logo
ಕನ್ನಡ ಸುದ್ದಿ  /  ಜೀವನಶೈಲಿ  /  Self Energy Protection: ನಮ್ಮೊಳಗಿನ ಚೈತನ್ಯ ವ್ಯಯವಾಗದಂತೆ ನೋಡಿಕೊಳ್ಳುವುದು ಹೇಗೆ? ಇದರ ಅವಶ್ಯವೇನು?

Self energy protection: ನಮ್ಮೊಳಗಿನ ಚೈತನ್ಯ ವ್ಯಯವಾಗದಂತೆ ನೋಡಿಕೊಳ್ಳುವುದು ಹೇಗೆ? ಇದರ ಅವಶ್ಯವೇನು?

HT Kannada Desk HT Kannada

Feb 23, 2023 09:52 AM IST

google News

ಸ್ವ ಪ್ರೀತಿ

    • ನಮ್ಮೊಳಗಿನ ಶಕ್ತಿಯನ್ನು ಮೊದಲು ನಮಗೋಸ್ಕರ ವ್ಯಯಿಸಬೇಕು. ಬೇರೊಬ್ಬರ ಬಗ್ಗೆ ಚಿಂತೆ ಮಾಡುತ್ತಾ, ಬೇರೆಯವರನ್ನು ಮೆಚ್ಚಿಸುವ ಸಲುವಾಗಿ ನಮ್ಮ ಶಕ್ತಿ, ಸಾಮರ್ಥ್ಯವನ್ನು ಹಾಳು ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ.
ಸ್ವ ಪ್ರೀತಿ
ಸ್ವ ಪ್ರೀತಿ

ಜೀವನದಲ್ಲಿ ನಮ್ಮನ್ನು ನಾವು ಪ್ರೀತಿಸಲು ಆರಂಭಿಸಬೇಕು. ಯಾವುದೇ ಒಂದು ವ್ಯಕ್ತಿ ಅಥವಾ ವಸ್ತುವಿಗೆ ಪ್ರಾಶಸ್ತ್ಯ ಕೊಡುವ ಮೊದಲು ನಮ್ಮ ಬಗ್ಗೆ ನಾವು ಗಮನ ಹರಿಸಿಬೇಕು. ನಮ್ಮನ್ನು ನಾವು ಪ್ರೀತಿಸಲು ಆರಂಭಿಸಿದಾಗ, ನಮ್ಮ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯದ ಮೇಲೆ ಗಮನ ಹರಿಸಿ ಸಂತೋಷದಿಂದಿರಲು ಸಾಧ್ಯ.

ಭಾವನಾತ್ಮಕವಾಗಿ ನಾವು ಸದೃಢರಾಗಿದ್ದಾಗ ನಮ್ಮನ್ನು ನಾವು ಎದುರಿಸಲು ಸಾಧ್ಯವಾಗುತ್ತದೆ. ನಮ್ಮೊಳಗಿನ ಶಕ್ತಿಯನ್ನು ನಿರ್ವಹಿಸಲು ಅದನ್ನು ಕಾಪಾಡಿಕೊಳ್ಳಬೇಕು, ಅಲ್ಲದೇ ಅರ್ಹರಲ್ಲದ ಜನ ಹಾಗೂ ವಸ್ತುಗಳ ಮೇಲೆ ಅದನ್ನು ವ್ಯರ್ಥವಾಗಲು ಬಿಡಬಾರದು. ಹಾಗಾದರೆ ನಮ್ಮೊಳಗಿನ ಶಕ್ತಿ, ಚೈತನ್ಯ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಹೇಗೆ?

ಆದ್ಯತೆಯನ್ನು ಗಮನಿಸಿ

ನಮ್ಮೊಳಗಿನ ಶಕ್ತಿ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದರೆ ಮೊದಲು ನಮ್ಮ ಪ್ರಾಶಸ್ತ್ಯಗಳೇನು ಎಂಬುದನ್ನು ಅರಿಯಬೇಕು. ನಮ್ಮಲ್ಲದ, ನಮ್ಮದಾಗದ ವಸ್ತು, ವ್ಯಕ್ತಿಗಳ ವಿಷಯದಲ್ಲಿ ಬಹಳ ತಲೆ ಕೆಡಿಸಿಕೊಳ್ಳುವುದನ್ನು ನಿಲ್ಲಿಸಬೇಕು. ನಮ್ಮ ಗಮನಕ್ಕೆ ಅರ್ಹವಾದ ವಿಷಯಗಳಿಗೆ ಮಾತ್ರ ಆದ್ಯತೆ ನೀಡಬೇಕು. ಮೊದಲು ನಮ್ಮ ಬೇಕು, ಬೇಡಗಳ ಮೇಲೆ ಆಸಕ್ತಿ ವಹಿಸಬೇಕು. ಉಳಿದ ವಿಷಯಗಳ ಬಗ್ಗೆ ಯೋಚಿಸುವುದನ್ನೂ ನಿಲ್ಲಿಸಬೇಕು.

ಸಾಮಾಜಿಕ ಜಾಲತಾಣಗಳಿಂದ ದೂರವಿರಿ

ಸಾಮಾಜಿಕ ಜಾಲತಾಣಗಳು ನಮ್ಮ ಮನಸ್ಸಿನ ಶಕ್ತಿ, ಸಾಮರ್ಥ್ಯವನ್ನು ಕಸಿಯುವ ಕಳ್ಳರು ಎಂದರೆ ತಪ್ಪಾಗಲಿಕ್ಕಿಲ್ಲ. ಇವು ನಮ್ಮ ಅಮೂಲ್ಯವನ್ನು ಸಮಯವನ್ನು ನಮ್ಮಿಂದ ಕಸಿದುಕೊಳ್ಳುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಒಮ್ಮೆ ಕಣ್ಣಾಡಿಸಿದರೆ ನಾವು ಅದರಿಂದ ಹೊರಬರಲು ಗಂಟೆಗಟ್ಟಲೆ ತೆಗೆದುಕೊಳ್ಳುತ್ತೇವೆ. ಅದನ್ನು ಸ್ಕ್ರೋಲ್‌ ಮಾಡುವುದರಲ್ಲಿ ನಮ್ಮ ದಿನದ ಸಾಕಷ್ಟು ಸಮಯವನ್ನು ವ್ಯರ್ಥ ಮಾಡುತ್ತೇವೆ. ಅದರಲ್ಲೇ ಕಳೆದು ಹೋಗಿರುವಾಗ ಹಸಿವು, ನಿದ್ದೆ, ಕೆಲಸ ಎಲ್ಲವನ್ನೂ ಮರೆಯುತ್ತೇವೆ. ಹಾಗಾಗಿ ಸಾಮಾಜಿಕ ಜಾಲತಾಣಗಳಿಂದ ದೂರ ಇರುವುದು ನಮ್ಮ ಚೈತನ್ಯವನ್ನು ವೃದ್ಧಿಸಿಕೊಳ್ಳಲು ಇರುವ ಪ್ರಮಖ ದಾರಿ.

ಮನವರಿಕೆ ಮಾಡುವ ಮುನ್ನ

ಕೆಲವೊಮ್ಮೆ ನಾವು ಮನಸಾರೆ ಪ್ರೀತಿಸಿದ ವ್ಯಕ್ತಿಗಳಿಗಾಗಿ, ಅವರನ್ನು ನಮ್ಮ ಜೀವನದಲ್ಲಿ ಉಳಿಸಿಕೊಳ್ಳುವ ಸಲುವಾಗಿ ಅವರಲ್ಲಿ ಬೇಡಿಕೊಳ್ಳುತ್ತೇವೆ. ಅಲ್ಲದೇ ನಮ್ಮ ಪ್ರೀತಿ, ಜೀವನದಲ್ಲಿ ಅವರ ಇರುವಿಕೆಯ ಬಗ್ಗೆ ಅವರಿಗೆ ಮನವರಿಕೆ ಮಾಡಲು ಹರಸಾಹಸ ಪಡುತ್ತೇವೆ. ಅಲ್ಲದೆ ಅವರು ನಮ್ಮೊಂದಿಗೆ ಉಳಿಯುವುದಿಲ್ಲ ಎಂದುಕೊಂಡು ಭಾವನಾತ್ಮಕವಾಗಿ ಹೆಣಗಾಡುತ್ತೇವೆ. ಆದರೆ ಕೆಲವೊಮ್ಮೆ ನಮ್ಮ ಮನಸ್ಸಿನ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ ಸಲುವಾಗಿ ಕೆಲವು ವ್ಯಕ್ತಿಗಳಿಂದ ದೂರವಾಗುವುದೇ ಉತ್ತಮ. ಹೋಗುವವರನ್ನು ಹೋಗಲು ಬಿಟ್ಟು ಆರಾಮಾಗಿರಿ.

ನಾವು ನಾವಾಗಿರುವುದು ಮುಖ್ಯ

ನಾವು ನಾವಾಗಿರದೆ, ಇನ್ನೊಬ್ಬರಿಗಾಗಿ ನಮ್ಮದಲ್ಲದ ಬದುಕು ಜೀವಿಸುವುದು ಅಸಂಬದ್ಧ. ಇದು ನಮ್ಮ ಮಾನಸಿಕ ಶಕ್ತಿಯನ್ನು ಕುಂದಿಸುತ್ತದೆ. ನಮಗಾಗಿ ನಾವು ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಮಗೆ ಇಷ್ಟವಿಲ್ಲದ, ಇನ್ನೊಬ್ಬರಿಗಾಗಿ ಸಂತೋಷದಿಂದಿದ್ದೇವೆ ಎಂದು ನಟಿಸುವುದು ತಪ್ಪು. ಅದರ ಬದಲು ನಮಗೆ ನಾವು ಪ್ರಾಮಾಣಿಕವಾಗಿರಬೇಕು.

ಕೆಲಸದ ಮೂಲಕ ಮೌಲ್ಯವನ್ನು ಅರ್ಥ ಮಾಡಿಸಿ

ನಮ್ಮ ಮೌಲ್ಯವನ್ನು ಇತರರಿಗೆ ಅರ್ಥ ಮಾಡಿಸಲು ನೋಡುವುದು ನಾವು ಮಾಡುವ ಅತ್ಯಂತ ದೊಡ್ಡ ತಪ್ಪುಗಳಲ್ಲಿ ಒಂದು. ನಮ್ಮ ಬಗ್ಗೆ ಅಥವಾ ನಮ್ಮ ಮೌಲ್ಯವೇನು ಎಂದು ಅರಿತವರಿಗೆ ಅದನ್ನು ಪುನಃ ಅರ್ಥ ಮಾಡಿಸುವ ಅವಶ್ಯಕತೆ ಇಲ್ಲ. ಅರ್ಥ ಮಾಡಿಕೊಳ್ಳದವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಬಾರದು. ನಮ್ಮ ಶಕ್ತಿ, ಸಾಮರ್ಥ್ಯ ಹಾಗೂ ಮೌಲ್ಯವು ನಾವು ಮಾಡುವ ಕೆಲಸ ಹಾಗೂ ಚಟುವಟಿಕೆಗಳಿಂದ ತೋರಿಸಬೇಕೇ ಹೊರತು ಮಾತಿನಿಂದಲ್ಲ.

ವಾದ ಮಾಡಬೇಡಿ

ನಾವು ಕೆಲವೊಮ್ಮೆ ಅರ್ಥ ಮಾಡಿಕೊಳ್ಳದ ಜನರೊಂದಿಗೆ ಸುಮ್ಮನೆ ವಾದಕ್ಕಿಳಿಯುತ್ತೇವೆ. ತಮ್ಮ ಕುದುರೆಗೆ ಮೂರೇ ಕಾಲು ಎಂದು ವಾದ ಮಾಡುವವರ ಜೊತೆ ವಾದಕ್ಕಿಳಿಯುವುದರಿಂದ ನಮ್ಮ ಶಕ್ತಿಹರಣವಾಗುತ್ತದೆ ಹೊರತು ಇದರಿಂದ ಉಪಯೋಗವಿಲ್ಲ. ನಮ್ಮನ್ನು ಮಾತನ್ನು ಅರ್ಥ ಮಾಡಿಕೊಳ್ಳದವರ ಜೊತೆ ವಾದ ಮಾಡುವುದಕ್ಕಿಂತ ಸುಮ್ಮನೆ ನಮ್ಮ ದಾರಿಯಲ್ಲಿ ಮುಂದುವರಿಯುವುದು ಉತ್ತಮ.

ಇತರರನ್ನು ಮೆಚ್ಚಿಸುವ ಪ್ರಯತ್ನ ಬೇಡ

ಕೆಲವರಿಗೆ ನಾವು ಏನೇ ಕೆಲಸ ಮಾಡಿದರೂ ನಾವು ಮಾಡುವ ಕೆಲಸ ಅವರಿಗೆ ಇಷ್ಟವಾಗುವುದಿಲ್ಲ. ಯಾವಾಗಲೂ ನಮ್ಮನ್ನು ದೂರುವುದೇ ಅವರ ದಿನಚರಿಯ ಭಾಗವಾಗಿರುತ್ತದೆ. ಎಲ್ಲರೂ ನಮ್ಮನ್ನು ಇಷ್ಟಪಡುವಂತಹ ಕೆಲಸಗಳನ್ನೇ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ಮನಸ್ಸಿಗೆ ಖುಷಿ ಎನ್ನುವ, ಆತ್ಮಸಾಕ್ಷಿಗೆ ಸರಿ ಎನ್ನಿಸುವ ಕೆಲಸ ಮಾಡುವ ಮೂಲಕ ಮುಂದುವರಿಯಬೇಕು. ಬೇರೆರೊಬ್ಬರನ್ನು ಇಷ್ಟಪಡುವಂತೆ ಮನವೊಲಿಸಲು ನಮ್ಮ ಶಕ್ತಿ ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ