ಭಕ್ತಿಯ ಜೊತೆಗೆ ಆರೋಗ್ಯವೂ ಮುಖ್ಯ; ದೇಹದಲ್ಲಿ ಶಕ್ತಿ ಹೆಚ್ಚಿಸಲು ನಿಮ್ಮ ನವರಾತ್ರಿಯ ಉಪವಾಸ ಹೀಗಿರಲಿ
Oct 06, 2024 12:51 PM IST
ಉತ್ತಮ ಆರೋಗ್ಯಕ್ಕಾಗಿ ನವರಾತ್ರಿಯಲ್ಲಿ ನಿಮ್ಮ ಆರೋಗ್ಯ ಹೇಗಿರಬೇಕು ಎಂಬುದನ್ನು ತಿಳಿಯಿರಿ.
- ನವರಾತ್ರಿಯ ಸಮಯಲ್ಲಿ ದೇವಿಯ ಆರಾಧನೆಯೊಂದಿಗೆ ಉಪವಾಸನ್ನು ಸಹ ಮಾಡಲಾಗುತ್ತದೆ. ಆಹಾರ ಸೇವಿಸದ ಉಪವಾಸ ಮಾಡುತ್ತಿದ್ದರೆ ಈ ಕ್ರಮ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಭಕ್ತಿಯ ಜೊತೆಗೆ ಆರೋಗ್ಯವೂ ಮುಖ್ಯವಾಗಿರುತ್ತದೆ. ಹೀಗಾಗಿ ನವರಾತ್ರಿ ಸಮಯದಲ್ಲಿ ನಿಮ್ಮ ಉಪವಾಸದ ಕ್ರಮ ಹೇಗಿರಬೇಕೆಂಬುದನ್ನು ತಿಳಿಯಿರಿ.
ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ನವರಾತ್ರಿ ತುಂಬಾ ಮಹತ್ವವಿದೆ. ನವರಾತ್ರಿ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ 9 ದಿನಗಳ ಉತ್ಸವದಲ್ಲಿ ಭಕ್ತರು ದುರ್ಗಾ ದೇವಿಯ 9 ರೂಪಗಳನ್ನು ಬಹಳ ಭಕ್ತಿಯಿಂದ ಪೂಜಿಸುತ್ತಾರೆ. ವಿಶೇಷ ಪೂಜೆಯ ಜೊತೆಗೆ ಸಾಕಷ್ಟು ಉಪವಾಸನ್ನೂ ಮಾಡುತ್ತಾರೆ. ಈ ವೇಳೆ ಕೆಲವರು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಉಪವಾಸದ ಸಮಯದಲ್ಲಿ ತುಪ್ಪದಿಂದ ಮಾಡಿದ ಪೂರಿ ಮತ್ತು ಪಕೋಡವನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉಪವಾಸ ಸಮಯದಲ್ಲಿ ಯಾವ ರೀತಿಯ ಆಹಾರ ಸೇವಿಸಬೇಕು, ದಿನಚರಿ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಪೌಷ್ಟಿಕ ತಜ್ಞೆ ಹೀನಾ ಕೌರ್ ಬೇಡಿ ಅವರು ಉಪವಾಸದ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಪುಟದಲ್ಲಿ ಬರೆದುಕೊಂಡಿದ್ದಾರೆ. ನವರಾತ್ರಿ ಉಪವಾಸ ಇರುವವರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದಿನಚರಿ ಮತ್ತು ಆಹಾರದ ಕ್ರಮವನ್ನು ತಿಳಿಸಿದ್ದಾರೆ.
- ಬೆಳಗ್ಗೆ 7 ಗಂಟೆಯೊಳಗೆ ಪೂಜೆಯ ನಂತರ ನಿಮ್ಮ ದಿನ ಆರಂಭವಾಗುತ್ತೆ. ಈ ಸಮಯದಲ್ಲಿ ನೀವೇನಾದರೂ ಉಪವಾಸ ಇದ್ದರೆ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸನ್ನು ಸೇರಿ. ಅದಕ್ಕೆ ದಾಲ್ಚಿನ್ನಿ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ
- ಬೆಳಗ್ಗೆ 9 ಗಂಟೆಗೆ ಸ್ವಲ್ಪ ಉಪಹಾರ ಸೇವಿಸಿ. ಈ ಉಪಹಾರವಾಗಿ ಪಪ್ಪಾಯಿ, ದಾಳಿಂಬೆ ಹಾಗೂ ಆ್ಯಪಲ್‌ನೊಂದಿಗೆ ಫ್ರೂಟ್ ಸಲಾಡ್ ಮಾಡಿಕೊಳ್ಳಿ. ಇದಕ್ಕೆ ನೆನೆಸಿದ ಚಿಯಾ ಬೀಜಗಳನ್ನು ಮಿಶ್ರಣ ಮಾಡಿ ತಿನ್ನಿ
- ಬೆಳಗ್ಗೆ 11 ಗಂಟೆ ಸುಮಾರಿಗೆ 8 ಬಾದಾಮಿ, 1 ವಾಲ್ನಟ್‌ದೊಂದಿಗೆ ಎಳೆನೀರು ಕುಡಿಯಿರಿ
- ಮಧ್ಯಾಹ್ನ 1 ಗಂಟೆ ಸುಮಾರಿಗೆ ಊಟ ಮಾಡಿ, ತರಕಾರಿಗಳೊಂದಿಗೆ ಸಾಮಕ್ ಅಕ್ಕಿಯ ಅನ್ನ ಮಾಡಿ ತಿನ್ನಿ. 50 ಗ್ರಾಂ ಪನ್ನೀರ್, ಸೌತೆಕಾಯಿ ಪಲ್ಯವನ್ನು ತೆಗೆದುಕೊಳ್ಳಿ
- ಸಂಜೆ 4 ಗಂಟೆಗೆ ಉಪಹಾರವನ್ನು ಸೇವಿಸಿ. ಹುರಿದ ಮಖಾನಾ ಜೊತೆಗೆ 1 ಕಪ್ ಗ್ರೀನ್ ಟೀ ಕುಡಿಯಿರಿ
- ಸಂಜೆ 7 ಗಂಟೆಗೆ ಸಿಹಿ ಗೆಣಸು ಚಾಟ್ ತಿನ್ನಬಹುದು. ಸಿಹಿ ಗೆಣಸನ್ನು ಬೇಯಿಸಿ ಅದಕ್ಕೆ ಸ್ವಲ್ಪ ನಿಂಬೆ ರಸ, ಕಲ್ಲು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದ ನಂತರ ತಿನ್ನಿರಿ. ಸಿಹಿ ಗೆಣಸು ಲಭ್ಯವಿಲ್ಲದಿದ್ದರೆ ಮಿಶ್ರ ತರಕಾರಿ ಸೂಪ್ ಅನ್ನು ಕುಡಿಯಬಹುದು
- ರಾತ್ರಿ 9 ಗಂಟೆಗೆ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಅರಿಶಿನ ಮಿಶ್ರಿತ ಹಾಲವನ್ನು ಕುಡಿಯಿರಿ.
ಗಮನಿಸಿ: ಇದು ಮಾಧ್ಯಮಗಳನ್ನು ಆಧರಿಸಿದ ಬರಹವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನೀವು ತಜ್ಞರನ್ನು ಸಂಪರ್ಕಿಸಿ.