logo
ಕನ್ನಡ ಸುದ್ದಿ  /  ಜೀವನಶೈಲಿ  /  Instagram Ad Scam: ಇನ್‌ಸ್ಟಾಗ್ರಾಂನಲ್ಲಿ ಜಾಹೀರಾತು ಮೂಲಕ ವಂಚನೆ, ಮೋಸದ ಖೆಡ್ಡಾಕ್ಕೆ ಬೀಳುವ ಮುನ್ನ 5 ಅಮೂಲ್ಯ ಟಿಪ್ಸ್‌ ಗಮನಿಸಿ

Instagram ad Scam: ಇನ್‌ಸ್ಟಾಗ್ರಾಂನಲ್ಲಿ ಜಾಹೀರಾತು ಮೂಲಕ ವಂಚನೆ, ಮೋಸದ ಖೆಡ್ಡಾಕ್ಕೆ ಬೀಳುವ ಮುನ್ನ 5 ಅಮೂಲ್ಯ ಟಿಪ್ಸ್‌ ಗಮನಿಸಿ

Praveen Chandra B HT Kannada

Dec 18, 2024 03:50 PM IST

google News

ಇನ್‌ಸ್ಟಾಗ್ರಾಂನಲ್ಲಿ ಜಾಹೀರಾತು ಮೂಲಕ ವಂಚನೆ

  • Instagram ad scam alert: ಇನ್‌ಸ್ಟಾಗ್ರಾಂ ಮೂಲಕ ವಂಚನೆ ಹೆಚ್ಚಾಗುತ್ತಿದೆ. ಆನ್‌ಲೈನ್‌ ವಂಚಕರಿಂದ ಹಲವು ಜನರು ಪ್ರತಿನಿತ್ಯ ಹಲವು ಲಕ್ಷ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಈ ಮುಂದಿನ ಸಲಹೆಗಳನ್ನು ಪಾಲಿಸಿ.

ಇನ್‌ಸ್ಟಾಗ್ರಾಂನಲ್ಲಿ ಜಾಹೀರಾತು ಮೂಲಕ ವಂಚನೆ
ಇನ್‌ಸ್ಟಾಗ್ರಾಂನಲ್ಲಿ ಜಾಹೀರಾತು ಮೂಲಕ ವಂಚನೆ (HT_PRINT)

ಜಗತ್ತಿನೆಲ್ಲೆಡೆ ಸೋಷಿಯಲ್‌ ಮೀಡಿಯಾಗಳಲ್ಲಿ ಇನ್‌ಸ್ಟಾಗ್ರಾಂ ಬಲುಜನಪ್ರಿಯ. ಯುವ ಜನತೆಗಂತೂ ಇನ್‌ಸ್ಟಾಗ್ರಾಂ ಅಚ್ಚುಮೆಚ್ಚು. ಹೀಗಿದ್ದರೂ, ಆನ್‌ಲೈನ್‌ ವಂಚಕರು ಈಗ ಇನ್‌ಸ್ಟಾಗ್ರಾಂನಲ್ಲಿ ಜನರನ್ನು ಖೆಡ್ಡಾಕ್ಕೆ ಬೀಳಿಸಲು ಕಾಯುತ್ತ ಇರುತ್ತಾರೆ. ವಂಚಕರ ಬಲೆಗೆ ಬಿದ್ದರೆ ಹಣ ಅಥವಾ ನಮ್ಮ ಅಮೂಲ್ಯ ಡೇಟಾಗಳನ್ನು ಕಳೆದುಕೊಳ್ಳಬೇಕಾಗಬಹುದು. ನೀವು ಇನ್‌ಸ್ಟಾಗ್ರಾಂನಲ್ಲಿ ಸುರಕ್ಷಿತವಾಗಿರಬೇಕಾದರೆ ಒಂದಿಷ್ಟು ಸಲಹೆಗಳನ್ನು ಪಾಲಿಸಬೇಕು.

ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಕಲರ್‌ಫುಲ್‌ ಸೀರೆಗಳನ್ನು ನೋಡಿದ ರಶ್ಮಿ ಎಂಬ ಗ್ರಾಹಕರು ಖುಷಿಯಿಂದ ಆರ್ಡರ್‌ ಮಾಡುತ್ತಾರೆ. ಫೋಟೊಗಳಲ್ಲಿದ್ದ ಹಲವು ವೆರೈಟಿ ಡಿಸೈನ್‌ಗಳಲ್ಲಿ ಇಷ್ಟವಾದ ಎರಡು ಸೀರೆಗಳನ್ನು ಆಯ್ಕೆ ಮಾಡಿ ಆರ್ಡರ್‌ ಮಾಡುತ್ತಾರೆ. ಕ್ಯಾಷ್‌ ಆನ್‌ ಡೆಲಿವರಿ ಆಯ್ಕೆಯಿತ್ತು. ನಿರೀಕ್ಷೆಯಂತೆ ನಿಗದಿತ ದಿನದಂದು ಇವರ ಆರ್ಡರ್‌ ಮನೆಗೆ ತಲುಪಿದೆ. ಕೊರಿಯರ್‌ ತಂದವನಿಗೆ ಹಣ ನೀಡಿ ಮನೆಯೊಳಗೆ ಬಂದು ಸೀರೆ ಬಿಡಿಸಿ ನೋಡಿದಾಗ ಅಚ್ಚರಿಯಾಯ್ತು. ಏಕೆಂದರೆ, ಕಪ್ಪು ಕಪ್ಪಾಗಿದ್ದ ಯಾವುದೋ ಹರಿದ ಎರಡು ಸೀರೆಗಳನ್ನು ಚೆನ್ನಾಗಿ ಪ್ಯಾಕ್‌ ಮಾಡಿ ಕಳುಹಿಸಿದ್ದರು. ಆಮೇಲೆ ಸಂಪರ್ಕಕ್ಕೆ ಆ ವಂಚಕರು ಸಿಗಲಿಲ್ಲ.

ಮಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ವೊಬ್ಬರಿಗೆ ಇದಕ್ಕಿಂತ ಭಯಾನಕ ಅನುಭವಾಗಿದೆ. ಇನ್‌ಸ್ಟಾಗ್ರಾಂನಲ್ಲಿ "ಸುಲಭವಾಗಿ ಹಣ ಗಳಿಸಿ" ರೀತಿಯ ಜಾಹೀರಾತು ನೋಡಿದ್ದಾರೆ. ಈ ಎಂಜಿನಿಯರ್‌ ಆ ಉದ್ಯೋಗದ ಕುರಿತು ಆಸಕ್ತಿ ವಹಿಸಿದ್ದಾರೆ. 9899183689 ಮೊಬೈಲ್‌ ಸಂಖ್ಯೆಯಲ್ಲಿದ್ದ ಇನ್‌ಸ್ಟಾಗ್ರಾಂ ಜತೆ ಸಂವಹನ ನಡೆಸಿದ್ದಾರೆ. ಬಳಿಕ ಇವರನ್ನು ಟೆಲಿಗ್ರಾಂನಲ್ಲಿರುವ @khannika9912 ಅಕೌಂಟ್‌ಗೆ ರಿಡೈರೆಕ್ಟ್‌ ಮಾಡಲಾಯಿತು. ಟೆಲಿಗ್ರಾಂನಲ್ಲಿ ಕನ್ನಿಕಾ ಎಂಬವರು ಹೂಡಿಕೆ ಮಾಡಿದರೆ ಶೇಕಡ 30ರಷ್ಟು ರಿಟರ್ನ್‌ ಗಳಿಸುವ ಭರವಸೆ ನೀಡಿದಾರೆ. ಆರಂಭದಲ್ಲಿ ಇವರು ಗೂಗಲ್‌ ಪೇ ಮೂಲಕ 7000 ರೂಪಾಯಿ ನೀಡಿದ್ದಾರೆ. ನೀಡಿದ ಭರವಸೆಯ ಪ್ರಕಾರ ಆಕೆಗೆ 9100 ರೂಪಾಯಿ ದೊರಕಿತು. ಈ ಮೂಲಕ ಇವರಿಗೆ ಧೈರ್ಯ ಬಂದಿದೆ. ಇನ್ನಷ್ಟು ಹಣ ಹೂಡಿಕೆ ಮಾಡೋಣ ಎಂದು ಇವರು ಮುಂದಾಗಿದ್ದಾರೆ.

ಬಳಿಕ 20 ಸಾವಿರ ರೂಪಾಯಿ ನೀಡಿದ್ದಾರೆ. ನಿಮ್ಮ ಅಕೌಂಟ್‌ ಬ್ಲಾಕ್‌ ಆಗಿದೆ. ಹೀಗಾಗಿ ನೋಟಿಫಿಕೇಷನ್‌ ಬಂದಿಲ್ಲ. ನಿಮಗೆ ರಿಟರ್ನ್‌ ಬರುತ್ತದೆ ಎಂದು ಭರವಸೆ ನೀಡಿದ್ದಾರೆ. ವಂಚಕರ ಮಾತು ನಂಬಿ ಈಕೆ ಹೀಗೆಯೇ 10 ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೊತ್ತವನ್ನು ಟ್ರಾನ್ಸ್‌ಫಾರ್‌ ಮಾಡಿದ್ದಾರೆ. ರಿಟರ್ನ್‌ಗಾಗಿ ಕಾದಾಗ ಇವರಿಗೆ ಮೋಸ ಹೋಗಿರುವುದು ತಿಳಿದುಬಂತು. 20 ಸಾವಿರ ಬ್ಲಾಕ್‌ ಆದಾಗಲೇ ಇವರು ಎಚ್ಚೆತ್ತುಕೊಳ್ಳಲಿಲ್ಲ ಏಕೆ ಎಂದು ಬಹುತೇಕರು ಕೇಳುತ್ತಿದ್ದಾರೆ. ವಂಚಕರ ಮೋಸದ ಖೆಡ್ಡಾಕ್ಕೆ ಬಿದ್ದಾಗ ಕೆಲವೊಮ್ಮೆ ಬುದ್ದಿ ಕೆಲಸ ಮಾಡುವುದಿಲ್ಲ, ಸದಾ ಎಚ್ಚರಿಕೆಯಿಂದ ಇರಬೇಕು.

ಪ್ರತಿನಿತ್ಯ ಇನ್‌ಸ್ಟಾಗ್ರಾಂನಲ್ಲಿ ಈ ರೀತಿಯ ಹಲವು ವಂಚನೆಗಳು ವರದಿಯಾಗುತ್ತ ಇರುತ್ತವೆ. ಇನ್‌ಸ್ಟಾಗ್ರಾಂನಲ್ಲಿ ವಂಚನೆಯಾಗದಂತೆ ನೋಡಿಕೊಳ್ಳಲು ಈ ಮುಂದಿನ ಐದು ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

  1. ಸದಾ ಎಚ್ಚರಿಕೆಯಿಂದ ಇರಿ: ಅಪರಿಚಿತರಿಂದ ಬರುವ ಸಂದೇಶ, ಇಮೇಲ್‌ ಕುರಿತು ಯಾವತ್ತೂ ನಂಬಿಕೆ ಇಟ್ಟುಕೊಳ್ಳಬೇಡಿ. ಇನ್‌ಸ್ಟಾಗ್ರಾಂನಲ್ಲಿ ಕಾಣಿಸುವ ಜಾಹೀರಾತುಗಳನ್ನು ಹಲವು ರೀತಿಯಿಂದ ದೃಢೀಕರಿಸಲು ಪ್ರಯತ್ನಿಸಿ.
  2. ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ: ನಿಮಗೆ ಗೊತ್ತಿರದ ಮೂಲದಿಂದ ಬಂದಿರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ. ಇದು ನಿಮ್ಮನ್ನು ಅಸುರಕ್ಷಿತ ವೆಬ್‌ಸೈಟ್‌ಗಳಿಗೆ ಕರೆದೊಯ್ಯಬಹುದು. ನಿಮ್ಮ ಮೊಬೈಲ್‌ಗೆ ವೈರಸ್‌ ಅಟ್ಯಾಕ್‌ ಆಗಬಹುದು.
  3. ವೈಯಕ್ತಿಕ ಮಾಹಿತಿಗೆ ಗಾರ್ಡ್‌ ಹಾಕಿ: ಇನ್‌ಸ್ಟಾಗ್ರಾಂನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಮೊಬೈಲ್‌ ಸಂಖ್ಯೆ ಇತರರಿಗೆ ಕಾಣಿಸುವುದು ಬೇಡ. ಈ ಮಾಹಿತಿಯು ವಂಚಕರ ಕೈ ಸೇರಿದರೆ ಯಾವುದಾದರೂ ರೀತಿ ನಿಮ್ಮನ್ನು ವಂಚನೆಯ ಖೆಡ್ಡಾಕ್ಕೆ ಬೀಳಿಸಬಹುದು.
  4. ರಿಕ್ವೆಸ್ಟ್‌ ವೇರಿಫಿಕೇಷನ್‌ ಮಾಡಿ: ನಿಮಗೆ ಇಂತಹ ಆನ್‌ಲೈನ್‌ ವ್ಯವಹಾರಗಳ ಸಂದರ್ಭದಲ್ಲಿ ಏನೇ ಸಂದೇಹ ಬಂದರೂ ನಂಬಿಕೆಗೆ ಅರ್ಹವಾಗಿರುವ ಚಾನೆಲ್‌ಗಳ ಮೂಲಕ ಆ ಸಂಸ್ಥೆಯನ್ನು ಸಂಪರ್ಕಿಸಿ. ಇನ್‌ಸ್ಟಾಗ್ರಾಂನಲ್ಲಿ ಯಾವುದಾದರೂ ಜಾಹೀರಾತು ಕಂಡರೆ ಆ ಜಾಹೀರಾತು ನೀಡಿದ ಮೂಲ ಕಂಪನಿ ನಿಜಕ್ಕೂ ಅಸ್ತಿತ್ವದಲ್ಲಿಯೇ ಎಂದು ಹುಡುಕಿ.
  5. ವಂಚಕರನ್ನು ಗುರುತಿಸಿ: ವಂಚಕರು ನಿಮ್ಮೊಂದಿಗೆ ವ್ಯವಹರಿಸುವ ರೀತಿ ಸಂಶಯಸ್ಪದವಾಗಿರುತ್ತದೆ. ಆರಂಭದಲ್ಲಿ ನಂಬಿಕೆಗೆ ಪಾತ್ರವಾಗಲು ಕೆಲವು ನೂರು ರೂಪಾಯಿ ರಿಟರ್ನ್‌ ನೀಡಬಹುದು. ಆದರೆ, ನಂತರ ದೊಡ್ಡ ಮೊತ್ತದ ಹಣ ನೀಡಬೇಡಿ. ನಿಮ್ಮ ಬ್ಯಾಂಕ್‌ ಮಾಹಿತಿ, ಆಧಾರ್‌ ಮಾಹಿತಿ, ಒಟಿಪಿ ಇತ್ಯಾದಿ ನೀಡಬೇಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ