logo
ಕನ್ನಡ ಸುದ್ದಿ  /  ಜೀವನಶೈಲಿ  /  Smartphone Vision Syndrome: ಸ್ಮಾರ್ಟ್‌ಫೋನ್‌ ವಿಷನ್‌ ಸಿಂಡ್ರೋಮ್‌ ಈಗ ಮನೆಮಾತು! ಸ್ಮಾರ್ಟ್‌ಫೋನ್‌ ಬಳಕೆ ಇಷ್ಟೊಂದು ಹಾನಿಕರವೇ?

Smartphone vision syndrome: ಸ್ಮಾರ್ಟ್‌ಫೋನ್‌ ವಿಷನ್‌ ಸಿಂಡ್ರೋಮ್‌ ಈಗ ಮನೆಮಾತು! ಸ್ಮಾರ್ಟ್‌ಫೋನ್‌ ಬಳಕೆ ಇಷ್ಟೊಂದು ಹಾನಿಕರವೇ?

HT Kannada Desk HT Kannada

Feb 10, 2023 10:17 AM IST

google News

'ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್' (ಸಾಂಕೇತಿಕ ಚಿತ್ರ)

  • Smartphone vision syndrome: ಏನಿದು ಸ್ಮಾರ್ಟ್‌ಫೋನ್‌ ವಿಷನ್‌ ಸಿಂಡ್ರೋಮ್‌? ಯಾಕೆ ಸುದ್ದಿಯಾಗಿದೆ? ಹೈದರಾಬಾದ್‌ ಡಾಕ್ಟರ್‌ ಮಾಡಿದ ಟ್ವೀಟ್‌ ವೈರಲ್‌ ಆಗಿದ್ದೇಕೆ? ಇದು ಅತಿಯಾಗಿ ಸ್ಮಾರ್ಟ್‌ಫೋನ್‌ ಬಳಸುವವರಿಗೆ ಒಂದು ಎಚ್ಚರಿಕೆ ಘಂಟೆಯಾ? ಇಲ್ಲಿದೆ ಈ ವಿದ್ಯಮಾನದ ವಿವರ.

'ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್'  (ಸಾಂಕೇತಿಕ ಚಿತ್ರ)
'ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್' (ಸಾಂಕೇತಿಕ ಚಿತ್ರ) (Photo via Pixabay)

ಸ್ಮಾರ್ಟ್‌ಫೋನ್‌ ವಿಷನ್‌ ಸಿಂಡ್ರೋಮ್‌ ಈಗ ಮನೆಮಾತು! ಏನಿದು ಸ್ಮಾರ್ಟ್‌ ವಿಷನ್‌ ಸಿಂಡ್ರೋಮ್‌? ಯಾಕೆ ಸುದ್ದಿಯಾಗಿದೆ? ಹೈದರಾಬಾದ್‌ ಡಾಕ್ಟರ್‌ ಮಾಡಿದ ಟ್ವೀಟ್‌ ವೈರಲ್‌ ಆಗಿದ್ದೇಕೆ? ಇದು ಅತಿಯಾಗಿ ಸ್ಮಾರ್ಟ್‌ಫೋನ್‌ ಬಳಸುವವರಿಗೆ ಒಂದು ಎಚ್ಚರಿಕೆ ಘಂಟೆಯಾ? ಇಲ್ಲಿದೆ ಈ ವಿದ್ಯಮಾನದ ವಿವರ.

ಹೌದು, ಅತಿಯಾದ ಸ್ಮಾರ್ಟ್ ಫೋನ್ ಬಳಕೆಯಿಂದ ಮಹಿಳೆಯೊಬ್ಬರು ಕಣ್ಣು ಕಳೆದುಕೊಂಡಿರುವ ವಿಚಾರವನ್ನು ಹೈದರಾಬಾದ್ ಮೂಲದ ವೈದ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಡಾ.ಸುಧೀರ್ ಕುಮಾರ್ ಅವರು ತಮ್ಮ ಟ್ವೀಟ್‌ನಲ್ಲಿ ಹೇಳಿರುವುದು ಇಷ್ಟು - ಹೈದರಾಬಾದ್ ಮಹಿಳೆ ತನ್ನ ಕೆಲಸವನ್ನು ತೊರೆದ ಬಳಿಕ ಸ್ಮಾರ್ಟ್‌ಫೋನ್‌ ಅನ್ನು ಗಂಟೆಗಟ್ಟಲೆ ಬಳಸಿದ್ದರು. ಇದರ ಬಳಿಕ ರೋಗಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದವು. ಮಹಿಳೆಯು ಕತ್ತಲೆಯಲ್ಲಿ ತನ್ನ ಸ್ಮಾರ್ಟ್‌ಫೋನ್ ಅನ್ನು ಅತಿಯಾಗಿ ಬಳಸಿದ್ದಳು. ಇದರಿಂದಾಗಿ ಆಕೆಯ ದೃಷ್ಟಿ ನಷ್ಟವಾಗಿದೆ.

ಇನ್ನೂ ವಿಸ್ತರಿಸಿ ಡಾಕ್ಟರ್‌ ಮಾತುಗಳಲ್ಲೇ ಹೇಳಬೇಕು ಎಂದರೆ - ಆಕೆಯ ಹೆಸರು ಮಂಜು. ವಯಸ್ಸು 30. ಕಳೆದ ಒಂದೂವರೆ ವರ್ಷದಿಂದ ತೀವ್ರ ದೃಷ್ಟಿ ವಿಕಲತೆ ಲಕ್ಷಣಗಳನ್ನು ಹೊಂದಿದ್ದರು. ಫ್ಲೋಟರ್‌ಗಳ ವೀಕ್ಷಣೆ, ಫ್ಲ್ಯಾಶ್‌ ಲೈಟ್‌ಗಳ ತೀವ್ರತೆ, ಡಾರ್ಕ್‌ ಜಿಗ್‌ ಜಾಗ್‌ ಲೈನ್ಸ್‌ ಮತ್ತು ಕೆಲವೊಮ್ಮೆ ನೋಡಲು ಸಾಧ್ಯವಾಗದೇ ಇರುವುದು ಹಾಗೂ ವಸ್ತುಗಳ ಮೇಲೆ ದೃಷ್ಟಿ ಫೋಕಸ್‌ ಮಾಡುವುದಕ್ಕೆ ಸಾ‍ಧ್ಯವಾಗದೇ ಇರುವಂಥ ತೊಂದರೆಗಳಿದ್ದವು. ಬಹುತೇಕ ರಾತ್ರಿ ವೇಳೆ ಹಲವಾರು ಸೆಕೆಂಡ್‌ ಕಾಲ ಕೂಡ ಏನನ್ನೂ ನೋಡಲು ಸಾಧ್ಯವಾಗದ ತೊಂದರೆಯನ್ನೂ ಎದುರಿಸಿದ್ದಳು.

ಇದಾದ ಬಳಿಕ ಮಂಜು ಅವರು ನೇತ್ರ ತಜ್ಞರ ಬಳಿ ಹೋಗಿದ್ದರು. ಅವರು ಈ ಕೇಸ್‌ ನ್ಯೂರಾಲಾಜಿಕಲ್‌ ಕಾರಣದ್ದು ಎಂದು ನನಗೆ ಶಿಫಾರಸು ಮಾಡಿದರು.

“ತನ್ನ ವಿಶೇಷ ಸಾಮರ್ಥ್ಯವುಳ್ಳ ಮಗುವನ್ನು ನೋಡಿಕೊಳ್ಳುವ ಸಲುವಾಗಿ ಆಕೆ ತನ್ನ ಬ್ಯೂಟಿಷಿಯನ್ ಕೆಲಸವನ್ನು ತೊರೆದ ನಂತರ ಪ್ರತಿದಿನ ಹಲವಾರು ಗಂಟೆಗಳ ಕಾಲ ತನ್ನ ಸ್ಮಾರ್ಟ್‌ಫೋನ್ ಮೂಲಕ ಬ್ರೌಸ್ ಮಾಡುವ ಹೊಸ ಅಭ್ಯಾಸ ಶುರುಮಾಡಿದ್ದರು. ಇದರಲ್ಲಿ 2 ಗಂಟೆ ರಾತ್ರಿಯಲ್ಲಿ ದೀಪಗಳು ಸ್ವಿಚ್ ಆಫ್ ಆಗಿರುತ್ತಿತ್ತು. ಈ ಸನ್ನಿವೇಶದಲ್ಲಿ ಆಕೆಗೆ ರೋಗಲಕ್ಷಣಗಳು ಪ್ರಾರಂಭವಾದವು. ಈ ಮಾಹಿತಿಯನ್ನು ಸಂಗ್ರಹಿಸಿದ ನಂತರ ರೋಗನಿರ್ಣಯವು ತನಗೆ ತಕ್ಕಮಟ್ಟಿಗೆ 'ಸ್ಪಷ್ಟವಾಗಿದೆ"ಎಂದು ಕುಮಾರ್ ಹೇಳಿದರು.

ಹೌದು ಆಕೆ 'ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್' ನಿಂದ ಬಳಲುತ್ತಿದ್ದಾರೆ ಎಂದು ಕುಮಾರ್‌ ನಿರ್ಣಯಕ್ಕೆ ಬಂದಿದ್ದಾರೆ. ಅವರ ಟ್ವೀಟ್‌ ಹೀಗಿದೆ ನೋಡಿ-

“ನಾನು ಯಾವುದೇ ತಪಾಸಣೆಗೆ ಶಿಫಾರಸು ಮಾಡಲಿಲ್ಲ ಅಥವಾ ನಾನು ಯಾವುದೇ ಔಷಧಗಳನ್ನು ಬರೆದುಕೊಡಲಿಲ್ಲ. (ಮಂಜು ಅವರು ವಿನಂತಿಸಿದರೂ ಸಹ, ಅವರು ಆತಂಕಕ್ಕೊಳಗಾಗಿದ್ದರು). ಆಕೆಯ ದೃಷ್ಟಿಹೀನತೆಗೆ ಸಂಭವನೀಯ ಕಾರಣಗಳ ಬಗ್ಗೆ ನಾನು ಅವಳಿಗೆ ಸಲಹೆ ನೀಡಿದೆ. ಸ್ಮಾರ್ಟ್‌ಫೋನ್ ಬಳಕೆಯನ್ನು ಕಡಿಮೆ ಮಾಡಲು ಸೂಚಿಸಿದೆ" ಎಂದು ವೈದ್ಯರು ಟ್ವೀಟ್‌ನಲ್ಲಿ ಬರೆದಿದ್ದಾರೆ.

ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡ ಮಂಜು, ಅನಿವಾರ್ಯ ಅಗತ್ಯದ ಹೊರತಾಗಿ ಸ್ಮಾರ್ಟ್‌ಫೋನ್‌ ಬಳಕೆ ನಿಲ್ಲಿಸಲು ನಿರ್ಧರಿಸಿದರು. ಒಂದು ತಿಂಗಳ ಒಳಗಾಗಿ ದೃಷ್ಟಿ ಸಹಜ ಸ್ಥಿತಿಗೆ ಮರಳಿತು ಎಂದು ಡಾಕ್ಟರ್‌ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

ಒಂದು ತಿಂಗಳ ಬಳಿಕ ಪರಿಶೀಲಿಸಿದಾಗ, ಮಂಜು ಸಂಪೂರ್ಣವಾಗಿ ಗುಣಮುಖರಾಗಿದ್ದರು. ಆಕೆಯ 18 ತಿಂಗಳ ದೃಷ್ಟಿದೋಷ ದೂರವಾಗಿತ್ತು. ಈಗ, ಅವಳು ಸಾಮಾನ್ಯರಂತೆ ನೋಡಬಲ್ಲವರಾಗಿದ್ದರು. ಯಾವುದೇ ತೇಲುವ ಅಥವಾ ಬೆಳಕಿನ ಹೊಳಪನ್ನು ನೋಡಲಿಲ್ಲ. ಇದಲ್ಲದೆ, ರಾತ್ರಿಯಲ್ಲಿ ಅವಳ ಕ್ಷಣಿಕ ದೃಷ್ಟಿ ನಷ್ಟವೂ ನಿಂತುಹೋಯಿತು ಎಂದು ಕುಮಾರ್ ಬರೆದಿದ್ದಾರೆ.

ದೃಷ್ಟಿ ಬಗ್ಗೆ ಕಾಳಜಿ ವಹಿಸಿ

ದೃಷ್ಟಿ-ಸಂಬಂಧಿತ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ಡಿಜಿಟಲ್‌ ಸಾಧನಗಳ ಸ್ಕ್ರೀನನ್ನು ದೀರ್ಘಕಾಲ ನೋಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ ಎಂದು ಡಾಕ್ಟರ್‌ ಆಗ್ರಹಿಸಿದ್ದಾರೆ. ನೋಡಲೇ ಬೇಕಾದ ಅನಿವಾರ್ಯ ಕೆಲಸವಾಗಿದ್ದರೆ,

  • ಸ್ಮಾರ್ಟ್‌ಫೋನ್‌ ಅಥವಾ ಇನ್ನಿತರ ಡಿಜಿಟಲ್‌ ಪರದೆಯನ್ನು ಕಣ್ಣ ರೆಪ್ಪೆ ಮುಚ್ಚದೆ ಗಂಟೆ ಗಟ್ಟಲೆ ದಿಟ್ಟಿಸಿ ನೋಡುತ್ತ ಕೂರಬೇಡಿ.
  • ಪ್ರತಿ 20 ನಿಮಿಷಕ್ಕೆ ಒಮ್ಮೆ 20 ಸೆಕೆಂಡ್‌ ಬ್ರೇಕ್‌ ತಗೊಳ್ಳಿ.
  • ಬ್ರೇಕ್‌ ತಗೊಂಡಾಗ ಡಿಜಿಟಲ್‌ ಪರದರೆಯಿಂದ 20 ಅಡಿ ದೂರಕ್ಕೆ ನೋಡಿ, ಕಣ್ಣಿಗೆ ವಿಶ್ರಾಂತಿ ತೆಗೆದುಕೊಳ್ಳಿ.
  • ಮರೆಯದೆ ಈ 20-20-20 ನಿಯಮವನ್ನು ದೃಷ್ಟಿಯ ಒಳಿತಿಗಾಗಿ ಪಾಲಿಸಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ