Politics in Sports:ಸಖತ್ ಆಟ; ರಾಜಕೀಯ ಕಚೇರಿಗಳಾದ ಕ್ರೀಡಾ ಸಂಸ್ಥೆಗಳು; ರಾಜಕಾರಣಿ ಲಾಭದ ವಸ್ತುವಾಯ್ತು ಆಟಗಾರರ ಬೆವರಿನ ಹನಿ, ಮುಕ್ತಿ ಎಂದು
Jun 12, 2023 10:03 AM IST
ರಾಜಕೀಯ ಕಚೇರಿಗಳಾದ ಕ್ರೀಡಾ ಸಂಸ್ಥೆಗಳು
- ಕ್ರೀಡೆ ಎಂದರೆ ಒಂದು ಸೊಗಸಾದ ಕಾವ್ಯ. ಒಂದು ಚೆಲುವಾದ ಸಾಹಿತ್ಯ. ರಂಗುರಂಗಿನ ಆಟದ ಲೋಕದಲ್ಲಿ ಒಂದಷ್ಟು ಕೌತುಕಗಳೂ, ಕಥೆಗಳೂ ಇವೆ. ಮೈದಾನದ ಒಳಗೆ, ಹೊರಗೆ ಆಟ ಮತ್ತು ಆಟಗಾರರ ಏಳು-ಬೀಳುಗಳ ಗುಚ್ಛವೇ ಈ ‘ಸಖತ್ ಆಟ’. ಇನ್ಮುಂದೆ ಈ ಅಂಕಣ ಪ್ರತಿ ಭಾನುವಾರ ನಿಮ್ಮೊಂದಿಗೆ.
ಈ ಘಟನೆ ನಡೆದು ಇನ್ನೂ ವರ್ಷವೂ ಕಳೆದಿಲ್ಲ. 2022ರ ಸೆಪ್ಟೆಂಬರ್ 19ರಂದು ನಡೆದ ಘಟನೆ ಇದು. ಅದು ಡುರಾಂಡ್ ಕಪ್ ಫೈನಲ್ನಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ ಗೆದ್ದು, ಕಿರೀಟಕ್ಕೆ ಮುತ್ತಿಕ್ಕಿತು. ಮುಂಬೈ ಸಿಟಿ ಫುಟ್ಬಾಲ್ ತಂಡವನ್ನು ಸೋಲಿಸಿದ ಸುನಿಲ್ ಛೆಟ್ರಿ ನೇತೃತ್ವದ ತಂಡಕ್ಕೆ ಟ್ರೋಫಿ ನೀಡುವ ಸಮಯ. ಗೆದ್ದ ಖುಷಿಯಲ್ಲಿ ತೇಲಾಡುತ್ತಿದ್ದ ಆಟಗಾರರು, ಟ್ರೋಫಿಗಾಗಿ ಕಾದು ಕುಳಿತಿದ್ದರು. ಟ್ರೋಫಿ ಪಡೆಯಲು ನಾಯಕ ಸುನಿಲ್ ಛೆಟ್ರಿ ಕೂಡ ವೇದಿಕೆ ಹತ್ತಿದರು.
ಅಲ್ಲಿ ಟ್ರೋಫಿ ಹಿಡಿದು ನಿಂತಿದ್ದವರು ಪಶ್ಚಿಮ ಬಂಗಾಳದ ರಾಜ್ಯಪಾಲರು ಹಾಗೂ ರಾಜಕಾರಣಿ ಲಾ ಗಣೇಶನ್ ಅಯ್ಯರ್. ಟ್ರೋಫಿ ಕೊಡುವಾಗ ಫೋಟೋಗೆ ಪೋಸ್ ಕೊಡುವುದು ಸಹಜ. ಟೂರ್ನಿ ಆಯೋಜಕರ ಜೊತೆಗೆ ಗಣೇಶನ್ ಅತ್ಯಂತ ಖುಷಿಯಿಂದಲೇ ಟ್ರೋಫಿಯನ್ನು ಛೆಟ್ರಿ ಕೈಗಿಟ್ಟರು. ಆದರೆ, ಟ್ರೋಫಿ ವಿತರಣೆ ಫೋಟೋ ತೆಗೆಸಿಕೊಳ್ಳುವಾಗ ಮೈದಾನದಲ್ಲಿ ಬೆವರು ಸುರಿಸಿ ಗೆದ್ದ ಆಟಗಾರರನ್ನು ಪಕ್ಕಕ್ಕೆ ತಳ್ಳಿದರು. ಫೋಟೋದಲ್ಲಿ ತಾನು ಸರಿಯಾಗಿ ಬರಬೇಕೆಂಬ ಉದ್ದೇಶ ಅವರದ್ದಾಗಿತ್ತು.
ಇದು ಕಳೆದ ವರ್ಷವಂತೂ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ, ರಾಷ್ಟ್ರೀಯ ಉಪಾಧ್ಯಕ್ಷ, ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಮತ್ತು ರಾಜ್ಯಸಭೆ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ ಗಣೇಶನ್, ಪ್ರತಿಷ್ಠಿತ ಗವರ್ನರ್ ಹುದ್ದೆಯನ್ನೂ ಅಲಂಕರಿಸಿದ್ದಾರೆ. ಇಷ್ಟು ದೊಡ್ಡ ಹೆಸರು ಸಂಪಾದಿಸಿದ ಗಣೇಶನ್, ಒಂದು ಫೋಟೋಗಾಗಿ ಛೆಟ್ರಿಯನ್ನು ಬದಿಗೆ ಸರಿಸಿದ್ದು, ಸರಿಯಲ್ಲ ಎಂದು ವಿವಾದವಾಗಿತ್ತು. ಇದೊಂದು ಅನಾಗರಿಕ ವರ್ತನೆ ಎಂದಿದ್ದರು.
ಫೋಟೋಗಾಗಿ ಛೆಟ್ರಿಯನ್ನು ಬದಿಗೆ ಸರಿಸಿದ್ದು ಚಿಕ್ಕ ವಿಷಯವೇ ಇರಬಹುದು. ಆದರೆ, ಒಬ್ಬ ರಾಜಕಾರಣಿ, ಕ್ರೀಡಾಪಟುಗೆ ಮಾಡಿದ ಅವಮಾನ ಎಂಬುದು ಇಲ್ಲಿನ ಅರ್ಥ. ನಿಜವಾಗಿಯೂ ನೋಡಿದರೆ, ಇದು ಸಣ್ಣ ಪ್ರಕರಣವೇ. ಆದರೆ ಸಣ್ಣ ಫೋಟೋ ವಿಷಯದಲ್ಲೂ ರಾಜಕೀಯ ವ್ಯಕ್ತಿಗಳ ಪ್ರಭಾವ ಹೇಗಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಮತ್ತೊಂದು ಇಲ್ಲ. ಇದು ಕಣ್ಣಿಗೆ ಬಿತ್ತು ಅಷ್ಟೆ. ಕಣ್ಣಿಗೆ ಬೀಳದ ನೂರಾರು ದೊಡ್ಡ ಪ್ರಕರಣಗಳು ನಮ್ಮ ಮುಂದಿವೆ ಎಂಬುದನ್ನು ನಾವು ಮರೆಯಬಾರದು.
ರಾಜಕಾರಣಿಗಳು ಪ್ರಶಸ್ತಿಯನ್ನು ಕೊಡಬಾರದು ಎಂದು ಅಭಿಯಾನ ನಡೆದಿತ್ತು. ಹೀಗೆ ಹೇಳುವುದಾದರೆ, ಕ್ರೀಡಾ ಸಂಸ್ಥೆಗಳಲ್ಲಿ ತುಂಬಿರುವವರೆಲ್ಲಾ ರಾಜಕೀಯ ನಾಯಕರೇ ಆಗಿದ್ದಾರಲ್ಲವೇ? ಹಾಗಾದರೆ ಅವರನ್ನೂ ಕ್ರೀಡೆಯಿಂದ ದೂರ ಇಡಬೇಕು ಅಲ್ಲವೇ?
- ಕ್ರೀಡೆಯಲ್ಲಿ ಹೆಚ್ಚಾಗುತ್ತಿದೆ ರಾಜಕೀಯ ನಂಜು
ರಾಜಕೀಯ ಬೆರೆತಾಗಿನಿಂದ ಕ್ರೀಡೆ ಎಂಬುದು ವಿಷವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರಸ್ತುತ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ. ದೆಹಲಿಯಲ್ಲಿ ಭಾರತೀಯ ಕುಸ್ತಿಪಟುಗಳು, ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಗೊತ್ತೇ ಇದೆ. ಲೈಂಗಿಕ ಕಿರುಕುಳ, ಹಣಕಾಸು ಭ್ರಷ್ಟಾಚಾರ ಮತ್ತು ಬೆದರಿಕೆ ಆರೋಪವನ್ನು ಸಂಸದನ ಮೇಲೆ ಅಪ್ರಾಪ್ತೆ ಸೇರಿ 7 ಮಹಿಳಾ ಕುಸ್ತಿಪಟುಗಳು ಹೊರಿಸಿದ್ದಾರೆ.
ಬ್ರಿಜ್ ಭೂಷಣ್ ಇವರು ನಮ್ಮ ಮೇಲೆ ದುರ್ವತನೆ ತೋರಿದ್ದಾರೆ. ಎದೆಯ ಮೇಲೆ ಕೈ ಹಾಕುವುದು, ಮೈ ಸವರುವುದು, ಲೈಂಗಿಕತೆಗೆ ಸಹಕರಿಸುವಂತೆ ಬೇಡಿಕೆ ಇಡುವುದು.. ಹೀಗೆ ಹಲವು ಆರೋಪಗಳು ಕುಸ್ತಿಪಟುಗಳು ದಾಖಲಿಸಿರುವ ಎಫ್ಐಆರ್ನಲ್ಲಿ ಇವೆ. ರಾಜಕೀಯ ಸ್ವರೂಪ ಪಡೆದಿರುವ ಈ ಧರಣಿ, ಪರಸ್ಪರ ಆರೋಪ ಪ್ರತ್ಯಾರೋಪಕ್ಕೂ ಒಳಗಾಗಿದೆ. ಮತ್ತೊಂದೆಡೆ ಕುಸ್ತಿಪಟುಗಳನ್ನೂ ದೇಶ ವಿರೋಧಿ ಟೂಲ್ ಕಿಟ್ಗಳೆಂಬ ಆರೋಪಕ್ಕೂ ಗುರಿಯಾಗಿದ್ದಾರೆ.
ರಾಷ್ಟ್ರೀಯ-ಅಂತಾರಾಷ್ಟ್ರೀಯ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ ಅಗ್ರಮಾನ್ಯ ಕ್ರೀಡಾಪಟುಗಳನ್ನು ಅತ್ಯಂತ ಅಮಾನುಷವಾಗಿ ನಡೆದುಕೊಂಡರು ದೆಹಲಿ ಪೊಲೀದರು. ನೆಲದಲ್ಲಿ ಎಳೆದಾಡಿದರು. ಜೈಲಿಗಟ್ಟಿದರು. ಹಿಂಸಿಸಿದರು. ಕಿರುಕುಳ ಕೊಟ್ಟರು. ಜಂತರ್ಮಂತರ್ನಲ್ಲಿ ಪ್ರತಿಭಟನಾ ಸ್ಥಳದಲ್ಲಿದ್ದ ವಸ್ತುಗಳನ್ನು ಒಡೆದು ಹಾಕಿದರು. ಆದರೂ ಪ್ರಧಾನಿಗಳು ತುಟಿಪಿಟಿಕ್ ಅನ್ನಲಿಲ್ಲ. ಈ ಬಗ್ಗೆ ನನಗೇನು ಗೊತ್ತಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಪದಕ ಗೆದ್ದ ಫೋಟೋ ತೆಗೆಸಿಕೊಂಡವರು, ಈಗ ಅವರನ್ನೇ ಕ್ಯಾರೆ ಎನ್ನುತ್ತಿಲ್ಲ ಅಂದರೆ ಎನ್ನೆನ್ನಬೇಕು.
ಆದರೆ, 40 ರಿಂದ 50 ದಿನಗಳ ಕಾಲ ಖ್ಯಾತನಾಮ ಕುಸ್ತಿಪಟುಗಳು ಧರಣಿ ನಡೆಸಿದರೂ, ಪ್ರಧಾನಿಗಳು ಬರದಿರುವುದು ವಿಪರ್ಯಾಸ. ಸಮಾಜದಲ್ಲಿ ಒಂದು ಹೆಣ್ಣು ತನಗಾದ ಲೈಂಗಿಕ ಕಿರುಕುಳವನ್ನು ಹೇಳಿಕೊಂಡರೆ ಮರ್ಯಾದೆ ಹೋಗುತ್ತದೆ ಎಂದು ಹೆದರುವ ಈ ಕಾಲದಲ್ಲಿ, ಬೀದಿಗೆ ಬಂದು ತಮ್ಮ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಪ್ರತಿಭಟನೆ ನಡೆಸುತ್ತಾರೆ ಅಂದರೆ, ಇನ್ನೆಷ್ಟು ತೊಂದರೆ ಆಗಿರಬೇಡ ಊಹಿಸಿ. ಇಂತಹವರ ಕಷ್ಟಕ್ಕೆ ಮಿಡಿಯುವುದಿಲ್ಲ ಎಂದರೆ ಏನರ್ಥ.
ಬ್ರಿಜ್ಭೂಷಣ್ ಸಿಂಗ್ ಬಂಧಿಸಬೇಕು ಎಂದು ಪಟ್ಟು ಹಿಡಿದಿರುವ ಅಗ್ರಮಾನ್ಯ ಕುಸ್ತಿಪಟುಗಳು, ಕೇಂದ್ರ ಸರ್ಕಾರದ ಭರವಸೆ ಮೇರೆಗೆ ಜೂನ್ 15ರವರೆಗೂ ಪ್ರತಿಭಟನೆ ನಿಲ್ಲಿಸಿದ್ದಾರೆ. ಕಾನೂನಿನ ಮೂಲಕ ತನಿಖೆ ನಡೆಯುತ್ತಿದ್ದು, 200ಕ್ಕೂ ಅಧಿಕ ಹೇಳಿಕೆಗಳು ದಾಖಲಾಗಿವೆ. ಇದೊಂದು ಕಾನೂನಿ ಚೌಕಟ್ಟಿನಲ್ಲಿ ನಡೆಯುತ್ತಿದೆ. ಅದು ನಡೆಯಲಿ. ಆದರೆ ರಾಜಕಾರಣಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಏನು ಕೆಲಸ? ಕ್ರೀಡಾ ಸಂಸ್ಥೆಗಳಿಗೆ ಅವರಿಂದ ಮುಕ್ತಿ ಸಿಗುವುದು ಯಾವಾಗ? ಇದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
- ರಾಜಕಾರಣಗಳಿಂದ ಮುಕ್ತಿ ಯಾವಾಗ?
ಕ್ರೀಡೆಯು ಕೇವಲ ಮನೋರಂಜನೆ ಪ್ರತಿರೂಪವಲ್ಲ. ರಾಷ್ಟ್ರೀಯ ಹೆಮ್ಮೆಯ ವಿಷಯ. ಆದರೆ, ಕ್ರೀಡೆಯ ಬೆಳವಣಿಗೆಯ ಹೊರತಾಗಿಯೂ, ಕ್ರೀಡಾ ಚಟುವಟಿಕೆಗಳ ನಿರ್ವಹಣೆಯಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಕಾಣದಿರುವುದು ವಿಪರ್ಯಾಸ. ಪ್ರತಿಯೊಂದು ಹಂತದಲ್ಲೂ ಕಳಪೆ ಕ್ರೀಡಾ ಆಡಳಿತವು ಮುಂದುವರಿದಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಕ್ರೀಡಾ ಆಡಳಿತದಲ್ಲಿರುವ ರಾಜಕೀಯ ಹಸ್ತಕ್ಷೇಪ.
ಭಾರತದಲ್ಲಿ ರಾಜಕೀಯ ದೊಂಬರಾಟ ಸಮಾಜದ ಪ್ರತೀ ಕ್ಷೇತ್ರಕ್ಕೂ ವ್ಯಾಪಿಸಿದೆ. ಅದರಲ್ಲೂ ಕ್ರೀಡಾ ಕ್ಷೇತ್ರದಲ್ಲಂತೂ ಆಳವಾಗಿ ಬೇರೂರಿ ಬಿಟ್ಟಿದೆ. ಆಟಗಾರರ ಬೆವರಿನ ಫಲ ರಾಜಕಾರಣಿಗಳ ಪಾಲಾಗುತ್ತಿದೆ. ಇದರಿಂದ ಆಟದಲ್ಲಿ ಪಾರದರ್ಶಕತೆ ಕಳೆದಕೊಳ್ಳುತ್ತಿದೆ. ಕ್ರೀಡೆಯ ಬಲವೂ ಕುಸಿಯುತ್ತಿದೆ. ಛೆಟ್ರಿಯನ್ನು ಬದಿಗೆ ಸರಿಸಿದಂತೆ ಕ್ರೀಡಾ ಕ್ಷೇತ್ರವನ್ನೂ ರಾಜಕಾರಣಿಗಳು ಪಕ್ಕಕ್ಕೆ ತಳ್ಳುತ್ತಿದ್ದಾರೆ. ಪ್ರಬಲ ಕ್ರೀಡಾ ಸಂಸ್ಥೆಗಳು, ರಾಜಕೀಯ ಕಚೇರಿಗಳಾಗುತ್ತಿರುವುದು ಆತಂಕವೇ ಸರಿ.
ಕ್ರೀಡಾ ಕ್ಷೇತ್ರಕ್ಕೆ ಕಾಲಿಟ್ಟ ರಾಜಕೀಯ ನಾಯಕರು ತಮ್ಮ ಕೊಡುಗೆ ನೀಡುತ್ತಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ, ಅದರ ಲಾಭವನ್ನಂತೂ ಅಚ್ಚುಕಟ್ಟಾಗಿ ಪಡೆಯುತ್ತಿದ್ದಾರೆ. ಆಟಗಾರರ ಬೆವರಿನ ಹನಿಗಳಿಗೆ ಬೆಲೆಯೇ ಇಲ್ಲದಂತೆ ಮಾಡುತ್ತಿದ್ದಾರೆ. ಆಟಗಾರರು ಬೀದಿಗೆ ಬಂದು ತಮಗೆ ನ್ಯಾಯ ಬೇಕೆಂದು ಕೇಳುವಷ್ಟರ ಮಟ್ಟಿಗೆ ಸಂಕಷ್ಟಕ್ಕೆ ಸಿಲುಕಲು ಕಾರಣ, ಕ್ರೀಡೆಗಳ ಬಗ್ಗೆ ಗಂಧ ಗಾಳಿಯೂ ಗೊತ್ತಿಲ್ಲದವರು ರಾಜಕೀಯ ನಾಯಕರೇ ಅಧಿಕಾರ ವಹಿಸಿಕೊಂಡಿರುವುದು.
ಕ್ರೀಡೆಯಲ್ಲಿ ಯುವಕರೇ ತೊಡಗಿಸಿಕೊಳ್ಳಬೇಕು. ಯಾಕಂದರೆ ಇದು ಅವರ ಕ್ಷೇತ್ರ. ಆದರೆ, ರಾಜಕೀಯ ನಾಯಕರು ತಮ್ಮ ಪ್ರಚಾರಕ್ಕಾಗಿ ಈ ಕ್ಷೇತ್ರವನ್ನು ಆರಿಸಿಕೊಳ್ಳುತ್ತಿದ್ದಾರೆ. ನಾವು ಎಷ್ಟೋ ಬಾರಿ ಕೇಳಿದ್ದೇವೆ, ಕ್ರೀಡಾ ಸಂಸ್ಥೆಗಳಿಗೆ ರಾಜಕಾರಣಿಗಳು ಪ್ರವೇಶಿಸಿದ ಬೆನ್ನಲ್ಲೇ ಅಲ್ಲಿ ಮೊದಲು ಕೇಳಿಬರುವ ಆರೋಪವೇ ಲೈಂಗಿಕ ಕಿರುಕುಳ. ಸಾಕಷ್ಟು ಸಲ ಹೀಗೆ ಆರೋಪಗಳು ಸಮಾಜದ ಮುಂದೆ ಬಂದರೂ, ನಮ್ಮ ರಾಜಕೀಯ ನಾಯಕರು ತಮ್ಮ ಪ್ರಭಾವ ಬಳಸಿ ಮುಚ್ಚಿ ಹಾಕಿಬಿಡ್ತಾರೆ. ಇದು ಹೊಸದೇನಲ್ಲ.
ಮಾಜಿ ಕ್ರೀಡಾಪಟುಗಳಿಗೇ ಜವಾಬ್ದಾರಿ ನೀಡಬೇಕು
ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಆಟಗಾರರ ಕಳಪೆ ಪ್ರದರ್ಶನಕ್ಕೆ ರಾಜಕಾರಣಿಗಳು ಕ್ರೀಡಾ ಕ್ಷೇತ್ರವನ್ನು ಗಲೀಜು ಮಾಡಿರುವುದೇ ಇದಕ್ಕೆ ಕಾರಣವೇ ಹೊರತು, ಕ್ರೀಡಾಪಟುಗಳ ಅಸಾಮರ್ಥ್ಯವಲ್ಲ ಎಂಬುದನ್ನು ಗಮನಿಸಬಹುದು. ಈ ಯುವಜನರ ಕ್ಷೇತ್ರದಲ್ಲಿ ಕ್ರೀಡಾಪಟುಗಳಿಗೆ ಏಕೆ ಸ್ಥಾನಮಾನ ನೀಡುತ್ತಿಲ್ಲ ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಮುಖ್ಯಸ್ಥ, ಕಾರ್ಯದರ್ಶಿ... ಹೀಗೆ ಪ್ರಮುಖ ಹುದ್ದೆಗಳನ್ನು ಅಂತಾರಾಷ್ಟ್ರೀಯ ಅಥವಾ ರಾಷ್ಟ್ರೀಯ ಕ್ರೀಡಾಪಟುಗಳಿಗೆ ಅವಕಾಶ ನೀಡಬೇಕು. ಹಾಗೆಯೇ ಕೋಚ್ಗಳು, ಉತ್ತಮ ಆಡತಳಿದ ಅನುಭವ ಹೊಂದಿರುವ ನಿವೃತ್ತ ಅಧಿಕಾರಿಗಳಿಗೆ ಕೊಡುವುದು ಉತ್ತಮ ಬೆಳವಣಿಗೆ.
- 15 ಕ್ರೀಡಾ ಸಂಸ್ಥೆಗಳ ಅಧ್ಯಕ್ಷರು
ದಿ ಬ್ರಿಡ್ಜ್ ವರದಿಯ ಪ್ರಕಾರ, ಭಾರತೀಯ ಕ್ರೀಡಾ ಒಕ್ಕೂಟಗಳಲ್ಲಿ 47% ಅಧ್ಯಕ್ಷರು ರಾಜಕಾರಣಿಗಳೇ ಆಗಿದ್ದಾರೆ. ನಮ್ಮ ದೇಶದ 32 ಒಲಿಂಪಿಕ್ ಕ್ರೀಡಾ ಸಂಸ್ಥೆಗಳ ಪೈಕಿ 15 ಅಧ್ಯಕ್ಷರು ರಾಜಕಾರಣಿಗಳೇ ಆಗಿದ್ದಾರೆ. ಸ್ವಜನಪಕ್ಷಪಾತವು ತುಂಬಿ ತುಳುಕುತ್ತಿದೆ ಮತ್ತು ರಾಜಕಾರಣಿಗಳು ಮತ್ತು ಅಧಿಕಾರಶಾಹಿಗಳು ಕುಟುಂಬವು ಒಟ್ಟಾಗಿ ಸೇರಿ ಕ್ರೀಡಾ ಒಕ್ಕೂಟಗಳನ್ನು ಹೇಗೆ ನಡೆಸುತ್ತಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಎದ್ದು ಕಾಣುವ ಕೆಲ ಉದಾಹರಣೆಗಳ ನೋಟ ಸಾಕು. ದಶಕಗಳಿಂದಲೂ ರಾಜಕೀಯ ನಾಯಕರು ಕ್ರೀಡಾ ವ್ಯವಸ್ಥೆಯಲ್ಲಿ ಛಾಪು ಮೂಡಿಸುತ್ತಿದ್ದಾರೆ.
- ಕ್ರಿಕೆಟ್ನಲ್ಲೂ ಇದ್ದಾರೆ ರಾಜಕೀಯ ಪ್ರಭಾವಿತರು
ಕೇವಲ ಒಲಿಂಪಿಕ್ ಕ್ರೀಡಾ ಸಂಸ್ಥೆಗಳಲ್ಲಿ ಮಾತ್ರವಲ್ಲ, ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿರುವ ಬಿಸಿಸಿಐನಲ್ಲೂ ರಾಜಕಾರಣಿಗಳದ್ದೇ ದರ್ಬಾರ್. ಅಧ್ಯಕ್ಷ ಕರ್ನಾಟಕ ರೋಜರ್ಬಿನ್ನಿಯಾದರೂ, ಸಂಸ್ಥೆಯ ಹಿಡಿತ ಇರುವುದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಕಾರ್ಯದರ್ಶಿ ಜಯ್ ಶಾ ಅವರ ಕೈಯಲ್ಲಿ. ಉಪಾಧ್ಯಕ್ಷ ರಾಜೀವ್ ಶುಕ್ಲಾ ಕಾಂಗ್ರೆಸ್ ಪಕ್ಷದವರು. ಅರುಣ್ ಸಿಂಗ್ ಧುಮಾಲ್ ಐಪಿಎಲ್ ಅಧ್ಯಕ್ಷ. ಇವರ ಸಹೋದರ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್. ಬಿಜೆಪಿಯ ಆಶೀಶ್ ಶೆಲ್ಲಾರ್ ಖಜಾಂಚಿ. ಇದು ಪ್ರಸ್ತುತ. ಆದರೆ ಈ ಹಿಂದಿನಿಂದಲೂ ರಾಜಕಾರಣಿಗಳು ಬಿಸಿಸಿಐ ಅನ್ನು ಆಳ್ವಿಕೆ ನಡೆಸಿದ್ದರು. ಮಾಧವರಾವ್ ಸಿಂಧಿಯಾ (ಬಿಸಿಸಿಐ ಅಧ್ಯಕ್ಷ), ಶರದ್ ಪವಾರ್ (ಬಿಸಿಸಿಐ ಅಧ್ಯಕ್ಷ), ಅನುರಾಗ್ ಸಿಂಗ್ ಠಾಕೂರ್, ಪ್ರೇಮ್‌ಕುಮಾರ್ ಧುಮಾಲ್, ಅರುಣ್ ಜೇಟ್ಲಿ, ಈಗವರ ಪುತ್ರ ರೋಹನ್ ಜೇಟ್ಲಿ.. ಹೀಗೆ ಹಲವರು ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿಕೊಂಡಿದ್ದರು. ಕೆಲವರು ಈಗಲೂ ಇದ್ದಾರೆ.
- ಬಜೆಟ್ನಲ್ಲಿ ಕೋಟಿ ಕೋಟಿ ಹಣ
ಭಾರತ ಅತಿಹೆಚ್ಚು ಜನಸಂಖ್ಯೆಯ ಹೊರತಾಗಿಯೂ ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಮತ್ತು ಸಮರ್ಥನೀಯ ಹೂಡಿಕೆಯ ಕೊರತೆಯು ಕೇಂದ್ರ ಸರ್ಕಾರವನ್ನು ಪ್ರಶ್ನಿಸುವಂತೆ ಮಾಡುತ್ತಿದೆ. ಕಳೆದ ದಶಕದಲ್ಲಿ ಭಾರತದಲ್ಲಿ ಕ್ರೀಡಾ ಬಜೆಟ್ ಗಣನೀಯವಾಗಿ ಬೆಳೆದಿದ್ದರೂ, ಅಮೆರಿಕ, ಇಂಗ್ಲೆಂಡ್, ಜಪಾನ್ ಮತ್ತು ಆಸ್ಟ್ರೇಲಿಯಾದಂತಹ ರಾಷ್ಟ್ರಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆ. ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ 3,397.32 ಕೋಟಿಯನ್ನು ಕ್ರೀಡಾ ಸಚಿವಾಲಯಕ್ಕೆ ಮಂಡಿಸಿದೆ. ಅದು ಕೂಡ ಕಳೆದ ವರ್ಷಕ್ಕಿಂತ ಶೇ.11ರಷ್ಟು ಹೆಚ್ಚಳ. ಅದರಲ್ಲಿ 1000 ಕೋಟಿ ರೂ. ಕೇವಲ ಖೇಲೋ ಇಂಡಿಯಾ ಯೋಜನೆಗೆ ಮೀಸಲಿಟ್ಟಿದೆ.
ಮುಂದಿರುವ ಸವಾಲುಗಳೇನು?
- ಕ್ರೀಡೆಯ ಬ್ರಾಂಡ್ಗೆ ಹಾನಿ ತರುತ್ತಿರುವುದಲ್ಲದೆ, ಕ್ರೀಡಾಪಟುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕ್ರೀಡೆಯಲ್ಲಿ ರಾಜಕೀಯ ಪ್ರಭಾವದ ವಿಷಯ ಮಿತಿಗೆ ಬಂದಿರುವುದರಿಂದ ಕ್ರಮ ಕೈಗೊಳ್ಳಲು ಇದು ಸಕಾಲ. ರಾಜಕೀಯ ಮತ್ತು ಕ್ರೀಡೆಗಳ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳಲು ನಮ್ಮ ಶಾಸಕಾಂಗ ಸಂಸ್ಥೆಗಳು ಮತ್ತು ಕ್ರೀಡಾ ಸಂಸ್ಥೆಗಳು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸುವ ಸಮಯ ಇದು.
- ಕ್ರೀಡೆಗೆ ಉತ್ತೇಜನ ನೀಡುವ ಮತ್ತು ಕ್ರೀಡಾಪಟುಗಳಿಗೆ ಅಗತ್ಯ ಬೆಂಬಲ ನೀಡುವ ಕರ್ತವ್ಯವನ್ನು ಸರ್ಕಾರ ಮೊದಲು ಮತ್ತು ಅಗ್ರಗಣ್ಯವಾಗಿ ಒಪ್ಪಿಕೊಳ್ಳಬೇಕು. ಸರ್ಕಾರವು ತನ್ನ ರಾಜಕೀಯ ಗುರಿಗಳನ್ನು ಸಾಧಿಸಲು ಕ್ರೀಡೆಗಳನ್ನು ಬಳಸುವುದನ್ನು ನಿಲ್ಲಿಸಬೇಕು. ಬದಲಿಗೆ ಭಾರತದ ಕ್ರೀಡಾ ವ್ಯವಹಾರವನ್ನು ಬೆಳೆಸುವತ್ತ ಗಮನಹರಿಸಬೇಕು. ಕ್ರೀಡೆಗೆ ನೀಡಿದ ಹಣವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸದೆ ಆ ಕಾರಣಕ್ಕಾಗಿ ಬಳಸುವುದನ್ನು ಅವರು ಖಚಿತಪಡಿಸಿಕೊಳ್ಳಬೇಕು.
- ವಿವಾದಗಳು ಮತ್ತು ಸಮಸ್ಯೆಗಳನ್ನು ತಪ್ಪಿಸಲು, ಕ್ರೀಡಾ ಸಂಸ್ಥೆಗಳು ಪಾರದರ್ಶಕವಾಗಿರಬೇಕು. ಸಾರ್ವಜನಿಕರಿಗೆ ಜವಾಬ್ದಾರರಾಗಿರಬೇಕು. ಕ್ರೀಡಾಪಟುಗಳನ್ನು ಅವರ ರಾಜಕೀಯ ನಂಬಿಕೆಗಳನ್ನು ಪರಿಗಣಿಸದೆ ಅವರ ಸಾಮರ್ಥ್ಯಗಳ ಆಧಾರದ ಮೇಲೆ ಪ್ರತ್ಯೇಕವಾಗಿ ಆಯ್ಕೆ ಮಾಡಬೇಕು. ತರಬೇತಿ ಸೌಲಭ್ಯಗಳು, ತರಬೇತಿ ಮತ್ತು ಹಣಕಾಸಿನ ಬೆಂಬಲದಂತಹ ಸಂಪನ್ಮೂಲಗಳ ವಿತರಣೆಯನ್ನು ನ್ಯಾಯಯುತವಾಗಿ ಮತ್ತು ಮುಕ್ತವಾಗಿ ಮಾಡಬೇಕು.
- ರಾಜಕೀಯ ಹಿನ್ನೆಲೆ ಹೊಂದಿರುವವರನ್ನು ಕ್ರೀಡಾ ಒಕ್ಕೂಟಗಳಿಂದ ಮತ್ತು ಸಂಘಗಳಲ್ಲಿ ನಿಷೇಧಿಸುವ ಕಾನೂನು ಅಗತ್ಯ ಇದೆ.
- ರಾಜಕೀಯ ಪ್ರಭಾವವಿಲ್ಲದೆ ಕ್ರೀಡಾ ಒಕ್ಕೂಟಗಳನ್ನು ನಡೆಸುವುದರಿಂದ ಕ್ರೀಡೆಗೆ ಅಪಾರ ಉತ್ತೇಜನ ದೊರೆಯುತ್ತದೆ.
- ಮಾಜಿ ಕ್ರೀಡಾಪಟುಗಳು ರಾಜಕೀಯಕ್ಕೆ ಸೇರುವ ಮೂಲಕ ಅಥವಾ ಕ್ರೀಡಾ ಫೆಡರೇಷನ್‌ಗಳ ಪದಾಧಿಕಾರಿಗಳ ಮೂಲಕ ಕ್ರೀಡೆಗಾಗಿ ಕೆಲಸ ಮಾಡಲು ಒಂದು ಹೆಜ್ಜೆ ಮುಂದಿಡುವುದು. ಇದು ಸುಧಾರಣೆಗೆ ಪರಿಹಾರ.
ಕ್ರೀಡಾಪಟುಗಳ ಕಷ್ಟಾರ್ಜಿತದಿಂದ ರಾಜಕಾರಣಿಗಳು, ಅವರಿಗಿಂತ ಹೆಚ್ಚು ಹೆಸರು ಸಂಪಾದಿಸುತ್ತಿದ್ದಾರೆ. ಜೊತೆಗೆ ಅವರಿಂದಲೇ ಲೈಂಗಿಕ ಕಿರುಕುಳಂತ ದೌರ್ಜನ್ಯಗಳನ್ನೂ ಅನುಭವಿಸುವಂತಾಗಿದೆ. ಈಗ ಕುಸ್ತಿಪಟುಗಳು ಬೀದಿಗಿಳಿದು ಬ್ರಿಜ್ಭೂಷಣ್ ಸಿಂಗ್ ಒತ್ತಾಯಕ್ಕೆ ಪಟ್ಟು ಹಿಡಿದಿದ್ದಾರೆ. ಅವರ ರೀತಿಯೇ ಉಳಿದ ಕ್ರೀಡಾಪಟುಗಳು ಬೆಂಬಲ ಸೂಚಿಸುವ ಮೂಲಕ ರಾಜಕಾರಣಿಗಳನ್ನು ಕ್ರೀಡಾ ವ್ಯವಸ್ಥೆಯಿಂದ ಹೊರಗಟ್ಟಬೇಕು. ಇಲ್ಲದಿದ್ದರೆ, ನಿಮ್ಮೆಲ್ಲರ ಬೆವರಿನ ಹನಿಗಳಿಗೆ ಫಲ ಸಿಗಲ್ಲ ಎಂಬುದು ಕಟು ಸತ್ಯ.
ಕೊನೆಯಲ್ಲಿ ಪ್ರಶ್ನೆಎಂದರೆ ಕ್ರೀಡಾ ಸಂಸ್ಥೆಗಳು ರಾಜಕಾರಣಿಗಳಿಂದ ಮುಕ್ತಿ ಪಡೆಯುವುದೆಂದು?
-ಪ್ರಸನ್ನ ಕುಮಾರ್ ಪಿಎನ್
ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ಕ್ರೀಡೆಗಳ ಆಗು-ಹೋಗುಗಳ ಕುರಿತ ‘ಸಖತ್ ಆಟ’ ಅಂಕಣಕ್ಕೆ ನೀವೂ ವಿಷಯಗಳನ್ನು ಸಲಹೆ ಕೊಡಬಹುದು. ಇ-ಮೇಲ್ ವಿಳಾಸ: prasanna.kumar@htdigital.in ಅಥವಾ ht.kannada@htdigital.in
ಇಂತಹ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಕ್ಷಣ ಕ್ಷಣದ ಮಾಹಿತಿಗಾಗಿ Hindustan Times Kannada ವೆಬ್ಸೈಟ್ ವೀಕ್ಷಿಸಿ.
ಮಹತ್ವದ ಮಾಹಿತಿಗಾಗಿ ಟ್ವಿಟರ್ ಮತ್ತು ಫೇಸ್ಬುಕ್ ಹಾಗೂ ಶೇರ್ಚಾಟ್ನಲ್ಲಿ ಫಾಲೋ ಮಾಡಿ.