ClearFake: ಏನಿದು ಕ್ಲಿಯರ್‌ಫೇಕ್, ಲ್ಯಾಪ್‌ಟಾಪ್ ಬಳಕೆದಾರರು ಇದಕ್ಕೆ ಭಯಪಡುತ್ತಿರುವುದೇಕೆ? ಇದು ಡೀಪ್‌ಫೇಕ್‌ಗಿಂತ ಹೇಗೆ ಭಿನ್ನ
How to Keep your computer secure: ಡೀಪ್‌ಫೇಕ್ ಅನಾಹುತದ ಸುದ್ದಿಗಳನ್ನು ಪ್ರತಿನಿತ್ಯ ಕೇಳುತ್ತ ಇರುವಾಗಲೇ ಕ್ಲಿಯರ್‌ಫೇಕ್ ಎಂಬ ಹೊಸ ವೈರಸ್‌ನ ಹಾವಳಿ ಆರಂಭವಾಗಿದೆ. ವಿಶೇಷವಾಗಿ ಈ ವೈರಸ್ ಆಪಲ್ ಬಳಕೆದಾರರನ್ನು ಟಾರ್ಗೆಟ್ ಮಾಡಿದೆ.
ತಂತ್ರಜ್ಞಾನ ಲೋಕದಲ್ಲಿ ಈಗ ಫೇಕ್ ಎಂಬ ಪದ ಭಯ ಹುಟ್ಟಿಸುತ್ತದೆ. ಅಸಲಿಗಳಿಗೆ ಅಚ್ಚರಿ ಹುಟ್ಟಿಸುವಂತೆ ನಕಲಿ ಚಿತ್ರ, ವಿಡಿಯೋ, ಧ್ವನಿ ಸೃಷ್ಟಿಸುವ ಡೀಪ್‌ಫೇಕ್ ಕುರಿತು ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ. ಇದೀಗ ಆಪಲ್ ಬಳಕೆದಾರರನ್ನು ಟಾರ್ಗೆಟ್ ಮಾಡುವ ಆಟೊಮಿಕ್ ಮ್ಯಾಕ್‌ಓಎಸ್ ಸ್ಟೀಲರ್ (ಎಎಂಒಎಸ್) ಎಂಬ ಸುಧಾರಿತ ವೈರಸ್ ಕುರಿತು ಆತಂಕ ಹೆಚ್ಚಾಗಿದೆ. ಈ AMOS ವೈರಸ್ ಕಂಪ್ಯೂಟರ್‌ನಂತಹ ಸಾಧನಗಳಿಗೆ ಒಮ್ಮೆ ಪ್ರವೇಶಿಸಿದರೆ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಗೊತ್ತೇ ಆಗದಂತೆ ಕದಿಯೋ ಸಾಮರ್ಥ್ಯ ಹೊಂದಿದೆ.. ಈ ವೈರಸ್ ಮುಖ್ಯವಾಗಿ ಆಪಲ್ ಬಳಕೆದಾರರನ್ನು ಗುರಿಯಾಗಿಸಿದೆ. ಆಪಲ್ ಬಳಕೆದಾರರ ಮೇಲೆ ಆಕ್ರಮಣ ಮಾಡಲು ಕ್ಲಿಯರ್ ಫೇಕ್ ಎಂಬ ಫೋನಿ ಬ್ರೌಸರ್ ಅನ್ನು ಬಳಸುತ್ತದೆ. ಈ ಮೂಲಕ ಕ್ರಿಪ್ಟೋಕರೆನ್ಸಿ ದಾಖಲೆಗಳು, ಹಣದ ವ್ಯಾಲೆಟ್‌ನ ಪಾಸ್‌ವರ್ಡ್, ಐಕ್ಲೌಡ್ ಕೀಚೈನ್ ಪಾಸ್‌ವರ್ಡ್, ಇತರೆ ಫೈಲ್‌ಗಳನ್ನು ಕದಿಯಲು ಪ್ರಯತ್ನಿಸಲಾಗುತ್ತದೆ.
ಈಗಾಗಲೇ ನಾವೆಲ್ಲರೂ ಡೀಪ್‌ಫೇಕ್ ಭಯದಲ್ಲಿದ್ದೇವೆ. ಇಂತಹ ಸಮಯದಲ್ಲಿ ಈ ಕ್ಲಿಯರ್‌ಫೇಕ್ ಕೂಡ ಆತಂಕ ಹುಟ್ಟಿಸಿದೆ. ಬನ್ನಿ ಕ್ಲಿಯರ್‌ಫೇಕ್ ಕುರಿತು ಒಂದಿಷ್ಟು ವಿವರ ಪಡೆಯೋಣ. ಇದನ್ನು ಓದಿ: ಪ್ರೈವೆಸಿ ಬಗ್ಗೆ ಬೇಡ ಅಸಡ್ಡೆ; ಡಿಜಿಟಲ್ ಜಗತ್ತಿನಲ್ಲಿ ವೈಯಕ್ತಿಕ ದತ್ತಾಂಶ ರಕ್ಷಣೆ ಹೇಗೆ
ಏನಿದು ಕ್ಲಿಯರ್‌ಫೇಕ್? ಇದು ಡೀಪ್‌ಫೇಕ್‌ಗಿಂತ ಹೇಗೆ ಭಿನ್ನ?
ಕ್ಲಿಯರ್‌ಫೇಕ್ ಎನ್ನುವುದು ಡೀಪ್‌ಫೇಕ್‌ನ ಸಂತತಿಯದ್ದೇ. ಡೀಪ್‌ಫೇಕ್ ಎಂದರೆ ಮೆಷಿನ್ ಲರ್ನಿಂಗ್ ಬಳಸಿಕೊಂಡು ಚಿತ್ರಗಳು ಅಥವಾ ವಿಡಿಯೋಗಳನ್ನು ಮಾರ್ಪಾಡು ಮಾಡುವ ತಂತ್ರಜ್ಞಾನ. ನೈಜ್ಯವಾಗಿ ಕಾಣಿಸುವಂತೆ ನಕಲಿ ಚಿತ್ರಗಳನ್ನು, ವಿಡಿಯೋಗಳನ್ನು ಸೃಷ್ಟಿಸಲು ಡೀಪ್‌ಫೇಕ್ ಬಳಕೆಯಾಗುತ್ತಿದೆ. ಆದರೆ, ಕ್ಲಿಯರ್‌ಫೇಕ್ ಎನ್ನುವುದು ಬಳಕೆದಾರರಿಗೆ ಬೇರೊಂದು ರೀತಿ ಹಾನಿ ಮಾಡುತ್ತದೆ. ಕ್ಲಿಯರ್ ಫೇಕ್ ಮೂಲಕ ಫೇಕ್ ಸುದ್ದಿಗಳನ್ನು ರಚಿಸಬಹುದು. ಇದೀಗ ಇದೇ ತಂತ್ರಜ್ಞಾನ ಬಳಸಿ ಕಂಪ್ಯೂಟರ್ ಬಳಕೆದಾರರಿಗೆ ತೊಂದರೆ ನೀಡಲಾಗುತ್ತದೆ. ಎಎಂಒಎಸ್ ಜತೆಗೆ ಕ್ಲಿಯರ್‌ಫೇಕ್ ತಂತ್ರಗಳನ್ನು ಬಳಸಿ ಮ್ಯಾಕ್ ಕಂಪ್ಯೂಟರ್ ಬಳಕೆದಾರರ ಮೇಲೆ ದಾಳಿ ನಡೆಸುತ್ತಿದೆ. ಇದೇ ಟೆಕ್ನಿಕ್ ಬಳಸಿ ಮೊದಲು ವಿಂಡೋಸ್ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳ ಮಾಹಿತಿ ಕದಿಯಲಾಗುತ್ತಿತು. ಇದೀಗ ಇದು ಮ್ಯಾಕ್ ಬಳಕೆದಾರರಿಗೂ ಆತಂಕ ತಂದಿದೆ. ಈ ವೈರಸ್ ಡೌನ್‌ಲೋಡ್ ಆಗಿರುವ ಕಂಪ್ಯೂಟರ್‌ನಲ್ಲಿ ಬಳಕೆದಾರರ ಲಾಗಿನ್ ಮಾಹಿತಿ, ಪಾಸ್‌ವರ್ಡ್ ಇತ್ಯಾದಿಗಳೆಲ್ಲವೂ ಕಳ್ಳರ ಪಾಲಾಗುತ್ತದೆ. ಈ ವೈರಸ್ ಮೂಲಕ ಹೀಗೆ ಪ್ರಮುಖ ಮಾಹಿತಿಗಳನ್ನು ಪಡೆದು ಸಂಗ್ರಹಿಸಲಾಗುತ್ತದೆ. ಭವಿಷ್ಯದಲ್ಲಿ ಸೈಬರ್ ಅಟ್ಯಾಕ್ ಮಾಡುವ ಸಂದರ್ಭದಲ್ಲಿ ಈ ಮಾಹಿತಿಗಳನ್ನು ವಂಚಕರು ಬಳಸುತ್ತಾರೆ.
ಮ್ಯಾಕ್/ಲ್ಯಾಪ್‌ಟಾಪ್‌ಗಳಿಗೆ ಕ್ಲಿಯರ್‌ಫೇಕ್ ಹೇಗೆ ಇನ್‌ಸ್ಟಾಲ್ ಆಗುತ್ತದೆ?
ಎಎಂಒಎಸ್‌ನಂತಹ ಮಾಲ್‌ವೇರ್ ಅನ್ನು ಕ್ಲಿಯರ್‌ಫೇಕ್ ಮೂಲಕ ಮ್ಯಾಕ್ ಅಥವಾ ಇತರೆ ಕಂಪ್ಯೂಟರ್/ಲ್ಯಾಪ್‌ಟಾಪ್‌ಗಳಿಗೆ ಇನ್‌ಸ್ಟಾಲ್ ಮಾಡಲಾಗುತ್ತದೆ. ದಾಳಿಕೋರರು ಮೊದಲಿಗೆ ವಿವಿಧ ವೆಬ್‌ಸೈಟ್‌ಗಳಿಗೆ ಅಪಾಯಕಾರಿ ಜಾವಾಸ್ಕ್ರಿಪ್ಟ್ ಕೋಡ್‌ಗಳನ್ನು ಇನ್‌ಸ್ಟಾಲ್ ಮಾಡುತ್ತಾರೆ. ಬಳಕೆದಾರರು ಇಂತಹ ವೆಬ್‌ಸೈಟ್ ತೆರೆದಾಗ ಆ ವೈರಸ್ ಆ ಲ್ಯಾಪ್‌ಟಾಪ್‌ನೊಳಗೆ ಪ್ರವೇಶಿಸುತ್ತದೆ. ಸಫಾರಿ, ಕ್ರೋಮ್ ಬ್ರೌಸರ್ ಇತ್ಯಾದಿಗಳಲ್ಲಿ ಸುಳ್ಳು ಪ್ರಾಂಪ್ಟ್ ಮೂಲಕ ಬಳಕೆದಾರರಿಗೆ ಏನಾದರೂ ಅಪ್‌ಡೇಟ್ ಮಾಡಿ ಎಂಬ ಸಂದೇಶ ತೋರಿಸುತ್ತದೆ. ಅಪ್‌ಡೇಟ್ ಕೊಟ್ಟಾಗ ಆ ಅಪಾಯಕಾರಿ ವೈರಸ್ ಸಾಫ್ಟ್‌ವೇರ್ ಡೌನ್‌ಲೋಡ್ ಆಗುತ್ತದೆ ಅಥವಾ ಇನ್‌ಸ್ಟಾಲ್ ಆಗುತ್ತದೆ. ಲ್ಯಾಪ್‌ಟಾಪ್‌ನೊಳಗೆ ಸೇರಿದ ಬಳಿಕ ಈ ಮಾಲ್‌ವೇರ್‌ಗಳು ಮಾಹಿತಿ ಕದಿಯೋ ಕಾರ್ಯದಲ್ಲಿ ತೊಡಗುತ್ತವೆ. ಇದನ್ನೂ ಓದಿ: ಡೀಪ್‌ಫೇಕ್ ತಂತ್ರಜ್ಞಾನದ ಒಳಿತು, ಕೆಡುಕು ಮತ್ತು ಭವಿಷ್ಯದ ಆತಂಕಗಳು
ಕ್ಲಿಯರ್‌ಫೇಕ್‌ನಿಂದ ಪಾರಾಗೋದು ಹೇಗೆ?
ಯಾವುದೇ ಕಾರಣಕ್ಕೂ ಕಂಪ್ಯೂಟರ್‌ಗೆ ಅನಧಿಕೃತ ಸಾಫ್ಟ್ವೇರ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.
ವಿವಿಧ ವೆಬ್‌ಸೈಟ್‌ಗಳಲ್ಲಿ ತಕ್ಷಣಕ್ಕೆ ಕಾಣಿಸುವಂತಹ ಸೂಚನೆಗಳು, ಪ್ರಾಂಪ್ಟ್‌ಗಳು, ಪಾಪ್‌ಅಪ್‌ಗಳನ್ನು ಕ್ಲಿಕ್ ಮಾಡಬೇಡಿ.
ಸಫಾರಿ ಅಥವಾ ಕ್ರೋಮ್ ಅನ್ನು ನೇರವಾಗಿ ನಿಮ್ಮ ಆಪ್‌ಸ್ಟೋರ್‌ನಿಂದಲೇ ಅಪ್‌ಡೇಟ್ ಮಾಡಿ. ಕ್ರೋಮ್‌ನ ಮೇಲೆ ಯಾವುದೇ ಪಾಪ್‌ಅಪ್ ಸೂಚನೆ ಬಂತೆಂದು ಅಪ್‌ಡೇಟ್ ಮಾಡಬೇಡಿ. ನೇರವಾಗಿ ಪ್ಲೇಸ್ಟೋರ್, ಆಪ್‌ಸ್ಟೋರ್‌ಗೆ ಹೋಗಿ ಅಪ್‌ಡೇಟ್ ಕ್ಲಿಕ್ ಮಾಡಿ.
ಯಾವುದೇ ಆಪ್ ಡೌನ್‌ಲೋಡ್ ಮಾಡುವ ಮೊದಲು ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ. ಅಸಲಿಯಂತೆ ಕಂಡರೂ ಅವು ಅಸಲಿಯಾಗಿರುವುದಿಲ್ಲ. ಈ ನಕಲಿಗಳ ಲೋಕದಲ್ಲಿ, ಫೇಕ್‌ಗಳ ಲೋಕದಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸಿ.