Spiritual News: ಇಂದು ಚಿತ್ರದುರ್ಗದ ಮಲ್ಲಾಡಿಹಳ್ಳಿಯ ರಾಘವೇಂದ್ರ ಶ್ರೀಗಳ ಆರಾಧನೆ; ಯಾರು ಇವರು, ಸಾಧನೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
Jul 07, 2023 06:30 AM IST
ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ರಾಘವೇಂದ್ರ ಶ್ರೀಗಳು
1891ರಲ್ಲಿ ಜನಿಸಿದ ರಾಘವೇಂದ್ರ ಶ್ರೀಗಳು 31 ಆಗಸ್ಟ್ 1996ರಂದು ದೇಹತ್ಯಾಗ ಮಾಡುತ್ತಾರೆ. 'ತಿರುಕ' ಎಂಬ ಹೆಸರಿನಲ್ಲಿ ಬರೆದ 'ಸ್ವಯಂ ವೈದ್ಯ' ಎಂಬ ಪುಸ್ತಕ ಅವರು ಇಹಲೋಕ ತ್ಯಜಿಸಿದ ನಂತರ ಕೂಡಾ ಮೂರು ಮುದ್ರಣಗಳನ್ನು ಕಂಡಿದೆ.
ಗುರು ರಾಘವೇಂದ್ರ ಸ್ವಾಮಿಗಳ ಮತ್ತು ಗುರುಗಳ ಆರಾಧನೆ ಧಾರ್ಮಿಕವಾಗಿ ಪ್ರಮುಖ ಸ್ಥಾನವನ್ನು ಪಡೆದಿದೆ. ಹಾಗೇ ಚಿತ್ರದುರ್ಗದ ಮಲ್ಲಾಡಿಹಳ್ಳಿಯ ರಾಘವೇಂದ್ರ ಶ್ರೀಗಳ ಆರಾಧನೆ ಕೂಡಾ ಪ್ರಮುಖವಾಗಿದೆ. ಜುಲೈ 7 ಶುಕ್ರವಾರ ವಿಶೇಷ ದಿನವಾಗಿದೆ. ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದಲ್ಲಿ ರಾಘವೇಂದ್ರ ಶ್ರೀಗಳ ಆರಾಧನೆ ನಡೆಯುತ್ತದೆ. ಆಯುರ್ವೇದ ಮತ್ತು ಯೋಗ ವಿದ್ಯೆಯಲ್ಲಿ ಅಸಾಧಾರಣ ಪಾಂಡಿತ್ಯ ಪಡೆದಿದ್ದ ಇವರು ಸಾವಿನ ಅಂಚಿನಲ್ಲಿದ್ದ ಸಾವಿರಾರು ಜನರಿಗೆ ಮರುಜನ್ಮ ನೀಡಿದ್ದಾರೆ ಎಂದರೆ ತಪ್ಪಿಲ್ಲ.
ಆಗಸ್ಟ್‌ನಲ್ಲಿ ದೇಹತ್ಯಾಗ ಮಾಡಿದ ಗುರುಗಳು
1891ರಲ್ಲಿ ಜನಿಸಿದ ರಾಘವೇಂದ್ರ ಶ್ರೀಗಳು 31 ಆಗಸ್ಟ್ 1996ರಂದು ದೇಹತ್ಯಾಗ ಮಾಡುತ್ತಾರೆ. 'ತಿರುಕ' ಎಂಬ ಹೆಸರಿನಲ್ಲಿ ಬರೆದ 'ಸ್ವಯಂ ವೈದ್ಯ' ಎಂಬ ಪುಸ್ತಕ ಅವರು ಇಹಲೋಕ ತ್ಯಜಿಸಿದ ನಂತರ ಕೂಡಾ ಮೂರು ಮುದ್ರಣಗಳನ್ನು ಕಂಡಿದೆ. ಅವರು ರಚಿಸಿದ ಯೋಗ ಪ್ರಾಣಾಯಾಮ ಸೂರ್ಯ ನಮಸ್ಕಾರದ ಪುಸ್ತಕವು ಈಗಲೂ ಮುದ್ರಣವಾಗುತ್ತಿವೆ. ಈ ಮೂಲಕ ಅವರು ಈಗಲೂ ಜೀವಂತವಾಗಿದ್ದಾರೆ ಎನ್ನಬಹುದು. ದೇವರುಗಳಿಗೆ ನೀಡಿದ ಪ್ರಾಶಸ್ತ್ಯವನ್ನೇ ಆತನ ಭಕ್ತರಿಗೂ ನೀಡಬೇಕೆಂದು ಧಾರ್ಮಿಕ ಗ್ರಂಥಗಳಲ್ಲಿ ತಿಳಿಸಿದೆ. ಬೇಡರ ಕಣಪ್ಪ, ಭಕ್ತ ಕುಂಬಾರ, ತೋಟಕಾಚಾರ್ಯರು ಈ ಸಾಲಿನಲ್ಲಿ ನಿಲ್ಲುತ್ತಾರೆ. ಕೆಲವು ಮಠದ ಸ್ವಾಮಿಗಳು ಅಥವಾ ಗುರುಗಳು ತಮ್ಮ ದೈವಿಕತೆಯ ಪರಿಚಯ ಮಾಡಿಕೊಟ್ಟಿದ್ದಾರೆ. ಇಂತಹ ಸಾಲಿನಲ್ಲಿ ನಿಲ್ಲಬಲ್ಲವರೇ ಮಲ್ಲಾಡಿಹಳ್ಳಿಯ ಗುರುವರ್ಯರು.
ಮೂಲತ: ಕೇರಳದವರು
ಆರಂಭದಿಂದಲೂ ಇವರು ಭಿಕ್ಷಾಟನೆ ಮಾಡಿ, ಧಾನ್ಯದಿಂದ ಮಾತ್ರ ಹಸಿವು ನೀಗಿಸಿಕೊಳ್ಳುತ್ತಿದ್ದರು. ಚಿಕ್ಕ ವಯಸ್ಸಿನಿಂದಲೂ ಜನಸೇವೆ ಮಾಡಬೇಕೆಂಬ ಕನಸಿದ್ದ ಇವರು ನಂತರ ಮರೆಯಲಾರದ ರತ್ನ ಎನಿಸಿಕೊಂಡರು. ರಾಘವೇಂದ್ರ ಶ್ರೀಗಳು ಮೂಲತ: ಕೇರಳದವರು. ತಂದೆ ಅನಂತ ಪದ್ಮನಾಭ ನಂಬೂದರಿ, ಮಹಾ ಪಂಡಿತರು ಮತ್ತು ಜೋತಿಷ್ಯದಲ್ಲಿ ಮಹಾ ಸಾಧನೆ ಮಾಡಿದವರು. ಪದ್ಮಾಂಬಳ್ ಅವರ ತಾಯಿ. ಈ ದಂಪತಿಗೆ ಜನಿಸಿದವರೇ ಮಲ್ಲಾಡಿಹಳ್ಳಿಯ ಗುರುಗಳು. ಇವರ ಮೂಲ ಹೆಸರು ಕುಮಾರ ಸ್ವಾಮಿ. ಈ ಮಗುವಿಗೆ 14 ವರ್ಷವಾದರೂ ಅನಾರೋಗ್ಯದ ಕಾಡುತ್ತಿತ್ತು. ಮೂಕಾಂಬಿಕೆಯಲ್ಲಿ ವಿಶೇಷವಾದ ಭಕ್ತಿ ನಂಬಿಕೆ ಹೊಂದಿದ್ದ ಅವರ ತಂದೆ ತಾಯಿ ಮಗುವನ್ನು ಕೊಲ್ಲೂರಿಗೆ ಕರೆದೊಯ್ಯುತ್ತಾರೆ. ಇವರಿಗೆ ನರಸಿಂಹಯ್ಯ ಎಂಬುವವರ ಸಹಾಯ ದೊರೆಯುತ್ತದೆ.
ಅದೇ ವೇಳೆಗೆ ಮಂತ್ರಾಲಯದ ಅಂದಿನ ಗುರುಗಳ ಭೇಟಿ ಮಾಡುತ್ತಾರೆ. ಆಗ ಮಂತ್ರಾಲಯದ ಗುರುವರ್ಯರು ಈ ಮಗುವಿಗೆ ರಾಘವೇಂದ್ರ ಎಂದು ಮರು ನಾಮಕರಣ ಮಾಡುತ್ತಾರೆ. ಶಿವರಾಮಯ್ಯ ಎಂಬ ಸಾಧಕರು ಇವರಿಗೆ ತಾರಕ ಮಂತ್ರವನ್ನು ಉಪದೇಶಿಸುತ್ತಾರೆ. ಇದನ್ನು ಶಕ್ತಿಪಾತ ಯೋಗ ಎಂದು ಕರೆಯುತ್ತಾರೆ. ಸ್ವಾಮಿ ನಿತ್ಯಾನಂದರು ಮಸ್ತಕದ ಮೇಲೆ ತಮ್ಮ ಕೈಇಟ್ಟು ಭೌತಿಕ ಅಸ್ತಿತ್ವವನ್ನೇ ಮರೆತಂತೆ ಮಾಡುತ್ತಾರೆ.
ಬಡವರಿಗೆ, ಕಷ್ಟ ಎಂದು ಬಂದವರಿಗೆ ಸಹಾಯ ಹಸ್ತ
ನಂತರ ಮಲ್ಲಾಡಿಹಳ್ಳಿಯ ಗುರುಗಳು ದೀನ ದಲಿತರಲ್ಲಿ, ಕಷ್ಟ ಎಂದು ಬಂದವರಲ್ಲಿ ದೇವರನ್ನು ಕಾಣಲು ಆರಂಭಿಸುತ್ತಾರೆ. ಆನಂತರ ಯೋಗ, ಪ್ರಾಣಾಯಾಮ ಮತ್ತು ಆಯುರ್ವೇದದಲ್ಲಿ ದೊಡ್ಡ ಸಾಧನೆ ಮಾಡಿದ ನಂತರ ಅನೇಕ ಕಡೆ ವ್ಯಾಯಾಮ ಶಾಲೆಯನ್ನು ಆರಂಭಿಸುತ್ತಾರೆ. ಮಲ್ಲಾಡಿಹಳ್ಳಿಯಲ್ಲಿ ರಾಘವೇಂದ್ರ ಮಠವನ್ನು ಸ್ಥಾಪಿಸುತ್ತಾರೆ. ನಂತರ ನಡೆಯುವುದೆಲ್ಲಾ ದೊಡ್ಡ ಪವಾಡ. ತಮ್ಮ ದೈವಿಕ ಶಕ್ತಿಯಿಂದ , ಯೋಗ ವ್ಯಾಯಾಮದ ಸಹಾಯದಿಂದ ಸಾವಿರಾರು ಜನರ ರೋಗಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಇಂದಿಗೂ ಅವರು ಸ್ಥಾಪಿಸಿದ ಅನಾಥಾಶ್ರಮ, ಯೋಗ ಕೇಂದ್ರಗಳು ಯಶಸ್ವಿಯಾಗಿ ನಡೆಯುತ್ತಿದೆ. ಅನೇಕ ರಾಜಕಾರಣಿಗಳು ಕೂಡಾ ಇವರ ಭಕ್ತರಾಗಿದ್ದರು. ಗುರುಗಳು ತಮಗೆ ಒಲಿದು ಬಂದ ಪದ್ಮಭೂಷಣ ಪ್ರಶಸ್ತಿ ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಕೂಡಾ ನಯವಾಗಿ ತಿರಸ್ಕರಿಸಿದ್ದಾರೆ.
ಇಂದಿಗೂ ಸಾವಿರಾರು ಜನರು ಶ್ರೀಗಳ ಭಾವಚಿತ್ರವನ್ನಿಟ್ಟು ಪೂಜಿಸುತ್ತಿದ್ದಾರೆ. ಇಂತಹ ನಿಸ್ವಾರ್ಥ ಗುರುವರ್ಯರಿಗೆ ಮನಸಾರೆ ಕೈಮುಗಿದು ಪೂಜಿಸುವುದು ನಮ್ಮೆಲ್ಲರ ಕರ್ತವ್ಯ. 'ಜೋಳಿಗೆಯ ಪವಾಡ' ಎಂಬ ಆತ್ಮಚರಿತ್ರೆಯಲ್ಲಿ ಇವರ ಬಗ್ಗೆ ಸಂಪೂರ್ಣ ಮಾಹಿತಿ ಇದೆ.
ವರದಿ: ಹೆಚ್. ಸತೀಶ್, ಬೆಂಗಳೂರು