ವರ್ಷಾಂತ್ಯಕ್ಕೆ ಗೋವಾದಲ್ಲಿ ಜನಜಂಗುಳಿ ಇಲ್ಲದ ಬೀಚ್ ಹುಡುಕುತ್ತಿರುವಿರಾ; ಈ 5 ಕಡಲ ತೀರಗಳಲ್ಲಿ ಪ್ರವಾಸ ಆನಂದಿಸಿ
Dec 18, 2024 12:45 PM IST
ವರ್ಷಾಂತ್ಯಕ್ಕೆ ಗೋವಾದಲ್ಲಿ ಜನಜಂಗುಳಿ ಇಲ್ಲದ ಬೀಚ್ ಹುಡುಕುತ್ತಿರುವಿರಾ; ಈ 5 ಕಡಲ ತೀರಗಳಲ್ಲಿ ಪ್ರವಾಸ ಆನಂದಿಸಿ
ವರ್ಷಾಂತ್ಯ ಮತ್ತು ಕ್ರಿಸ್‌ಮಸ್ ಸಮಯದಲ್ಲಿ ಪ್ರವಾಸಕ್ಕೆ ಹೋಗುವವರ ಸಂಖ್ಯೆ ಹೆಚ್ಚು. ಅದರಲ್ಲೂ ಸುಂದರ ಕಡಲ ತೀರಗಳೆಂದರೆ ಪ್ರವಾಸಿಗರಿಗೆ ಬಹಳ ಅಚ್ಚುಮೆಚ್ಚು. ಗೋವಾದ ಬೀಚ್‌ಗಳು ಪ್ರವಾಸಿಗರಿಗೆ ಸ್ವರ್ಗ. ಆದರೆ, ಅಲ್ಲಿನ ಪ್ರಸಿದ್ಧ ಬೀಚ್‌ಗಳು ಸದಾ ಜನರಿಂದ ತುಂಬಿರುತ್ತದೆ. ನೀವು ಗೋವಾದಲ್ಲಿ ಪ್ರಶಾಂತ ಬೀಚ್‌ಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ 5 ಸುಂದರ ಕಡಲ ತೀರಗಳು.
ಗೋವಾ ಸುಂದರ ಕಡಲ ತೀರಗಳಿಗೆ ಹೆಸರುವಾಸಿ ತಾಣ. ಇಲ್ಲಿನ ಆಕರ್ಷಕ ಕಡಲ ತೀರಗಳು ಮತ್ತು ಕಣ್ಮನಸೆಳೆಯುವ ನೈಟ್ (ರಾತ್ರಿ) ಪಾರ್ಟಿಗಳನ್ನು ಆನಂದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದ್ದರಿಂದ ಇಲ್ಲಿನ ಬಹುತೇಕ ಬೀಚ್‌ಗಳು ಪ್ರವಾಸಿಗರಿಂದ ತುಂಬಿರುತ್ತದೆ. ಸದ್ಯ, ನಾವು ವರ್ಷದ ಕೊನೆಯ ತಿಂಗಳು ಡಿಸೆಂಬರ್‌ನಲ್ಲಿದ್ದೇವೆ. ಇದು ವರ್ಷಾಂತ್ಯದ ಜತೆಗೆ ಕ್ರಿಸಮಸ್‌ನ ಸಂಭ್ರಮಾಚರಣೆ ಮಾಡುವ ತಿಂಗಳಾಗಿದೆ. ಹಾಗಾಗಿ ಗೋವಾಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚು. ಆದ್ದರಿಂದ ಗೋವಾದ ಅನೇಕ ಕಡಲ ತೀರಗಳು ಪ್ರವಾಸಿಗರಿಂದಲೇ ತುಂಬಿರುತ್ತದೆ. ಆದರೆ ಈ ಅಬ್ಬರದ ಸಂಗೀತ, ನೃತ್ಯ ಎಲ್ಲರಿಗೂ ಇಷ್ಟವಾಗುವುದಿಲ್ಲ. ಕೆಲವರು ತಮ್ಮ ಗೆಳೆಯರ ಜತೆ ಪ್ರಶಾಂತವಾದ ಸಮುದ್ರ ತೀರದಲ್ಲಿ ಸಮಯವನ್ನು ಕಳೆಯಲು ಯೋಚಿಸುತ್ತಾರೆ. ಗೋವಾದಲ್ಲೂ ಕಡಿಮೆ ಜನಸಂದಣಿಯ ಬೀಚ್‌ಗಳಿವೆ. ಅಲ್ಲಿ ಜನದಟ್ಟಣೆ ಕಡಿಮೆಯಿರುತ್ತದೆ. ವಾತಾವರಣ ಶಾಂತವಾಗಿರುತ್ತದೆ. ಹಾಗಾದರೆ ಗೋವಾದಲ್ಲಿರುವ ಕಡಿಮೆ ಜನಸಂದಣಿಯ 5 ಕಡಲ ತೀರಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕಡಿಮೆ ಜನಸಂದಣಿಯಿರುವ ಗೋವಾದ 5 ಕಡಲ ತೀರಗಳು
ಬಟರ್ಫ್ಲೈ ಬೀಚ್: ಬಟರ್‌ಫ್ಲೈ ಬೀಚ್ ದಕ್ಷಿಣ ಗೋವಾದ ಕಣಕೋಣ ಪ್ರದೇಶದಲ್ಲಿದೆ. ಇದು ಜನಪ್ರಿಯ ಪಲೋಲೆಮ್ ಬೀಚ್‌ಗೆ ಹತ್ತಿರದಲ್ಲಿದೆ. ಬಟರ್‌ಫ್ಲೈ ಬೀಚ್ ಇತರವುಗಳಿಗೆ ಹೋಲಿಸಿದರೆ ಕಡಿಮೆ ಜನಸಂದಣಿಯನ್ನು ಹೊಂದಿದೆ. ಈ ಬೀಚ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ನೀವು ಟ್ರೆಕ್ಕಿಂಗ್ ಮೂಲಕವೂ ಈ ಬೀಚ್‌ಗೆ ಹೋಗಬಹುದು. ಬಟರ್‌ಫ್ಲೈ ಬೀಚ್ ಹೆಚ್ಚು ಗದ್ದಲವಿರದ ಸ್ನೇಹಿತರೊಂದಿಗೆ ಆನಂದಿಸಲು ಉತ್ತಮವಾದ ಆಯ್ಕೆಯಾಗಿದೆ.
ಬೆಥಾಲ್ಬಾಟಿಮ್ ಬೀಚ್: ಬೆಥಾಲ್ಬಟಿಮ್ ಬೀಚ್ ದಕ್ಷಿಣ ಗೋವಾದಲ್ಲಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆ. ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ. ಇಲ್ಲಿನ ಹಸಿರಿನ ಸೊಬಗು ಕೂಡ ಮನಸ್ಸಿಗೆ ಮುದ ನೀಡುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಶಾಂತಿಯಿಂದ ಆನಂದಿಸಬಹುದಾದ ಉತ್ತಮ ಸ್ಥಳವಿದು.
ಕಲಾಚಾ ಬೀಚ್: ಕಲಾಚಾ ಬೀಚ್ ಉತ್ತರ ಗೋವಾದಲ್ಲಿದೆ. ಇದು ಕೂಡಾ ತುಂಬಾ ಜನಸಂದಣಿಯಿಲ್ಲದಿರುವ ಬೀಚ್. ಇಲ್ಲಿನ ವಾತಾವರಣ ಶಾಂತವಾಗಿದೆ. ಈ ಬೀಚ್ ಅನ್ನು ಗುಪ್ತ ರತ್ನ ಎಂದೂ ಕರೆಯುತ್ತಾರೆ. ಕಲಾಚಾ ಬೀಚ್ ಬಗ್ಗೆ ಇನ್ನೂ ಅನೇಕರಿಗೆ ತಿಳಿದಿಲ್ಲ. ಹಾಗಾಗಿಯೇ ಇಲ್ಲಿ ಹೆಚ್ಚು ಜನರು ಭೇಟಿ ನೀಡುತ್ತಿಲ್ಲ. ನೀವು ಸಮುದ್ರದ ಸೌಂದರ್ಯವನ್ನು ಶಾಂತಿಯುತವಾಗಿ ಅನುಭವಿಸಲು ಬಯಸಿದರೆ ಈ ಬೀಚ್ ಕೂಡ ಉತ್ತಮವಾಗಿದೆ.
ಕಾಕೋಲೆಮ್ ಬೀಚ್: ಪ್ರವಾಸಿಗರು ದಕ್ಷಿಣ ಗೋವಾದ ಕಾಕೋಲೆಮ್ ಬೀಚ್‌ಗೆ ಹೆಚ್ಚಾಗಿ ಭೇಟಿ ನೀಡುವುದಿಲ್ಲ. ಇದು ಗೋವಾದ ಅತ್ಯಂತ ಕಡಿಮೆ ಜನನಿಬಿಡ ಬೀಚ್‌ಗಳಲ್ಲಿ ಒಂದಾಗಿದೆ. ಕಡಲತೀರದಲ್ಲಿ ವಿಶ್ರಾಂತಿ ಪಡೆಯಲು ಬಯಸುವವರು ಕಾಕೋಲೆಮ್ ಬೀಚ್‌ಗೆ ಹೋಗಬಹುದು. ಇಲ್ಲಿ ದೊಡ್ಡ ದೊಡ್ಡ ಬಂಡೆಗಳನ್ನು ಕಾಣಬಹುದಾಗಿದೆ. ನೀವು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಲು ಮತ್ತು ಹೆಚ್ಚು ಸಮಯ ಕಳೆಯಲು ಬಯಸಿದರೆ ಈ ಬೀಚ್‌ಗೆ ಭೇಟಿ ನೀಡಬಹುದು.
ವೈಂಗ್ವಿನಿಮ್ ಬೀಚ್: ವೈಂಗ್ವಿನಿಮ್ ಬೀಚ್ ಉತ್ತರ ಗೋವಾದಲ್ಲಿದೆ. ಇದು ಹೆಚ್ಚು ಜನಸಂದಣಿಯಿರದ ಬೀಚ್ ಆಗಿದೆ. ಇಲ್ಲಿನ ಪ್ರಕೃತಿ ಹಿತಕರವಾಗಿದೆ. ನೀವು ಪ್ರಶಾಂತ ವಾತಾವರಣದಲ್ಲಿ ನಿಮ್ಮ ರಜಾದಿನಗಳನ್ನು ಕಳೆಯಲು ಬಯಸಿದರೆ ಈ ಕಡಲತೀರ ಸೂಕ್ತವಾಗಿದೆ.
ಬೆತುಲ್ ಬೀಚ್: ದಕ್ಷಿಣ ಗೋವಾದಲ್ಲಿರುವ ಬೆತುಲ್ ಬೀಚ್ ಕೂಡ ಶಾಂತಿಯುತವಾಗಿದೆ. ಈ ಮನಮೋಹಕ ಬೀಚ್ ಕಡಿಮೆ ಜನಸಂದಣಿಯಿರುವ ಬೀಚ್ ಆಗಿದೆ. ಶಾಂತಿಯುತ ವಾತಾವರಣದಲ್ಲಿ ವಿಶ್ರಾಂತಿ ಪಡೆಯಲು ಬಯಸುವವರಿಗೆ ಈ ಬೀಚ್ ಸೂಕ್ತವಾಗಿದೆ. ಜನರ ಓಡಾಟ ಅಷ್ಟಾಗಿ ಇರದ ಈ ಬೀಚ್‌ನ ಹವಾಮಾನವೂ ಮನಸ್ಸಿಗೆ ಮುದ ನೀಡುತ್ತದೆ.
ಡಿಸೆಂಬರ್ ಬಂತೆಂದರೆ ಗೋವಾದ ಬೀಚ್‌ಗಳಿಗೆ ಬಿಡುವಿಲ್ಲದ ಸಮಯವಾಗಿದೆ. ಅಂದರೆ ಬಹುತೇಕ ಪ್ರಸಿದ್ಧ ಬೀಚ್‌ಗಳು ಜನಸಂದಣಿಯಿಂದ ತುಂಬಿರುತ್ತವೆ. ಆದರೆ, ಈ ಮೇಲೆ ತಿಳಿಸಿರುವ ಬೀಚ್‌ಗಳು ಇತರ ಜನಪ್ರಿಯ ಬೀಚ್‌ಗಳಿಗೆ ಹೋಲಿಸಿದರೆ ಕಡಿಮೆ ಜನಸಂದಣಿಯನ್ನು ಹೊಂದಿದೆ. ಹಾಗಾಗಿ ಪ್ರಶಾಂತ ವಾತಾವರಣದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯಲು ಬಯಸಿದರೆ ಈ ಬೀಚ್‌ಗಳು ಉತ್ತವಾಗಿದೆ.