logo
ಕನ್ನಡ ಸುದ್ದಿ  /  ಜೀವನಶೈಲಿ  /  Gandhi Jayanti Speech: ಗಾಂಧಿ ಜಯಂತಿ ಬಂತು; ಶಾಲಾ ಮಕ್ಕಳಿಗಾಗಿ ಇಲ್ಲಿದೆ ಭಾಷಣ

Gandhi Jayanti Speech: ಗಾಂಧಿ ಜಯಂತಿ ಬಂತು; ಶಾಲಾ ಮಕ್ಕಳಿಗಾಗಿ ಇಲ್ಲಿದೆ ಭಾಷಣ

Meghana B HT Kannada

Sep 30, 2023 11:20 AM IST

google News

ಮಹಾತ್ಮ ಗಾಂಧಿ

    • Gandhi Jayanti Speech in Kannada: ಪ್ರತಿ ವರ್ಷ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಗಾಂಧಿ ಜಯಂತಿಯಂದು ಬಾಪುವಿನ ಕುರಿತು ಶಾಲೆಯಲ್ಲಿ ಭಾಷಣ ಮಾಡಲು ಮಕ್ಕಳಿಗಾಗಿ ಇಲ್ಲಿದೆ ಭಾಷಣ. 
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ

ರಾಷ್ಟ್ರೀಯ ಹಬ್ಬಗಳಂದು ಶಾಲೆಗಳಲ್ಲಿ ಮಕ್ಕಳು ಭಾಷಣ ಮಾಡುತ್ತಾರೆ. ಭಾಷಣ, ಪ್ರಬಂಧ ಸ್ಪರ್ಧೆಗಳನ್ನೂ ಆಯೋಜಿಸಲಾಗಿರುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನವೂ ಕೂಡ ಭಾರತದ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಗಾಂಧಿ ಜಯಂತಿಯಂದು ಬಾಪುವಿನ ಕುರಿತು ಶಾಲೆಯಲ್ಲಿ ಭಾಷಣ ಮಾಡಲು ಮಕ್ಕಳಿಗಾಗಿ ನಾವು ಭಾಷಣ ಸಿದ್ಧಪಡಿಸಿದ್ದೇವೆ..

ಹೀಗಿದೆ ಭಾಷಣ

ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಕಾರ್ಯಕ್ರಮದಲ್ಲಿ ಆಸೀನರಿರುವ ನನ್ನ ಸಹಪಾಠಿಗಳಿಗೆ, ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಕವೃಂದದವರಿಗೆ, ಬೋಧಕೇತರ ಸಿಬ್ಬಂದಿಗೆ ಹಾಗೂ ಗಣ್ಯರಿಗೆ ನಮಸ್ಕಾರಗಳು.

ಸ್ನೇಹಿತರೇ.. ಇಂದು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 154ನೇ ಜನ್ಮದಿನ. ಪ್ರತಿವರ್ಷ ಈ ದಿನವನ್ನ ಗಾಂಧಿ ಜಯಂತಿ ಎಂದು ರಾಷ್ಟ್ರೀಯ ಹಬ್ಬವಾಗಿ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತೇವೆ. ಶಾಂತಿ, ಅಹಿಂಸೆ ಮತ್ತು ಸತ್ಯದ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ಮಹಾತ್ಮ ಗಾಂಧಿ ಅವರಿಗೆ ನಾವು ನಮನ ಸಲ್ಲಿಸುತ್ತೇವೆ. ವಿಶ್ವಾದ್ಯಂತ ಗಾಂಧಿ ಜಯಂತಿಯನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ.

ಮಹಾತ್ಮ ಗಾಂಧಿಯವರು ಗುಜರಾತ್‌ನ ಪೋರಬಂದರ್‌ನಲ್ಲಿ 2 ಅಕ್ಟೋಬರ್ 1869 ರಂದು ಜನಿಸಿದರು. ಇವರ ಪೂರ್ತಿ ಹೆಸರು ಮೋಹನದಾಸ್​ ಕರಮಚಂದ ಗಾಂಧಿ. ಜನ ಅವರನ್ನು ಪ್ರೀತಿಯಿಂದ ಬಾಪು ಎಂದು ಕರೆಯುತ್ತಿದ್ದರು. ಕವಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೋರ್ ಅವರು ಗಾಂಧೀಜಿಗೆ ಮಹಾತ್ಮ ಎಂಬ ಬಿರುದನ್ನು ನೀಡಿದರು. ಗಾಂಧಿ ಅವರನ್ನು ಮೊದಲು ಸುಭಾಷ್ ಚಂದ್ರ ಬೋಸ್ ಅವರು 'ರಾಷ್ಟ್ರಪಿತ' ಎಂದು ಸಂಬೋಧಿಸಿದರು.

ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾತ್ಮಕ ಹೋರಾಟದ ಮಾರ್ಗಗಳಿಗೆ ಹೆಸರುವಾಸಿಯಾಗಿದ್ದಾರೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಿದ್ದಾಗ ಇಲ್ಲಿಯೇ ಆರಂಭಿಕ ಅಧ್ಯಯನವನ್ನು ಪೂರ್ಣಗೊಳಿಸಿದ ಗಾಂಧೀಜಿ, ನಂತರ ಇಂಗ್ಲೆಂಡ್‌ನಲ್ಲಿ ಕಾನೂನು ಅಧ್ಯಯನ ಮಾಡಿದರು. ದಕ್ಷಿಣ ಆಫ್ರಿಕಾದಲ್ಲಿ ಕಾನೂನು ಅಭ್ಯಾಸ ಮಾಡಿ 1915 ರಲ್ಲಿ ಭಾರತಕ್ಕೆ ಮರಳಿದರು. ಆ ಬಳಿಕ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಚಂಪಾರಣ್ ಸತ್ಯಾಗ್ರಹ, ಅಸಹಕಾರ ಚಳವಳಿ, ದಂಡಿ ಮಾರ್ಚ್ ಮತ್ತು ಕ್ವಿಟ್ ಇಂಡಿಯಾ ಚಳವಳಿಯಂತಹ ಪ್ರಮುಖ ಚಳವಳಿಗಳನ್ನು ಮುನ್ನಡೆಸಿದರು.

ಸ್ವಾತಂತ್ರ್ಯ ಹೋರಾಟವಲ್ಲದೇ ಸಾಮಾಜಿಕ ಕಳಕಳಿಯನ್ನೂ ಬಾಪು ಹೊಂದಿದ್ದರು. ಸಮಾಜದಲ್ಲಿ ಧರ್ಮ ಮತ್ತು ಜಾತಿಯ ಆಧಾರದ ಮೇಲೆ ತಾರತಮ್ಯ, ಅಸ್ಪೃಶ್ಯತೆ, ಮದ್ಯ ಸೇವನೆಯನ್ನು ವಿರೋಧಿಸಿದರು. ದಲಿತರು, ಮಹಿಳೆಯರಿಗೆ ಗೌರವ ನೀಡಲು ಹೇಳುತ್ತಿದ್ದರು. ಸ್ವದೇಶಿ ವಸ್ತುಗಳನ್ನು ಪ್ರೀತಿಸಲು ಸಲಹೆ ನೀಡಿದರು. ಇದರಿಂದ ಸ್ಥಳೀಯ ಕೈಗಾರಿಕೆಗಳಿಗೆ ಉತ್ತೇಜನ ಸಿಕ್ಕಿತು. ಸ್ವಾತಂತ್ರ್ಯ ಸಿಕ್ಕ ಆರೇ ತಿಂಗಳಿಗೆ ಅಂದರೆ 1948 ಜನವರಿ 20 ರಂದು ಗಾಂಧೀಜಿ ಹತ್ಯೆಗೀಡಾದರು

ಗಾಂಧಿ ಜಯಂತಿ ಪ್ರಯುಕ್ತ ಭಾರತದೆಲ್ಲೆಡೆ ಇಂದು ಶಾಲಾ-ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆಯಾದರೂ ಮುಖ್ಯ ಕಾರ್ಯಕ್ರಮವನ್ನು ದೆಹಲಿಯ ರಾಜ್ ಘಾಟ್‌ನಲ್ಲಿ ನಡೆಸಲಾಗುತ್ತದೆ. ರಾಜ್ ಘಾಟ್‌ನಲ್ಲಿರುವ ಗಾಂಧೀಜಿಯವರ ಸಮಾಧಿಗೆ ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಮತ್ತು ಇತರ ನಾಯಕರು ನಮನ ಸಲ್ಲಿಸುತ್ತಾರೆ. ಗಾಂಧಿ ಹತ್ಯೆಯಾದ ದೆಹಲಿಯ ಬಿರ್ಲಾ ಹೌಸ್‌ನಲ್ಲಿ ಶ್ರದ್ಧಾಂಜಲಿ ಮತ್ತು ಗೀತೆಗಳ ಗಾಯನ ಕಾರ್ಯಕ್ರಮವೂ ನಡೆಯುತ್ತದೆ.

ಸ್ನೇಹಿತರೇ, ಗಾಂಧೀಜಿಯವರ ಆದರ್ಶಗಳನ್ನು ಅನುಸರಿಸುತ್ತಾ ದೇಶಕ್ಕೆ ಒಳಿತು ಬಯಸುವ, ಒಳಿತು ಮಾಡುವ ಪ್ರತಿಜ್ಞೆ ಮಾಡೋಣ. ಇಷ್ಟು ಹೇಳುತ್ತಾ ನನ್ನ ಭಾಷಣಕ್ಕೆ ಪೂರ್ಣ ವಿರಾಮ ಇಡುತ್ತಿದ್ದೇನೆ. ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು.

ಜೈ ಹಿಂದ್. ಜೈ ಭಾರತ್. ಭಾರತಮಾತೆ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ