್ ಮಾತನಾಡಿದ್ದಾರೆ. ದೀಪಾವಳಿ ಹಬ್ಬದ ಸಮಯದಲ್ಲಿ ಮಕ್ಕಳನ್ನು ಸುರಕ್ಷಿತವಾಗಿಡಲು ಅಗತ್ಯ ಸುರಕ್ಷತಾ ಸಲಹೆ ಹಾಗೂ ಮಾರ್ಗಸೂಚಿಗಳನ್ನು ಅವರು ಹಂಚಿಕೊಂಡಿದ್ದಾರೆ.
ಈ ಅಪಾಯಗಳ ಅರಿವಿರಲಿ
ಹಬ್ಬದ ಸಮಯದಲ್ಲಿ ಮಕ್ಕಳು ಸ್ವಾಭಾವಿಕವಾಗಿ ಕುತೂಹಲಕ್ಕೊಳಗಾಗಿ ಆಕರ್ಷಿತರಾಗುತ್ತಾರೆ. ಇದರಿಂದ ಸುಟ್ಟಗಾಯಗಳು, ಬೀಳುವುದು, ಮಾಲಿನ್ಯದಿಂದ ಉಸಿರಾಟದ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಅಂಥಾ ಸಂಭಾವ್ಯ ಅಪಾಯಗಳ ಬಗ್ಗೆ ಅರಿವು ಇರಬೇಕು.
ಬೆಂಕಿಯಿಂದ ಸುಟ್ಟಗಾಯಗಳು: ದೀಪ ಅಥವಾ ಮೇಣದಬತ್ತಿ ಹಚ್ಚುವಾಗ ಮತ್ತು ಪಟಾಕಿಗಳನ್ನು ಸುಡುವಾಗ ಸುಟ್ಟಗಾಯಗಳಾಗುತ್ತವೆ. ಮಕ್ಕಳು ಆಕಸ್ಮಿಕವಾಗಿ ಬಿಸಿ ಮೇಲ್ಮೈಗಳನ್ನು ಸ್ಪರ್ಶಿಸಬಹುದು ಅಥವಾ ತಪ್ಪಿ ದೇಹದ ಭಾಗಗಳಿಗೆ ಸುಟ್ಟ ಗಾಯಗಳಾಗಬಹುದು.
ಪಟಾಕಿಗಳಿಂದ ಗಾಯಗಳು: ಪಟಾಕಿಗಳನ್ನು ಸರಿಯಾಗಿ ಸುಡದಿದ್ದರೆ, ಗಂಭೀರ ಗಾಯಗಳಿಗೆ ಕಾರಣವಾಗಬಹುದು. ಮಕ್ಕಳಿಗಾಗಿ ಇರುವ ಪಟಾಕಿಗಳನ್ನು ಮಾತ್ರ ಮಕ್ಕಳು ಸುಟ್ಟರೆ ಸಾಕು. ಇಲ್ಲವಾದಲ್ಲಿ ಗಾಯಗಳು, ಸುಟ್ಟಗಾಯಗಳಿಂದ ಹಿಡಿದು ಕಣ್ಣಿನ ಗಾಯ ಅಥವಾ ದೊಡ್ಡ ಶಬ್ದಗಳಿಂದ ಶ್ರವಣ ದೋಷ ಕಾಣಿಸಿಕೊಳ್ಳಬಹುದು.
ಉಸಿರಾಟದ ಸಮಸ್ಯೆಗಳು: ಪಟಾಕಿಗಳಿಂದ ಬರುವ ಹೊಗೆಯಿಂದ ಅಸ್ತಮಾ ಅಥವಾ ಇತರ ಉಸಿರಾಟದ ಸಮಸ್ಯೆಗಳು ಉಲ್ಬಣಗೊಳ್ಳುತ್ತದೆ. ಮೊದಲೇ ಇಂಥಾ ಸಮಸ್ಯೆಗಳಿದ್ದರೆ, ಅಂಥಾ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಅಗತ್ಯ.
ಅಲರ್ಜಿ: ಅಲಂಕಾರಕ್ಕೆ ಬಳಸುವ ಕೆಲವು ಆಹಾರಗಳು, ಬಣ್ಣಗಳು ಅಥವಾ ವಸ್ತುಗಳಿಗೆ ದೇಹವನ್ನು ಒಡ್ಡಿಕೊಳ್ಳುವುದು ಅಲರ್ಜಿಗಳಾಗುತ್ತವೆ. ಇದರಿಂದ ಎಚ್ಚರ ಅಗತ್ಯ.
ಕೀಟ ಕಡಿತ: ಹಬ್ಬದ ಋತುವಿನಲ್ಲಿ ಹೊರಾಂಗಣ ಚಟುವಟಿಕೆಗಳು ಹೆಚ್ಚಿರುತ್ತದೆ. ಮಕ್ಕಳು ಪೋಷಕರ ಕಣ್ಣುತಪ್ಪಿಸಿ ಎಲ್ಲೆಂದರಲ್ಲಿ ಓಡಾಡುತ್ತಾರೆ. ಅದು ಕೀಟ ಕಡಿತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸೊಳ್ಳೆ ಕಡಿತವು ಡೆಂಗ್ಯೂ ಅಥವಾ ಮಲೇರಿಯಾದಂತಹ ರೋಗಗಳಿಗೆ ಕಾರಣವಾಗಬಹುದು.
ಮಕ್ಕಳಿಗೆ ದೀಪಾವಳಿ ಸುರಕ್ಷತಾ ಸಲಹೆಗಳು
1. ಸುಟ್ಟಗಾಯಗಳಿಂದ ರಕ್ಷಿಸಿ: ಹಣತೆಗಳು ಮತ್ತು ಮೇಣದಬತ್ತಿ ಸೇರಿದಂತೆ ಬೆಂಕಿಯನ್ನು ಹೊರಸೂಸುವ ಯಾವುದೇ ವಸ್ತುಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಲು ನಿಮ್ಮ ಮಕ್ಕಳಿಗೆ ಕಲಿಸಿ. ನೀವು ದೀಪಗಳನ್ನು ಬೆಳಗಿಸುತ್ತಿದ್ದರೆ, ಮಕ್ಕಳು ತಿರುಗಾಡುವ ಸಾಧ್ಯತೆ ಕಡಿಮೆ ಇರುವ ಪ್ರದೇಶಗಳಲ್ಲಿ ಹಣತೆಗಳನ್ನು ಇಡಿ. ಮಕ್ಕಳು ದೀಪದ ಬಳಿ ಹೋಗುತ್ತಾರೋ ಇಲ್ಲವೋ ಎಂಬುದನ್ನು ನೋಡುತ್ತಿರಿ.
2. ಪ್ರಥಮ ಚಿಕಿತ್ಸಾ ಕಿಟ್ ಜೊತೆಗಿರಲಿ: ಹಬ್ಬದ ನಡುವೆ ಯಾವುದೇ ಅವಘಡಗಳು ಸಂಭವಿಸಬಹುದು. ಹೀಗಾಗಿ ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಳ್ಳಬೇಕು. ಮನೆಯಲ್ಲಿ ಪ್ರಥಮ ಚಿಕಿತ್ಸಾ ಕಿಟ್, ನಂಜುನಿರೋಧಕ ವೈಪ್‌ಗಳು, ಅಗತ್ಯ ಕ್ರೀಮ್‌ಗಳು ಮತ್ತು ಸುಟ್ಟ ಗಾಯಗಳಿಗೆ ಹಚ್ಚುವ ಮುಲಾಮುಗಳನ್ನು ಮೊದಲೇ ತಂದಿಟ್ಟುಕೊಳ್ಳಿ. ಸಣ್ಣ ಗಾಯಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಅಗತ್ಯ ವಸ್ತುಗಳು ಜೊತೆಗಿರಲಿ.
3. ಸುರಕ್ಷಿತ ಪಟಾಕಿಗಳನ್ನು ಖರೀದಿಸಿ: ಮಕ್ಕಳಿಗೆ ಪಟಾಕಿ ಇಷ್ಟ. ಹೀಗಾಗಿ ಪರವಾನಗಿ ಪಡೆದ ಮಾರಾಟಗಾರರಿಂದ ಮಾತ್ರ ಪಟಾಕಿ ಖರೀದಿಸಿ. ಹಿರಿಯರ ಮೇಲ್ವಿಚಾರಣೆಯಲ್ಲಿ ಆನಂದಿಸಬಹುದಾದ ಸುರಕ್ಷಿತ ಆಯ್ಕೆಗಳನ್ನು ಆರಿಸಿ. ಪಟಾಕಿ ಸುಡುವಾಗ ತುರ್ತು ಸ್ಪಂದನೆಗೆಂದು ಯಾವಾಗಲೂ ಹತ್ತಿರದಲ್ಲಿ ಒಂದು ಬಕೆಟ್ ನೀರು ಅಥವಾ ಮರಳನ್ನು ಇರಿಸಿ.
4. ಸಾವಯವ ರಂಗೋಲಿ ಬಣ್ಣಗಳನ್ನು ಬಳಸಿ: ದೀಪಾವಳಿಗೆ ರಂಗೋಲಿ ಬಿಡಿಸುವುದು ಸಾಮಾನ್ಯ. ಹೀಗಾಗಿ ಮಕ್ಕಳಿಗೆ ಸುರಕ್ಷಿತವಾದ ಸಾವಯವ ಬಣ್ಣಗಳನ್ನು ಆರಿಸಿ. ಬಣ್ಣದಲ್ಲಿ ಚರ್ಮ ಅಥವಾ ಕಣ್ಣುಗಳಿಗೆ ಕಿರಿಕಿರಿಯಾಗುವ ಹಾನಿಕಾರಕ ರಾಸಾಯನಿಕಗಳು ಇರಬಹುದು. ಹೀಗಾಗಿ ಅದನ್ನು ಮಕ್ಕಳಿಂದ ದೂರವಿರಿಸಿ.
5. ಅಲರ್ಜಿ ಬಗ್ಗೆ ಜಾಗರೂಕರಾಗಿರಿ: ಹಬ್ಬದ ಸಂದರ್ಭದಲ್ಲಿ ಮಕ್ಕಳು ವಿವಿಧ ಆಹಾರಗಳನ್ನು ಸೇವಿಸುತ್ತಾರೆ. ಹೀಗಾಗಿ ಯಾವುದೇ ರೀತಿಯ ಆಹಾರ ಅಲರ್ಜಿಗಳ ಬಗ್ಗೆ ಜಾಗರೂಕರಾಗಿರಿ. ಅಲರ್ಜಿ ಸ್ನೇಹಿ ತಿಂಡಿಗಳನ್ನು ತಯಾರಿಸುವ ಮೂಲಕ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ.
6. ಹೊಗೆಗೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸಿ: ಮಗುವಿಗೆ ಅಸ್ತಮಾ ಅಥವಾ ಉಸಿರಾಟದ ಸಮಸ್ಯೆಗಳಿದ್ದರೆ, ಪಟಾಕಿಗಳಿಂದ ಬರುವ ಹೊಗೆಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಮನೆಯಲ್ಲಿ ಹೊಗೆ ಮುಕ್ತ ಸುರಕ್ಷಿತ ವಲಯವನ್ನು ರಚಿಸಿ. ಅಲ್ಲಿ ಅವರು ಹಬ್ಬ ಆನಂದಿಸುವ ವ್ಯವಸ್ಥೆ ಮಾಡಿ.
7. ಅಗ್ನಿ ಸುರಕ್ಷತೆಯ ಬಗ್ಗೆ ಶಿಕ್ಷಣ ನೀಡಿ: ಅಗ್ನಿ ಸುರಕ್ಷತೆಯ ಮಹತ್ವದ ಬಗ್ಗೆ ಮಕ್ಕಳಿಗೆ ಕಲಿಸಿ. ಬೆಂಕಿಯ ಸಂದರ್ಭದಲ್ಲಿ ಏನು ಮಾಡಬೇಕೆಂದು ಚರ್ಚಿಸಿ. ಮನೆಯಲ್ಲಿ ತುರ್ತು ನಿರ್ಗಮನ ಮಾರ್ಗಗಳ ಬಗ್ಗೆ ಅವರಿಗೆ ಪರಿಚಯ ಮಾಡಿಕೊಡಿ.