logo
ಕನ್ನಡ ಸುದ್ದಿ  /  ಜೀವನಶೈಲಿ  /  ಜಿಯೋ, ಏರ್‌ಟೆಲ್‌ನಿಂದ ಬಿಎಸ್‌ಎನ್‌ಎಲ್‌ಗೆ ಸಿಮ್ ಪೋರ್ಟ್ ಮಾಡುವುದು ಹೇಗೆ? ಇಲ್ಲಿದೆ ಪ್ರತಿ ಹಂತದ ಮಾಹಿತಿ

ಜಿಯೋ, ಏರ್‌ಟೆಲ್‌ನಿಂದ ಬಿಎಸ್‌ಎನ್‌ಎಲ್‌ಗೆ ಸಿಮ್ ಪೋರ್ಟ್ ಮಾಡುವುದು ಹೇಗೆ? ಇಲ್ಲಿದೆ ಪ್ರತಿ ಹಂತದ ಮಾಹಿತಿ

Jayaraj HT Kannada

Jul 17, 2024 03:10 PM IST

google News

ಜಿಯೋ, ಏರ್‌ಟೆಲ್‌ನಿಂದ ಬಿಎಸ್‌ಎನ್‌ಎಲ್‌ಗೆ ಸಿಮ್ ಪೋರ್ಟ್ ಮಾಡುವುದು ಹೇಗೆ

    • BSNL SIM Porting Guide: ಖಾಸಗಿ ಟೆಲಿಕಾಂ ಕಂಪನಿಗಳು ಅವರ ಟಾರಿಫ್‌ ಯೋಜನೆಗಳ ದರ ಹೆಚ್ಚಿಸಿದ್ದರಿಂದ ಅನೇಕ ಚಂದಾದಾರು ಬಿಎಸ್‌ಎನ್‌ಎಲ್‌ಗೆ ಸಿಮ್‌ ಬದಲಾಯಿಸಿಕೊಳ್ಳಲು ಮುಂದಾಗಿದ್ದಾರೆ. ಹಾಗಾದರೆ ಜಿಯೊ, ಏರ್ಟೆಲ್ ಹಾಗೂ ಐಡಿಯಾ ಸಿಮ್‌ ಅನ್ನು ಬಿಎಸ್‌ಎನ್‌ಎಲ್‌ಗೆ ಪೋರ್ಟ್‌ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಜಿಯೋ, ಏರ್‌ಟೆಲ್‌ನಿಂದ ಬಿಎಸ್‌ಎನ್‌ಎಲ್‌ಗೆ ಸಿಮ್ ಪೋರ್ಟ್ ಮಾಡುವುದು ಹೇಗೆ
ಜಿಯೋ, ಏರ್‌ಟೆಲ್‌ನಿಂದ ಬಿಎಸ್‌ಎನ್‌ಎಲ್‌ಗೆ ಸಿಮ್ ಪೋರ್ಟ್ ಮಾಡುವುದು ಹೇಗೆ (REUTERS)

ಮೊಬೈಲ್‌ ಬಳಕೆ ಹೆಚ್ಚಾದಂತೆಲ್ಲಾ ಟೆಲಿಕಾಂ ಕಂಪನಿಗಳು ನೀಡುವ ಸೇವೆ ಮತ್ತು ಕೊಡುಗೆಗಳು ಹೆಚ್ಚಾಗಿವೆ. ಇದರ ನಡುವೆ ರೀಚಾರ್ಜ್‌ ದರವೂ ಏರಿಕೆಯಾಗುತ್ತಿವೆ. ಜಿಯೊ, ಏರ್ಟೆಲ್‌, ವೊಡಾಫೊನ್‌ ಐಡಿಯಾದಂಥ ದೈತ್ಯ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರಿಗೆ ಅನೇಕ ಬಗೆಯ ಟಾರಿಫ್‌ ಯೋಜನೆಗಳನ್ನು ನೀಡುತ್ತಿದ್ದಾರೆ. ಕಾಲಕಾಲಕ್ಕೆ ಆ ಟಾರಿಫ್ ಯೋಜನೆಗಳ ದರವನ್ನು ಪರಿಷ್ಕರಿಸುತ್ತಿರುತ್ತಾರೆ. ಅದೇ ರೀತಿ ಈಗ ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‌ಗಳು ತಮ್ಮ ಟಾರಿಫ್‌ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಕೆಲವರಿಗೆ ಈ ಬೆಲೆಯು ದುಬಾರಿ ಎನಿಸತೊಡಗಿದೆ. ಹೀಗಾಗಿ ಯಾವುದೇ ರಿಚಾರ್ಜ್‌ ಬೆಲೆಯನ್ನು ಹೆಚ್ಚಿಸದ ಬಿಎಸ್‌ಎನ್‌ಎಲ್‌ಗೆ ಬದಲಾಯಿಸಿಕೊಳ್ಳಲು ಹಲವು ಬಳಕೆದಾರರು ಮುಂದಾಗಿದ್ದಾರೆ.

ಸದ್ಯ ಬಿಎಸ್‌ಎನ್‌ಎಲ್‌ ತನ್ನ ಯಾವುದೇ ರಿಚಾರ್ಜ್‌ ಯೋಜನೆಯ ಬೆಲೆಯನ್ನು ಹೆಚ್ಚಿಸಿಲ್ಲ. ಸರ್ಕಾರಿ ಸ್ವಾಮ್ಯದ ಕಂಪನಿಯಾದ ಬಿಎಸ್‌ಎನ್‌ಎಲ್‌ ಇತರ ಟೆಲಿಕಾಂ ಆಪರೇಟರ್‌ಗಳಿಗೆ ಹೋಲಿಸಿದರೆ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ರಿಚಾರ್ಜ್‌ ಯೋಜನೆಗಳನ್ನು ನೀಡುತ್ತಿದೆ. ಅದು 2ಜಿ/3ಜಿ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರ 4ಜಿ ಸೇವೆಗಳು ಸದ್ಯ ದೇಶದ ಆಯ್ದ ಪ್ರದೇಶಗಳಲ್ಲಿ ಮಾತ್ರ ಲಭ್ಯವಿದೆ. ನೀವು ನಿಮ್ಮ ಸಿಮ್‌ ಕನೆಕ್ಷನ್‌ ಅನ್ನು ಬಿಎಸ್‌ಎನ್‌ಎಲ್‌ಗೆ ಬದಲಾಯಿಸಿಕೊಳ್ಳಬೇಕೆಂದಿದ್ದರೆ, ಪೋರ್ಟ್‌ ಮಾಡಿಕೊಳ್ಳಲು ಅನುಸರಿಸಬೇಕಾದ ಹಂತಗಳು ಇಲ್ಲಿವೆ. ಈಗಿರುವ ನಿಮ್ಮ ಮೊಬೈಲ್‌ ನಂಬರ್‌ ಅನ್ನು ಬದಲಾಯಿಸದೆ ಸುಲಭವಾಗಿ ಪೋರ್ಟ್‌ ಮಾಡಿಕೊಳ್ಳಬಹುದು.

ಹಂತ1: ವಿಶಿಷ್ಟ ಪೋರ್ಟಿಂಗ್‌ ಕೋಡ್‌ (UPC) ಪಡೆದುಕೊಳ್ಳಿ

ನಿಮ್ಮ ಮೊಬೈಲ್‌ ಅನ್ನು ಪೋರ್ಟ್‌ ಮಾಡಿಕೊಳ್ಳಬೇಕೆಂದಿದ್ದರೆ ಮೊದಲು ನಿಮ್ಮ ಮೆಸ್ಸೇಜ್‌ ಅಪ್ಲಿಕೇಶನ್ ತೆರೆಯಿರಿ. ಅಲ್ಲಿ PORT ಎಂದು ಟೈಪಿಸಿ ಅದರ ಮುಂದೆ 10 ಅಂಕಿಯ ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ. ಈ ಸಂದೇಶವನ್ನು 1900ಗೆ ಕಳುಹಿಸಿ. ಈಗ ನಿಮಗೆ ಯುಪಿಸಿ ಕೋಡ್‌ ಅನ್ನು ಸಂದೇಶದ ಮೂಲಕ ನೀಡಲಾಗುತ್ತದೆ. ನೀವು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಿಪೇಯ್ಡ್‌ ಮೊಬೈಲ್‌ ಬಳಸುತ್ತಿದ್ದರೆ, ನೀವು ಮೆಸ್ಸೇಜ್‌ ಕಳುಹಿಸುವ ಬದಲಿಗೆ 1900 ಗೆ ಕರೆ ಮಾಡಬೇಕು.

ಹೀಗೆ ಯುಪಿಸಿ ಸಂಖ್ಯೆಯು ಸಾಮಾನ್ಯವಾಗಿ15 ದಿನಗಳ ಕಾಲ ಮಾನ್ಯವಾಗಿರುತ್ತದೆ ಅಥವಾ ನಿಮ್ಮ ಮೊಬೈಲ್‌ ಸಂಖ್ಯೆಯು ಮತ್ತೊಂದು ಟೆಲಿಕಾಂ ಆಪರೇಟರ್‌ಗೆ ಪೋರ್ಟ್‌ ಆಗುವವರೆಗೆ ಮಾನ್ಯವಾಗಿರುತ್ತದೆ. ಜಮ್ಮು ಮತ್ತು ಕಾಶ್ಮೀರ್‌, ಅಸ್ಸಾಂ ಮತ್ತು ಈಶಾನ್ಯದ ಆಯ್ದ ಪ್ರದೇಶಗಳಲ್ಲಿ ಯುಪಿಸಿ ಕೋಡ್‌ 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ನಿಮ್ಮದು ಪೋಸ್ಟ್‌ ಪೇಡ್‌ ಆಗಿದ್ದರೆ ನೀವು ಎಲ್ಲಾ ಬಾಕಿ ಬಿಲ್‌ ಭರಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಹಂತ 2: ಬಿಎಸ್‌ಎನ್‌ಎಲ್‌ ಕಸ್ಟಮರ್‌ ಸರ್ವೀಸ್‌ ಕೇಂದ್ರಕ್ಕೆ ಭೇಟಿ ನೀಡಿ

ನೀವು ಯುಪಿಸಿ ಕೋಡ್‌ ಪಡೆದುಕೊಂಡ ನಂತರ ಪೋರ್ಟಿಂಗ್‌ಗಾಗಿ ಹತ್ತಿರದ ಬಿಎಸ್‌ಎನ್‌ಎಲ್‌ ಕಸ್ಟಮರ್‌ ಸರ್ವೀಸ್‌ ಕೇಂದ್ರಕ್ಕೆ ಭೇಟಿ ನೀಡಿ. ಅಲ್ಲಿ ಈ ಕೆಳಗಿನ ಹಂತಗಳನ್ನು ಪಾಲಿಸಬೇಕಾಗುತ್ತದೆ.

  • ಕಸ್ಟಮರ್‌ ಅಪ್ಲಿಕೇಷನ್‌ ಫಾರ್ಮ್‌ (ಗ್ರಾಹಕರ ಅರ್ಜಿ ನಮೂನೆ) ಅನ್ನು ಅಗತ್ಯ ಮಾಹಿತಿಗಳೊಂದಿಗೆ ಭರ್ತಿ ಮಾಡಿ.
  • ನಿಮ್ಮ ಫೋಟೋ ಐಡಿ ಮತ್ತು ವಿಳಾಸದ ದಾಖಲೆಗಳನ್ನು ಒದಗಿಸಿ.
  • ನೀವು ಸದ್ಯ ಬಳಸುತ್ತಿರುವ ಟೆಲಿಕಾಂ ಆಪರೇಟರ್‌ನಿಂದ ಸ್ವೀಕರಿಸಿದ ಯುಪಿಸಿ ಕೋಡ್‌ ಅನ್ನು ನೀಡಿ.
  • ಪೋರ್ಟಿಂಗ್‌ ಶುಲ್ಕವನ್ನು ಪಾವತಿಸಿ. (ಬಿಎಸ್‌ಎನ್‌ಎಲ್‌ ಪೋರ್ಟ್‌ ಮಾಡಲು ಸದ್ಯ ಯಾವುದೇ ಶುಲ್ಕವನ್ನು ವಿಧಿಸುತ್ತಿಲ್ಲ ಎಂದು ಹೇಳಿದೆ.)

ಹಂತ 3: ಪೋರ್ಟಿಂಗ್‌ ಪ್ರಕ್ರಿಯೆ ಪೂರ್ಣಗೊಳಿಸಿ

ಕಸ್ಟಮರ್‌ ಅಪ್ಲಿಕೇಷನ್‌ ಫಾರ್ಮ್‌ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ, ನಿಮಗೆ ಹೊಸ ಬಿಎಸ್ಎನ್ಎಲ್‌ ಸಿಮ್‌ ಕಾರ್ಡ್‌ ನೀಡಲಾಗುತ್ತದೆ. ಹಳೆಯ ಸಿಮ್‌ ಯಾವಾಗ ನಿಷ್ಕ್ರಿಯವಾಗುತ್ತದೆ ಮತ್ತು ಹೊಸ ಬಿಎಸ್‌ಎನ್‌ಎಲ್‌ ಸಿಮ್ ಯಾವಾಗ ಸಕ್ರಿಯಗೊಳ್ಳುತ್ತದೆ ಎಂದು ನಿಮಗೆ ಸಂದೇಶದ ಮೂಲಕ ಮಾಹಿತಿಯನ್ನು ಕಳುಹಿಸಲಾಗುತ್ತದೆ. ಆ ಸಮಯದಲ್ಲಿ ನಿಮ್ಮ ಹೊಸ ಬಿಎಸ್‌ಎನ್‌ಎಲ್‌ ಸಿಮ್‌ ಅನ್ನು ಮೊಬೈಲ್‌ಗೆ ಅಳವಡಿಸಿ.

ಏರ್ಟೆಲ್‌, ಜಿಯೊ ಅಥವಾ ವಿ ಸಿಮ್‌ನಿಂದ ಬಿಎಸ್‌ಎನ್‌ಎಲ್‌ಗೆ ಪೋರ್ಟ್‌ ಮಾಡಿಸಲು ಈ ಎಲ್ಲಾ ಹಂತಗಳನ್ನು ಪಾಲಿಸಬೇಕಾಗುತ್ತದೆ. ಟಾರಿಫ್‌ ಯೋಜನೆಗಳಿಗೆ ಹೆಚ್ಚು ಹಣ ವ್ಯಯಿಸದೆ ಬಿಎಸ್‌ಎನ್‌ಎಲ್‌ ಮೊಬೈಲ್‌ ಸೇವೆಗಳನ್ನು ಆನಂದಿಸಬಹುದಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ