WhatsApp: ವಾಟ್ಸ್‌ಅಪ್‌ನ ಹೊಸ ವಾಯ್ಸ್ ಚಾಟ್ ವೈಶಿಷ್ಟ್ಯ; ಇನ್ಮುಂದೆ ಧ್ವನಿ ಸಂಭಾಷಣೆಯ ಮೂಲಕವೂ ಗ್ರೂಪ್‌ನಲ್ಲಿ ಚಾಟ್ ಮಾಡಿ
Nov 15, 2023 03:59 PM IST
ವಾಟ್ಸ್‌ಅಪ್‌ನ ಹೊಸ ವೈಸ್ ಚಾಟ್ ವೈಶಿಷ್ಟ್ಯ; ಇನ್ಮುಂದೆ ಧ್ವನಿ ಸಂಭಾಷಣೆಯ ಮೂಲಕವೂ ಗ್ರೂಪ್‌ನಲ್ಲಿ ಚಾಟ್ ಮಾಡಿ
- ವಾಟ್‌ಅಪ್ ಹೊಸ ವಾಯ್ಸ್ ಚಾಟ್ ವೈಶಿಷ್ಟ್ಯವನ್ನು ಹೊರತಂದಿದೆ. ಇದು ಬಳಕೆದಾರರಿಗೆ ಗ್ರೂಪ್ ಚಾಟ್‌ಗಳಲ್ಲಿ ವಾಯ್ಸ್ ಚಾಟ್ (ಧ್ವನಿ ಸಂಭಾಷಣೆ)ಗಳನ್ನು ನಡೆಸಲು ಅನುವುಮಾಡಿಕೊಡುತ್ತದೆ.
ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಅಪ್ ಹೊಸ ವೈಶಿಷ್ಟ್ಯವೊಂದನ್ನು ಬಿಡುಗಡೆ ಮಾಡಿದೆ. ಅದೇ ಹೊಸ ವಾಯ್ಸ್ ಚಾಟ್. ಈ ಅಪ್ಲಿಕೇಶನ್‌ಲ್ಲಿ ನಿಮಗೆ ದೊಡ್ಡ ಗ್ರೂಪ್‌ಗಳಲ್ಲಿ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಗ್ರೂಪ್‌ನಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ ರಿಂಗ್ ಮಾಡುವ ಅಂದರೆ ಕಾಲ್ ಮಾಡಿ ಅಡ್ಡಿಪಡಿಸುವ ಗ್ರೂಪ್ ಕರೆಗಿಂತ ಉತ್ತಮವಾಗಿದೆ ಎಂದು ಮೆಟಾದ ಮಾಲಿಕತ್ವದಲ್ಲಿರುವ ವಾಟ್ಸ್‌ಅಪ್ ಹೇಳಿದೆ. ವಾಯ್ಸ್ ಚಾಟ್ ಅಥವಾ ಧ್ವನಿ ಚಾಟ್ ವೈಶಿಷ್ಟ್ಯವು ಇನ್–ಚಾಟ್ ಬಬಲ್‌ನೊಂದಿಗೆ ಪ್ರಾರಂಭವಾಗುತ್ತದೆ. ಅದನ್ನು ಸೇರಲು ಅದರ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ. ಕರೆ ನಿಯಂತ್ರಿಸಬಹುದಾದ ವೈಶಿಷ್ಟ್ಯಗಳು ಚಾಟ್‌ನ ಮೇಲ್ಭಾಗದಲ್ಲಿ ಎಂಬೆಡ್ ಆಗಿರುತ್ತದೆ. ನೀವು ಗ್ರೂಪ‌್ ಸಂಭಾಷಣೆಯಲ್ಲಿರುವಾಗ ನೀವು ಗ್ರೂಪ್ ತೊರೆಯದೆಯೇ ಅನ್‌ಮ್ಯೂಟ್ ಮಾಡಲು, ಹ್ಯಾಂಗ್ ಅಪ್ ಮಾಡಲು ಅಥವಾ ಸಂದೇಶ ಕಳುಹಿಸಲು ಸಾಧ್ಯವಾಗುತ್ತದೆ. ಇದು ಡೀಫಾಲ್ಟ್ ಆಗಿಯೇ ಎಂಡ್–ಟು–ಎಂಡ್ ಎನ್‌ಕ್ರಿಪ್ಷನ್‌ನೊಂದಿಗೆ ನಿಮ್ಮ ವೈಯಕ್ತಿಕ ಕರೆಗಳು ಮತ್ತು ಸಂದೇಶ (ಮೆಸೇಜ್)ಗಳ ಜೊತೆಗೆ ನಿಮ್ಮ ವಾಯ್ಸ್ ಚಾಟ್ ಅನ್ನು ರಕ್ಷಿಸುತ್ತದೆ ಎಂದು ವಾಟ್ಸ್‌ಅಪ್ ಹೇಳಿಕೊಂಡಿದೆ.
ಮುಂಬರುವ ದಿನಗಳಲ್ಲಿ ಈ ವೈಶಿಷ್ಟ್ಯವನ್ನು ದೊಡ್ಡ ಗುಂಪುಗಳು ಭಾಗಿಯಾಗುವಂತೆ ಹೊರತರಲಾಗುವುದು ಎಂದು ವಾಟ್ಸ್‌ಅಪ್ ಹೇಳಿದೆ. ಸದ್ಯ ಇದು 33 ರಿಂದ 128 ಸದಸ್ಯರನ್ನು ಹೊಂದಿರುವ ಗುಂಪುಗಳಲ್ಲಿ ಲಭ್ಯವಿದೆ. ಚಾಟ್ ಹೆಡರ್ ಮತ್ತು ಕಾಲ್ ಟ್ಯಾಬ್‌ನಿಂದ ಧ್ವನಿ ಚಾಟ್‌ನಲ್ಲಿರುವ ಜನರ ಪ್ರೊಫೈಲ್‌ಗಳನ್ನು ವೀಕ್ಷಿಸಬಹುದಾಗಿದೆ. ವಾಟ್ಸ್‌ಅಪ್ ಬ್ಲಾಗ್‌ನಲ್ಲಿ ಹೇಳಿರುವ ಪ್ರಕಾರ ವಾಯ್ಸ್ ಚಾಟ್ ನಿಮಗೆ ಗ್ರೂಪ್ ಚಾಟ್‌ನ ಸದಸ್ಯರ ಜೊತೆ ತಕ್ಷಣ ಲೈವ್ ಆಗಿ ಮಾತನಾಡಲು ಅನುಮತಿಸುತ್ತದೆ. ಜೊತೆಗೆ ಗ್ರೂಪ್‌ನಲ್ಲಿ ಮೆಸೇಜ್ ಕಳುಹಿಸಲು ಸಹ ಸಾಧ್ಯವಾಗುತ್ತದೆ. ಒಮ್ಮೆ ನೀವು ವಾಯ್ಸ್ ಚಾಟ್ ಅನ್ನು ಪ್ರಾರಂಭಿಸಿದ ನಂತರ, ಗುಂಪಿನ ಇತರ ಸದಸ್ಯರು ಕರೆ ಮಾಡದೆಯೇ ಸೇರಲು ಪುಶ್ ಅಧಿಸೂಚನೆಯನ್ನು ಪಡೆಯುತ್ತಾರೆ. ಪರದೆಯ ಕೆಳಭಾಗದಲ್ಲಿರುವ ಬ್ಯಾನರ್‌ನಲ್ಲಿ ವೈಸ್ ಚಾಟ್‌ಗೆ ಯಾರು ಸೇರಿಕೊಂಡಿದ್ದಾರೆ ಎಂಬುದನ್ನು ನೋಡಬಹುದಾಗಿದೆ.
ವಾಟ್ಸ್‌ಅಪ್ ವಾಯ್ಸ್ ಚಾಟ್ ಅಥವಾ ಧ್ವನಿ ಸಂಭಾಷಣೆ ಪ್ರಾರಂಭಿಸುವುದು ಹೇಗೆ?
- ವಾಟ್ಸ್‌ಅಪ್‌ನಲ್ಲಿ ವಾಯ್ಸ್ ಚಾಟ್ ಅಥವಾ ಧ್ವನಿ ಸಂಭಾಷಣೆ ಪ್ರಾರಂಭಿಸಲು ಮೊದಲು ಗ್ರೂಪ್ ಚಾಟ್ ಅನ್ನು ತೆರೆಯಿರಿ.
- ನಿಮ್ಮ ಸ್ಕ್ರೀನ್‌ನ ಬಲ ಮೂಲೆಯಲ್ಲಿರುವ ನ್ಯೂ ವೇವ್‌ಫಾರ್ಮ್ ಬ್ಯಾನರ್ ಮೇಲೆ ಟ್ಯಾಪ್ ಮಾಡಿ.
- ನಂತರ ಸ್ಟಾರ್ಟ್ ವಾಯ್ಸ್ ಚಾಟ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
- ನೀವು ವಾಯ್ಸ್ ಚಾಟ್‌ನಿಂದ ಹೊರಬರಲು ಬಯಸಿದರೆ, ಎಂಡ್ ಐಕಾನ್ ಟ್ಯಾಪ್ ಮಾಡಿ.
IP ಅಡ್ರೆಸ್ ರಕ್ಷಿಸುವ ವೈಶಿಷ್ಟ್ಯ
ಅಕ್ಟೋಬರ್ ತಿಂಗಳಿನಲ್ಲಿ, ವಾಟ್ಸ್‌ಅಪ್ ಕರೆಗಳ ಸಮಯದಲ್ಲಿ ಬಳಕೆದಾರರು ತಮ್ಮ IP ಅಡ್ರೆಸ್ ರಕ್ಷಿಸಿಕೊಳ್ಳುವ ಸಲುವಾಗಿ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿತ್ತು. ಈ ವೈಶಿಷ್ಟ್ಯದಲ್ಲಿ ವಾಟ್ಸ್‌ಅಪ್‌ನಿಂದ ಮಾಡುವ ಎಲ್ಲಾ ಕರೆಗಳನ್ನು ವಾಟ್ಸ್‌ಅಪ್ ಸರ್ವರಗಳ ಮೂಲಕ ಪ್ರಸಾರ ಮಾಡಲಾಗುತ್ತದೆ. ಇದರಿಂದ ಕರೆಯಲ್ಲಿರುವ ಇತರರು ಬಳಕೆದಾರರ IP ವಿಳಾಸವನ್ನು ನೋಡಲು ಸಾಧ್ಯವಿರುವುದಿಲ್ಲ.
ಈ ಹೊಸ ವೈಶಿಷ್ಟ್ಯವು ಬಳಕೆದಾರರ ಗೌಪ್ಯತೆ ಕಾಪಾಡಿಕೊಳ್ಳಲು ಹೆಚ್ಚಿನ ಭದ್ರತೆ ಒದಗಿಸುತ್ತದೆ. ಅದರಲ್ಲೂ ವಿಶೇಷವಾಗಿ ಹೆಚ್ಚಿನ ಗೌಪ್ಯತೆ ಬಯಸುವ ಬಳಕೆದಾರರಿಗೆ ಹೆಚ್ಚನ ಸಹಾಯ ಮಾಡಲಿದೆ. ಎಂದಿನಂತೆ, ಬಳಕೆದಾರರ ಕರೆಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುತ್ತವೆ. ಆದ್ದರಿಂದ ವಾಟ್ಸಾಪ್ ಸರ್ವರ್‌ಗಳ ಮೂಲಕ ಕರೆಯನ್ನು ಪ್ರಸಾರ ಮಾಡಿದರೂ, ಬಳಕೆದಾರರ ಕರೆಗಳನ್ನು ವಾಟ್ಸಾಪ್ ಆಲಿಸಲು ಸಾಧ್ಯವಿಲ್ಲ ಎಂದು ವಾಟ್ಸಾಪ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.
(ಬರಹ: ಅರ್ಚನಾ ವಿ. ಭಟ್)