Tele MANAS: ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಬಗ್ಗೆ ನಿಮಗೆಷ್ಟು ಗೊತ್ತು? ಟೆಲಿ ಮನಸ್ ಕರ್ನಾಟಕ ಸಹಾಯವಾಣಿ ವಿವರ
Oct 29, 2024 10:26 AM IST
Tele MANAS: ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ
- Tele MANAS Karnataka: ಪರೀಕ್ಷೆಯ ಒತ್ತಡ, ಕೌಟುಂಬಿಕ ಸಮಸ್ಯೆಗಳು, ನೆನಪಿನ ಶಕ್ತಿ ಕೊರತೆ, ಒತ್ತಡ, ಖಿನ್ನತೆ ಮುಂತಾದ ಸಮಸ್ಯೆ ಇರುವವರು ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಟೆಲಿ ಮನಸ್ ಕರ್ನಾಟಕದ ಟೋಲ್ ಫ್ರೀ ಸಂಖ್ಯೆ 14416 ಅಥವಾ 1800-89-14416ಗೆ ಕರೆ ಮಾಡಬಹುದು.
Tele MANAS Karnataka: ಮಾನಸಿಕ ಆರೋಗ್ಯ ಉತ್ತಮವಾಗಿಲ್ಲದಿದ್ದರೆ ಆರೋಗ್ಯವಿಲ್ಲ. ಸಾಕಷ್ಟು ಜನರು ವಿವಿಧ ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಮಾನಸಿಕ ತೊಂದರೆ ಎಂದರೆ ಹೆಚ್ಚು ಎಂದು ಭಾವಿಸಬೇಕಿಲ್ಲ. ಪರೀಕ್ಷೆಯ ಒತ್ತಡದಿಂದ ಬಳಲುವ ವಿದ್ಯಾರ್ಥಿಗಳು, ಗಂಡ ಹೆಂಡಿರ ನಡುವಿನ ಅನ್ಯೋನ್ಯತೆ ಕೊರತೆ, ಕೌಟುಂಬಿಕ ಜಗಳಗಳು, ಖಿನ್ನತೆ, ಕೆಲಸದ ಒತ್ತಡ ಮುಂತಾದ ಅನೇಕ ತೊಂದರೆಗಳಿಗೆ ಮಾನಸಿಕ ಆರೋಗ್ಯ ತಜ್ಞರ ನೆರವು ಪಡೆಯಬಹುದು. ಕೊರೊನಾ ಬಳಿಕ ಮಾನಸಿಕ ಆರೋಗ್ಯ ತೊಂದರೆಗಳು ಹೆಚ್ಚಾಗಿವೆ. ಈ ರೀತಿಯ ತೊಂದರೆ ಇರುವವರು ಟೆಲಿ ಮನಸ್ ಕರ್ನಾಟಕ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 14416 ಅಥವಾ 1800-89-14416 ಅನ್ನು ಸಂಪರ್ಕಿಸಬಹುದು.
ಏನಿದು ಟೆಲಿ ಮನಸ್ ಯೋಜನೆ?
ಕೋವಿಡ್ 19 ಸಮಯದಲ್ಲಿ ಕೇಂದ್ರ ಸರಕಾರವು ಟೆಲಿ ಮನಸ್ ಎಂಬ ಯೋಜನೆ ಆರಂಭಿಸಿತ್ತು. 2022ರ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನದಂದು ದೇಶಾದ್ಯಂತ ಈ ಯೋಜನೆ ಆರಂಭಿಸಲಾಗಿತ್ತು. ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಹೆಸರೇ ಹೇಳುವಂತೆ ದೂರವಾಣಿ ಮೂಲಕ ಸಾಂತ್ವಾನ, ಪರಿಹಾರ ಹೇಳುವಂತಹ ಕಾರ್ಯಕ್ರಮ ಇದಾಗಿದೆ. ರಾಜ್ಯ ಸರಕಾರ, ಖಾಸಗಿ ಸಂಸ್ಥೆಗಳು, ಎನ್‌ಜಿಒಗಳು, ಸರಕಾರದ ಆರೋಗ್ಯ ಸಂಸ್ಥೆಗಳ ನೆರವಿನಿಂದ ತಂತ್ರಜ್ಞಾನ ಆಧಾರಿತ ಮಾನಸಿಕ ಆರೋಗ್ಯ ಕಾಳಜಿ ಸೇವೆ ಇದಾಗಿದೆ. ಟೆಲಿ ಮನಸ್ ಎಂಬ ಸೇವೆ ಮೂಲಕ ಜಗತ್ತಿನಲ್ಲಿ ಮಾನಸಿಕ ಆರೋಗ್ಯಕ್ಕೆ ದೂರವಾಣಿ ಅಥವಾ ಸಹಾಯವಾಣಿ ಮೂಲಕ ಪರಿಹಾರ, ಸಾಂತ್ವಾನ ನೀಡುವ ಕೆಲವೇ ಕೆಲವು ದೇಶಗಳಲ್ಲಿ ಭಾರತ ಒಂದು ಎನ್ನುವುದು ಹೆಮ್ಮೆಯ ವಿಚಾರ. ಆರಂಬದಲ್ಲಿ ಇದು ಸಂಪೂರ್ಣವಾಗಿ ಕೇಂದ್ರ ಸರಕಾರ ಫಂಡ್ ನೀಡುವ ಯೋಜನೆಯಾಗಿತ್ತು. ಮೂರು ವರ್ಷಗಳ ಬಳಿಕ ನ್ಯಾಷನಲ್ ಹೆಲ್ತ್ ಮಿಷನ್‌ನಡಿ ವಿಲೀನವಾಗಿತ್ತು.
ಟೆಲಿ ಮಾನಸ್ ಯೋಜನೆಯ ಉದ್ದೇಶಗಳು
ಟೆಲಿ ಮೆಂಟಲ್ ಹೆಲ್ತ್ ನೆಟ್‌ವರ್ಕ್ ಬೆಂಬಲ ವ್ಯವಸ್ಥೆ ಮೂಲಕ ಜನರಿಗೆ ಸರಿಯಾದ ಸಮಯದಲ್ಲಿ ಮಾನಸಿಕ ಆರೋಗ್ಯ ಸೇವೆ ನೀಡುವುದು.
ನೆರವು ಕೋರಿದವರಿಗೆ ಸ್ಪೆಷಲಿಸ್ಟ್ ಕೇರ್‌ಗೆ ರೆಫರ್ ಮಾಡುವುದು, ಫಾಲೋಅಪ್ ಮಾಡುವುದು ಇತ್ಯಾದಿಗಳನ್ನು ಒಳಗೊಂಡಿದೆ.
ಪ್ರಾಥಮಿಕ ಆರೋಗ್ಯ ಸೇವಾ ಕೇಂದ್ರಗಳು, ಆರೋಗ್ಯ ಕೇಂದ್ರಗಳು, ಜಿಲ್ಲೆ, ರಾಜ್ಯ, ಇತರೆ ಪ್ರಮುಖ ಮಾನಸಿಕ ಆರೋಗ್ಯ ಕೇಂದ್ರಗಳ ನೆರವಿನಿಂದ ಮಾನಸಿಕ ಆರೋಗ್ಯ ಸೇವೆ ನೀಡುವುದು.
ಟೆಲಿ ಮನಸ್ ಯೋಜನೆಯ ಪ್ರಯೋಜನಗಳು
ಭಾರತದ ಯಾವುದೇ ವ್ಯಕ್ತಿ ತಮಗೆ ಇರುವ ಮಾನಸಿಕ ಆರೋಗ್ಯ ಸಮಸ್ಯೆಯ ಕುರಿತು ಈ ಟೂಲ್ ಫ್ರೀ ಸಂಖ್ಯೆಗೆ ಕಾಲ್ ಮಾಡಬಹುದು. ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡದಿಂದ ಮಾನಸಿಕ ಚಿಂತೆಗೆ ಒಳಗಾಗಿದ್ದರೆ, ವಿದ್ಯಾರ್ಥಿಗಳಿಗೆ ಖಾಸಗಿ ಸಮಸ್ಯೆಗಳಿಂದ ಮಾನಸಿಕ ಒತ್ತಡ ಬಂದಿದ್ದರೆ, ಹದಿಹರೆಯದ ಮಾನಸಿಕ ಸಮಸ್ಯೆಗಳು ಇದ್ದರೆ ಟೆಲಿ ಮನಸ್ ಅನ್ನು ಸಂಪರ್ಕಿಸಬಹುದು. ಇದೇ ರೀತಿ ದೊಡ್ಡವರಿಗೆ ನಾನಾ ಬಗೆಯ ಮಾನಸಿಕ ಆರೋಗ್ಯ ತೊಂದರೆಗಳು ಇರುತ್ತವೆ. ಸಂಬಂಧಗಳ ತೊಂದರೆ, ಕೆಲಸದ ಒತ್ತಡದಿಂದ ಮಾನಸಿಕ ಆರೋಗ್ಯ ಹದಗೆಡುವುದು ಸೇರಿದಂತೆ ಹಲವು ಮಾನಸಿಕ ತೊಂದರೆ ಇರುವವರು ಸಂಪರ್ಕಿಸಬಹುದು. ಇದೇ ರೀತಿ ಮಾದಕ ದ್ರವ್ಯ ಸೇವನೆ ಸಂಬಂಧಪಟ್ಟ ತೊಂದರೆ ಇರುವವರು ಈ ಸಹಾಯವಾಣಿಗೆ ಕರೆ ಮಾಡಿ ಪರಿಹಾರ ಪಡೆಯಬಹುದು. ಖಿನ್ನತೆ, ಒತ್ತಡ ಸೇರಿದಂತೆ ಎಲ್ಲಾ ಬಗೆಯ ಮಾನಸಿಕ ಆರೋಗ್ಯ ತೊಂದರೆಗೆ ಈ ಸಹಾಯವಾಣಿಯ ಮೂಲಕ ಪರಿಹಾರ ಪಡೆಯಬಹುದು.
ಟೆಲಿ ಮನಸ್ ಯೋಜನೆಯಲ್ಲಿ ವಿಡಿಯೋ ಸಮಲೋಚನೆಯೂ ಇರುತ್ತದೆ. ಇ- ಸಂಜೀವಿನಿ ವಿಡಿಯೋ ಕನ್ಸಲ್ಟೇಷನ್ ಮೂಲಕ ಮಾನಸಿಕ ಆರೋಗ್ಯ ತಜ್ಞರು, ವೈದ್ಯರ ಜತೆ ಮಾನಸಿಕ ಆರೋಗ್ಯ ತೊಂದರೆ ಇರುವವರು ಮಾತನಾಡಬಹುದು.
ಟೆಲಿ ಮನಸ್ ಕರ್ನಾಟಕ
ಕರ್ನಾಟಕ ರಾಜ್ಯದಾದ್ಯಂತ ಇರುವ ಜನರು ಅವಶ್ಯಕತೆ ಇದ್ದಾಗ ತಪ್ಪದೇ ಟೆಲಿ ಮಾನಸಿಕ ಆರೋಗ್ಯ ಯೋಜನೆಯ ನೆರವು ಪಡೆಯಬಹುದು. ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಕ್ರಮವು ತೊಂದರೆಯಲ್ಲಿರುವವರಿಗೆ ನೆರವು ಮತ್ತು ನೆಟ್‌ವರ್ಕಿಂಗ್ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಪರೀಕ್ಷೆಯ ಒತ್ತಡ, ಕೌಟುಂಬಿಕ ಸಮಸ್ಯೆಗಳು, ಮಾದಕವಸ್ತು ಬಳಕೆ ಸಂಬಂಧಿತ ಸಮಸ್ಯೆಗಳು, ಸಂಬಂಧದ ಸಮಸ್ಯೆಗಳು, ಜ್ಞಾಪಕ ಶಕ್ತಿ ಸಮಸ್ಯೆಗಳು, ಆರ್ಥಿಕ ಒತ್ತಡ, ಯಾವುದೇ ಇತರೆ ಮಾನಸಿಕ ಆರೋಗ್ಯ ಸಮಸ್ಯೆಗಳು ಇರುವವರು "ಟೆಲಿ ಮನಸ್ ಕರ್ನಾಟಕ" ಸಹಾಯವಾಣಿ (ಟೋಲ್ ಫ್ರೀ ಸಂಖ್ಯೆ 14416 ಅಥವಾ 1800-89-14416) ಸಂಪರ್ಕಿಸಬಹುದು. ಕರ್ನಾಟಕದಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮತ್ತು ಧಾರವಾಡದ ಡಿಮ್ಹಾನ್ಸ್‌ನಲ್ಲಿ ಟೆಲಿ ಮಾನಸಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಟೆಲಿ ಮನಸ್ ಕರ್ನಾಟಕ ಸಹಾಯವಾಣಿ ಸಂಖ್ಯೆಗಳು
ಟೋಲ್ ಫ್ರೀ ಸಂಖ್ಯೆ 14416 ಅಥವಾ 1800-89-14416