cyberchondriasis: ಶೇ 48.6ರಷ್ಟು ಯುವಜನರಲ್ಲಿದೆ ಸೈಬರ್‌ಕಾಂಡ್ರಿಯಾಸಿಸ್‌; ನಿಮ್ಹಾನ್ಸ್‌ ಅಧ್ಯಯನ: ಏನಿದು ಸೈಬರ್‌ಕಾಂಡ್ರಿಯಾಸಿಸ್‌?
ಕನ್ನಡ ಸುದ್ದಿ  /  ಜೀವನಶೈಲಿ  /  Cyberchondriasis: ಶೇ 48.6ರಷ್ಟು ಯುವಜನರಲ್ಲಿದೆ ಸೈಬರ್‌ಕಾಂಡ್ರಿಯಾಸಿಸ್‌; ನಿಮ್ಹಾನ್ಸ್‌ ಅಧ್ಯಯನ: ಏನಿದು ಸೈಬರ್‌ಕಾಂಡ್ರಿಯಾಸಿಸ್‌?

cyberchondriasis: ಶೇ 48.6ರಷ್ಟು ಯುವಜನರಲ್ಲಿದೆ ಸೈಬರ್‌ಕಾಂಡ್ರಿಯಾಸಿಸ್‌; ನಿಮ್ಹಾನ್ಸ್‌ ಅಧ್ಯಯನ: ಏನಿದು ಸೈಬರ್‌ಕಾಂಡ್ರಿಯಾಸಿಸ್‌?

ಸೈಬರ್‌ಕಾಂಡ್ರಿಯಾಸಿಸ್‌, ಇದೊಂದು ಅಸಹಜ ಮಾನಸಿಕ ಪ್ರಕ್ರಿಯೆ. ಆನ್‌ಲೈನ್‌ನಲ್ಲಿ ಇಲ್ಲಸಲ್ಲದ ಆರೋಗ್ಯ ಮಾಹಿತಿಗಳನ್ನು ಹುಡುಕುವುದಕ್ಕೆ ಸೈಬರ್‌ಕಾಂಡ್ರಿಯಾಸಿಸ್‌ ಎನ್ನುತ್ತಾರೆ. ಇದು ವ್ಯಕ್ತಿಯ ಆಂತಕ ಹಾಗೂ ಆರೋಗ್ಯದ ಬಗೆಗಿನ ಒತ್ತಡವನ್ನು ಸೂಚಿಸುತ್ತದೆ.

ಸೈಬರ್‌ಕಾಂಡ್ರಿಯಾಸಿಸ್‌
ಸೈಬರ್‌ಕಾಂಡ್ರಿಯಾಸಿಸ್‌

ಇತ್ತೀಚೆಗೆ ನಿಮ್ಹಾನ್ಸ್‌ ಸಂಸ್ಥೆ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಶೇ 48.6ರಷ್ಟು ಮಂದಿಯಲ್ಲಿ ಸೈಬರ್‌ಕಾಂಡ್ರಿಯಾಸಿಸ್‌ ಸಮಸ್ಯೆ ಇದೆ ಎಂಬುದು ತಿಳಿದು ಬಂದಿದೆ. ಹಾಗಾದರೆ ಸೈಬರ್‌ಕಾಂಡ್ರಿಯಾಸಿಸ್‌ ಎಂದರೇನು? ಇದಕ್ಕೆ ಕಾರಣ ಹಾಗೂ ನಿವಾರಣೆಗೆ ಪರಿಹಾರ ಮಾರ್ಗವೇನು? ಇಲ್ಲಿದೆ ಉತ್ತರ.

ಏನಿದು ಸೈಬರ್‌ಕಾಂಡ್ರಿಯಾಸಿಸ್‌?

ಇದೊಂದು ಅಸಹಜ ಮಾನಸಿಕ ಪ್ರಕ್ರಿಯೆ. ಆನ್‌ಲೈನ್‌ನಲ್ಲಿ ಇಲ್ಲಸಲ್ಲದ ಆರೋಗ್ಯ ಮಾಹಿತಿಗಳನ್ನು ಹುಡುಕುವುದಕ್ಕೆ ಸೈಬರ್‌ಕಾಂಡ್ರಿಯಾಸಿಸ್‌ ಎನ್ನುತ್ತಾರೆ. ಇದು ವ್ಯಕ್ತಿಯ ಆಂತಕದ ನಡವಳಿಕೆ ಹಾಗೂ ಆರೋಗ್ಯದ ಬಗೆಗಿನ ಮಾನಸಿಕ ಒತ್ತಡವನ್ನು ಸೂಚಿಸುತ್ತದೆ. ಆದರೆ ಈ ನಡವಳಿಕೆಯು ಅನಾರೋಗ್ಯ ಭಾವನೆಗಳನ್ನು ಕಡಿಮೆ ಮಾಡುವ ಬದಲು ಇನ್ನಷ್ಟು ವೃದ್ಧಿಸುತ್ತದೆ.

ಸೈಬರ್‌ಕಾಂಡ್ರಿಯಾಸಿಸ್‌ ಸಮಸ್ಯೆ ಇರುವವರಲ್ಲಿ ನಿಜಕ್ಕೂ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರುವುದಿಲ್ಲ. ಈ ರೀತಿಯ ಸಮಸ್ಯೆ ಇರುವವರನ್ನು ವೈದ್ಯರ ಬಳಿ ಪರೀಕ್ಷೆಗೆ ಒಳಪಡಿಸಿದಾಗ ಕೇವಲ ಶೇ 4.8ರಷ್ಟು ಮಂದಿಯಲ್ಲಿ ಮಾತ್ರ ಆರೋಗ್ಯ ಸಮಸ್ಯೆ ಇತ್ತು ಎನ್ನುವುದನ್ನೂ ಅಧ್ಯಯನದಲ್ಲಿ ತಿಳಿಸಲಾಗಿದೆ.

ಆನ್‌ಲೈನ್ ಹುಡುಕಾಟದಿಂದ ಉಂಟಾಗುವ ಆತಂಕವು ಕಂಪ್ಯೂಟರ್‌ನಿಂದ ದೂರ ಸರಿದ ನಂತರವೂ ದೀರ್ಘಕಾಲವರೆಗೆ ಮನಸ್ಸಿನಲ್ಲಿ ಉಳಿಯಬಹುದು. ಅವರಲ್ಲಿನ ಅನಾರೋಗ್ಯದ ಸಮಸ್ಯೆ ಇದೆ ಎನ್ನುವ ಭಾವನೆಯನ್ನು ಸ್ವತಃ ವೈದ್ಯರು ಕೂಡ ದೂರ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಅಂತಹವರನ್ನು ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಇರುವುದಿಲ್ಲ. ಇದನ್ನು ಹೈಪೋಕಾಂಡ್ರಿಯಾ ಹಾಗೂ ಅನಾರೋಗ್ಯದ ಆತಂಕದ ಅಸ್ವಸ್ಥತೆ ಎಂದೂ ಕರೆಯಲಾಗುತ್ತದೆ.

ಸೈಬರ್‌ಕಾಂಡ್ರಿಯಾದ ವ್ಯಾಖ್ಯಾನದ ಕುರಿತು ಮಾನಸಿಕ ತಜ್ಞರು ಮತ್ತು ಸಂಶೋಧಕರಲ್ಲಿ ಕೆಲವು ಜಿಜ್ಜಾಸೆಗಳಿವೆ. ಸೈಬರ್‌ಕಾಂಡ್ರಿಯಾ ತುಲನಾತ್ಮಕವಾಗಿ ಗಂಭೀರವಾದ ಸಮಸ್ಯೆ ಅಲ್ಲ; ಆದರೂ ಈ ಕುರಿತು ಎಚ್ಚರಿಕೆ ಹೊಂದುವುದು ಅಗತ್ಯ ಎನ್ನುವುದು ತಜ್ಞರ ಅಭಿಪ್ರಾಯ.

ರೋಗಲಕ್ಷಣಗಳು

ಸೈಬರ್‌ಕಾಂಡ್ರಿಯಾವು ಔಪಚಾರಿಕ ರೋಗನಿರ್ಣಯವಲ್ಲ, ಆದ್ದರಿಂದ ರೋಗನಿರ್ಣಯದ ಮಾನದಂಡಗಳ ಯಾವುದೇ ಅಧಿಕೃತ ಲಕ್ಷಣಗಳಿಲ್ಲ.

  • ಈ ಸಮಸ್ಯೆ ಇರುವವರು ಕನಿಷ್ಠ 1 ರಿಂದ 3 ಗಂಟೆಗಳ ಕಾಲ ಆನ್‌ಲೈನ್‌ನಲ್ಲಿ ತಮಗಿರುವ (ಅಂದರೆ ಮನಸ್ಸಿನಲ್ಲಿ ಇದೇ ಅಂದುಕೊಂಡಿರುವ) ಆರೋಗ್ಯ ಸಮಸ್ಯೆಗಳ ಬಗ್ಗೆ ಹುಡುಕಾಡುತ್ತಿರುತ್ತಾರೆ.
  • ಆನ್‌ಲೈನ್‌ ಹುಡುಕಾಟದಿಂದ ಭರವಸೆ, ಆತ್ಮವಿಶ್ವಾಸ ಸಿಗುವುದಕ್ಕಿಂತ ತೊಂದರೆ ಹಾಗೂ ಆತಂಕದ ಪ್ರಮಾಣ ಹೆಚ್ಚಿ ಇನ್ನಷ್ಟು ಗೊಂದಲಕ್ಕೆ ಸಿಲುಕುತ್ತಾರೆ.
  • ಆರೋಗ್ಯ ಮಾಹಿತಿಯನ್ನು ಹುಡುಕುವ ಮನೋಭಾವವನ್ನು ಯಾರಿಂದಲೂ ಸ್ವತಃ ಅವರಿಂದಲೂ ನಿಯಂತ್ರಿಸಲು ಸಾಧ್ಯವಾಗಿರುವುದಿಲ್ಲ.
  • ತಮ್ಮಲ್ಲಿ ಕೇವಲ ಒಂದಲ್ಲ, ಎರಡಲ್ಲ ಹಲವು ರೋಗಗಳಿವೆ ಎಂದು ಅವರು ಭಯ ಪಡುತ್ತಾರೆ.
  • ವೈದ್ಯರು ಅಥವಾ ವೈದ್ಯಕೀಯ ವೃತ್ತಿಪರರಿಂದ ಧೈರ್ಯವನ್ನು ಪಡೆಯುವ ಅಗತ್ಯವಿದೆ ಎಂದು ಭಾವಿಸುತ್ತಾರೆ.
  • ವೈದ್ಯರು ನೀಡಿದ ಉತ್ತರವನ್ನು ನಂಬಲು ಸಿದ್ಧರಿರುವುದಿಲ್ಲ.
  • ಒಮ್ಮೆ ತಮಗಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಸಮಗ್ರವಾಗಿ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ ಮೇಲೂ ಪುನಃ ಪುನಃ ರೋಗಲಕ್ಷಣಗಳ ಬಗ್ಗೆ ಆನ್‌ಲೈನ್‌ನಲ್ಲಿ ಹುಡುಕಾಡುತ್ತಿರುತ್ತಾರೆ.
  • ಕೆಲವೊಮ್ಮೆ ದಿನದಲ್ಲಿ ನಾಲ್ಕೈದು ಬಾರಿ ಅಥವಾ ಅದಕ್ಕೂ ಹೆಚ್ಚು ಆರೋಗ್ಯ ಸಮಸ್ಯೆಯ ಬಗ್ಗೆ ಮರು ಪರಿಶೀಲನೆ ನಡೆಸುತ್ತಿರುತ್ತಾರೆ.

ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು?

  • ಇದು ಜೀವನದ ಗುಣಮಟ್ಟದ ಮೇಲೆ ಪ್ರಭಾವ ಬೀರಬಹುದು.
  • ಆತಂಕವು ಮಾನಸಿಕವಾಗಿ ದುರ್ಬಲಗೊಳಿಸಬಹುದು ಮತ್ತು ಇದರಿಂದ ದೈನಂದಿನ ಚಟುವಟಿಕೆಗಳ ಮೇಲೆ ಗಮನ ಹರಿಸಲು ಕಷ್ಟವಾಗಬಹುದು.
  • ಇದು ಒತ್ತಡದ ಪ್ರಮಾಣವನ್ನು ಹೆಚ್ಚಿಸಬಹುದು.
  • ಆತಂಕದ ಕಾರಣದಿಂದ ದೈಹಿಕ ಸಮಸ್ಯೆಗಳಿಗೂ ಕಾರಣವಾಗಬಹುದು. ರಕ್ತದೊತ್ತಡ, ತಲೆನೋವಿನಂತಹ ಸಮಸ್ಯೆಗಳು ಕಾಣಿಸಬಹುದು.
  • ಆತಂಕವು ಸ್ನೇಹಿತರು ಮತ್ತು ಕುಟುಂಬದೊಂದಿಗಿನ ನಿಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು.
  • ಆತಂಕದ ಕಾರಣದಿಂದ ಆಗಾಗ ವೈದ್ಯರ ಬಳಿಗೆ ಹೋಗುವುದು ವೃತ್ತಿಜೀವನದ ಮೇಲೂ ಪರಿಣಾಮ ಬೀರಬಹುದು.
  • ಇದರಿಂದ ಆರ್ಥಿಕ ನಷ್ಟವೂ ಉಂಟಾಗಬಹುದು.

ಕಾರಣ

ಸಂಶೋಧಕರ ಪ್ರಕಾರ ಈ ಸಮಸ್ಯೆಗೆ ನಿಖರವಾದ ಕಾರಣ ಇನ್ನೂವರೆಗೆ ತಿಳಿದುಬಂದಿಲ್ಲ. ಆದರೆ ಇದು ಆತಂಕದ ಭಾಗವಾಗಿದ್ದು, ಕೆಲವೊಮ್ಮೆ ಅಪಾಯವನ್ನೂ ಉಂಟು ಮಾಡಬಹುದು. ಈಗಾಗಲೇ ಒತ್ತಡ ಹಾಗೂ ಆತಂಕದಿಂದ ಬಳಲುತ್ತಿದ್ದವರಿಗೆ ಇದು ಇನ್ನಷ್ಟು ಪರಿಣಾಮ ಬೀರಬಹುದು.

ಪರಿಹಾರ

  • ನಿಮ್ಮಲ್ಲಿ ಸೈಬರ್‌ಕಾಂಡ್ರಿಯಾ ಸಮಸ್ಯೆ ಇದೆ ಎಂದು ನೀವು ಗುರುತಿಸಿದರೆ ಆ ತಕ್ಷಣಕ್ಕೆ ಆನ್‌ಲೈನ್‌ನಲ್ಲಿ ಆರೋಗ್ಯದ ಬಗ್ಗೆ ಹುಡುಕಾಟ ನಡೆಸುವುದನ್ನು ನಿಲ್ಲಿಸಬೇಕು ಎನ್ನುತ್ತದೆ ಅಧ್ಯಯನ. ಆರೋಗ್ಯ-ಸಂಬಂಧಿತ ಮಾಹಿತಿಯು ಅಂತರ್ಗತವಾಗಿ ಅಪಾಯಕಾರಿಯಲ್ಲದಿದ್ದರೂ, ಗೀಳುನಂತಹ ಸಮಸ್ಯೆಯನ್ನು ಉಂಟು ಮಾಡಬಹುದು.
  • ಆನ್‌ಲೈನ್‌ನಲ್ಲಿ ಆರೋಗ್ಯ ಮಾಹಿತಿಯ ಬಗ್ಗೆ ಹುಡುಕಾಟ ನಡೆಸುತ್ತಿದ್ದರೆ ನಿಖರವಾದ ಮೂಲವನ್ನು ತಿಳಿದುಕೊಳ್ಳಿ. ಆರೋಗ್ಯ ಸಂಸ್ಥೆಗಳು, ಸಂಶೋಧನೆಗಳು ನೀಡಿದ ಮಾಹಿತಿಯೋ ಅಥವಾ ಸಾಮಾನ್ಯದವರು ನೀಡಿದ ಮಾಹಿತಿಯೇ ಎಂಬುದನ್ನು ಪರಿಶೀಲಿಸಿ ನಂತರ ನಿರ್ಧಾರಕ್ಕೆ ಬನ್ನಿ.
  • ನಿಮ್ಮ ಆನ್‌ಲೈನ್‌ ಆತಂಕ ಹಾಗೂ ರೋಗ ಲಕ್ಷಣಗಳ ಬಗ್ಗೆ ನಿಮ್ಮ ಪ್ರಾಥಮಿಕ ವೈದ್ಯರ ಬಳಿ ಚರ್ಚೆ ನಡೆಸಿ.
  • ಕೆಲವೊಮ್ಮೆ ಮಾನಸಿಕ ತಜ್ಞರು ಹಾಗೂ ಆಪ್ತಸಮಾಲೋಚಕರು ನಿಮಗೆ ಸಹಾಯ ಮಾಡಬಹುದು.

Whats_app_banner