ರಮಣೀಯ ದೃಶ್ಯವೈಭವ ತೋರಿಸುವ ಪ್ರಮುಖ 12 ವಿಸ್ಟಾಡೋಮ್ ರೈಲುಗಳಿವು, ಯಶವಂತಪುರ ಕಾರವಾರ ಎಕ್ಸ್‌ಪ್ರೆಸ್‌ಗೆ ಎಷ್ಟನೇ ಸ್ಥಾನ
Oct 28, 2024 06:15 PM IST
ರಮಣೀಯ ದೃಶ್ಯವೈಭವ ತೋರಿಸುವ ಪ್ರಮುಖ 12 ವಿಸ್ಟಾಡೋಮ್ ರೈಲುಗಳಿವು
- Top 12 Scenic Vistadome Train Route In India: ವಿಸ್ಟಾಡೋಮ್ ರೈಲುಗಳಲ್ಲಿ ಪ್ರಯಾಣಿಸುತ್ತ ಸುತ್ತಮುತ್ತಲಿನ ಸುಂದರ ಪ್ರಕೃತಿ ಸೌಂದರ್ಯ ನೋಡಲು ಬಯಸುವವರಿಗೆ ಅನುಕೂಲವಾಗುವಂತೆ ಭಾರತದ ಅಗ್ರ 12 ರಮಣೀಯ ದೃಶ್ಯವೈಭವ ತೋರಿಸುವ ಪ್ರಮುಖ 12 ವಿಸ್ಟಾಡೋಮ್ ರೈಲುಗಳ ವಿವರ ನೀಡಲಾಗಿದೆ. ಯಶವಂತಪುರ ಕಾರವಾರ ಎಕ್ಸ್‌ಪ್ರೆಸ್ ಕೂಡ ಈ ಪಟ್ಟಿಯಲ್ಲಿದೆ.
Top 12 Scenic Vistadome Train Route In India: ವಿಸ್ಟಾಡೋಮ್ ರೈಲುಗಳಲ್ಲಿ ಹೊರಗಿನ ಸುಂದರ ಪ್ರಪಂಚ ನೋಡುವುದು ಖುಷಿ ಕೊಡುವ ವಿಚಾರ. ಹೊರಗಿನ ಪ್ರಪಂಚ ಎಲ್ಲಾ ಕಡೆಯೂ ಒಂದೇ ರೀತಿ ಇರುವುದಿಲ್ಲ. ಆದರೆ, ಕೆಲವು ಕಡೆಯ ಪ್ರಕೃತಿ ಸೌಂದರ್ಯ ನೋಡಿದರೆ ಸ್ವರ್ಗ ಎಲ್ಲೋ ಇಲ್ಲ, ಇಲ್ಲೇ ಇದೆ ಎಂದೆನಿಸದರೆ ಇರದು. ಸಾಮಾನ್ಯ ರೈಲುಗಳಲ್ಲಿ ಹೋದಾಗ ಕೆಲವೊಂದು ಪ್ರದೇಶಗಳ ಸೌಂದರ್ಯವನ್ನು ಸವಿಯಲು ಉತ್ತಮವೆನಿಸದು. ಆದರೆ,ವಿಸ್ಟಾಡೋಮ್ ರೈಲುಗಳಲ್ಲಿ ಇಂತಹ ಸುಂದರ ತಾಣಗಳನ್ನು ನೋಡುವ ಸೊಗಸೇ ಬೇರೆ. ಸಿಎನ್‌ಟ್ರಾವೆಲರ್ ಇಂತಹ ರಮಣೀಯ ದೃಶ್ಯವೈಭವ ತೋರಿಸುವ ಪ್ರಮುಖ 12 ವಿಸ್ಟಾಡೋಮ್ ರೈಲುಗಳನ್ನು ಪಟ್ಟಿ ಮಾಡಿದೆ. ಕರ್ನಾಟಕದ ಯಶವಂತಪುರ ಕಾರವಾರ ಎಕ್ಸ್‌ಪ್ರೆಸ್ ಕೂಡ ಈ ಲಿಸ್ಟ್‌ನಲ್ಲಿರುವುದು ಹೆಮ್ಮೆಯ ವಿಚಾರ. ಬನ್ನಿ ಸುಂದರ ಪ್ರಕೃತಿಯನ್ನು ನೋಡಲು ಟಾಪ್ ಪ್ರಮುಖ 12 ವಿಸ್ಟಾಡೋಮ್ ರೈಲುಗಳ ವಿವರ ಪಡೆಯೋಣ ಬನ್ನಿ.
ಜಮ್ಮು ಮತ್ತು ಕಾಶ್ಮೀರ ವಿಸ್ಟಾಡೋಮ್ ವಿಶೇಷ ಕೋಚ್
ಜಮ್ಮು ಮತ್ತು ಕಾಶ್ಮೀರ ವಿಸ್ಟಾಡೋಮ್ ವಿಶೇಷ ಕೋಚ್ ಮಧ್ಯ ಕಾಶ್ಮೀರದ ಬುಡ್ಗಾಮ್‌ನಿಂದ ದಕ್ಷಿಣ ಕಾಶ್ಮೀರದ ಬನಿಹಾಲ್‌ಗೆ ಚಲಿಸುತ್ತದೆ, ಶ್ರೀನಗರ, ಅವಂತಿಪುರ, ಅನಂತನಾಗ್ ಮತ್ತು ಖಾಜಿಗುಂಡ್‌ನಲ್ಲಿ 2 ರಿಂದ 10 ನಿಮಿಷಗಳ ನಿಲುಗಡೆ ಇರುತ್ತದೆ. ಕಾಶ್ಮೀರ ಕಣಿವೆಯ ಅದ್ಭುತ ಸೌಂದರ್ಯ ಕಣ್ತುಂಬಿಕೊಳ್ಳಲು ಈ 90 ಕಿಮೀ ಪ್ರಯಾಣ ನೆರವಾಗುತ್ತದೆ.
ನ್ಯೂ ಜಲ್ಪೈಗುರಿ ಎಕ್ಸ್‌ಪ್ರೆಸ್
ಪಶ್ಚಿಮ ಬಂಗಾಳದ ಡೋರ್ಸ್ ಪ್ರದೇಶದ ಮೂಲಕ ಈ ಪ್ರಯಾಣ ಕೈಗೊಳ್ಳಬಹುದು.ನ್ಯೂ ಜಲ್ಪೈಗುರಿ ಎಕ್ಸ್‌ಪ್ರೆಸ್ ನ್ಯೂ ಜಲ್ಪೈಗುರಿಯಿಂದ ಅಲಿಪುರ್‌ದುವಾರ್ ಜಂಕ್ಷನ್‌ಗೆ 169 ಕಿಲೋಮೀಟರ್ ಪ್ರಯಾಣವನ್ನು ಒಳಗೊಂಡಿದೆ, ದಾರಿಯುದ್ದಕ್ಕೂ ಏಳು ನಿಲುಗಡೆಗಳಿವೆ. ದಟ್ಟವಾದ ಕಾಡುಗಳು, ಚಹಾ ತೋಟಗಳು ಮತ್ತು ಪೂರ್ವ ಹಿಮಾಲಯದ ತಪ್ಪಲಿನಲ್ಲಿ ರೈಲು ಸಾಗುತ್ತದೆ.
ಹಿಮಾಚಲ ಪ್ರದೇಶ: ಕಲ್ಕಾ - ಶಿಮ್ಲಾ ಎನ್‌ಜಿ ಎಕ್ಸ್‌ಪ್ರೆಸ್
ಹಿಮಾಚಲ ಪ್ರದೇಶದ ಸೌಂದರ್ಯ ಸರಿಯಲು ಈ ರೈಲಲ್ಲಿ ಹೋಗಿ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಕಲ್ಕಾ-ಶಿಮ್ಲಾ ರೇಖೆಯ ಉದ್ದಕ್ಕೂ ಪ್ರಯಾಣ ಬೆಳೆಸಬಹುದು. ಈ ಮಾರ್ಗವು 103 ಸುರಂಗಗಳು, 800 ಸೇತುವೆಗಳು, 919 ತಿರುವುಗಳು ಮತ್ತು 18 ನಿಲ್ದಾಣಗಳನ್ನು ಹೊಂದಿದೆ. ಪೈನ್ ಕಾಡುಗಳು, ಕಣಿವೆಗಳು ಮತ್ತು ಪರ್ವತ ಭೂದೃಶ್ಯಗಳನ್ನು ನೋಡುತ್ತ ಸಾಗಬಹುದು.
ಗುಜರಾತ್: ಅಹಮದಾಬಾದ್ - ಕೆವಾಡಿಯಾ ಜನ್ ಶತಾಬ್ದಿ ಎಕ್ಸ್‌ಪ್ರೆಸ್
ಕೆವಾಡಿಯಾ ಜನ್ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಅಹಮದಾಬಾದ್-ಕೆವಾಡಿಯಾ ವಿಸ್ಟಾಡೋಮ್ ಕೋಚ್ ಅಹಮದಾಬಾದ್‌ನಿಂದ ಏಕತಾ ನಗರಕ್ಕೆ ಪ್ರಯಾಣಿಸುತ್ತದೆ, ದಾರಿಯುದ್ದಕ್ಕೂ ಮೂರು ನಿಲ್ದಾಣಗಳಲ್ಲಿ ನಿಲ್ಲುತ್ತದೆ.ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಎತ್ತರದ ಪ್ರತಿಮೆಯಾದ ಏಕತೆಯ ಪ್ರತಿಮೆಯನ್ನು ನೋಡಲು ಉತ್ಸುಕರಾಗಿರುವವರಿಗೆ ಈ ರಮಣೀಯ ಮಾರ್ಗವು ಸೂಕ್ತವಾಗಿದೆ. ನರ್ಮದಾ ನದಿಯನ್ನೂ ನೋಡುತ್ತ ಸಾಗಬಹುದು.
ಅಸ್ಸಾಂ: ಹೊಸ ಹಾಫ್ಲಾಂಗ್ ವಿಶೇಷ ಪ್ರವಾಸಿ ರೈಲು
ನ್ಯೂ ಹಾಫ್ಲಾಂಗ್ ವಿಶೇಷ ಪ್ರವಾಸಿ ರೈಲು ಗುವಾಹಟಿಯಿಂದ ನ್ಯೂ ಹಾಫ್ಲಾಂಗ್‌ಗೆ 269 ಕಿಮೀ ಪ್ರಯಾಣಿಸುತ್ತದೆ, ಮೈಬಾಂಗ್‌ನಲ್ಲಿ ನಿಲುಗಡೆಯಾಗುತ್ತದೆ. ಈ ಪ್ರಯಾಣವು ಸೊಂಪಾದ ಹಸಿರು ಭೂದೃಶ್ಯಗಳು, ಬೆಟ್ಟಗಳು ಮತ್ತು ಶಾಂತಿಯುತ ನದಿಗಳನ್ನು ತೋರಿಸುತ್ತ ಸಾಗುತ್ತದೆ.
ಆಂಧ್ರ ಪ್ರದೇಶ: ವಿಶಾಖಪಟ್ಟಣಂ - ಕಿರಂಡುಲ್ ಎಕ್ಸ್‌ಪ್ರೆಸ್
ವಿಶಾಖಪಟ್ಟಣಂ - ಕಿರಾಂಡುಲ್ ಎಕ್ಸ್‌ಪ್ರೆಸ್ ರೈಲಿನ ವಿಸ್ಟಾಡೋಮ್ ಸೇವೆಯು ಎರಡೂ ದಿಕ್ಕುಗಳಲ್ಲಿ ಲಭ್ಯವಿದೆ. ರೈಲು 471 ಕಿಮೀ ಚಲಿಸುತ್ತದೆ, ಗಂಟೆಗೆ ಸರಾಸರಿ 40 ಕಿಮೀ. ವೇಗದಲ್ಲಿ ಸಾಗುತ್ತದೆ. ಕೊತ್ತವಲಸ ಜಂಕ್ಷನ್, ಅರಕು, ಕೊರಾಪುಟ್ ಜಂಕ್ಷನ್, ಜೇಪೋರ್, ಜಗದಲ್‌ಪುರ, ದಾಂತೇವಾರಾ, ಬಾಚೇಲಿ ಮತ್ತು ಕಿರಾಂಡುಲ್ ಕೆಲವು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ರೈಲು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಂಕ್ಷನ್‌ನಿಂದ ರಾತ್ರಿ 9.20 ಕ್ಕೆ ಹೊರಡುತ್ತದೆ ಮತ್ತು ಛತ್ತೀಸ್‌ಗಢದ ಕಿರಾಂಡುಲ್‌ಗೆ ಬೆಳಿಗ್ಗೆ 10 ಗಂಟೆಗೆ ತಲುಪುತ್ತದೆ.
ಹಿಮಾಚಲ ಪ್ರದೇಶ: ಹಿಮ್ ದರ್ಶನ್ ಎಕ್ಸ್‌ಪ್ರೆಸ್ ಕಲ್ಕಾ - ಶಿಮ್ಲಾ
ಹರಿಯಾಣದ ಕಲ್ಕಾದಿಂದ ಹಿಮಾಚಲ ಪ್ರದೇಶದ ಶಿಮ್ಲಾಕ್ಕೆ ಹೋಗುವ ಹಿಮ್ ದರ್ಶನ್ ಎಕ್ಸ್‌ಪ್ರೆಸ್ ಬರೋಗ್ ನಿಲ್ದಾಣದಲ್ಲಿ ಮಾತ್ರ ನಿಲ್ಲುತ್ತದೆ. ಹಿಮ್ ದರ್ಶನ್ ಎಕ್ಸ್‌ಪ್ರೆಸ್ ಬೆಳಿಗ್ಗೆ 7 ಗಂಟೆಗೆ ಕಲ್ಕಾದಿಂದ ಹೊರಟು ಮಧ್ಯಾಹ್ನ 12.55 ಕ್ಕೆ ಶಿಮ್ಲಾಕ್ಕೆ ಆಗಮಿಸುತ್ತದೆ. ಶಿಮ್ಲಾಗೆ ಹಿಂದಿರುಗುವಾಗ, ರೈಲು ಮಧ್ಯಾಹ್ನ 3.50 ಕ್ಕೆ ಹೊರಟು ರಾತ್ರಿ 9.15 ಕ್ಕೆ ಕಲ್ಕಾಗೆ ತಲುಪುತ್ತದೆ. ಬೇಸಿಗೆಯಲ್ಲಿ ಹಿಮ್ ದರ್ಶನ್ ಎಕ್ಸ್‌ಪ್ರೆಸ್ ಪೈನ್, ದೇವದಾರು ಮತ್ತು ಓಕ್ ಮತ್ತು ಭವ್ಯವಾದ ಶಿವಾಲಿಕ್‌ಗಳ ಕಾಡುಗಳಿಂದ ಆವೃತವಾದ ಸೊಂಪಾದ ಕಣಿವೆಗಳ ಮೂಲಕ ಕರೆದೊಯ್ಯುತ್ತದೆ. ಮಾರ್ಗವು 102 ಸುರಂಗಗಳು ಮತ್ತು 969 ಸೇತುವೆಗಳನ್ನು ಹಾದುಹೋಗುತ್ತದೆ. ಬರೋಗ್ ಸುರಂಗ ಎಂದು ಕರೆಯಲ್ಪಡುವ ಅತಿ ಉದ್ದದ ನೇರ ರೈಲ್ವೆ ಸುರಂಗದ ಮೂಲಕವೂ ನೀವು ಹಾದು ಹೋಗಬಹುದು.
ಮಹಾರಾಷ್ಟ್ರ: ಮುಂಬೈ - ಪುಣೆ ಡೆಕ್ಕನ್ ಎಕ್ಸ್‌ಪ್ರೆಸ್
ರೈಲು ಬೆಳಗ್ಗೆ 7 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಹೊರಟು 11.05 ಗಂಟೆಗೆ ಪುಣೆಗೆ ತಲುಪುತ್ತದೆ. ಡೆಕ್ಕನ್ ಎಕ್ಸ್‌ಪ್ರೆಸ್ ದಾದರ್, ಥಾಣೆ, ಕಲ್ಯಾಣ್, ನೇರಲ್, ಲೋನಾವಾಲಾ, ತಾಲೇಗಾಂವ್, ಖಡ್ಕಿ ಮತ್ತು ಶಿವಾಜಿ ನಗರದಲ್ಲಿ ನಿಲ್ಲುತ್ತದೆ. ಮಾಥೆರಾನ್, ಸಾಂಗೀರ್ ಕೋಟೆ, ಉಲ್ಲಾಸ್ ನದಿ ಮತ್ತು ಖಂಡಾಲಾ ಮತ್ತು ಲೋನಾವಾಲಾದ ಬೆಟ್ಟಗಳು ಮತ್ತು ಜಲಪಾತಗಳನ್ನು ನೋಡುತ್ತ ಸಾಗಬಹುದು.
ಕರ್ನಾಟಕ: ಯಶವಂತಪುರ ಕಾರವಾರ ಎಕ್ಸ್‌ಪ್ರೆಸ್
ಬೆಂಗಳೂರಿನಿಂದ ಕಾರವಾರಕ್ಕೆ ಹೋಗುತ್ತದೆ. ವಿಸ್ಟಾಡೋಮ್ ಅಥವಾ ಬೇರೆ ರೈಲುಗಳಲ್ಲಿ ಹೋಗುವಾಗ ನೀವು ಸಕಲೇಶಪುರ ಆಸುಪಾಸಿನ ಸುಂದರ ಪರಿಸರ, ಗುಹೆಗಳು, ತಿರುವುಗಳು, ಗುಡ್ಡಗಳು, ತಗ್ಗುಗಳನ್ನು ನೋಡಿ ಖುಷಿಪಟ್ಟಿರಬಹುದು. ತುಮಕೂರು, ತಿಪಟೂರು, ಅರಸೀಕೆರೆ ಜಂಕ್ಷನ್, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋವಾ, ಕಬಕ ಪುತ್ತೂರು, ಬಂಟ್ವಾಳ, ಮಂಗಳೂರು ಜಂಕ್ಷನ್, ಸುರತ್ಕಲ್, ಉಡುಪಿ, ಕುಂದಾಪುರ, ಬೈಂದೂರು, ಹೊನ್ನಾವರ, ಭಟ್ಕಳ, 16 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಪಶ್ಚಿಮ ಘಟ್ಟಗಳಲ್ಲಿರುವ ಬ್ರಹ್ಮಗಿರಿ ಬೆಟ್ಟ ಗುಡ್ಡಗಳನ್ನು ನೋಡಬಹುದು. ಹಲವು ಗುಹೆಗಳಲ್ಲಿ ಹಾದು ಹೋಗುತ್ತದೆ. ಹಲವು ಆಣೆಕಟ್ಟುಗಳನ್ನು ದಾಟಿ ಹೋಗುತ್ತದೆ.
ಪಶ್ಚಿಮ ಬಂಗಾಳ: ಜಲ್ಪೈಗುರಿ - ಡಾರ್ಜಿಲಿಂಗ್ ಟಾಯ್ ರೈಲು
ಪಶ್ಚಿಮ ಬಂಗಾಳದ ಜಲ್ಪೈಗುರಿಯಿಂದ ಡಾರ್ಜಿಲಿಂಗ್‌ಗೆ ಪ್ರಯಾಣಿಸುವ ರೈಲು ಕುರ್ಸಿಯಾಂಗ್, ತುಂಗ್, ಸೋನಾಡಾ ಮತ್ತು ಘೂಮ್‌ನಲ್ಲಿ ನಿಲ್ಲುತ್ತದೆ. ರೈಲು ಜಲ್ಪೈಗುರಿ ಜಂಕ್ಷನ್‌ನಿಂದ ಬೆಳಗ್ಗೆ 10 ಗಂಟೆಗೆ ಹೊರಟು ಸಂಜೆ 5.20ಕ್ಕೆ ಡಾರ್ಜಿಲಿಂಗ್ ತಲುಪುತ್ತದೆ. 15 ಆಸನಗಳ ವಿಸ್ಟಾಡೋಮ್ ಕೋಚ್‌ನಲ್ಲಿ ಬೆಟ್ಟಗಳ ರಮಣೀಯ ನೋಡುತ್ತ ಸಾಗಬಹುದು.
ಮಹಾರಾಷ್ಟ್ರ: ಮುಂಬೈ - ಮಡಗಾಂವ್ ಜನಶತಾಬ್ದಿ ಎಕ್ಸ್‌ಪ್ರೆಸ್
ವಿಸ್ಟಾಡೋಮ್ ಕೋಚ್‌ಗಳನ್ನು ಒಳಗೊಂಡಿರುವ ಈ ರೈಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಹೊರಟು ಮಧ್ಯ ಗೋವಾದ ಮಡಗಾಂವ್ ಜಂಕ್ಷನ್‌ಗೆ ತಲುಪುತ್ತದೆ. ರತ್ನಗಿರಿ ಸೇರಿದಂತೆ ಒಂಬತ್ತು ನಿಲ್ದಾಣಗಳಲ್ಲಿ ರೈಲು ನಿಲ್ಲುತ್ತದೆ. ಹಳೆಯ ಸೇತುವೆ, ಜಲಪಾತಗಳು, ಅದ್ಭುತ ದೃಶ್ಯಾವಳಿಗಳನ್ನು ನೋಡುತ್ತ ಸಾಗಬಹುದು.
ಉತ್ತರ ಪ್ರದೇಶ: ಮೈಲಾನಿ - ಬಿಚಿಯಾ ಸ್ಪೆಷಲ್
ರೈಲು ಉತ್ತರ ಪ್ರದೇಶದ ಮೈಲಾನಿಯಿಂದ ಬಿಚಿಯಾಗೆ ಚಲಿಸುತ್ತದೆ, ಭೀರಾ ಖೇರಿ, ದುಧ್ವಾ ಮತ್ತು ಟಿಕುನಿಯಾ ಸೇರಿದಂತೆ ಏಳು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಈ ರೈಲು ಪ್ರಯಾಣಿಕರಿಗೆ ದುಧ್ವಾ ರಾಷ್ಟ್ರೀಯ ಉದ್ಯಾನವನದ ವಿಹಂಗಮ ನೋಟಗಳನ್ನು ಒದಗಿಸುತ್ತದೆ.