Ticket Scam: ವರ್ಷಾಂತ್ಯಕ್ಕೆ ದೂರದೂರಿಗೆ ಪ್ರವಾಸಕ್ಕೆ ಹೋಗುತ್ತಿದ್ದೀರಾ? ಫ್ಲೈಟ್ ಟಿಕೆಟ್ ಬುಕ್ ಮಾಡುವ ಮುನ್ನ ಈ ವಿಚಾರ ಗಮನದಲ್ಲಿರಲಿ
Dec 16, 2023 08:00 AM IST
ವಿಮಾನ ಟಿಕೆಟ್ ಬುಕ್ ಮಾಡುವ ಮುನ್ನ ಎಚ್ಚರ
- Airline fake websites: ತಂತ್ರಜ್ಞಾನ ಮುಂದುವರಿದಿರೋದು ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಕೂಡ. ಇದು ನಿಮ್ಮ ಪ್ರವಾಸದ ಪ್ಲಾನ್ಗಳ ಮೇಲೂ ಪರಿಣಾಮ ಬೀರಬಹುದು. ಕಡಿಮೆ ದರಕ್ಕೆ ಫ್ಲೈಟ್ ಟಿಕೆಟ್ ಸಿಕ್ಕಿತು ಅಂತಾ ಕಂಡ ಕಂಡ ವೆಬ್ಸೈಟ್ಗಳಲ್ಲಿ ಟಿಕೆಟ್ಗಳನ್ನು ಬುಕ್ ಮಾಡುವ ಮುನ್ನ ಈ ವಿಚಾರಗಳ ಬಗ್ಗೆ ಗಮನ ಹರಿಸಲೇಬೇಕು.
ಹೊಸ ವರ್ಷವನ್ನು ಸ್ವಾಗತಿಸೋಕೆ ಇನ್ನು ಹೆಚ್ಚು ಕಮ್ಮಿ 2 ವಾರಗಳು ಮಾತ್ರ ಬಾಕಿ ಉಳಿದಿದೆ. ವರ್ಷಾಂತ್ಯವನ್ನು ವೆಕೇಷನ್ ಮೂಡ್ನಲ್ಲಿ ಕಳೆಯಬೇಕು ಎಂದುಕೊಂಡಿದ್ದರೆ ನಿಮಗೆ ಒಂದಷ್ಟು ಏರ್ಲೈನ್ ಟಿಕೆಟ್ ಸಂಬಂಧಿ ಸಲಹೆಗಳನ್ನು ನಾವು ನೀಡುತ್ತೇವೆ. ರಜಾ ದಿನಗಳಲ್ಲಿ ಪ್ರವಾಸದ ಬಗ್ಗೆ ಪ್ಲಾನ್ ಮಾಡುವ ಮುನ್ನ ನೀವು ಕೆಲವು ಅಂಶಗಳನ್ನು ಅವಶ್ಯವಾಗಿ ತಿಳಿದಿರಲೇಬೇಕು.
ವರ್ಷಾಂತ್ಯದಲ್ಲಿ ಪ್ರವಾಸಕ್ಕೆ ತೆರಳಲು ಅನೇಕರು ಪ್ಲಾನ್ ಮಾಡುತ್ತಿರುತ್ತಾರೆ. ಹೀಗಾಗಿ ನೀವು ಗಡಿಬಿಡಿ ಮಾಡಿಕೊಳ್ಳಬೇಡಿ. ಏರ್ಲೈನ್ ಟಿಕೆಟ್ ವಂಚನೆಗಳಿಗೆ ಬಲಿಪಶುಗಳಾಗಬೇಡಿ. ವಿಮಾನಗಳ ದರವನ್ನು ತಿಳಿದುಕೊಳ್ಳಲು ನೀವು ವಿವಿಧ ವೆಬ್ಸೈಟ್ಗಳಿಗೆ ಸೈನಪ್ ಆಗಿ . ಏರ್ಲೈನ್ಗಳು ತಿಳಿಸುವ ಹೊಸ ಹೊಸ ಮಾರ್ಗಗಳ ಬಗ್ಗೆ ಚೆನ್ನಾಗಿ ಅರಿತುಕೊಳ್ಳಿ .
ಯಾವೆಲ್ಲ ರೀತಿಯಲ್ಲಿ ಏರ್ಲೈನ್ ಟಿಕೆಟ್ ವಂಚನೆ ನಡೆಯುತ್ತದೆ..?
ನಕಲಿ ಟ್ರಾವೆಲ್ಲಿಂಗ್ ವೆಬ್ಸೈಟ್ಗಳನ್ನು ಹೊಂದಿರುವವರು ಕದ್ದ ಅಥವಾ ಹ್ಯಾಕ್ ಮಾಡಿದ ಯಾವುದಾದರೂ ಕ್ರೆಡಿಟ್ ಕಾರ್ಡ್ಗಳಿಂದ ಏರ್ಲೈನ್ ಟಿಕೆಟ್ಗಳನ್ನು ಬುಕ್ ಮಾಡಿರುತ್ತಾರೆ.
ನಕಲಿ ವೆಬ್ಸೈಟ್ಗಳಲ್ಲಿ ಈ ರೀತಿ ಯಾರದ್ದೋ ಕ್ರೆಡಿಟ್ ಕಾರ್ಡ್ಗಳಲ್ಲಿ ಟಿಕೆಟ್ಗಳನ್ನು ಬುಕ್ ಮಾಡಿ ಬಳಿಕ ಈ ಟಿಕೆಟ್ ದರವನ್ನು ಆಫರ್ ಎಂದು ಬಣ್ಣಿಸುತ್ತಾ ಅತೀ ಕಡಿಮೆ ದರಕ್ಕೆ ಮಾರಾಟ ಮಾಡುತ್ತಾರೆ. ಕಡಿಮೆ ಹಣಕ್ಕೆ ಟಿಕೆಟ್ ಸಿಗುತ್ತಿದೆ ಅಂತಾ ನೀವು ಹಿಂದೆ ಮುಂದೆ ಯೋಚಿಸದೇ ನಕಲಿ ಟ್ರಾವೆಲ್ ವೆಬ್ಸೈಟ್ಗಳಲ್ಲಿ ಟಿಕೆಟ್ ಬುಕ್ ಮಾಡುತ್ತೀರಿ.
ಕ್ರಿಮಿನಲ್ಗಳು ನೀವು ಕೇಳಿದ ದರಕ್ಕೆ ಟಿಕೆಟ್ ಮಾರಾಟ ಮಾಡಲು ರೆಡಿ ಇರುತ್ತಾರೆ. ಇವರು ನಿಮ್ಮ ಬಳಿ ಕೂಡಲೇ ಪೇಮೆಂಟ್ ಮಾಡಲು ಹೇಳುತ್ತಾರೆ. ಹಾಗೂ ಕಡಿಮೆ ದರಕ್ಕೆ ಟಿಕೆಟ್ ಸಿಗ್ತಿದೆ ಎಂಬ ಖುಷಿಗೆ ನೀವು ಕೂಡ ಹಿಂದೆ ಮುಂದೆ ಯೋಚಿಸದೇ ಟಿಕೆಟ್ ಬುಕ್ ಮಾಡುತ್ತೀರಿ.
ನಿಜವಾದ ಕ್ರೆಡಿಟ್ ಕಾರ್ಡ್ ಮಾಲೀಕನಿಗೆ ಈ ವಂಚನೆಯ ಬಗ್ಗೆ ಅರಿವಾಗುತ್ತಿದ್ದಂತೆಯೇ ಆತ ತನ್ನ ಕ್ರೆಡಿಟ್ ಕಾರ್ಡ್ನಿಂದ ಬುಕ್ ಆಗಿರುವ ಟಿಕೆಟ್ಗಳನ್ನು ಬ್ಲಾಕ್ ಮಾಡಿಸುತ್ತಾನೆ ಎಂಬ ಅರಿವು ಸೈಬರ್ ವಂಚಕರಿಗೂ ಇರುತ್ತದೆ. ಹೀಗಾಗಿ ಅವರು ಕೇವಲ ಒಂದು ದಿನ ಮುಂಚಿತವಾಗಿ ಅಥವಾ ಅಂದೇ ತೆರಳುವ ವಿಮಾನಗಳ ಟಿಕೆಟ್ಗಳನ್ನು ಮಾತ್ರ ಬುಕ್ ಮಾಡುತ್ತಾರೆ. ಹೀಗಾಗಿ ಇಂದೇ ಹೋಗುವ ವಿಮಾನಗಳ ಟಿಕೆಟ್ಗಳು ನಿಮಗೆ ಎಲ್ಲಾದರೂ ಕಡಿಮೆ ದರದಲ್ಲಿ ಸಿಗುತ್ತಿದ್ದರೆ ನೀವು ಸರಿಯಾಗಿ ವಿಚಾರಿಸಿ ಟಿಕೆಟ್ ಖರೀದಿಸುವುದು ಒಳ್ಳೆಯದು. ಏಕೆಂದರೆ ಒಮ್ಮೆ ನಿಜವಾದ ಕ್ರೆಡಿಟ್ ಕಾರ್ಡ್ ಮಾಲೀಕ ಟಿಕೆಟ್ ಕ್ಯಾನ್ಸಲ್ ಮಾಡಿಸಿದರೆ ಬಳಿಕ ನಿಮಗೆ ವಿಮಾನಯಾನ ಕೂಡ ಇರುವುದಿಲ್ಲ ಹಾಗೂ ವಿಮಾನದ ಟಿಕೆಟ್ಗೆಂದು ಕೊಟ್ಟ ಹಣವೂ ಇಲ್ಲವಾಗುತ್ತದೆ.
ಯಾವುದೇ ಟ್ರಾವೆಲ್ ವೆಬ್ಸೈಟ್ಗಳಲ್ಲಿ ಟಿಕೆಟ್ ಬುಕ್ ಮಾಡುವ ಮುನ್ನ ಅವರು ತಮ್ಮ ವಿವರಗಳನ್ನು ಸೂಕ್ತವಾಗಿ ನೀಡಿದ್ದಾರೆಯೇ ಎಂದು ಗಮನಿಸುವುದು ತುಂಬಾನೇ ಮುಖ್ಯವಾಗುತ್ತದೆ. ಅವರು ಮೊಬೈಲ್ ನಂಬರ್ಗಳನ್ನು ಸರಿಯಾಗಿ ನೀಡಿದ್ದಾರೆಯೇ..? ಅವರ ಬಳಿ ಲ್ಯಾಂಡ್ಲೈನ್ ನಂಬರ್ ಇದೆಯೇ..? ಈ ಎಲ್ಲದರ ಬಗ್ಗೆಯೂ ನೀವು ವಿಚಾರಿಸಬೇಕು. ಏಕೆಂದರೆ ಅಪ್ಪಿತಪ್ಪಿ ನೀವು ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ನೀವು ಬುಕ್ ಮಾಡಿದ ಟಿಕೆಟ್ ಯಾರದ್ದೋ ಕದ್ದ ಕ್ರೆಡಿಟ್ ಕಾರ್ಡ್ನದ್ದು ಎಂದು ತಿಳಿದರೆ ಬಳಿಕ ನೀವು ಏರ್ಪೋರ್ಟ್ನಿಂದ ಸೀದಾ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗಬಹುದು. ಹೀಗಾಗಿ ನೀವು ಪ್ರವಾಸಕ್ಕೆ ತೆರಳುವ ಸಂದರ್ಭದಲ್ಲಿ ಅಧಿಕೃತ ಟ್ರಾವೆಲ್ ವೆಬ್ಸೈಟ್ಗಳಲ್ಲೇ ನಿಮ್ಮ ಟಿಕೆಟ್ ಬುಕ್ ಮಾಡಿಸಬೇಕು.