ಗೂಗಲ್ ಇಂಡಿಯಾ ಕಾರ್ಯಕ್ರಮ: ಗೂಗಲ್ ಪೇಗೆ ಸರ್ಕಲ್ ಸೇರ್ಪಡೆ, ಹಣ ಸಾಲ ಬೇಕೆನ್ನುವವರಿಗೂ ಸಿಹಿಸುದ್ದಿ
Oct 03, 2024 05:07 PM IST
ಗೂಗಲ್ ಇಂಡಿಯಾ ಕಾರ್ಯಕ್ರಮ: ಗೂಗಲ್ ಪೇಗೆ ಸರ್ಕಲ್ ಸೇರ್ಪಡೆ
ಗೂಗಲ್ ಇಂಡಿಯಾ ಇವೆಂಟ್‌ನಲ್ಲಿ ಸರ್ಚ್ ಎಂಜಿನ್ ಕಂಪನಿಯು ಹಲವು ಫೀಚರ್‌ಗಳನ್ನು ಘೋಷಿಸಿದೆ. ಭಾರತದ ಬಳಕೆದಾರರಿಗೆ ಯುಪಿಐ ಸರ್ಕಲ್ ಪರಿಚಯ, ಆದಿತ್ಯ ಬಿರ್ಲಾದಂತಹ ಸಂಸ್ಥೆಗಳ ಮೂಲಕ ಸುಲಭವಾಗಿ ಸಾಲಪಡೆಯುವಂತಹ ಸೌಲಭ್ಯ ಸೇರಿದಂತೆ ಹಲವು ಫೀಚರ್‌ಗಳನ್ನು ಗೂಗಲ್ ನೀಡುತ್ತಿದೆ.
ಬೆಂಗಳೂರು: ಅಕ್ಟೋಬರ್ 3ರ ಗುರುವಾರ ಗೂಗಲ್ ಇಂಡಿಯಾ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಗೂಗಲ್ ವಿಶೇಷವಾಗಿ ಭಾರತವನ್ನು ಗುರಿಯಾಗಿಸಿಕೊಂಡು ಹಲವು ಫೀಚರ್‌ಗಳನ್ನು ಘೋಷಿಸಿದೆ. ಅಂದರೆ, ಯುಪಿಐ, ಗೂಗಲ್ ಪೇ ಮತ್ತು ಎಐ ಅಡ್ವಾನ್ಸ್‌ಮೆಂಟ್ ಫೀಚರ್‌ಗಳನ್ನು ಪರಿಚಯಿಸಿದೆ. ಅಭಿವೃದ್ಧಿ ಮತ್ತು ಕಲಿಕೆಗೆ ಸೂಕ್ತವಾದ ಅಂಶಗಳನ್ನು ಗೂಗಲ್ ಘೋಷಿಸಿದೆ.
ಗೂಗಲ್ ಪೇ ಮೂಲಕ ಸಾಲ ಪಡೆಯುವ ಅವಕಾಶ
ಗೂಗಲ್ ಪೇಯಲ್ಲಿ ಎಐ ಚಾಲಿತ ಸಪೋರ್ಟ್ ಗೈಡ್ ಇರಲಿದೆ. ಇದರಿಂದ ಬಳಕೆದಾರರು ಸಾಲ ಮರುಪಾವತಿ ಅವಧಿಗಳು, ಅರ್ಹತೆಯ ಮಾನದಂಡಗಳು, ಇಎಂಐಗಳು, ಸಾಲ ಪಡೆಯಲು ಷರತ್ತುಗಳು, ನಿಯಮಗಳು ಇತ್ಯಾದಿ ವಿಷಯಗಳ ಕುರಿತು ಮಾಹಿತಿ ಪಡೆಯಬಹುದು.
ಭಾರತದ ವ್ಯವಹಾರಗಳನ್ನು ಆಧರಿಸಿ ಕಂಪನಿಯು ವಿವಿಧ ಸಾಲದಾತ ಸಂಸ್ಥೆಗಳ ಜತೆ ಮೈತ್ರಿ ಮಾಡಿಕೊಂಡಿದೆ. ಆದಿತ್ಯಾ ಬಿಲಾ ಫೈನಾನ್ಸ್ ಲಿಮಿಟೆಡ್ ಅನ್ನು ತನ್ನ ಪೋರ್ಟ್‌ಪೋಲಿಯೋಗೆ ಸೇರಿಸಿಕೊಂಮಡಿದೆ. ಮುತ್ತೂಟ್ ಫೈನಾನ್ಸ್ ಅನ್ನು ಗೂಗಲ್ ತನ್ನ ಗೂಗಲ್ ಪೇಗೆ ಸೇರಿಸಿಕೊಂಡಿದೆ. ಈ ಮೂಲಕ ಗ್ರಾಹಕರು ಸಾಲ ಅಡವಿಟ್ಟು ಸಾಲ ಪಡೆಯಬಹುದು. ವಿಶೇಷವಾಗಿ ಗ್ರಾಮೀಣ ಭಾರತದ ಜನರಿಗೆ ಇದು ನೆರವಾಗಲಿದೆ.
ಭಾರತೀಯ ಬಳಕೆದಾರರಿಗೆ ಯುಪಿಐ ಸರ್ಕಲ್
ಗೂಗಲ್‌ಪೇ ಬಳಕೆದಾರರಿಗೆ ಯುಪಿಐ ಸರ್ಕಲ್ ಅನ್ನು ಗೂಗಲ್ ಪರಿಚಯಿಸುತ್ತಿದೆ. ಇದು ಎನ್‌ಪಿಸಿಐ ಆಧರಿತವಾಗಿದೆ. ಗೂಗಲ್ ಪೇ ಬಳಕೆದಾರರು ತಮ್ಮ ಪ್ರೈಮರಿ ಯುಪಿಐ ಪ್ರೊಫೈಲ್/ಖಾತೆಯನ್ನು ಇತರರ ಜತೆ ಹಂಚಿಕೊಳ್ಳಬಹುದು. ಅಂದರೆ, ಸ್ನೇಹಿತರು, ಕುಟುಂಬದ ಸದಸ್ಯರು, ಸಹೋದ್ಯೋಗಿಗಳ ಮೂಲಕ ಹಂಚಿಕೊಳ್ಳಬಹುದು. ಇವರು ಕೂಡ ನಿಮ್ಮ ಗೂಗಲ್ ಪೇ ಮೂಲಕ ಹಣ ಬಳಸಲು ಸಾಧ್ಯವಿದೆ. ಉದಾಹರಣೆಗೆ ಗಂಡ ಹೆಂಡತಿ ಈ ರೀತಿ ಯುಪಿಐ ಸರ್ಕಲ್ ಹಂಚಿಕೊಂಡರೆ ಗಂಡನ ಗೂಗಲ್ ಪೇಯನ್ನು ಹೆಂಡತಿ ಬಳಸಬಹುದು. ಗಂಡನಲ್ಲಿ ಹಣ ಇಲ್ಲದೆ ಇದ್ದರೆ ಹೆಂಡತಿಯ ಯುಪಿಐ ಖಾತೆ ಮೂಲಕ ಯುಪಿಐ ವ್ಯವಹಾರ ನಡೆಸಬಹುದು. ಹೀಗೆ, ಆಪ್ತರು ತಮ್ಮ ಯುಪಿಐ ಖಾತೆ ಹಂಚಿಕೊಳ್ಳಬಹುದು. ಕೆಲವೊಮ್ಮೆ ಸರ್ವರ್ ಡೌನ್ ಇತ್ಯಾದಿಗಳಿಂದ ಒಂದು ಯುಪಿಐ ವರ್ಕ್ ಮಾಡದೆ ಇದ್ದರೆ ಇನ್ನೊಬ್ಬರ ಯುಪಿಐ ಬಳಸಿಕೊಳ್ಳಬಹುದು.
ಇದು ಎರಡು ರೀತಿ ಕೆಲಸ ಮಾಡುತ್ತದೆ. ಪೂರ್ಣ ಪ್ರಮಾಣ ಮತ್ತು ಭಾಗಶಃ ಆಯ್ಕೆ ಇದರಲ್ಲಿದೆ. ಫುಲ್ ಡೆಲಿಗೇಷನ್ ಆಯ್ಕೆಯಲ್ಲಿ ಪ್ರಾಥಮಿಕ ಬಳಕೆದಾರ ಮತ್ತೊಬ್ಬ ಬಳಕೆದಾರರಿಗೆ 15 ಸಾವಿರ ರೂಪಾಯಿವರೆಗೆ ಹಣ ಬಳಕೆಗೆ ಅವಕಾಶ ನೀಡಬಹುದು. ಪಾರ್ಷಿಯಲ್ ಅಥವಾ ಭಾಗಶಃ ಡೆಲಿಗೇಷನ್‌ನಲ್ಲಿ ಹಣ ಬಳಕೆ ಮಿತಿ 5 ಸಾವಿರ ರೂಪಾಯಿ ನಿಗದಿಗೊಳಿಸಬಹುದು.
ಪಾರ್ಷಿಯಲ್ ಡೆಲಿಗೇಷನ್‌ನಲ್ಲಿ ಬಳಕೆದಾರರಿಗೆ ಹೆಚ್ಚು ನಿಯಂತ್ರಣವಿರುತ್ತದೆ. ಎರಡನೇ ಬಳಕೆದಾರ ಹಣ ಪಾವತಿ ಮಾಡುವ ಸಂದರ್ಭದಲ್ಲಿ ಪ್ರಾಥಮಿಕ ಬಳಕೆದಾರ ದೃಢೀಕರಿಸಬೇಕಾಗುತ್ತದೆ.
ಸಣ್ಣ ಮತ್ತು ಮಧ್ಯಮ ಗಾತ್ರದ ಬಿಸ್ನೆಸ್‌ಗೆ ಬೆಂಬಲ, ಜಿಮಿನಿ ಲೈವ್ 9 ಭಾರತೀಯ ಭಾಷೆಗಳಲ್ಲಿ ದೊರಕಲಿದೆ. ಇದು ಕನ್ನಡ, ಮಲಯಾಳಂ, ತೆಲುಗು, ಗುಜರಾತಿ ಸೇರಿದಂತೆ ಹಲವು ಭಾಷೆಗಳಲ್ಲಿ ಬೆಂಬಲ ನೀಡಲಿದೆ.