KYC Scam: ಏನಿದು ಕೆವೈಸಿ ವಂಚನೆ? ಇಂತಹ ಮೋಸದ ಜಾಲಗಳಿಂದ ಪಾರಾಗಲು ಇಲ್ಲಿದೆ ಮಾಹಿತಿ
Dec 06, 2023 10:32 AM IST
KYC Scam: ಏನಿದು ಕೆವೈಸಿ ವಂಚನೆ? ಇಂತಹ ಮೋಸದ ಜಾಲಗಳಿಂದ ಪಾರಾಗಲು ಇಲ್ಲಿದೆ ಮಾಹಿತಿ. (PC: HT Tech Photo)
- Scam Alert: ಇತ್ತೀಚಿನ ದಿನಗಳಲ್ಲಿ ಕೆವೈಸಿ ವಂಚನೆ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ನಿಮ್ಮನ್ನು ಸಂಪರ್ಕಿಸುವ ವ್ಯಕ್ತಿಯು ಸೈಬರ್ ವಂಚಕನೇ ಅಲ್ಲವೇ ಎಂದು ತಿಳಿಯುವುದು ಹೇಗೆ? ಇಂಥಹ ವಂಚನೆಗಳಿಂದ ಹೇಗೆ ಪಾರಾಗಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ.
ಈಗೀಗ ಕಾಲ ಯಾವ ರೀತಿ ಬದಲಾಗಿದೆ ಎಂದರೆ ನಾವು ಮೈಯೆಲ್ಲ ಕಣ್ಣಾಗಿ ಇದ್ದರೂ ಸಹ ನಮಗೆ ವಂಚನೆಗೊಳಗಾಗುವ ಭಯ ಇದ್ದೇ ಇರುತ್ತದೆ. ಅದರಲ್ಲೂ ತಂತ್ರಜ್ಞಾನ ಬೆಳೆದಂತೆಲ್ಲ ಇದರ ಅಪಾಯ ಇನ್ನಷ್ಟು ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಕೆವೈಸಿ ವಂಚನೆ ಪ್ರಕರಣಗಳು ಹೆಚ್ಚೆಚ್ಚು ಬೆಳಕಿಗೆ ಬರುತ್ತಿರೋದು ನಿಜಕ್ಕೂ ಒಂದು ಆಘಾತಕಾರಿ ವಿಚಾರವಾಗಿದೆ. ಸೈಬರ್ ವಂಚಕರು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕಲೆಹಾಕುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚಿಕೊಳ್ಳುತ್ತಾರೆ. ಹೀಗಾಗಿ ನೀವು ಯಾರಿಗೆ ಆದರೂ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕಿಂಗ್ ಮಾಹಿತಿಗಳನ್ನು ನೀಡುವ ಮುನ್ನ ಭಾರೀ ಎಚ್ಚರಿಕೆಯಿಂದ ಇರುವುದು ಅಗತ್ಯ.
ಸಾಮಾನ್ಯವಾಗಿ ಈ ಸೈಬರ್ ವಂಚಕರು ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿ ವಂಚಿಸುವುದೇ ಹೆಚ್ಚು. ಕೆಲವರು ಕರೆ ಮಾಡಿ ನಿಮ್ಮಿಂದ ವೈಯಕ್ತಿಕ ದಾಖಲೆಗಳನ್ನು ಕಿತ್ತುಕೊಂಡರೆ ಇನ್ನೂ ಕೆಲವರು ಇಮೇಲ್ ಅಥವಾ ಮೆಸೇಜ್ಗಳಲ್ಲಿ ಒಂದು ಲಿಂಕ್ ಕಳುಹಿಸಿ ಇದರ ಮೇಲೆ ಕ್ಲಿಕ್ ಮಾಡಿ ಎಂದು ಹೇಳುವ ಮೂಲಕ ನಿಮ್ಮ ವೈಯಕ್ತಿಕ ಹಾಗೂ ಗೌಪ್ಯ ಮಾಹಿತಿಗಳನ್ನು ಲೀಕ್ ಮಾಡಿಕೊಳ್ಳುತ್ತಾರೆ.
ಇದನ್ನೂ ಓದಿ: Digital Jagathu: ಡೀಪ್‌ಫೇಕ್ ತಂತ್ರಜ್ಞಾನದ ಒಳಿತು, ಕೆಡುಕು ಮತ್ತು ಭವಿಷ್ಯದ ಆತಂಕಗಳು
ಇಂಥಹ ಕೆವೈಸಿ ವಂಚನೆಗಳಿಗೆ ನೀವು ಬಲಿಯಾಗಬಾರದು ಎಂದರೆ ಈ ಕೆಳಗಿನ ವಿವಿಧ ಎಚ್ಚರಿಕೆಗಳನ್ನು ಪಾಲಿಸಬೇಕು
ವೈಯಕ್ತಿಕ ದಾಖಲೆಗಳನ್ನು ನೀಡುವಾಗ ಎಚ್ಚರಿಕೆ ಇರಬೇಕು
ಯಾರೋ ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡಿದರು ಅಂತಾ ನಿಮ್ಮೆಲ್ಲ ದಾಖಲೆಗಳನ್ನು ಕಣ್ಮುಚ್ಚಿ ನೀಡಬೇಡಿ. ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ವಿವರಗಳನ್ನು ನೀಡುವ ಮುನ್ನ ನೂರು ಬಾರಿ ಯೋಚಿಸಿ.
ಡಿಜಿಟಲ್ ಮಾಹಿತಿಗಳನ್ನು ಭದ್ರವಾಗಿಸಿ
ನಿಮ್ಮ ನೆಟ್ ಬ್ಯಾಂಕಿಂಗ್, ಎಟಿಎಂ ಕಾರ್ಡ್ ಪಿನ್ ಸೇರಿದಂತೆ ನಿಮ್ಮ ಅಗತ್ಯ ದಾಖಲೆಗಳಿಗೆ ಬೇರೆಯವರಿಗೆ ಸುಲಭವಾಗಿ ಊಹಿಸಲು ಸಾಧ್ಯವಾಗುವ ಪಾಸ್ವರ್ಡ್ಗಳನ್ನು ಹಾಕಬೇಡಿ. ಕ್ಲಿಷ್ಟಕರವಾದ ಪಾಸ್ವರ್ಡ್ಗಳನ್ನು ಹಾಕಿದಾಗ ಮಾತ್ರ ನಿಮ್ಮ ಡಿಜಿಟಲ್ ಮಾಹಿತಿ ಭದ್ರವಾಗಿ ಇರಲು ಸಾಧ್ಯವಿದೆ.
ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಡಿ
ನಿಮ್ಮ ಬ್ಯಾಂಕಿಂಗ್ ವ್ಯವಹಾರ, ಕ್ರೆಡಿಟ್ ಕಾರ್ಡ್ ಬಳಕೆ ಸೇರಿದಂತೆ ವಿವಿಧ ಆರ್ಥಿಕ ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಡುವುದು ಒಳ್ಳೆಯದು. ಇವುಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೂ ಸಹ ಕೂಡಲೇ ಬ್ಯಾಂಕ್ಗೆ ಭೇಟಿ ನೀಡಿ.
ಅಗತ್ಯ ಮಾಹಿತಿಗಳು ನಿಮಗೂ ತಿಳಿದಿರಲಿ
ಸದ್ಯ ಸಮಾಜದಲ್ಲಿ ಯಾವೆಲ್ಲ ರೀತಿಯಲ್ಲಿ ಸೈಬರ್ ವಂಚನೆ ನಡೆಯುತ್ತಿದೆ ಎಂಬುದರ ಬಗ್ಗೆ ನೀವು ಲಕ್ಷ್ಯ ನೀಡಿ. ಆಗ ಮಾತ್ರ ನೀವು ವಂಚಕರ ಜಾಲದಿಂದ ಪಾರಾಗಲು ಸಾಧ್ಯವಿದೆ.
ಸೈಬರ್ ವಂಚನೆ ಎನ್ನುವುದು ಯಾವ ಸಮಯದಲ್ಲಿ ಬೇಕಿದ್ದರೂ ಆಗಬಹುದು. ಆದರೆ ನೀವು ಎಚ್ಚರಿಕೆಯಿಂದ ಇದ್ದರೆ ನಿಮ್ಮ ಅಗತ್ಯ ಮಾಹಿತಿಗಳನ್ನು ಕದಿಯಲು ಯಾರಿಂದಲೂ ಸಾಧ್ಯವಿಲ್ಲ. ಮೊಬೈಲ್ಗೆ ಬರುವ ಲಿಂಕ್ಗಳನ್ನು ಕ್ಲಿಕ್ ಮಾಡುವುದು, ಯಾರೋ ಕೇಳಿದರು ಎಂದಾಕ್ಷಣ ಒಟಿಪಿ ಶೇರ್ ಮಾಡುವುದು ಈ ರೀತಿಯ ಕೆಲಸಗಳನ್ನು ಎಂದಿಗೂ ಮಾಡಬೇಡಿ.