ದೀಪಾವಳಿ ಸಂಭ್ರಮದ ನಡುವೆ ಹಿರಿಯರ ಸುರಕ್ಷತೆ ಮರಿಬೇಡಿ; ಹೀಗಿರಲಿ ಹಬ್ಬದ ಸಮಯದಲ್ಲಿ ವಯಸ್ಸಾದವರ ಕಾಳಜಿ
ಕನ್ನಡ ಸುದ್ದಿ  /  ಜೀವನಶೈಲಿ  /  ದೀಪಾವಳಿ ಸಂಭ್ರಮದ ನಡುವೆ ಹಿರಿಯರ ಸುರಕ್ಷತೆ ಮರಿಬೇಡಿ; ಹೀಗಿರಲಿ ಹಬ್ಬದ ಸಮಯದಲ್ಲಿ ವಯಸ್ಸಾದವರ ಕಾಳಜಿ

ದೀಪಾವಳಿ ಸಂಭ್ರಮದ ನಡುವೆ ಹಿರಿಯರ ಸುರಕ್ಷತೆ ಮರಿಬೇಡಿ; ಹೀಗಿರಲಿ ಹಬ್ಬದ ಸಮಯದಲ್ಲಿ ವಯಸ್ಸಾದವರ ಕಾಳಜಿ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಿರಿಜೀವಿಗಳ ಕಾಳಜಿಗೆ ಹೆಚ್ಚು ಗಮನ ಕೊಡಬೇಕು. ಪಟಾಕಿ ಮಾಲಿನ್ಯ, ಶಬ್ದ ಮಾಲಿನ್ಯ, ಆಹಾರಗಳು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗಾದರೆ ಬೆಳಕಿನ ಹಬ್ಬದಲ್ಲಿ ವಯಸ್ಸಾದವರ ಸುರಕ್ಷತೆ ಹೇಗೆ ಎಂಬುದನ್ನು ನೋಡಿ.

ದೀಪಾವಳಿ ಸಮಯದಲ್ಲಿ ಹಿರಿಯರ ಕಾಳಜಿ ಹೇಗೆ
ದೀಪಾವಳಿ ಸಮಯದಲ್ಲಿ ಹಿರಿಯರ ಕಾಳಜಿ ಹೇಗೆ (PC: Canva)

ದೀಪಾವಳಿ ಎಂದರೆ ಸಂಭ್ರಮದ ಹಬ್ಬ. ದೀಪಗಳು, ಪಟಾಕಿ, ಸಿಹಿ ತಿನಿಸು ಈ ಎಲ್ಲವೂ ಸಂಭ್ರಮದ ಭಾಗವಾಗುತ್ತದೆ. ಆದರೆ ಹಬ್ಬದ ಸಮಯದಲ್ಲಿ ಮನೆಯಲ್ಲಿ ಹಿರಿಯರಿದ್ದರೆ ಪಟಾಕಿ ಶಬ್ದ, ವಾಯುಮಾಲಿನ್ಯ, ಆರೋಗ್ಯ ಕೆಡಿಸುವ ಆಹಾರಗಳು ಅವರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಬೆಳಕಿನ ಹಬ್ಬದ ಸಂದರ್ಭ ವಯಸ್ಸಾದವರನ್ನು ಕಾಳಜಿ ಮಾಡೋದು ಹೇಗೆ ನೋಡಿ.

ಪಟಾಕಿಯಿಂದ ದೂರ ಇರುವಂತೆ ನೋಡಿಕೊಳ್ಳಿ

ದೀಪಾವಳಿಯಲ್ಲಿ ಪಟಾಕಿ ಹೊಡೆಯುವ ಸಂಭ್ರಮ ಜೋರಿರುತ್ತದೆ. ಆದರೆ ಪಟಾಕಿ ಹೊಡೆಯುವ ಭರದಲ್ಲಿ ಅಕ್ಕ‍ಪಕ್ಕದಲ್ಲಿ ವಯಸ್ಸಾದವರು ಇದ್ದಾರೆಯೇ ಎಂಬುದನ್ನು ಗಮನಿಸುವುದನ್ನು ಮರೆಯಬೇಡಿ. ಹಿರಿ ಜೀವಗಳ ಚರ್ಮ ಬಹಳ ಸೂಕ್ಷ್ಮವಾಗಿರುತ್ತದೆ. ಅವರ ಚರ್ಮಕ್ಕೆ ಪಟಾಕಿ ಕಿಡಿ ತಾಕಿದರೂ ತೊಂದರೆ. ಅಲ್ಲದೇ ಪಟಾಕಿ ಶಬ್ದ ಅವರಿಗೆ ಕಿರಿಕಿರಿ ಉಂಟು ಮಾಡಬಹುದು. ಅವರ ಕಣ್ಣಿಗೂ ಅಪಾಯವಾಗಬಹುದು. ಹಾಗಾಗಿ ಪಟಾಕಿ ಹೊಡೆಯುವ ಸಂದರ್ಭ ಆದಷ್ಟು ವಯಸ್ಸಾದವರು ಅಕ್ಕಪಕ್ಕ ಇರದಂತೆ ನೋಡಿಕೊಳ್ಳಿ.

ಉಸಿರಾಟದ ಸಮಸ್ಯೆ ಬಾರದಂತೆ ಹೀಗೆ ಮಾಡಿ

ವಯಸ್ಸಾದ ಮೇಲೆ ಉಸಿರಾಟಕ್ಕೆ ಸಂಬಂಧಿಸಿ ಸಮಸ್ಯೆಗಳು ಕಾಡುವುದು ಜಾಸ್ತಿ. ಅದರಲ್ಲೂ ಅಸ್ತಮಾದಂತಹ ಸಮಸ್ಯೆ ಇರುವವರಿಗೆ ಪಟಾಕಿ ಮಾಲಿನ್ಯ ಇನ್ನಷ್ಟು ತೊಂದರೆಯಾಗುವಂತೆ ಮಾಡಬಹುದು. ಆ ಕಾರಣಕ್ಕೆ ಅವರು ಹೊರಗಡೆ ಬಾರದಂತೆ ಇರುವಂತೆ ನೋಡಿಕೊಳ್ಳುವುದು ಉತ್ತಮ. ಮನೆಯೊಳಗೆ ಹೊಗೆ ಮಾಲಿನ್ಯ ಬರಬಾರದು ಎಂದರೆ ಬಾಗಿಲು, ಕಿಟಿಕಿಗಳನ್ನು ಮುಚ್ಚಿಡಿ.

ಆಹಾರದ ಮೇಲೆ ನಿಗಾ ಇರಲಿ

ದೀಪಾವಳಿ ಪ್ರಯುಕ್ತ ಮನೆಯಲ್ಲಿ ವಿವಿಧ ಬಗೆಯ ಖಾದ್ಯಗಳನ್ನು, ಸಿಹಿ ತಿನಿಸುಗಳನ್ನು ಮಾಡಲಾಗುತ್ತದೆ. ಹಾಗಂತ ಹಿರಿಯರು ಸಿಕ್ಕದ್ದನ್ನೆಲ್ಲಾ ತಿಂದರೆ ಆರೋಗ್ಯ ಕೆಡುವುದು ಖಂಡಿತ. ಹಬ್ಬದ ದಿನಗಳಲ್ಲಿ ಹಿರಿಯರ ಆಹಾರದ ಮೇಲೆ ಹೆಚ್ಚು ಗಮನ ಹರಿಸಬೇಕು. ಅದರಲ್ಲೂ ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಮಸ್ಯೆ ಇದ್ದರೆ ಅಂಥವರ ಮೇಲೆ ಹೆಚ್ಚು ಗಮನ ಹರಿಸಬೇಕು.

ಆರೋಗ್ಯಕರ ಆಹಾರ ತಯಾರಿಸಿ

ಹಿರಿಯರಿಗಾಗಿ ಕೆಲವು ಆಹಾರಕರ ಹಾಗೂ ರುಚಿಕರ ಆಹಾರ ತಯಾರಿಸಿ. ಇದರಿಂದ ಅವರು ಆರೋಗ್ಯ ಕೆಡುವ ಆಹಾರಗಳನ್ನು ತಿನ್ನುವುದನ್ನು ತಪ್ಪಿಸಬಹುದು.

ಒಂಟಿಯಾಗಿ ಬಿಡಬೇಡಿ

ನೀವೆಲ್ಲರೂ ದೀಪಾವಳಿ ಸಂಭ್ರಮದಲ್ಲಿರುವಾಗ ಅವರನ್ನು ಒಂಟಿಯಾಗಿ ಬಿಡಬೇಡಿ. ಇದರಿಂದ ಅವರಿಗೆ ಒಂಟಿತನ ಕಾಡಬಹುದು. ಇದು ಅವರ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುವಂತಾಗಬಹುದು. ಅದರೊಂದಿಗೂ ಹಬ್ಬ ಆಚರಿಸಿ. ಆದರೆ ಮಾಲಿನ್ಯದ ಪರಿಣಾಮ ಅವರ ಮೇಲೆ ಆಗದಂತೆ ನೋಡಿಕೊಳ್ಳಿ.

ಶಬ್ದಮಾಲಿನ್ಯ ಆಗದಂತೆ ನೋಡಿಕೊಳ್ಳಿ

ಮನೆಯಲ್ಲಿ ಪಟಾಕಿ ಹೊಡೆದು ಸಂಭ್ರಮಿಸಬೇಕು ನಿಜ, ಆದರೆ ಅತಿಯಾದ ಶಬ್ದಮಾಲಿನ್ಯವು ಹಿರಿಯರ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಅಣಂಬಾಂಬ್‌ನಂತಹ ಹೆಚ್ಚು ಶಬ್ದ ಬರುವ ಪಟಾಕಿಗಳನ್ನ ಹೊಡೆಯಲೇ ಬೇಡಿ. ಅದರಲ್ಲೂ ಟೆರೆಸ್ ಮೇಲೆ, ಕಂಪೌಂಡ್‌ ಒಳಗೆ ಇಂತಹ ಪಟಾಕಿ ಹೊಡೆಯುವುದರಿಂದ ಶಬ್ದ ಅತಿಯಾಗಿ ಕಿವಿ ಮೇಲೆ ಬೀಳುತ್ತದೆ. ಇದು ಹಿರಿಯ ಜೀವಿಗಳಲ್ಲಿ ಹೃದಯಾಘಾತದಂತಹ ಗಂಭೀರ ಸಮಸ್ಯೆಯನ್ನೂ ಉಂಟು ಮಾಡಬಹುದು.

ಔಷಧಿ ಕೊಡುವುದು ಮರೆಯದಿರಿ

ಹಬ್ಬ ಎಂದರೆ ಸಂಭ್ರಮ ಇದ್ದೇ ಇರುತ್ತದೆ. ಅದರಲ್ಲೂ ದೀಪಾವಳಿ 5 ದಿನಗಳ ಕಾಲ ನಡೆಯುವ ಹಬ್ಬ. ಈ ಹಬ್ಬದ ಸಂಭ್ರಮದ ನಡುವೆ ಹಿರಿಯರಿಗೆ ಔಷಧಿ ಕೊಡುವುದನ್ನು ಮರೆಯಬೇಡಿ. ಔಷಧಿ ತಪ್ಪಿಸುವುದು ಕೂಡ ಗಂಭೀರ ಸಮಸ್ಯೆಗೆ ಕಾರಣವಾಗಬಹುದು.

Whats_app_banner