ಇನ್ನುಂದೆ ಜಿಯೋ ಸೇರಿದಂತೆ ಈ ಫೋನ್‌ಗಳಲ್ಲಿ ವಾಟ್ಸ್ಆ್ಯಪ್ ಬಂದ್; ಮೆಟಾದಿಂದ ದೊಡ್ಡ ಅಪ್ಡೇಟ್
Jul 18, 2024 06:45 AM IST
ಇನ್ನುಂದೆ ಜಿಯೋ ಸೇರಿದಂತೆ ಈ ಫೋನ್‌ಗಳಲ್ಲಿ ವಾಟ್ಸ್ಆ್ಯಪ್ ಬಂದ್
- ಮೆಟಾದಿಂದ ಜಿಯೋ ಬಳಕೆದಾರರಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಸದ್ಯದಲೇ ವಾಟ್ಸ್ಆ್ಯಪ್ ಹೊಸ ಅಪ್‌ಡೇಟ್ ಬರಲಿದ್ದು, KaiOS ಸಾಧನಗಳಲ್ಲಿ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತಂತೆ. ಈ ಮೂಲಕ ಹಲವು ಫೀಚರ್ ಫೋನ್‌ಗಳು ಮತ್ತು ಕೀಪ್ಯಾಡ್ ಫೋನ್‌ಗಳಲ್ಲಿ ವಾಟ್ಸ್ಆ್ಯಪ್ ಬಂದ್ ಆಗಲಿದೆ.
ಮೆಟಾದ ಜನಪ್ರಿಯ ಅಪ್ಲಿಕೇಶನ್ ವಾಟ್ಸ್ಆ್ಯಪ್ ಬಗ್ಗೆ ಸಂಸ್ಥೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಶೀಘ್ರದಲ್ಲೇ ಹೊಸ ಅಪ್‌ಡೇಟ್ ಬರಲಿದ್ದು, 2025ರ ವೇಳೆಗೆ KaiOS ಸಾಧನಗಳಲ್ಲಿ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದಂತೆ. ಅಂದರೆ ಇದು ಜಿಯೋ ಫೋನ್, ಜಿಯೋ ಫೋನ್ 2 ಮತ್ತು ಇತರ ಹಲವು ಫೀಚರ್ ಫೋನ್‌ಗಳು ಮತ್ತು ಕೀಪ್ಯಾಡ್ ಫೋನ್‌ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ. KaiOSನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದನ್ನು ವಾಟ್ಸ್ಆ್ಯಪ್ ನಿಲ್ಲಿಸಿದೆ.
ಮೆಟಾ ಇಂತಹ ನಿರ್ಧಾರ ತೆಗೆದುಕೊಂಡಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ನವೆಂಬರ್ 2021ರಲ್ಲಿ, ವಾಟ್ಸ್ಆ್ಯಪ್ ಆಂಡ್ರಾಯ್ಡ್ 4.0.3, ಐಒಎಸ್ 9 ಮತ್ತು KaiOS 2.5.0 ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತ್ತು. ಅಂದರೆ, ಕೆಲವು ಓಎಸ್ ಬಗ್ಗೆ ಈ ಹಿಂದೆಯೂ ಇಂತಹ ನಿರ್ಧಾರ ತೆಗೆದುಕೊಂಡಿದೆ.
ಇದೀಗ KaiOS 2.5.4 ಅಥವಾ ನಂತರದ ಆವೃತ್ತಿಗಳಲ್ಲಿ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಲಾಗಿದೆ. ಇದು ಜಿಯೋ ಫೋನ್ ಸೇರಿದಂತೆ ನೋಕಿಯಾ 6300 4G ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರೊಬ್ಬರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ KaiOS ನ ವೆಬ್‌ಸೈಟ್‌ನಲ್ಲಿ ಕೂಡ ಮಾಹಿತಿ ನೀಡಲಾಗಿದೆ. ಜೂನ್ 25, 2024ರಿಂದ ವಾಟ್ಸ್ಆ್ಯಪ್ ಅನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಯಾವುದೇ ಹೊಸ ಬಳಕೆದಾರರಿಗೆ ಡೌನ್‌ಲೋಡ್ ಮಾಡಲು ಮತ್ತು ಲಾಗಿನ್ ಮಾಡಲು ಸಾಧ್ಯವಾಗುವುದಿಲ್ಲ. ಸದ್ಯ ವಾಟ್ಸ್ಆ್ಯಪ್ ಉಪಯೋಗಿಸುತ್ತಿರುವ ಬಳಕೆದಾರರು 2025ರ ಆರಂಭದವರೆಗೆ ಈ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುತ್ತದೆ.
KaiOS ಅನ್ನು ಕೀಪ್ಯಾಡ್ ಫೋನ್‌ಗಳಲ್ಲಿ ಬಳಸಲಾಗುತ್ತದೆ. ಈ ಫೋನ್‌ನಲ್ಲಿ ಯೂಟ್ಯೂಬ್, ಫೇಸ್‌ಬುಕ್‌ನಂತಹ ಅಪ್ಲಿಕೇಶನ್‌ಗಳನ್ನು ಸಹ ಬಳಸಬಹುದು.
ಈ ಫೋನ್‌ಗಳಲ್ಲಿ Whatsapp ಕಾರ್ಯನಿರ್ವಹಿಸುವುದಿಲ್ಲ
- ಜಿಯೋ ಫೋನ್
- ಜಿಯೋ ಫೋನ್ 2
- ನೋಕಿಯಾ 2720 ಫ್ಲಿಪ್
- ನೋಕಿಯಾ 6300 4G
- ಐಟೆಲ್ ಮತ್ತು ಕಾರ್ಬನ್ ಫೋನ್‌ಗಳು
KaiOSನಲ್ಲಿ ಬಂದ್ ಆದ ನಂತರ ಮೆಟಾ-ಮಾಲೀಕತ್ವದ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ಆಂಡ್ರಾಯ್ಡ್, ಐಒಎಸ್ ಮತ್ತು ಡೆಸ್ಕ್‌ಟಾಪ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಸದ್ಯ ವಾಟ್ಸ್ಆ್ಯಪ್ ಅನೇಕ ಹೊಸ ವೈಶಿಷ್ಟ್ಯಗಳು ಮತ್ತು ಎಐ ಏಕೀಕರಣಕ್ಕೆ ಒತ್ತು ನೀಡುತ್ತಿದೆ. ವಾಟ್ಸ್ಆ್ಯಪ್ ಇತ್ತೀಚೆಗೆ ಭಾರತದಲ್ಲಿ ಮೆಟಾ AI ಬೆಂಬಲವನ್ನು ಕೂಡ ಪ್ರಾರಂಭಿಸಿತು. ಬಳಕೆದಾರರಿಗೆ ಪ್ರತ್ಯೇಕ ಚಾಟ್ ಮೂಲಕ AI ಚಾಟ್‌ಬಾಟ್‌ನೊಂದಿಗೆ ಸಂವಹನ ನಡೆಸಲು ಇದು ಅನುವು ಮಾಡಿಕೊಡುತ್ತದೆ.
ವರದಿ: ವಿನಯ್ ಭಟ್.
ಇನ್ನಷ್ಟು ಟೆಕ್ನಾಲಜಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಸ್ಮಾರ್ಟ್ಫೋನ್ ಕೆಳಭಾಗದಲ್ಲಿ ಈ ರಂಧ್ರ ಯಾಕಿದೆ ಗೊತ್ತೇ, ಇದರ ಉಪಯೋಗವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ